ದಾವಣಗೆರೆ (ನ.6) : ತುಂಗಾ ನಾಲೆಯಲ್ಲಿ ಶವವಾಗಿ ಪತ್ತೆಯಾದ ಮಗನ ಅಂತ್ಯಕ್ರಿಯೆ ನಡೆಸಿದ ಶಾಸಕ ಎಂ.ಪಿ.ರೇಣುಕಾಚಾರ್ಯ ನಿವಾಸದಲ್ಲಿ ಶನಿವಾರ ನೀರವ ಮೌನ ಆವರಿಸಿದ್ದು, ಕ್ಷೇತ್ರದ ವಿವಿಧೆಡೆಯಿಂದ ಮಹಿಳೆಯರು ತಿಂಡಿ, ರೊಟ್ಟಿ, ಬುತ್ತಿ ಕಟ್ಟಿಕೊಂಡು ಬಂದು ಇಡೀ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಮಾಜಿ ಸಚಿವ ರೇಣುಕಾಚಾರ್ಯ ಅಣ್ಣನ ಮಗ ನಾಪತ್ತೆ: ಹುಡುಕಾಟಕ್ಕೆ ವಿಶೇಷ ತಂಡ ರಚನೆ
ಶಾಸಕ ರೇಣುಕಾಚಾರ್ಯ ನಿವಾಸದಲ್ಲಿ ಚಂದ್ರು ಇಲ್ಲದ 6 ದಿನಗಳನ್ನು ಕಳೆದಿದ್ದು, ಮಕ್ಕಳಿಂದ ಹಿರಿಯರವರೆಗೆ ಚಂದ್ರು ಇಲ್ಲವೆಂಬ ಕೊರಗು ಆ ಮನೆಯ ಖುಷಿ, ಸಂತೋಷವನ್ನೇ ಕಸಿದುಕೊಂಡಿದೆ. ರೇಣುಕಾಚಾರ್ಯ, ತಮ್ಮ ಎಂ.ಪಿ.ರಮೇಶ ಮನೆಯ ದೊಡ್ಡ ಕೊಠಡಿಗಳಲ್ಲಿ ಕುಳಿತು, ಪುತ್ರ ಶೋಕ ನಿರಂತರವೆಂಬಂತೆ ಚಂದ್ರು ಅಗಲಿಕೆಗೆ ಕಂಬನಿ ಮಿಡಿಯುತ್ತಿದ್ದರು.
ಶಾಸಕರ ಕುಟುಂಬ ದುಃಖದಲ್ಲಿ ಮುಳುಗಿದ್ದು, ತಾವು ಸಂಕಷ್ಟದಲ್ಲಿದ್ದಾಗ, ಕೊರೋನಾ ಸವಾಲಿನ ದಿನಗಳಲ್ಲಿ ಮನೆ ಬಾಗಿಲಿಗೆ ಬಂದು ಸಮಸ್ಯೆಗೆ ಸ್ಪಂದಿಸುತ್ತಿದ್ದ ರೇಣುಕಾಚಾರ್ಯಗೆ ಧೈರ್ಯ ತುಂಬುವ ಕೆಲಸ ಜನರು ಮಾಡುತ್ತಿದ್ದಾರೆ. ಅದರಲ್ಲೂ ಮಹಿಳೆಯರು ತಮ್ಮ ಮನೆಗಳಿಂದ ಪಡ್ಡು, ಅವಲಕ್ಕಿ, ಉಪ್ಪಿಟ್ಟು, ರೊಟ್ಟಿ, ಬುತ್ತಿ ಕಟ್ಟಿಕೊಂಡು ಬಂದು, ರೇಣುಕಾಚಾರ್ಯ ನಿವಾಸದ ಮಕ್ಕಳಿಂದ ಹಿರಿಯರವರೆಗೆ ಒಲ್ಲವೆಂದರೆ ಬೈದು, ಗದರಿ ಊಟ ಮಾಡುವಂತೆ ಮನವೊಲಿಸುವಲ್ಲಿ ತಲ್ಲೀನರಾಗಿದ್ದರು.
