ದಕ್ಷಿಣ ಕಾಶ್ಮೀರದಲ್ಲಿ ಚುಮು ಚುಮು ಚಳಿ ಆರಂಭವಾಗಿದ್ದು, ಬೆಳಗ್ಗೆ 10 ಗಂಟೆಯಾದರೂ ಬಿಸಿಲು ಬರುತ್ತಿಲ್ಲ. ಮಂಜಿನ ನಗರಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದು, ಶುಕ್ರವಾರ ಕೊಡಗಿನಲ್ಲಿ ಗರಿಷ್ಠ 26- ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡುಬಂದಿದೆ.
ಮಡಿಕೇರಿ(ಡಿ.07): ಭೂಲೋಕದ ಸ್ವರ್ಗ, ದಕ್ಷಿಣ ಕಾಶ್ಮೀರ, ಮಂಜಿನ ನಗರಿ ಎಂದೇ ಪ್ರಖ್ಯಾತಿ ಪಡೆದಿರುವ ಕೊಡಗು ಜಿಲ್ಲೆಯಲ್ಲೀಗ ಚುಮು ಚುಮು ಚಳಿಯ ಅನುಭವ ಆರಂಭವಾಗಿದೆ. ಮುಂಜಾನೆಯ ಮಂಜಿನ ಮುಸುಕು, ತಣ್ಣನೆಯ ಗಾಳಿ, ಮೈನಡುಗಿಸುವ ಚಳಿಯಿಂದಾಗಿ ಜನ ದಿನನಿತ್ಯದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕುವಂತಾಗಿದೆ.
ಇತ್ತ ಪ್ರವಾಸಿಗರು ಮಾತ್ರ ಈ ವಾತಾವರಣವನ್ನು ಸುಖಿಸುತ್ತಿದ್ದು, ಜಿಲ್ಲೆಯ ಬಹುತೇಕ ಟೂರಿಸ್ಟ್ ಸ್ಪಾಟ್ ಗಳಲ್ಲಿ ಹಾಯಾಗಿ ಸಮಯವನ್ನು ಕಳೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇದೀಗ ಬೆಳಗ್ಗೆ ತಡವಾಗಿ ಬಿಸಿಲು ಕಾಣಿಸಿಕೊಳ್ಳುತ್ತಿದೆ. ಬೆಳಗ್ಗೆ 10 ಗಂಟೆಯಾದರೂ ಕೆಲವು ದಿನ ಬಿಸಿಲಿನ ಸುಳಿವಿಲ್ಲ. ಇದರಿಂದ ಜನ ಚಳಿಗೆ ಪರದಾಡುತ್ತಿದ್ದಾರೆ. ಶುಕ್ರವಾರ ಕೊಡಗಿನಲ್ಲಿ ಗರಿಷ್ಠ 26- ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡುಬಂದಿದೆ.
undefined
ಹಗಲು ಕಡಿಮೆ:
ಮಡಿಕೇರಿಯಲ್ಲಿ ಮೋಡ, ಮಂಜಿನ ಸರಸದಾಟದಿಂದ ಹಗಲೇ ಮಾಯವಾಗಿದೆ. ಬೆಳಗ್ಗೆ ೮ ಗಂಟೆಯಾದರೂ ಬೆಳಕಾಗುತ್ತಿಲ್ಲ. ಸಂಜೆ 6 ಗಂಟೆಗೇ ಕತ್ತಲು ಆವರಿಸುತ್ತಿದ್ದು, ರಾತ್ರಿ 8 ಕ್ಕೆ ನಿದ್ದೆಗೆ ಶರಣಾಗುವವರೇ ಹೆಚ್ಚು. ಸಾಮಾನ್ಯವಾಗಿ ಮಡಿಕೇರಿಯಲ್ಲಿ ಡಿಸೆಂಬರ್ ತಿಂಗಳಲ್ಲಿ ಚಳಿ ಆರಂಭಗೊಂಡು ಫೆಬ್ರವರಿ ತಿಂಗಳ ವರೆಗೂ ಮುಂದುವರಿಯುತ್ತಿದೆ. ಕನಿಷ್ಠ ತಾಪಮಾನ 14ರ ವರೆಗೆ ಇಳಿದಿರುತ್ತದೆ. ಆದರೆ ಈ ಬಾರಿ ಡಿಸೆಂಬರ್ ಆರಂಭದಲ್ಲೇ ಚಳಿ ಆವರಿಸಿದೆ.
