Belagavi: ಸುವರ್ಣ ವಿಧಾನಸೌಧ ಎದುರು 'ಶಾವಿಗೆ' ಒಣಹಾಕಿದ ಮಹಿಳೆ: ಫೋಟೋ ವೈರಲ್

By Suvarna News  |  First Published May 31, 2022, 7:29 PM IST

*ಸುವರ್ಣಸೌಧದ ಎದುರು ಶಾವಿಗೆ ಒಣಹಾಕಿದ ಕಾರ್ಮಿಕ ಮಹಿಳೆ..!
*ಸಾಂಬ್ರಾದಿಂದ ಶಾವಿಗೆ ಖರೀದಿಸಿ ತಂದಿದ್ದ ಮತ್ತೋರ್ವ ಕಾರ್ಮಿಕ ಮಹಿಳೆ..!
*ಶಾವಿಗೆ ಹಸಿ ಇತ್ತು ಎಂಬ ಕಾರಣಕ್ಕೆ ಸೀರೆ ಮೇಲೆ ಒಣಗಿ ಹಾಕಿ ಯಡವಟ್ಟು..!


ವರದಿ: ಮಹಾಂತೇಶ ಕುರಬೇಟ್, ಬೆಳಗಾವಿ

ಬೆಳಗಾವಿ (ಮೇ 31): ನಗರದ ಹೊರವಲಯದಲ್ಲಿರುವ ಸುವರ್ಣ ವಿಧಾನಸೌಧಕ್ಕೆ (suvarna vidhana soudha) ರಾಜ್ಯಮಟ್ಟದ ಕಚೇರಿಗಳು ಸ್ಥಳಾಂತರ ಆಗಬೇಕು, ಉತ್ತರ ಕರ್ನಾಟಕದ ಆಡಳಿತ ಕೇಂದ್ರ ಬಿಂದು ಆಗಬೇಕು ಎಂದು‌ ಉತ್ತರ ಕರ್ನಾಟಕದ ಬಹುದಿನಗಳ ಬೇಡಿಕೆ. ಪ್ರತಿವರ್ಷ ಸುವರ್ಣವಿಧಾನಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನ ಬಿಟ್ಟು ಬೇರೆ ವೇಳೆಯಲ್ಲಿ ಸುವರ್ಣಸೌಧ ಭೂತಬಂಗಲೆಯಂತೆ ಭಾಸವಾಗುತ್ತದೆ ಎಂದು ಹಲವರು ಆರೋಪಿಸಿ ಪ್ರತಿಭಟನೆ ನಡೆಸಿದ್ದು ಉಂಟು.

Tap to resize

Latest Videos

ಆದರೆ ಈಗ ಸುವರ್ಣ ವಿಧಾನಸೌಧದ ಪ್ರಮುಖ ಮೆಟ್ಟಿಲುಗಳ ಎದುರೇ ಸೀರೆ ಹಾಯಿಸಿ ಅದರ ಮೇಲೆ ಶಾವಿಗೆ ಒಣಹಾಕಿದ ಘಟನೆ ಇಂದು ಮಧ್ಯಾಹ್ನ ನಡೆದಿದ್ದು ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಬಿಗಿ ಭದ್ರತೆಯ ನಡುವೆಯೂ ಶಾವಿಗೆ ಒಣಹಾಕಿದ್ದು ಯಾರು?: ಸುವರ್ಣ ವಿಧಾನಸೌಧ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತಾದರೂ ಸುವರ್ಣ ವಿಧಾನಸೌಧದ ಭದ್ರತಾ ಜವಾಬ್ದಾರಿಯನ್ನು KSISF(Karnataka State Industrial Security Force)ಗೆ ವಹಿಸಲಾಗಿದೆ. 

