ಬಾಗಲಕೋಟೆಯಲ್ಲಿ ಗಾಂಧಿ ಜಯಂತಿ ಮುನ್ನಾ ದಿನದಿಂದಲೇ ಸಾರಾಯಿ ವಿರುದ್ದ ಹೋರಾಟಕ್ಕಿಳಿದ ಮಹಿಳೆಯರು!

By Govindaraj SFirst Published Oct 3, 2023, 12:30 AM IST
Highlights

ಅವರೆಲ್ಲಾ ಬದುಕಿನಲ್ಲಿ ನೋವುಂಡವ್ರು, ತಮಗೆ ಒದಗಿದ ಕಷ್ಟ ಬೇರೆಯವರಿಗೆ ಎದುರಾಗಬಾರದು ಅನ್ನೋ ಮನೋಭಾವನೆ ಹೊಂದಿದವ್ರು, ಇದೇ ಕಾರಣಕ್ಕೆ ಮಕ್ಕಳು ಮರಿ ಸಮೇತ ಅಹೋರಾತ್ರಿ ಪ್ರತಿಭಟನಾ ಧರಣಿಗೆ ಮುಂದಾದವರು. 

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ (ಅ.03): ಅವರೆಲ್ಲಾ ಬದುಕಿನಲ್ಲಿ ನೋವುಂಡವ್ರು, ತಮಗೆ ಒದಗಿದ ಕಷ್ಟ ಬೇರೆಯವರಿಗೆ ಎದುರಾಗಬಾರದು ಅನ್ನೋ ಮನೋಭಾವನೆ ಹೊಂದಿದವ್ರು, ಇದೇ ಕಾರಣಕ್ಕೆ ಮಕ್ಕಳು ಮರಿ ಸಮೇತ ಅಹೋರಾತ್ರಿ ಪ್ರತಿಭಟನಾ ಧರಣಿಗೆ ಮುಂದಾದವರು. ಸರ್ಕಾರ ಒಂದು ಕೈಯಿಂದ ಕೊಟ್ಟ ಗ್ಯಾರಂಟಿಗಳ ಹಣ ಮತ್ತೊಂದು ಕೈಯಿಂದ ಹಿಂಪಡೆಯುವ ಕೆಲಸ ಮಾಡ್ತಿದೆ ಎಂದು ಆರೋಪಿಸಿ ಮಹಾತ್ಮ ಗಾಂಧೀಜಿ ಜಯಂತಿ ದಿನವೇ ಸರ್ಕಾರದ ವಿರುದ್ದ ತೊಡೆತಟ್ಟಿ ಬೀದಿಗಿಳಿದು ಅಹೋರಾತ್ರಿ ಹೋರಾಟ ಆರಂಭಿಸಿದ್ರು. ಹಾಗಾದ್ರೆ ಇವರೆಲ್ಲಾ ಯಾರು? ಇವ್ರ ಬೇಡಿಕೆ ಏನು? ಅಂತೀರಾ. ಈ ಕುರಿತ ವರದಿ ಇಲ್ಲಿದೆ. 

ಮಹಾತ್ಮ ಗಾಂಧೀಜಿ ಜಯಂತಿ ಮುನ್ನಾದಿನವೇ  ಅಹೋರಾತ್ರಿ ಪ್ರತಿಭಟನಾ ಧರಣಿಯಲ್ಲಿ ಭಾಗಿಯಾದ ತಾಯಂದಿರು, ಮತ್ತೊಂದೆಡೆ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ ಮಹಿಳೆಯರು, ಇನ್ನೊಂದೆಡೆ ತಮ್ಮ ಕುಟುಂಬಗಳಿಗೆ ಎದುರಾದ ಸಮಸ್ಯೆಗಳನ್ನ ಜಿಲ್ಲಾಧಿಕಾರಿ ಜೊತೆ ಹಂಚಿಕೊಂಡ ನೊಂದ ಹೆಣ್ಣು ಮಕ್ಕಳು. ಅಂದಹಾಗೆ ಇಂತಹವೊಂದು ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ನವನಗರದ ಜಿಲ್ಲಾಡಳಿತ ಭವನದ ಎದುರು. ಹೌದು! ಸರ್ಕಾರ ರಾಜ್ಯದಲ್ಲಿ ಹೊಸ ಮದ್ಯದಂಗಡಿಗಳಿಗೆ ಅನುಮತಿ ನೀಡುವ ಮತ್ತು ಸೂಪರ್​ ಮಾರ್ಕೆಟ್​, ಮಾಲ್​ ಹಾಗೂ ಆನ್​ಲೈನ್​ ಗಳಲ್ಲಿ ಮದ್ಯ ಮಾರಾಟ ಮಾಡುವ ಕುರಿತು ಸರ್ಕಾರ ಚಿಂತನೆ  ನಡೆಸಿದೆ.