ಅಕ್ಕ, ತಂಗಿಯರೇ ಊಟ ಬಡಿಸಿದಂತಾಗಿದೆ:
ಮಾದೇನಹಳ್ಳಿಯ ಕೆಲ ಮಹಿಳೆಯರು ತಮ್ಮ ಮನೆಯಿಂದಲೇ ಊಟ, ಉಪಹಾರ ಮಾಡಿ, ದಿನವಿಡೀ ಶಾಸಕರ ಮನೆಯಲ್ಲೇ ಇದ್ದು, ಸಮಾಧಾನಪಡಿಸಿ ತಾವು ತಂದ ಆಹಾರ ಬಡಿಸಿದರು. ನಂತರ ಕೆಲವರು ತಾವೇ ಸ್ವಯಂ ಪ್ರೇರಣೆಯಿಂದ ಸಣ್ಣಪುಟ್ಟಕೆಲಸಗಳನ್ನೂ ಮಾಡಿದರು. ಹೆಣ್ಣು ಮಕ್ಕಳ ಪ್ರೀತಿ, ವಿಶ್ವಾಸಕ್ಕೆ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ. ನನ್ನ ಅಕ್ಕ, ತಂಗಿಯರೇ ಊಟ ಬಡಿಸಿದಂತಾಗುತಿದೆ. ತಾಲೂಕಿನ ಪ್ರತಿ ಮನೆಯವರೂ ಇದೇ ಪ್ರೀತಿ ತೋರಿಸುತ್ತಿದ್ದೀರಿ. ನಮ್ಮ ತಂದೆ, ತಾಯಿ ಮಾಡಿದ ಪುಣ್ಯದಿಂದ ನಿಮ್ಮಂತಹವರು ನಮ್ಮ ಜೊತೆಗಿದ್ದೀರಿ ಎಂದು ರೇಣುಕಾಚಾರ್ಯ ಭಾವುಕರಾದರು.
ಅದಕ್ಕೆ, ಅಣ್ಣ ನೀವೆಲ್ಲಾ ಕೋವಿಡ್ ಕಾಲದಲ್ಲಿ ಸಾವಿರಾರು ಕುಟುಂಬಗಳಿಗೆ ನಿತ್ಯ ಅನ್ನ ಹಾಕಿದ್ದೀರಿ. ಔಷಧೋಪಚಾರ ಮಾಡಿದ್ದೀರಿ. ಈಗ ನಿಮ್ಮ ಸೇವೆ ಮಾಡುವ ಕಾಲ ಬಂದಿದೆ. ನಿಮ್ಮ ಜೊತೆಗೆ ನಾವು ಸದಾ ಇರುತ್ತೇನೆ. ಚಂದ್ರು ನೆನಪಿನಲ್ಲಿ ಕೊರಗಬೇಡಿ. ನಾಳೆಯಿಂದಲೇ ಕ್ಷೇತ್ರಾದ್ಯಂತ ಸುತ್ತಾಡಿ. ಮುಂಚಿನಂತೆ ಕ್ಷೇತ್ರದ ಅಭಿವೃದ್ಧಿಗೆ ತೊಡಗಿರಿ. ಸದಾ ನಿಮ್ಮೊಂದಿಗೆ ನಾವೆಲ್ಲರೂ ಇದ್ದೇವೆ ಎಂದು ಶಾಸಕರು, ಕುಟುಂಬಕ್ಕೆ ಧೈರ್ಯ ತುಂಬಿದರು.
ಚಂದ್ರಶೇಖರ್ ಪ್ರಕರಣಕ್ಕೆ ಟ್ವಿಸ್ಟ್, ಸಾವಿಗೂ ಮುನ್ನ ಸ್ನೇಹಿತ ಸಂಜಯ್‌ಗೆ ಕರೆ!
ನನ್ನ ಮಗ ಚಂದ್ರು ಸಾವು ಅಪಘಾತವಾಗಲೀ, ಆತ್ಮಹತ್ಯೆಯಾಗಲೀ ಅಲ್ಲ. ಅದೊಂದು ಕಗ್ಗೊಲೆಯಾಗಿದೆ. ಪ್ರಕರಣವನ್ನು ಪೊಲೀಸರು ಅಪಘಾತವೆಂದು ಬಿಂಬಿಸಲು ಹೊರಟಿದ್ದು ಬೇಸರ ಮೂಡಿಸಿದೆ. ಶೀಘ್ರವೇ ಸಿಎಂ, ಗೃಹ ಸಚಿವರಿಗೆ ಕರೆ ಮಾಡಿ, ಮಾತನಾಡುವೆ. ನಮ್ಮ ಕುಟುಂಬಕ್ಕೆ ನ್ಯಾಯ ಸಿಗಬೇಕು.
ಎಂ.ಪಿ.ರೇಣುಕಾಚಾರ್ಯ ಶಾಸಕರು, ಹೊನ್ನಾಳಿ