ಯಡ್ರಾಮಿಯಲ್ಲಿ ಆಸ್ಪತ್ರೆ ಆವರಣದಲ್ಲೇ ಮಹಿಳೆ ಸಾವು- ಸಕಾಲಕ್ಕೆ ವೈದ್ಯರಿಂದ ಚಿಕಿತ್ಸೆ ಸಿಗಲಿಲ್ಲವೆಂಬ ಆರೋಪ, ಆಸ್ಪತ್ರೆಯಲ್ಲಿ 4 ಗಂಟೆ ಕಾದು ಸುಸ್ತಾದ ರೋಗಿ ಹಾಗೂ ಬಂಧುಗಳು
ಕಲಬುರಗಿ/ಯಡ್ರಾಮಿ(ಸೆ.16): ಎದೆ ನೋವು ಕಂಡಾಕ್ಷಣವೇ ಗೊಲ್ಡನ್ ಅವರ್‌ನಲ್ಲಿಯೇ ಚಿಕಿತ್ಸೆ ಪಡೆಯಬೇಕೆಂದು ಹಂಬಲದಿಂದ ಆಸ್ಪತ್ರೆಗೆ ಬಂದರೆ ಅಲ್ಲಿ ವೈದ್ಯರಿಲ್ಲ, ಇರೋ ಸಿಬ್ಬಂದಿ ಕ್ಯಾರೆ ಎನ್ನಲಿಲ್ಲ. ಹೀಗಾಗಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆಯಲ್ಲಿ ಸ್ಪಂದನೆ ದೊರಕದೆ ಅಮಾಯಕ ಮಹಿಳೆ ಸಾವನ್ನಪ್ಪಿರುವ ಘಟನೆ ಯಡ್ರಾಮಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ಇಲ್ಲಿನ ತಾಲೂಕು ಆಸ್ಪತ್ರೆ ಆವರಣದಲ್ಲೇ ಮೃತಪಟ್ಟ ಮಹಿಳೆಯನ್ನು ನಾಗಮ್ಮ ಮಲ್ಲಪ್ಪ (60) ಎಂದು ಗುರುತಿಸಲಾಗಿದೆ. ಬೆಳಗ್ಗೆ ಬಂದರೂ ಸಕಾಲಕ್ಕೆ ಯಾರೂ ಬರಲಿಲ್ಲ, ಚಿಕಿತ್ಸೆ ಕೊಡಲು ಮುಂದೆ ಬರಲಿಲ್ಲವೆಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.
undefined
ಕಾಂಗ್ರೆಸ್ ದಲಿತ ವಿರೋಧಿಯಾಗಿದೆ: ಕೇಂದ್ರ ಸಚಿವ ಭಗವಂತ ಖುಬಾ
ತಾಲೂಕಿನ ಗಂವ್ಹಾರ ಗ್ರಾಮದ ಮಹಿಳೆ ಅಮಾವಾಸ್ಯೆ ನಿಮಿತ್ತ ಯಡ್ರಾಮಿ ತಾಲೂಕಿನ ಕಡಕೋಳ ಮಹಾಮಠಕ್ಕೆ ಗುರುವಾರ ಆಗಮಿಸಿದ್ದಾಳೆ. ರಾತ್ರಿ ಮಠದಲ್ಲಿಯೇ ಉಳಿದಿದ್ದು, ಶುಕ್ರವಾರ ಬೆಳಗ್ಗೆ ಸ್ನಾನ ಮಾಡುವ ವೇಳೆ ಎದೆ ನೋವು ಕಾಣಿಸಿಕೊಂಡ ಪರಿಣಾಮ ಜೊತೆಯಲ್ಲಿದ್ದ ಸಂಬಂಧಿಕರು ತಪಾಸಣೆಗಾಗಿ ಯಡ್ರಾಮಿ ಸರ್ಕಾರಿ ಸುಮುದಾಯ ಆರೋಗ್ಯ ಕೇಂದ್ರಕ್ಕೆ ಬೆ.8 ಗಂಟೆಗೆ ಕರೆದುಕೊಂಡು ಬಂದಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ 10 ಗಂಟೆಯವರೆಗೂ ಕಾದು ಕುಳಿತಿದ್ದಾರೆ. ಮಹಿಳೆಯ ಆರೋಗ್ಯದಲ್ಲಿ ಏರು ಪೇರಾದ ಕಾರಣ ಆತಂಕಗೊಂಡ ಸಂಬಂಧಿಕರು ಸ್ಥಳೀಯವಾಗಿ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿದ್ದಾರೆ. ವೈದ್ಯರು ಆಸ್ಪತ್ರೆಗೆ ಬಂದರೂ ಫೋನ್‌ನಲ್ಲಿಯೇ ಕಾಲಹರಣ ಮಾಡಿದ್ದಾರೆಂದು ಸಂಬಂಧಿಕರು ದೂರಿದ್ದಾರೆ. ಅಷ್ಟೊತ್ತಿಗಾಗಲೇ ಎದೆ ನೋವೆಂದು ಬಂದಿದ್ದ ಮಹಿಳೆ ಮೃತಪಟ್ಟಿದ್ದಾಳೆ.
ಈ ಘಟನೆ ಕುರಿತಂತೆ ಪ್ರತಿಕ್ರಿಯೆಗಾಗಿ ಯಡ್ರಾಮಿ ತಾಲೂಕಿನ ವೈದ್ಯಾಧಿಕಾರಿ ಡಾ. ಉಮೇಶ ಶರ್ಮಾ ಅವರಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ, ಕೆಲ ಸಮಯದ ನಂತರ ಫೋನ್ ಬಿಜಿ ಮೋಡ್‌ಗೆ ಹಾಕಿದ್ದರು. ಇತ್ತ ಸಮಯಕ್ಕೆ ಸರಿಯಾಗಿ ಬಂದರೂ ಚಿಕಿತ್ಸೆ ದೊರಕದ್ದರಿಂದ ಪ್ರತಿಭಟನೆಗೆ ಮುಂದಾಗಿದ್ದ ಮೃತರ ಬಂಧುಗಳಿಗೆ ಅದ್ಯಾರದ್ದೋ ಫೋನ್ ಕರೆ ಬಂದಾಕ್ಷಣ ಕೋಪದಲ್ಲಿದ್ದವರು ಹಾಗೇ ಶಪಿಸುತ್ತಲೇ ಶವ ಸಮೇತ ಅಲ್ಲಿಂದ ಹೋಗಿಬಿಟ್ಟರು.
ಇಂತಹ ಘಟನೆ ಪುನರಾವರ್ತನೆ ಆಗುವ ಮೊದಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಇದರ ಬಗ್ಗೆ ಮಾಹಿತಿ ಪಡೆಯಲಿ. ನಿರ್ಲಕ್ಷ್ಯ ತೋರಿದ ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಬೆಳಗ್ಗೆ ರೋಗಿ ಆಸ್ಪತ್ರೆಗೆ ಬಂದರೂ ವೈದ್ಯರು ಸಕಾಲಕ್ಕೆ ಬಾರದೆ ನಾಲ್ಕು ಗಂಟೆ ವಿಳಂಬ ತೋರಿದ್ದರಿಂದಾರೆಂಬುದು ಮೋಲ್ನೋಟಕ್ಕೆ ಕಾಣುವುದರಿಂದ ಇಂತಹ ವಿಳಂಬಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಂಧುಗಳು ಹಾಗೂ ಯಡ್ರಾಮಿ ಜನತೆ ಆಗ್ರಹಿಸಿದ್ದಾರೆ.