ಟರ್ಕಿ ಈರುಳ್ಳಿಯೂ ಖಾಲಿ, ಇನ್ನು ಈಜಿಪ್ತ್ ಈರುಳ್ಳಿ..!
ಜಿಲ್ಲೆಯ ಜನ ಮನೆಯಿಂದ ಹೊರ ಬರುವುದಕ್ಕೂ ಹಿಂದೇಟು ಹಾಕುತ್ತಿದ್ದು, ಹೇಗಾದರೂ ಚಳಿಯಿಂದ ಪಾರಾಗಬೇಕೆಂದು ಸ್ವೆಟರ್, ಟೋಪಿ, ಜಾಕೆಟ್ ಹಾಕಿಕೊಂಡು ಬಿಸಿಬಿಸಿ ಕಾಫೀ, ಟೀ, ತಿಂಡಿ ತಿನಿಸುಗಳನ್ನು ತಿನ್ನುತ್ತಾ ಮೈ ಬೆಚ್ಚಗಿರಿಸಿಕೊಳ್ಳುತ್ತಿದ್ದಾರೆ. ಕೆಲವರು ರಸ್ತೆ ಬದಿಯಲ್ಲಿ ಬೆಂಕಿ ಹಾಕಿಕೊಂಡು ಮೈ ಬಿಸಿ ಮಾಡಿಕೊಳ್ಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ. ಇತ್ತ ಮಂಜಿನ ಕಣ್ಣಾಮುಚ್ಚಾಲೆ, ಮೈ ಕೊರೆಯುವ ಚಳಿ, ಜೊತೆಗೆ ಅಬ್ಬರಿಸುವ ಗಾಳಿಗೆ ಕೊಡಗಿನ ಕಾಫಿ ಹಿತ ಅನುಭವ ನೀಡುತ್ತಿದ್ದು, ಪ್ರವಾಸಿಗರು ಮನ ಸೋತಿದ್ದಾರೆ.
ಮದ್ಯಕ್ಕೆ ಬೇಡಿಕೆ:
ಗಡಗಡ ನಡುಗುವಿಕೆಯಿಂದ ಬಚಾವಾಗಲು ಕೆಲವರು ಮದ್ಯದ ಮೊರೆ ಹೋಗಿದ್ದು, ವೈನ್, ಬ್ರಾಂದಿಗೆ ಈಗ ಎಲ್ಲಿಲ್ಲದ ಬೇಡಿಕೆ. ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಹೌಸ್‌ಫುಲ್ ಆಗುತ್ತಿವೆ. ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ತಂಗಾಳಿಯೂ ಜೋರಾಗಿ ಬೀಸುತ್ತಿದೆ. ಮಡಿಕೇರಿ ಸೇರಿದಂತೆ ಕೆಲವೆಡೆಗಳಲ್ಲಿ ಭಾರಿ ಗಾಳಿ ಬೀಸುತ್ತಿದೆ. ಜಿಲ್ಲೆಯ ಕಾವೇರಿ ಸೇರಿದಂತೆ ವಿವಿಧ ಜಲ ಮೂಲಗಳ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ಹೆಚ್ಚು ಚಳಿಯ ಅನುಭವವಾಗುತ್ತಿದೆ. ಬೈಕ್‌ನಲ್ಲಿ ಸಂಚರಿಸುವವರು ಕೈಗೆ ಗ್ಲೌಸ್ ಹಾಕಿಕೊಂಡೇ ಚಾಲನೆ ಮಾಡುವಷ್ಟು ಚಳಿ ಇದೆ. ಜಿಲ್ಲೆಯಲ್ಲಿ ಫಬ್ರವರಿ ತಿಂಗಳ ವರೆಗೂ ಚಳಿ ಇರಲಿದೆ. ಡಿಸೆಂಬರ್ ಅಂತ್ಯ ಹಾಗೂ ಜನರವರಿ ತಿಂಗಳ ಆರಂಭದಲ್ಲಿ ಹೆಚ್ಚು ಚಳಿ ಇರುತ್ತದೆ. ಕೆಲವರಿಗೆ ಚಳಿ ಮುದ ನೀಡಿದರೆ ಇನ್ನೂ ಕೆಲವರಿಗೆ ಸಮಸ್ಯೆ ತಂದೊಡ್ಡಿದೆ. ಈಗಾಗಲೇ ಜನರು ಚಳಿಯಿಂದ ತಪ್ಪಿಸಿಕೊಳ್ಳಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಣಾದಲ್ಲಿ ‘ಹುಬ್ಬಳ್ಳಿ ಹುಲಿಯಾ’ ಸಜ್ಜನರ ವೈರಲ್
ಮೈನಡುಗಿಸುವ ಚಳಿಯಿಂದಾಗಿ ಪ್ರತಿನಿತ್ಯ ಮುಂಜಾನೆ ವಾಯು ವಿಹಾರಕ್ಕೆ ಬರುತ್ತಿದ್ದವರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬರುತ್ತಿದೆ. ನಗರ ಪ್ರದೇಶದಲ್ಲಿ ಬೆಳಗಾಗುತ್ತಿದ್ದಂತೆ ಸಣ್ಣ ಮಕ್ಕಳಿಂದ, ಹಿರಿಯರು ಜಾಗಿಂಗ್‌ನಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ ಇಳಿ ವಯಸ್ಸಾಗಿರುವ ಬಹುತೇಕ ಮಂದಿ ಆರೋಗ್ಯದ ದೃಷ್ಟಿಯಿಂದ ಚಳಿಯ ವಾತಾವರಣಕ್ಕೆ ಮೈಯೊಡ್ಡಲು ಮುಂದಾಗುತ್ತಿಲ್ಲ ಎಂದು ಮಡಿಕೇರಿ ನಿವಾಸಿ ಅಶೋಕ್ ಹೇಳಿದ್ದಾರೆ.
ಆರೋಗ್ಯ ಕೇಂದ್ರ ಬಂದ್: ತಮಿಳುನಾಡಿಗೆ ಅಲೆಯುತ್ತಿದ್ದಾರೆ ರೋಗಿಗಳು..!
ಚಳಿಯ ಜೊತೆ ಮಂಜಿನ ವೈಭವ ಮನಸ್ಸಿಗೆ ಮುದ ನೀಡುತ್ತಿದ್ದು, ಕೊಡಗನ್ನು ಮತ್ತೆ ಮತ್ತೆ ನೋಡಬೇಕೆನ್ನುವ ಆಸೆಯಾಗುತ್ತಿದೆ. ಟ್ರಾಫಿಕ್, ಧೂಳಿನ ನಡುವೆ ಇದ್ದು ಸಾಕಾಗಿರುವ ನಮಗೆ ಮನತಣಿಸುವ ಕೊಡಗಿನ ಈ ತಂಪಾದ ವಾತಾವರಣವನ್ನು ಬಿಟ್ಟು ಹೋಗಲು ಮನಸೇ ಬರುತ್ತಿಲ್ಲ. ನಿಜವಾಗಿಯೂ ಇಂತಹ ಪರಿಸರದಲ್ಲಿ ಜೀವನ ನಡೆಸುವವರು ಪುಣ್ಯ ಮಾಡಿರಬೇಕು ? ಎಂದು ಬೆಂಗಳೂರಿನ ಪ್ರವಾಸಿಗ ಚಂದ್ರ ಮುನಿಯಪ್ಪ ಹೇಳಿದ್ದಾರೆ.
ಡಿ.06ರಂದು ಗರಿಷ್ಠ 26, ಕನಿಷ್ಠ 15 ಡಿ.7ರಂದು ಗರಿಷ್ಠ 25 - ಕನಿಷ್ಠ 17 ಡಿ.8ರಂದು ಗರಿಷ್ಠ 24 - ಕನಿಷ್ಠ 17
-ವಿಘ್ನೇಶ್ ಎಂ. ಭೂತನಕಾಡು