ಅಲ್ಲದೇ ಸುವರ್ಣ ವಿಧಾನ ಸೌಧದಲ್ಲಿ ಜಿಲ್ಲಾ ಮಟ್ಟದ ಕೆಲ ಕಚೇರಿಗಳನ್ನು ಸ್ಥಳಾಂತರ ಮಾಡಲಾಗಿದ್ದು ಇಲ್ಲಿ ಹಲವು ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಸ್ವಚ್ಛತಾ ಕಾರ್ಯಕ್ಕೆ ಅಕ್ಕಪಕ್ಕದ ಗ್ರಾಮಗಳ ಕಾರ್ಮಿಕರು ಕೆಲಸಕ್ಕೆ  ನಿಯೋಜ‌ನೆಗೊಂಡಿದ್ದಾರೆ. ವಿಶೇಷವಾಗಿ ಬೆಳಗಾವಿ ತಾಲೂಕಿನ ಸಾಂಬ್ರಾದಲ್ಲಿ ಶಾವಿಗೆ ಹೊಸೆದು ಮಾರಾಟ ಮಾಡಲಾಗುತ್ತದೆ. 

ಇದನ್ನೂ ಓದಿ: ರೈತನ ಜಮೀನಿನಲ್ಲಿ ವಿಚಿತ್ರ ಹಾವು: ಹೊಟ್ಟೆಯಲ್ಲಿದ್ದ 50 ಮರಿ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು

ಉತ್ತರ ಕರ್ನಾಟಕದಲ್ಲಿಯೇ ಸಾಂಬ್ರಾ ಶಾವಿಗೆ ಫುಲ್ ಫೇಮಸ್. ಉತ್ತರ ಕರ್ನಾಟಕ ಸೇರಿ ನೆರೆಯ ಮಹಾರಾಷ್ಟ್ರ, ಗೋವಾಗೂ ಸಾಂಬ್ರಾ ಗ್ರಾಮದಲ್ಲಿ ತಯಾರಿಸಿದ ಶಾವಿಗೆ ಸರಬರಾಜು ಆಗುತ್ತೆ. ಹೀಗಿರುವಾಗ ಸುವರ್ಣ ವಿಧಾನಸೌಧದಲ್ಲಿ ಕೆಲಸ ಮಾಡುವ ಸಾಂಬ್ರಾ ಗ್ರಾಮದ ಓರ್ವ ಕಾರ್ಮಿಕ ಮಹಿಳೆ ಮತ್ತೋರ್ವ ಕಾರ್ಮಿಕ ಮಹಿಳೆಗೆ ಶಾವಿಗೆ ತಂದು ಕೊಟ್ಟಿದ್ದಾರೆ. 

Picture Credit: Allaboutbelgaum

ಈ ವೇಳೆ ಶಾವಿಗೆ ಹಸಿ ಇದೆ ಎಂಬ ಕಾರಣಕ್ಕೆ ಸುವರ್ಣಸೌಧದ ಮುಖ್ಯ ದ್ವಾರದ ಮೆಟ್ಟಿಲುಗಳ ಮೇಲೆ ಸೀರೆ ಹಾಯಿಸಿ ಅದರ ಮೇಲೆ ಶಾವಿಗೆ ಒಣಹಾಕಿದ್ದಾಳೆ. ಮಧ್ಯಾಹ್ನ ವೇಳೆ ಪೆಟ್ರೋಲಿಂಗ್ ಮಾಡುತ್ತಿದ್ದ ಭದ್ರತಾ ಸಿಬ್ಬಂದಿ ಶಾವಿಗೆ ಒಣಹಾಕಿದ್ದನ್ನು ಕಂಡು ತಕ್ಷಣ ತೆರವು ಮಾಡಿಸಿದ್ದಾರೆ. ಕಾರ್ಮಿಕ ಮಹಿಳೆಯರಿಗೂ ತರಾಟೆಗೆ ತಗೆದುಕೊಂಡಿದ್ದಾರೆ. ಆದ್ರೆ ಅಷ್ಟೊತ್ತಿಗಾಗಲೇ ಯಾರೋ ಅಪರಿಚಿತರು ಈ ಫೋಟೋ ತಗೆದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಮದ್ವೆ ಮಂಟಪಕ್ಕೆ ಟ್ರಾಕ್ಟರ್ ಡ್ರೈವ್‌ ಮಾಡ್ತಾ ಬಂದ ವಧು: ಸಹೋದರರ ಸಾಥ್

click me!