ಅಪಹರಣವೆಂದು ತಪ್ಪಾಗಿ ಭಾವಿಸಿ ಪೊಲೀಸರಿಗೆ ಕರೆ: ಯುವತಿಯ ಕಿಡ್ನ್ಯಾಪ್‌ ‘ಪ್ರಹಸನ’ ಸುಖಾಂತ್ಯ..!

By Kannadaprabha NewsFirst Published Nov 6, 2022, 11:28 AM IST
Highlights

4 ತಂಡದಿಂದ ಪೊಲೀಸರಿಂದ ತೀವ್ರ ಹೋರಾಟ, ವಿಷಯ ತಿಳಿದು ನಿಟ್ಟಿಸಿರು ಬಿಟ್ಟು ಪೊಲೀಸರು

ಬೆಂಗಳೂರು(ನ.06):  ಕಡಿಮೆ ರಕ್ತದೊತ್ತಡದಿಂದ ಕುಸಿದ ಯುವತಿಯನ್ನು ಸ್ನೇಹಿತ ಕ್ಯಾಬ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದನ್ನು ಅಪಹರಣವೆಂದು ತಪ್ಪು ಭಾವಿಸಿ ವ್ಯಕ್ತಿಯೊಬ್ಬ ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿದ ಪರಿಣಾಮ ಕೆಲ ಕಾಲ ಆತಂಕ ಸೃಷ್ಟಿಯಾದ ಘಟನೆ ಬಾಣಸವಾಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಶಿರಸಿ ಮೂಲದ ಮಾಡೆಲ್‌ ಅಮೃತಾ (25) ಗುರುವಾರ ಬಾಣಸವಾಡಿಯ ಸುಬ್ಬಯ್ಯನಪಾಳ್ಯ ರಸ್ತೆಯ ಸ್ನೇಹಿತನ ಮನೆಗೆ ಬಂದಿದ್ದರು. ಶುಕ್ರವಾರ ಮುಂಜಾನೆ 3.30ರ ಸುಮಾರಿಗೆ ಕಡಿಮೆ ರಕ್ತದೊತ್ತಡವಾಗಿ ಸುಸ್ತಾಗಿದೆ. ಈ ವೇಳೆ ಆಸ್ಪತ್ರೆಗೆ ಹೋಗಲು ಕ್ಯಾಬ್‌ ಬುಕ್‌ ಮಾಡಿದ್ದಾರೆ. ಮುಂಜಾನೆ 4ರ ಸುಮಾರಿಗೆ ಕ್ಯಾಬ್‌ ಮನೆ ಬಳಿ ಬಂದಿದೆ. ಈ ವೇಳೆ ಅಮೃತಾಳನ್ನು ಕ್ಯಾಬ್‌ ಹತ್ತಲು ಗೇಟ್‌ನಿಂದ ನಡೆದು ಹೋಗುವಾಗ ತಲೆ ಸುತ್ತು ಹೆಚ್ಚಾಗಿ ನಿತ್ರಾಣಗಳಾಗಿ ಒಮ್ಮೆ ಕೂಗಿದ್ದಾರೆ. ಇದನ್ನು ನೋಡಿದ ಸ್ನೇಹಿತ ಓಡಿಬಂದು ಆಕೆಯನ್ನು ಎತ್ತಿಕೊಂಡು ಕ್ಯಾಬ್‌ನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ತೆರಳಿದ್ದಾನೆ.

ಕಿಡ್ನಾಪ್‌ ಆದ 12 ದಿನದ ಮಗುವಿಗೆ ಎದೆಹಾಲು ಕುಡಿಸಿ ರಕ್ಷಿಸಿದ ಪೊಲೀಸ್‌

ಇದೇ ಸಮಯಕ್ಕೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಖಾಸಗಿ ಕಂಪನಿ ಉದ್ಯೋಗಿ ಶೇಖರ್‌ ಅವರು ಯುವತಿಯನ್ನು ಎತ್ತಿ ಕ್ಯಾಬ್‌ನಲ್ಲಿ ಕೂರಿಸಿಕೊಂಡು ಹೋಗುವುದನ್ನು ನೋಡಿ ಸಂಶಯದಿಂದ ಪೊಲೀಸ್‌ ಸಹಾಯವಾಣಿ 112ಗೆ ಕರೆ ಮಾಡಿ, ಅಪರಿಚಿತರು ಯುವತಿಯ ಅಪಹರಣ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ತಕ್ಷಣ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್‌ ಗುಳೇದ್‌ ಅವರು ಪೊಲೀಸರ ನಾಲ್ಕು ವಿಶೇಷ ತಂಡ ರಚಿಸಿದ್ದಾರೆ. ಬಾಣಸವಾಡಿ ಠಾಣೆ ಪೊಲೀಸರು ಶೇಖರ್‌ನನ್ನು ಸಂಪರ್ಕಿಸಿ ಠಾಣೆಗೆ ಕರೆಸಿ ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆದಿದ್ದಾರೆ.

