ಹುಬ್ಬಳ್ಳಿ: ನಡು ರಸ್ತೆಯಲ್ಲಿ ಲೈಟ್ ಕಂಬ, ಅಧಿಕಾರಿಗಳು ಸ್ಮಾರ್ಟ್ ಆಗೋದು ಯಾವಾಗ..?

By Suvarna News  |  First Published May 31, 2022, 6:18 PM IST

* ಮಹಾನಗರ ಪಾಲಿಕೆ ಹಾಗೂ ಹೆಸ್ಕಾಂ ಅಧಿಕಾರಿಗಳ ಸಮನ್ವಯದ ಕೊರತೆ
* ದಿನನಿತ್ಯ ತೊಂದರೆ ಅನುಭವಿಸುತ್ತಿರುವ ಸಾರ್ವಜನಿಕರು
* ಸ್ಮಾರ್ಟ್ ಸಿಟಿ ಕಾಮಗಾರಿ, ಅಧಿಕಾರಿಗಳು ಸ್ಮಾರ್ಟ್ ಆಗೋದು ಯಾವಾಗ..?


ಹುಬ್ಬಳ್ಳಿ, (ಮೇ.31): ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಹಣೆಪಟ್ಟಿ ಕಟ್ಟಿಕೊಂಡಿದೆ. ಆದರೆ ನಗರ ಮಾತ್ರ ಸ್ಮಾರ್ಟ್ ಆಗುತ್ತೋ ಇಲ್ಲೋ‌ ಗೊತ್ತಿಲ್ಲ. ಆದರೆ ದಿನಕ್ಕೊಂದು ಸಮಸ್ಯೆ ಅಂತು ಇದ್ದೆ ಇರುತ್ತೆ. ಅಂತಹದ್ದೆ ಮತ್ತೊಂದು ಸಮಸ್ಯೆ ಎದುರಾಗಿದ್ದು, ಇದೀಗ ಮಹಾನಗರ ಪಾಲಿಕೆ ಹಾಗೂ ಹೆಸ್ಕಾಂ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ರಸ್ತೆ ಅಗಲೀಕರಣಗೊಂಡು ಸಿಸಿ ರಸ್ತೆಯಾದರು ಸಹಿತ ವಿದ್ಯುತ್ ಕಂಬಗಳು ನಡು ರಸ್ತೆಯಲ್ಲಿ ಇವೆ. ಪರಿಣಾಮ ಸಾರ್ವಜನಿಕರು ದಿನನಿತ್ಯ ತೊಂದರೆ ಅನುಭವಿಸುವಂತಾಗಿದೆ.

ಹೌದು.. ರಸ್ತೆ ಮಧ್ಯೆ ಗುಂಡಿಗಳು ಇರುವುದು, ಇನ್ನು ಕೆಲ ರಸ್ತೆಗಳ ಮಧ್ಯೆಯೇ ಕಾಲುವೆ ಇರುವುದನ್ನೂ ನೋಡಿದ್ದೇವೆ. ಆದರೆ, ರಸ್ತೆ ಮಧ್ಯೆಯೇ ವಿದ್ಯುತ್‌ ಕಂಬ ಇರುವುದು ಕಾಣುವುದು ಅಪರೂಪ. ಇಂಥ ಅಪರೂಪದ ದೃಶ್ಯ ನೋಡಬೇಕೆಂದರೆ ಹುಬ್ಬಳ್ಳಿಯ ಲಿಂಗರಾಜ ನಗರಕ್ಕೆ ಬರಬೇಕು. ರಂಭಾಪುರಿ ಕಲ್ಯಾಣ ಮಂಟಪ ಪಕ್ಕದ ಲಿಂಗರಾಜ ನಗರದ ರಸ್ತೆಯಿಂದ ಕುಮಾರೇಶ್ವರ ಬಸ್ ನಿಲ್ದಾಣದವರೆಗೆ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಮಧ್ಯೆ ಇರುವ ವಿದ್ಯುತ್‌ ಕಂಬವನ್ನು ಸ್ಥಳಾಂತರಿಸದೆ ಕಂಬ ಅಲ್ಲಿಯೇ ಇರಲು ಬಿಟ್ಟು ರಸ್ತೆ ಅಗಲೀಕರಣದೊಂದಿಗೆ ಹೊಸ ಸಿಸಿ ರಸ್ತೆ ಮಾಡಿದ್ದು ಇದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ರಸ್ತೆಯ ಮಧ್ಯದಲ್ಲಿಯೇ ಕಳೆದ ಆರು ತಿಂಗಳಿಂದ ವಿದ್ಯುತ್‌ ಕಂಬವಿದ್ದರೂ ಇದನ್ನು ಸಂಬಂಧಪಟ್ಟ ಇಲಾಖೆ ಸ್ಥಳಾಂತರಿಸುವ ಗೋಜಿಗೆ ಹೋಗಿಲ್ಲ. ಪರಿಣಾಮ ಇಲ್ಲಿಯ ನಿವಾಸಿಗಳು ನಿತ್ಯ ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ.

