ಮಲೆನಾಡ ಹೆಬ್ಬಾಗಿಲು, ಮುಖ್ಯಮಂತ್ರಿ ತವರು ಕ್ಷೇತ್ರ ಶಿವಮೊಗ್ಗದಲ್ಲಿ ಶನಿವಾರ ಮತ್ತೆ ಹೊಸದಾಗಿ 6 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ಹೊಸದಾಗಿ ಪತ್ತೆಯಾದ ಪ್ರಕರಣಗಳ ಹಿನ್ನಲೆ ಏನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಶಿವಮೊಗ್ಗ(ಮೇ.31): ಮೂವರು ಕೆಎಸ್‌ಆರ್‌ಪಿ ಪೊಲೀಸರು ಸೇರಿ ಜಿಲ್ಲೆಯಲ್ಲಿ ಶನಿವಾರ ಆರು ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಆ ಮೂಲಕ ಶಿವಮೊಗ್ಗದಲ್ಲಿ ಸೋಂಕಿತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.
ಶನಿವಾರ ಪತ್ತೆ ಆಗಿರುವ ಆರು ಪ್ರಕರಣಗಳಲ್ಲಿ ಮೂವರು ಅಂತರರಾಜ್ಯ ಟ್ರಾವೆಲ್ ಹಿಸ್ಟರಿ ಹಾಗೂ ಇನ್ನೂ ಮೂವರು ಅಂತರ ಜಿಲ್ಲೆ ಟ್ರಾವೆಲ್ ಹಿಸ್ಟರಿ ಹೊಂದಿರುವುದಾಗಿ ತಿಳಿದುಬಂದಿದೆ.
ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮೂವರು ಪೊಲೀಸರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. P-2830 (23ವರ್ಷ), P-2852 (23ವರ್ಷ), P-2882 (29ವರ್ಷ) ಈ ಮೂವರು ಕಳೆದೆರೆಡು ದಿನಗಳ ಹಿಂದೆಯಷ್ಟೇ ಬೆಂಗಳೂರಿನಿಂದ ಕರ್ತವ್ಯ ಮುಗಿಸಿಕೊಂಡು ಶಿವಮೊಗ್ಗಕ್ಕೆ ಹಿಂತಿರುಗಿ ಬಂದಿದ್ದರು. ಇವರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ವರದಿಯಲ್ಲಿ ಪಾಸಿಟಿವ್ ಕಂಡು ಬಂದ ಬಳಿಕ ಪುನಃ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೊರೋನಾತಂಕ: ಇ-ಪಾಸ್ ಇಲ್ಲದವರನ್ನು ತಡೆಯಿರಿ, ಸಚಿವ ಬೊಮ್ಮಾಯಿ
ಇನ್ನು P-2853 ( 7 ವರ್ಷ ಬಾಲಕ), P-2854 (3 ವರ್ಷದ ಮಗು), P-2855 (27 ವರ್ಷ) ಮೂವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂವರು ಪಂಜಾಬ್ ನಿಂದ ಕಳೆದ 15 ದಿನಗಳ ಹಿಂದೆ ಶಿವಮೊಗ್ಗಕ್ಕೆ ವಾಪಾಸ್ ಬಂದಿದ್ದರು. ಇವರು ಮೂಲತಃ ಶಿವಮೊಗ್ಗ ತಾಲೂಕಿನ ಹಸೂಡಿ ಹಕ್ಕಿಪಿಕ್ಕಿ ಕ್ಯಾಂಪ್ ವಾಸಿಗಳೆಂದು ತಿಳಿದುಬಂದಿದೆ.
ಪ್ರಸ್ತುತ ಸೋಂಕು ಪತ್ತೆ ಆಗಿರುವ ಆರು ಜನರನ್ನು ಕ್ವಾರಂಟೈನ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗಿನ ಜಿಲ್ಲೆಯಲ್ಲಿ ಕಂಡುಬಂದ ಒಟ್ಟು 41 ಪ್ರಕರಣಗಳಲ್ಲಿ 7 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸೋಂಕು ಇರುವ 34 ಜನರಿಗೆ ಚಿಕಿತ್ಸೆ ಮುಂದುವರೆದಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ಮುಂಬೈ, ಕೇರಳ, ತಮಿಳುನಾಡು ಸೇರಿ ಇತರೆ ರಾಜ್ಯಗಳಿಂದ ಬಂದ ಕೆಲವರಲ್ಲಿ ವೈರಸ್ ಪತ್ತೆಯಾಗಿತ್ತು. ಇದೀಗ ಪಂಜಾಬ್‌ನಿಂದ ಆಗಮಿಸಿದ್ದ ಮೂವರಲ್ಲಿ ಸೋಂಕು ಕಾಣಿಸಿ ಕೊಂಡಂತಾಗಿದೆ.