ಶಿವಮೊಗ್ಗದ ವಿಳಾಸ:

ಶೇಖರ್‌ ನೀಡಿದ ಮಾಹಿತಿ ಆಧರಿಸಿ ಘಟನಾ ಸ್ಥಳದಲ್ಲಿ ನಿಂತಿದ್ದ ದ್ವಿಚಕ್ರ ವಾಹನವನ್ನು ಠಾಣೆಗೆ ತೆಗೆದುಕೊಂಡ ಹೋದ ಪೊಲೀಸರು, ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ ಜಾಡು ಹಿಡಿದಾಗ ಶಿವಮೊಗ್ಗದ ವಿಳಾಸ ಸಿಕ್ಕಿದೆ. ತಕ್ಷಣ ಶಿವಮೊಗ್ಗ ಪೊಲೀಸರು ವಿಳಾಸಕ್ಕೆ ತೆರಳಿ ವಿಚಾರಿಸಿದಾಗ ಮನೆಯಲ್ಲಿ ಯಾರು ಇರಲಿಲ್ಲ. ಮನೆ ಮಾಲಿಕರು ಈ ಹಿಂದೆ ಮನೆಯಲ್ಲಿ ಇದ್ದವರ ಮೊಬೈಲ್‌ ಸಂಖ್ಯೆ ಕೊಟ್ಟಿದ್ದಾರೆ. ಆ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದಾಗ ಯಾರೂ ಕರೆ ಸ್ವೀಕರಿಸಿಲ್ಲ. ಬಳಿಕ ಟವರ್‌ ಲೋಕೇಶನ್‌ ಹಾಕಿ ನೋಡಿದಾಗ ಘಟನಾ ಸ್ಥಳದ ಬಳಿ ಲೊಕೇಶನ್‌ ತೋರಿಸಿದೆ.

ಬ್ಯುಸಿನೆಸ್ ಮೆನ್ ಮಗನನ್ನ ಕಿಡ್ನಾಪ್ ಮಾಡಿ 1ಕೋಟಿ , 15kg ಚಿನ್ನಕ್ಕೆ ಬೇಡಿಕೆಯಿಟ್ಟ ಆರೋಪಿಗಳು ಅಂದರ್

ತಕ್ಷಣ ಪೊಲೀಸರು ಘಟನಾ ಸ್ಥಳದ ಬಳಿ ತೆರಳಿ ಸುತ್ತಮುತ್ತಲ ಮನೆಯವರನ್ನು ವಿಚಾರಣೆ ಮಾಡುವಾಗ, ಯುವತಿಯೊಬ್ಬಳು ಮನೆ ಬಳಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಕಳುವಾಗಿದೆ ಎಂದು ಪೊಲೀಸರ ಬಳಿ ಹೇಳಿದ್ದಾಳೆ. ಕೂಡಲೇ ಆಕೆಯನ್ನು ಠಾಣೆಗೆ ಬಳಿ ಕರೆಸಿ ದ್ವಿಚಕ್ರ ವಾಹನ ತೋರಿಸಿದಾಗ ಇದು ನನ್ನದೇ ಎಂದಿದ್ದಾಳೆ. ಬಳಿಕ ಮುಂಜಾನೆ ಯಾರಾದರೂ ಹೊರಗೆ ಹೋದರೇ ಎಂದು ವಿಚಾರಿಸಿದಾಗ, ನನ್ನ ಸ್ನೇಹಿತೆ ಮನೆಯಲ್ಲಿ ಇದ್ದಳು. ಮುಂಜಾನೆ ಹೋದಳು ಎಂದು ಮಾಹಿತಿ ನೀಡಿದ್ದಾಳೆ.

ಕ್ಯಾಬ್‌ ಕಂಪನಿ ಬಳಿ ನಂಬರ್‌!

ಅಷ್ಟರಲ್ಲಿ ಮತ್ತೊಂದು ತಂಡ 100ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದ್ದು, ಉಬರ್‌ ಕ್ಯಾಬ್‌ ಆ ರಸ್ತೆಯಲ್ಲಿ ಹೋಗಿರುವುದನ್ನು ಪತ್ತೆಹಚ್ಚಿದ್ದರು. ಕೂಡಲೇ ಉಬರ್‌ ಕಂಪನಿ ಸಂಪರ್ಕಿಸಿ ಆ ಕ್ಯಾಬ್‌ ಬುಕ್‌ ಮಾಡಿದವರ ಮೊಬೈಲ್‌ ಸಂಖ್ಯೆ ಪಡೆದಿದ್ದಾರೆ. ಆ ಸಂಖ್ಯೆಗೆ ಕರೆ ಮಾಡಿದಾಗ ಅದು ಅಮೃತಾ ಕರೆ ಸ್ವೀಕರಿಸಿ ಮಾತನಾಡಿದ್ದಾರೆ. ಮುಂಜಾನೆ ಕಡಿಮೆ ರಕ್ತದೊತ್ತಡದಿಂದ ನಿತ್ರಾಣಳಾಗಿ ಸ್ನೇಹಿತನ ಜತೆ ಆಸ್ಪತ್ರೆಗೆ ಹೋದ ಪ್ರಸಂಗವನ್ನು ವಿವರಿಸಿದ ನಂತರ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.
 

click me!