ಬಿಜೆಪಿ ಜೊತೆಗಿನ ಮೈತ್ರಿಗೆ ಜೆಡಿಎಸ್‌ ನಾಯಕರ ಒಪ್ಪಿಗೆ

By Kannadaprabha NewsFirst Published Oct 3, 2023, 8:40 AM IST
Highlights

ಭಾನುವಾರ ನಡೆದ ಪಕ್ಷದ ಸಭೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿಗೆ ಜೆಡಿಎಸ್‌ ನಾಯಕರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

  ರಾಮನಗರ :  ಭಾನುವಾರ ನಡೆದ ಪಕ್ಷದ ಸಭೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿಗೆ ಜೆಡಿಎಸ್‌ ನಾಯಕರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬಿಡದಿಯ ಕೇತಿಗಾನಹಳ್ಳಿಯ ತೋಟದಲ್ಲಿ ಪಕ್ಷದ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಜಿಲ್ಲಾಧ್ಯಕ್ಷರು ಹಾಗೂ ಹಿರಿಯ ಮುಖಂಡರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ - ಜೆಡಿಎಸ್ ಮೈತ್ರಿ ಪರಿಹಾರವಾಗಿದೆ. ಕೇಂದ್ರ ಸರ್ಕಾರದ ನೆರವಿನಿಂದ ಎಲ್ಲ ಸಮಸ್ಯೆ, ಯೋಜನೆಗಳಿಗೆ ಪರಿಹಾರ ಕೊಡಿಸುತ್ತೇನೆ. ಮುಂದಿನ ಐದು ವರ್ಷಗಳಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಪಡೆಯದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಘೋಷಿಸಿದರು.

ಬಿಜೆಪಿ ಜತೆಗಿನ ಮೈತ್ರಿ ನನ್ನ ಸ್ವಾರ್ಥಕ್ಕೆ ಅಲ್ಲ. ನಾಡಿನ ಹಿತಕ್ಕಾಗಿ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗದಂತೆ ಕಾನೂನಿನ ವ್ಯಾಪ್ತಿಯೊಳಗೇ ಈ ಸಮಸ್ಯೆ ಪರಿಹಾರ ಪಡೆಯುವ ಕೆಲಸ ಮಾಡುತ್ತೇನೆ. ಈ ಮೈತ್ರಿಯಿಂದ ರಾಜ್ಯಕ್ಕೆ ಒಳ್ಳೆಯದು ಆಗುತ್ತದೆ. ನಮ್ಮ ನೀರು ಉಳಿಸೋದಕ್ಕೆ ಏನು ಮಾಡಬೇಕು, ಅದನ್ನು ಮಾಡುತ್ತೇನೆ. ಕಾಂಗ್ರೆಸ್ ನವರ ರೀತಿಯಲ್ಲಿ ನಾನು ಸುಳ್ಳು ಹೇಳುವುದಿಲ್ಲ. ದೇವೇಗೌಡರ ಮಾರ್ಗದರ್ಶನದಲ್ಲಿ ಈ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ನಮ್ಮ ಪಕ್ಷ ಬಲವಾಗಿ, ಒಗ್ಗಟ್ಟಾಗಿದೆ ಎನ್ನುವುದಕ್ಕೆ ಈ ಸಭೆ ಸಾಕ್ಷಿಯಾಗಿದೆ. ಈ ರಾಮನಗರದ ಮಣ್ಣಲ್ಲಿಯೇ ನಾನು ಮಣ್ಣಾಗೋದು. ಈ ಮಣ್ಣಿನ ಸಾಕ್ಷಿಯಾಗಿ ಹೇಳುತ್ತಿದ್ದೇನೆ. ಮೈತ್ರಿಯಿಂದ ಜೆಡಿಎಸ್ ಪಕ್ಷದ ಯಾರೊಬ್ಬರ ರಾಜಕೀಯ ಭವಿಷ್ಯಕ್ಕೆ ಧಕ್ಕೆ ಇಲ್ಲ . ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿಲ್ಲ, ಮತಕ್ಕಾಗಿ ಯಾವುದೇ ಒಂದು ಸಮುದಾಯವನ್ನು ಓಲೈಕೆ ಮಾಡಲಾರೆ ಎಂದರು.

ಈ ಮಧ್ಯೆ ಸಭೆಯಲ್ಲಿ ಮಾತನಾಡಿದ ಜಿ.ಟಿ.ದೇವೇಗೌಡರು, ಮುಖಂಡರಿಂದ ಪಕ್ಷ ನಿಷ್ಠೆ ಬಗ್ಗೆ ಪ್ರಮಾಣ ಮಾಡಿಸಿದರು.

ಸಿ.ಎಂ.ಇಬ್ರಾಹಿಂ, ಕಂದಕೂರ ಸಭೆಗೆ ಗೈರು:

ಬಿಜೆಪಿ ಜತೆ ಜೆಡಿಎಸ್‌ ಮೈತ್ರಿ ಮಾಡಿಕೊಂಡಿರುವುದಕ್ಕೆ ಮುನಿಸಿಕೊಂಡಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಈ ಸಭೆಗೆ ಗೈರುಹಾಜರಾಗಿದ್ದರು. ಇದೇ ರೀತಿ ಮೈತ್ರಿಗೆ ಅಸಮಾಧಾನ ವ್ಯಕ್ತಪಡಿಸಿದ್ದ ಗುರುಮಿಠಕಲ್ ಶಾಸಕ ಶರಣ್ ಗೌಡ ಕಂದಕೂರ್ ಕೂಡ ಬಂದಿರಲಿಲ್ಲ. ಕಂದಕೂರ ಜತೆ ಇತ್ತೀಚೆಗೆ ಎಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್‌ ಚರ್ಚಿಸಿದ್ದರು. ಆದರೂ ಸಭೆಗೆ ಕಂದಕೂರ ಗೈರು ಹಾಜರಾಗಿದ್ದರು.

click me!