ಸಂಪುಟದಿಂದ ಶಿವಾನಂದ ಪಾಟೀಲರನ್ನು ಕೈಬಿಡಬೇಕು. ಸಚಿವರು ಬೇಷರತ್ ಕ್ಷಮೆ ಕೇಳಬೇಕು. ತಮ್ಮ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು: ಕೆ.ಎನ್.ಶಿವಕುಮಾರಪ್ಪ
ದಾವಣಗೆರೆ(ಡಿ.27): ಸಾಲಮನ್ನಾ ಆಸೆಗಾಗಿ ರೈತರು ಬರಗಾಲವನ್ನು ಬಯಸುತ್ತಾರೆ ಎಂಬ ಉದ್ಧಟತನದ ಹೇಳಿಕೆ ನೀಡಿರುವ ಸಚಿವ ಶಿವಾನಂದ ಪಾಟೀಲ್ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡುವಂತೆ ಕರ್ನಾಟಕ ಆಮ್ ಆದ್ಮಿ ಪಕ್ಷ ಒತ್ತಾಯಿಸಿದ್ದು, ಸಚಿವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆದು, ರೈತರಿಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.
ಅನ್ನದಾತರನ್ನು ಅವಮಾನಿಸುವ, ನಿಂದಿಸುವ ಸಂಸ್ಕೃತಿಯನ್ನು ಕಾಂಗ್ರೆಸ್ ಸಚಿವ ಶಿವಾನಂದ ಪಾಟೀಲ್ ಅಳವಡಿಸಿಕೊಂಡಂತಿದೆ. ಪದೇಪದೆ ರೈತರನ್ನು ಅವಮಾನಿಸುವುದನ್ನೇ ಪ್ರವೃತ್ತಿ ಮಾಡಿಕೊಂಡಿದ್ದಾರೆ. ರೈತರು ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದಾದರೆ ಅದೇ ಪರಿಹಾರವನ್ನು ದುಪ್ಪಟ್ಟಾಗಿ ಹಿಂತಿರುಗಿಸಿ ಕೊಟ್ಟರೆ ಶಿವಾನಂದ ಪಾಟೀಲರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಯೇ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ.ಎನ್.ಶಿವಕುಮಾರಪ್ಪ ಪ್ರಶ್ನಿಸಿದ್ದಾರೆ.
ರೈತರ ಬಗ್ಗೆ ಹಗುರವಾಗಿ ಮಾತನಾಡಿದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಸಿಎಂ ಸಿದ್ದರಾಮಯ್ಯ!
ಸಚಿವ ಶಿವಾನಂದ ಪಾಟೀಲ್ ಹೇಳಿಕೆ ಖಂಡನೀಯ. ಅನ್ನದಾತನ ಕಷ್ಟ, ಸಂಕಷ್ಟಗಳ ಬಗ್ಗೆ ಅವಹೇಳನ ಮಾಡುವುದು ಸರಿಯಲ್ಲ. ಸಚಿವರು ಇಂಥ ವಿಷಯಗಳ ಬಗ್ಗೆ ಬಹಳ ಎಚ್ಚರಿಕೆ, ಸೂಕ್ಷ್ಮತೆ ಮತ್ತು ಸಂಯಮದಿಂದ ಮಾತನಾಡಬೇಕು. ರೈತ ಕೇಳುತ್ತಿರುವುದು ತಮ್ಮ ಹಕ್ಕನ್ನಷ್ಟೇ ಭಿಕ್ಷೆಯನ್ನಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ತಮ್ಮ ಸಂಪುಟದಿಂದ ಶಿವಾನಂದ ಪಾಟೀಲರನ್ನು ಕೈಬಿಡಬೇಕು. ಸಚಿವರು ಬೇಷರತ್ ಕ್ಷಮೆ ಕೇಳಬೇಕು. ತಮ್ಮ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಅವರು ಪ್ರಕಟಣೆ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.