Tap to resize

Latest Videos

 ಹುಬ್ಬಳ್ಳಿ-ಧಾರವಾಡ ಪಾಲಿಕೆ ಯಡವಟ್ಟು: ಹೊಳೆಯಲ್ಲಿ ಹೋಮವಾಗ್ತಿದೆ ಕೋಟಿ ಕೋಟಿ ಹಣ..!
 
ರಾತ್ರಿ ಸಮಯದಲ್ಲಿ ಪರಸ್ಥಳಗಳಿಂದ ಬರುವ ಜನರು, ವಾಹನ ಸವಾರರು ವಿದ್ಯುತ್‌ ಕಂಬ ಕಾಣದೇ ಅವಘಡಗಳು ಸಂಭವಿಸಿದ ಘಟನೆಗಳು ಸಾಕಷ್ಟು ನಡೆದಿವೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ರಸ್ತೆ ಮಧ್ಯದಲ್ಲಿಯೇ ವಿದ್ಯುತ್‌ ಕಂಬ ಬಂದಿರುವುದರಿಂದ ದೊಡ್ಡ ವಾಹನಗಳಿಗೆ ಈ ರಸ್ತೆಯಲ್ಲಿ ಸಂಚಾರಕ್ಕೆ ನಿರ್ಬಂಧಿಸಿದಂತಾಗಿದೆ.
 
ಇಲ್ಲಿಯ ನಿವಾಸಿಗಳು ವಿದ್ಯುತ್‌ ಕಂಬ ಸ್ಥಳಾಂತರಗೊಳಿಸುವಂತೆ ಪಾಲಿಕೆ ಹಾಗೂ ಹೆಸ್ಕಾಂ ಕಚೇರಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಸಂಬಂಧಪಟ್ಟ ಇಲಾಖೆ ವಿದ್ಯುತ್‌ ಕಂಬ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿಲ್ಲ. ಕಳೆದ ಹಲವಾರು ದಿನಗಳಿಂದ ರಸ್ತೆಯಲ್ಲಿ ವಿದ್ಯುತ್‌ ಕಂಬ ಅಡ್ಡ ಬಂದಿದ್ದರಿಂದ ರಸ್ತೆ ಅಭಿವೃದ್ಧಿ ಕಾರ್ಯಕ್ಕೂ ಅಡ್ಡಿಯಾಗಿತ್ತು. ಆದರೆ, ಈಗ ಫುಟ್ ಪಾಟ್ ಮತ್ತು  ರಸ್ತೆ ಮಧ್ಯೆ ವಿದ್ಯುತ್‌ ಕಂಬ ಇದ್ದರೂ ಕೂಡ ಅದನ್ನು ಅಲ್ಲಿಯೇ ಹಾಗೆಯೇ ಬಿಟ್ಟು ರಸ್ತೆಯನ್ನು ಡಾಂಬರೀರಣಗೊಳಿಸಿ ಅಭಿವೃದ್ಧಿ ಪಡಿಸಲಾಗಿದೆ.
 
ರಸ್ತೆ ಮಧ್ಯದ ಕಂಬವನ್ನು ಸ್ಥಳಾಂತರಿಸುವಂತೆ ಪಾಲಿಕೆ , ಹೆಸ್ಕಾಂ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಆದರೆ, ಪಾಲಿಕೆಯವರು ವಿದ್ಯುತ್‌ ಕಂಬ ಸ್ಥಳಾಂತರಿಸುವುದು ಹೆಸ್ಕಾಂನವರ ಕೆಲಸ ಎಂದು ಸಬೂಬು ನೀಡುತ್ತಾರೆ. ಆದರೆ, ಹೆಸ್ಕಾಂ ಇಲಾಖೆ ಅಧಿಕಾರಿಗಳು ಇದು ಪಾಲಿಕೆ ಸಂಬಂಧಪಟ್ಟದು ಎಂದು ಹೇಳುತ್ತಿದ್ದಾರೆ. ಇದರಿಂದಾಗಿ ಇಲ್ಲಿನ ನಿವಾಸಿಗಳಿಗೆ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದ್ದು, ಯಾರೂ ವಿದ್ಯುತ್‌ ಕಂಬ ಸ್ಥಳಾಂತಕ್ಕೆ ಮುಂದಾಗುತ್ತಿಲ್ಲ. ಪರಿಣಾಮ ಇಲ್ಲಿನ ನಿವಾಸಿಗಳು ನಿತ್ಯ ಹೆಸ್ಕಾಂ ಹಾಗೂ ಪಾಲಿಕೆ  ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

click me!