
ಬೆಂಗಳೂರು : ಆಟೋ ಪ್ರಯಾಣ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ನಗರ ಜಿಲ್ಲಾಧಿಕಾರಿ ಮತ್ತು ರಾಜ್ಯ ಸಾರಿಗೆ ಪ್ರಾಧಿಕಾರ ಯಾವುದೇ ಕ್ರಮ ಕೈಗೊಳ್ಳದಿರುವ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿರುವ ಆಟೋ ಚಾಲಕರ ಸಂಘ, ಕೂಡಲೇ ಪ್ರಯಾಣ ದರ ಹೆಚ್ಚಳ ಮಾಡುವಂತೆ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದು ಆಗ್ರಹಿಸಿವೆ. ಅಲ್ಲದೆ, ಪ್ರಯಾಣ ದರ ಹೆಚ್ಚಳ ಮಾಡದ ಕಾರಣ ಪ್ರಯಾಣಿಕರಿಂದ ದುಪ್ಪಟ್ಟು ಪ್ರಯಾಣ ದರ ವಸೂಲಿ ಮಾಡಲಾಗುತ್ತಿದೆ ಎಂದೂ ತಿಳಿಸಿದೆ.
ಬಸ್ ಪ್ರಯಾಣ ದರ ಹೆಚ್ಚಳದ ಬಳಿಕ ಆಟೋ ಪ್ರಯಾಣ ದರ ಹೆಚ್ಚಳಕ್ಕೆ ಆಗ್ರಹ ಹೆಚ್ಚಾಗುತ್ತಿದೆ. ಅಲ್ಲದೆ, ಆಟೋ ಪ್ರಯಾಣ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಈಗಾಗಲೇ ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಎರಡು ಬಾರಿ ಸಭೆಯನ್ನೂ ನಡೆಸಲಾಗಿದೆ. ಆದರೂ, ಪ್ರಯಾಣ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ. ಈ ವಿಳಂಬ ನೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಆಟೋ ಚಾಲಕರ ಸಂಘ, ನಾಲ್ಕನೇ ಬಾರಿಗೆ ನಗರ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದು, ಕೂಡಲೇ ಪ್ರಯಾಣ ದರ ಹೆಚ್ಚಿಸುವಂತೆ ಆಗ್ರಹಿಸಿದೆ.
ದರ ಏರಿಕೆ ನಿರ್ಧಾರ ವಿಳಂಬ?
ಸದ್ಯಕ್ಕೆ ನಗರ ಜಿಲ್ಲಾಧಿಕಾರಿಗಳು ಆಟೋ ಪ್ರಯಾಣ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ, ಬೆಂಗಳೂರು ಮ್ಯಾಜಿಸ್ಟ್ರೇಟ್ ಆಗಿರುವ ನಗರ ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ದುರಂತದ ತನಿಖೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಅವರು ಸದ್ಯಕ್ಕೆ ಆಟೋ ಪ್ರಯಾಣ ದರ ಹೆಚ್ಚಳದ ಆದೇಶ ಮಾಡುವುದು ಅನುಮಾನ. ಕಾಲ್ತುಳಿತ ದುರಂತದ ತನಿಖೆಯ ವರದಿ ನೀಡಿದ ನಂತರ ಆಟೋ ಪ್ರಯಾಣ ದರ ಹೆಚ್ಚಳದ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕನಿಷ್ಠ 36 ರು., ನಂತರ 18 ರು. ನಿಗದಿಗೆ ಕೋರಿಕೆ:
ಆಟೋ ಮಾಲೀಕರು ಮತ್ತು ಚಾಲಕರ ಸಂಘಗಳು ಈ ಹಿಂದೆ ಸಾರಿಗೆ ಇಲಾಖೆಗೆ ಸಲ್ಲಿಸಿರುವ ಮನವಿಯಂತೆ ಆಟೋ ಪ್ರಯಾಣದ ಕನಿಷ್ಠ ದರವನ್ನು 30 ರು.ನಿಂದ 40 ರು.ಗೆ ಹಾಗೂ ನಂತರದ ಪ್ರತಿ ಕಿಮೀಗೆ 15 ರು.ನಿಂದ 20 ರು.ಗೆ ಹೆಚ್ಚಿಸುವಂತೆ ಕೋರಿದ್ದವು. ಈ ಸಂಬಂಧ ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈ ಹಿಂದೆ ನಡೆದ ಎರಡೂ ಸಭೆಯಲ್ಲಿ ಚರ್ಚಿಸಲಾಗಿದೆ. ಅದರ ಪ್ರಕಾರ ನಗರ ಜಿಲ್ಲಾಧಿಕಾರಿಗಳು ಆಟೋ ಪ್ರಯಾಣದ ಕನಿಷ್ಠ 36 ರು., ನಂತರದ ಪ್ರತಿ ಕಿಮೀ ಪ್ರಯಾಣ ದರವನ್ನು 18 ರು. ನಿಗದಿ ಮಾಡುವ ಕುರಿತಂತೆ ನಿರ್ಧರಿಸಿದ್ದಾರೆ. ಆ ಬಗ್ಗೆ ಮತ್ತೊಮ್ಮೆ ಚಾಲಕರು ಮತ್ತು ಮಾಲೀಕ ಸಂಘಗಳ ಪ್ರಮುಖರೊಂದಿಗೆ ಚರ್ಚೆ ನಡೆಸಿ ಅಂತಿಮ ಆದೇಶ ಹೊರಡಿಸಬೇಕಿದೆ.