ಎಸ್‌ಡಿಎಂ ಆಸ್ಪತ್ರೆಯಲ್ಲಿ ನಾಲ್ಕು ದಿನಗಳ ಅಂತರದಲ್ಲಿ ಎರಡನೇ ಬಹು ಅಂಗಾಂಗ ದಾನ ಮಾಡಿರುವ ಸಂಗತಿಯಾಗಿದೆ.
ಧಾರವಾಡ(ಜು.15): ಎರಡು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಲ್ಲಿಯ ಎತ್ತಿನಗುಡ್ಡದ ಕಮಲವ್ವ ಕೆಲಗೇರಿ (48) ಎಂಬವರಿಗೆ ಮಿದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಅವರ ಬಹುಅಂಗಾಗಳನ್ನು ಗುರುವಾರ ವಿವಿಧ ಆಸ್ಪತ್ರೆಗಳಿಗೆ ದಾನ ಮಾಡಲಾಯಿತು. ಎಸ್‌ಡಿಎಂ ಆಸ್ಪತ್ರೆ ವೈದ್ಯರು ಗುರುವಾರ ಬೆಳಗ್ಗೆ ಕಮಲವ್ವ ಅವರ ಕುಟುಂಬದ ಒಪ್ಪಿಗೆ ಮೇರೆಗೆ ಹೃದಯ ನಾಳ, ಎರಡು ಮೂತ್ರಪಿಂಡಗಳನ್ನು ಹಾಗೂ ಯಕೃತ್ (ಲಿವರ್) ನ್ನು ದಾನ ಮಾಡಲಾಯಿತು.
ಹೃದಯ ನಾಳವನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಮತ್ತು ಯಕೃತನ್ನು ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ವಿಮಾನದ ಮೂಲಕ ರವಾನಿಸಲಾಯಿತು. ಒಂದು ಮೂತ್ರಪಿಂಡವನ್ನು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ಹಾಗೂ ಇನ್ನೊಂದು ಮೂತ್ರಪಿಂಡವನ್ನು ತಮ್ಮದೇ ಆಸ್ಪತ್ರೆಯ ವ್ಯಕ್ತಿಯೊಬ್ಬರಿಗೆ ಕಸಿ ಮಾಡಲಾಗಿದೆ. ಅಂಗಗಳನ್ನು ಗ್ರೀನ್ ಕಾರಿಡಾರ ಮೂಲಕ ಸಾಗಿಸಲಾಗಿದ್ದು ಹು-ಧಾ ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು.
ಸಾವಿನಲ್ಲೂ ಸಾರ್ಥಕತೆ: ಪುನೀತ್ ಸಂಚಾರಿ ವಿಜಯ್ ಹಾದಿಯಲ್ಲಿ RJ ರಚನಾ, ಅಂಗಾಗ ದಾನ!
ಎರಡು ಪ್ರತ್ಯೇಕ ಗ್ರೀನ್ ಕಾರಿಡಾರ್ ನಿರ್ಮಿಸಲಾಗಿದ್ದು, ಎರಡು ಸುಸಜ್ಜಿತ ಆ್ಯಂಬುಲೆನ್ಸ್ ಹಾಗೂ ವೈದ್ಯರ ತಂಡ ಸುಮಾರು ಬೆಳಗ್ಗೆ 11.30 ಹೊತ್ತಿಗೆ ಎಸ್‌ಡಿಎಂ ಆಸ್ಪತ್ರೆಯಿಂದ ಕೆಎಲ್‌ಇ ಆಸ್ಪತ್ರೆಗೆ 55 ನಿಮಿಷದಲ್ಲಿ ರವಾನಿಸಲಾಯಿತು. ಹಾಗೆಯೇ, ಎಸ್‌ಡಿಎಂ ಆಸ್ಪತ್ರೆಯಿಂದ ಹುಬ್ಬಳ್ಳಿಯ ವಿಮಾನ ನಿಲ್ದಾಣದ ವರೆಗೆ ಝಿರೋ ಟ್ರಾಫಿಕ್‌ನಲ್ಲಿ ಕೊಂಡೊಯ್ಯಲಾಯಿತು. ಇದು ಎಸ್‌ಡಿಎಂ ಆಸ್ಪತ್ರೆಯಲ್ಲಿ ನಾಲ್ಕು ದಿನಗಳ ಅಂತರದಲ್ಲಿ ಎರಡನೇ ಬಹು ಅಂಗಾಂಗ ದಾನ ಮಾಡಿರುವ ಸಂಗತಿಯಾಗಿದೆ.