ಕಾಂಗ್ರೆಸ್ ಸೋಲಿಸಲು ಬಿಜೆಪಿ-ಜೆಡಿಎಸ್ ಒಂದಾಗಿದೆ: ನಿಖಿಲ್ ಕುಮಾರಸ್ವಾಮಿ

ಸರ್ಕಾರದ ಈ ಚಿಂತನೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ಮಹಿಳೆಯರು ಗಾಂಧೀಜಿ ಜಯಂತಿ ಮುನ್ನಾ ದಿನದಂದಲೇ ಅಹೋರಾತ್ರಿ ಹೋರಾಟ ನಡೆಸಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ರೋಷಿ ಹೋಗಿರೋ ಮಹಿಳೆಯರು ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಘಟನೆ ಮೂಲಕ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ಮದ್ಯ ಮುಕ್ತ ಕರ್ನಾಟಕದತ್ತ ಚಿತ್ತ ಹರಿಸಬೇಕು. ಮದ್ಯಸೇವನೆಯಿಂದ ಅದೆಷ್ಟೋ ಕುಟುಂಬಗಳು ಬೀದಿಗೆ ಬಿದ್ದಿವೆ. ಸರ್ಕಾರ ಮದ್ಯ ಮಾರಾಟಕ್ಕೆ ಹೆಚ್ಚಿನ ಅಂಗಡಿಗಳಿಗೆ ಅನುಮತಿ ನೀಡುವುದನ್ನ ಕೈ ಬಿಡಬೇಕು ಇದರೊಟ್ಟಿಗೆ ಮದ್ಯಮುಕ್ತ ಕರ್ನಾಟಕ ಎಂದು ಸರ್ಕಾರ ಘೋಷಣೆ ಮಾಡಲಿ ಎಂದು ಮಹಿಳೆಯರಾದ ರೇಖಾ, ಮಂಜುಳಾ ಮತ್ತು ಸಾವಿತ್ರಿ ಮನವಿ ಮಾಡಿದರು.

ಪಟ್ಟು ಬಿಡದ ಹೋರಾಟದ ಮಹಿಳೆಯರಿಗೆ ಡಿಸಿ & ಶಾಸಕ ಮೇಟಿ ಸ್ಪಂದನೆ: ಬಾಗಲಕೋಟೆ ನವನಗರದ ಜಿಲ್ಲಾಡಳಿತ ಭವನದ ಎದುರು ಅಹೋರಾತ್ರಿ ಪ್ರತಿಭಟನಾ ಧರಣಿ ನಡೆಸುವ ಮೂಲಕ ಮದ್ಯ ನಿಷೇಧಕ್ಕೆ ಆಗ್ರಹಿಸಿ ಹೋರಾಟಕ್ಕಿಳಿದ ಮಹಿಳೆಯರು ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು, ಅಲ್ಲದೆ ಸ್ಥಳಕ್ಕೆ ಅಬಕಾರಿ ಸಚಿವ ಆರ್​.ಬಿ.ತಿಮ್ಮಾಪೂರ ಮತ್ತು ಜಿಲ್ಲೆಯ ಜಿಲ್ಲಾಧಿಕಾರಿಗಳು ಬರುವಂತೆ ಪಟ್ಟು ಹಿಡಿದ್ರು. ಮಹಿಳೆಯರ ಆಗ್ರಹಕ್ಕೆ ಸ್ಪಂದಿಸಿ ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ಎಂ ಜಾನಕಿ ಮತ್ತು ಮಾಜಿ ಸಚಿವ, ಶಾಸಕ ಎಚ್​.ವೈ.ಮೇಟಿ ಅವರು ಆಗಮಿಸಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ್ರು. ಈ ಮಧ್ಯೆ ಮಹಿಳೆಯೊಬ್ಬಳು ಕಣ್ಣೀರಿಡುತ್ತಾ ಗೋಳಿಟ್ಟ ಪ್ರಸಂಗವೂ ಸಹ ನಡೆಯಿತು. 

ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷ ಪತನ: ಸಂಸದ ಬಿ.ವೈ.ರಾಘವೇಂದ್ರ

ಪ್ರತಿಭಟನಾನಿರತ ಮಹಿಳೆಯರು ಗ್ರಾಮೀಣ ಭಾಗದಲ್ಲಿನ ಕುಟುಂಬಗಳು ಮದ್ಯದಂಗಡಿಯಿಂದ ಬೀದಿಗೆ ಬಿದ್ದ ಉದಾಹರಣೆಗಳನ್ನ ಡಿಸಿಗೆ ಮನವರಿಕೆ ಮಾಡಿದ್ರು. ಬಳಿಕ ಜಿಲ್ಲಾಧಿಕಾರಿಗಳಿಗೆ ಮಹಿಳೆಯರು ಮನವಿ ನೀಡಿದ್ರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳಾದ ಕೆ.ಎಮ್​.ಜಾನಕಿ ಅವರು,  ಮಹಿಳೆಯರ ಆಗ್ರಹದ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವೆ ಎಂದು ಹೇಳಿದರೆ, ಇತ್ತ ಶಾಸಕ ಎಚ್​.ವೈ.ಮೇಟಿ ಸಹ ಈ ಬಗ್ಗೆ ಸಿಎಂ ಅವರ ಗಮನಕ್ಕೆ ತರೋದಾಗಿ ಹೇಳಿದರು. ಒಟ್ಟಿನಲ್ಲಿ ಇಂದು ರಾಷ್ಟ್ರಾದ್ಯಂತ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಜಯತ್ಯೋತ್ಸವದ ಸಂಭ್ರಮ ಮನೆ ಮಾಡಿದ್ರೆ‌, ಇತ್ತ ಬಾಗಲಕೋಟೆಯಲ್ಲಿ ಮಾತ್ರ ಮಹಿಳೆಯರು ನ್ಯಾಯಕ್ಕಾಗಿ ಆಗ್ರಹಿಸಿ ಮದ್ಯ ನಿಷೇಧಗೊಳಿಸುವಂತೆ ಪ್ರತಿಭಟನೆ ನಡೆಸುತ್ತಿರೋದು ವಿಪರ್ಯಾಸವೇ ಸರಿ.

click me!