ಹಣ ವಾಪಸ್‌ ಕೊಡುತ್ತಿಲ್ಲ ಎಂದು ವಿಡಿಯೋ ಮಾಡಿ ಆತ್ಮಹತ್ಯೆ ಯತ್ನ

By Kannadaprabha NewsFirst Published Nov 23, 2020, 8:21 AM IST
Highlights

ವಿದೇಶದಲ್ಲಿ ದುಡಿದು ಕಳುಹಿಸಿದ್ದ ಹಣ| ವಾಪಸ್‌ ಕೇಳಿದ್ದಕ್ಕೆ ಬೆದರಿಕೆ ಆರೋಪ| ಮಹಿಳೆ ದೂರಿನ ಬಗ್ಗೆ ಪರಿಶೀಲನೆ ನಡೆಸುತ್ತಿರುವ ಪೊಲೀಸರು| ಎಲ್ಲ ಆಯಾಮಾಗಳಲ್ಲೂ ತನಿಖೆ| 

ಬೆಂಗಳೂರು(ನ.23): ಪೋಷಕರು, ಸಹೋದರ ಸಂಬಂಧಿಕರು ತಾವು ಕೊಟ್ಟಹಣವನ್ನು ವಾಪಸ್‌ ನೀಡದೆ, ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಅರುಂಧತಿ ನಗರ ನಿವಾಸಿ ಫಾತಿಮಾ ಆತ್ಮಹತ್ಯೆಗೆ ಯತ್ನಿಸಿದ್ದು, ಬೌರಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

"

ಫಾತಿಮಾ ಅವರಿಗೆ ವಿವಾಹವಾಗಿದ್ದು, ಮೊದಲ ಪತ್ನಿಯನ್ನು ತ್ಯಜಿಸಿ ಎರಡನೇ ಪತಿಯೊಂದಿಗೆ ಇದ್ದರು. ಇಬ್ಬರು ಮಕ್ಕಳಿದ್ದು, ಮೂರ್ನಾಲ್ಕು ವರ್ಷಗಳ ಹಿಂದೆ ಫಾತಿಮಾ ಕೆಲಸ ಅರಸಿ ಗಲ್ಫ್‌ ದೇಶಕ್ಕೆ ಹೋಗಿದ್ದರು. ಸೌದಿ ಅರೇಬಿಯಾ, ದುಬೈ ಮತ್ತು ಕುವೈತ್‌ನಲ್ಲಿ ಮಹಿಳೆ ಮೂರುವರೆ ವರ್ಷಗಳ ಕಾಲ ಮನೆ ಕೆಲಸ ಮಾಡಿದ್ದರು. ಕೊರೋನಾ ಲಾಕ್‌ಡೌನ್‌ನಿಂದಾಗಿ ಮಹಿಳೆ ನಗರಕ್ಕೆ ವಾಪಸ್‌ ಆಗಿದ್ದರು. ಮಹಿಳೆ ವಿದೇಶದಲ್ಲಿದ್ದ ವೇಳೆ ಮಕ್ಕಳನ್ನು ಚಂದ್ರಾ ಲೇಔಟ್‌ನ ಗಂಗೊಂಡನಹಳ್ಳಿಯಲ್ಲಿರುವ ತಾಯಿ ಮನೆಯಲ್ಲಿ ಇರಿಸಿದ್ದರು.

ಸಿಗದ ರಿಲೀ​ವಿಂಗ್‌ ಆರ್ಡರ್‌: ಪೊಲೀಸ್‌ ಸಿಬ್ಬಂದಿ ಆತ್ಮಹತ್ಯೆ ಯತ್ನ

ಆತ್ಮಹತ್ಯೆ ಯತ್ನಕ್ಕೂ ಮುನ್ನ ಮಾಡಿರುವ ಸೆಲ್ಫಿ ವಿಡಿಯೋದಲ್ಲಿ ವಿದೇಶದಿಂದ ಮಹಿಳೆ ‘ಹಂತ-ಹಂತವಾಗಿ 5.80 ಲಕ್ಷವನ್ನು ತಾಯಿ ರಫೀಕ ಬೇಗಂ ಮತ್ತು ಅಕ್ಕ ಆಯಿಷಾ ಬಾನು ಅವರ ಖಾತೆಗೆ ವರ್ಗಾವಣೆ ಮಾಡಿದ್ದೆ. ಅಲ್ಲದೆ, ಸಹೋದರ ಜಾಫರ್‌ ಹಾಗೂ ಆತನ ಪತ್ನಿ ಮತ್ತು ಪುತ್ರನಿಗೆ ಹಣ ನೀಡಿದ್ದೆ. ಒಟ್ಟಾರೆ ನನ್ನ ಮಕ್ಕಳಿಗಾಗಿ ದುಡಿದ .9 ಲಕ್ಷವನ್ನು ಇವರಿಗೆ ಕಷ್ಟಕ್ಕೆಂದು ನೀಡಿದ್ದೆ. ಕಷ್ಟದಲ್ಲಿರುವ ನಾನು ಹಣ ವಾಪಸ್‌ ನೀಡುವಂತೆ ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ. ಇದರಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದೇನೆ’ ಎಂದು ಸೆಲ್ಫಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಚಂದ್ರಲೇಔಟ್‌ ಠಾಣೆ ಪೊಲೀಸರು, ಮಹಿಳೆ ದೂರಿನ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮಹಿಳೆಯ ಪೋಷಕರಿಗೆ ವಯಸ್ಸಾಗಿದ್ದು, ತಂದೆ ಪಾರ್ಕಿನ್‌ಸನ್‌ ಕಾಯಿಲೆಯಿಂದ ಬಳಲುತ್ತಿದ್ದಾರೆ. ಘಟನೆಯ ಹಿಂದೆ ವೈಯಕ್ತಿಕ ಕಾರಣ ಇರುವ ಶಂಕೆ ಇದೆ. ಎಲ್ಲ ಆಯಾಮಾಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದರು.
 

click me!