ಬೆಂಗಳೂರು ನಗರ ವಿವಿ 4ನೇ ಘಟಿಕೋತ್ಸವ : 57 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ

Published : Jun 11, 2025, 08:38 AM IST
Bengaluru VV

ಸಾರಾಂಶ

ಪದವಿ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗ ಪೂರೈಸಿರುವ ಒಟ್ಟು 39,780 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. ರ್‍ಯಾಂಕ್‌ ಪಡೆದಿರುವ 57 ವಿದ್ಯಾರ್ಥಿಗಳಿಗೆ 65 ಚಿನ್ನದ ಪದಕಗಳ ಪ್ರದಾನ

 ಬೆಂಗಳೂರು : ಬೆಂಗಳೂರು ನಗರ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವವು ಇಂದು  ಬೆಳಗ್ಗೆ 11 ಗಂಟೆಗೆ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆಯಲಿದ್ದು, ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗ ಪೂರೈಸಿರುವ ಒಟ್ಟು 39,780 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. ಜೊತೆಗೆ ರ್‍ಯಾಂಕ್‌ ಪಡೆದಿರುವ 57 ವಿದ್ಯಾರ್ಥಿಗಳಿಗೆ 65 ಚಿನ್ನದ ಪದಕಗಳ ಪ್ರದಾನ ನಡೆಯಲಿದೆ.

ಮಂಗಳವಾರ ವಿವಿಯ ಸೆನೆಟ್‌ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಸಿಯು ಕುಲಪತಿ (ಪ್ರಭಾರ) ಪ್ರೊ.ಕೆ.ಆರ್‌.ಜಲಜಾ ಅವರು, ಈ ಬಾರಿಯ ಘಟಿಕೋತ್ಸದಲ್ಲಿ 32,486 ವಿದ್ಯಾರ್ಥಿಗಳು ಸ್ನಾತಕ ಪದವಿ ಹಾಗೂ 7,285 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಸ್ವೀಕರಿಸಲು ಅರ್ಹರಾಗಿದ್ದಾರೆ. ಒಂಬತ್ತು ಮಂದಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗುವುದು. ಪದವಿಯಲ್ಲಿ ರ್‍ಯಾಂಕ್‌ ಪಡೆದಿರುವ 9 ಮಂದಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ 48 ವಿದ್ಯಾರ್ಥಿಗಳು ಬೆಂ.ನಗರ ವಿವಿ ಮತ್ತು ದಾನಿಗಳು ಸ್ಥಾಪಿಸಿರುವ 57 ಚಿನ್ನದ ಪದಕ ಸ್ವೀಕರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ಬಿಹಾರ ಹೈಕೋರ್ಟ್ ನ್ಯಾಯಮೂರ್ತಿ ಪಿ.ಬಿ.ಭಜಂತ್ರಿ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ವಿವಿಯ ಕುಲಾಧಿಪತಿಯೂ ಆದ ರಾಜ್ಯಪಾಲ ಥಾವರ್ ಚಂದ್‌ ಗೆಹಲೋತ್‌, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಅವರು ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ವಿವರಿಸಿದರು.

ಗೌರವ ಡಾಕ್ಟರೇಟ್‌ ಇಲ್ಲ: ವಿವಿಯ ಸಿಂಡಿಕೇಟ್ ಸಭೆಯಲ್ಲಿ ಕೆಲ ಅರ್ಹ ಗಣ್ಯರ ಹೆಸರು ಆಯ್ಕೆ ಮಾಡಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿತ್ತು. ಆದರೆ, ಅದಕ್ಕೆ ಅನುಮತಿ ಸಿಕ್ಕಿಲ್ಲ. ಹಾಗಾಗಿ ಈ ವರ್ಷ ಗೌರವ ಡಾಕ್ಟರೇಟ್‌ ನೀಡುತ್ತಿಲ್ಲ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.

ಈ ವೇಳೆ ವಿವಿಯ ಕುಲಸಚಿವ(ಮೌಲ್ಯಮಾಪನ) ಪ್ರೊ.ಬಿ.ರಮೇಶ್, ವಿತ್ತಾಧಿಕಾರ ವಿಜಯಲಕ್ಷ್ಮಿ, ವಿವಿಧ ವಿಭಾಗದ ಡೀನರುಗಳು ಉಪಸ್ಥಿತರಿದ್ದರು.

ಬೆಂ.ನಗರ ವಿವಿಯಲ್ಲಿ 162 ಹುದ್ದೆಗಳ ಭರ್ತಿಗೆ ಸರ್ಕಾರ ಅನುಮೋದನೆ ನೀಡಿದೆ. ಆದರೆ, ಒಳ ಮೀಸಲಾತಿ ವಿಚಾರದ ಹಿನ್ನೆಲೆಯಲ್ಲಿ ನೇಮಕಾತಿಗೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಳ ಮೀಸಲಾತಿ ವರದಿ ಬಂದು ಸರ್ಕಾರ ಜಾರಿಗಳಿಸಿದ ಬಳಿಕ ನೇಮಕಾತಿ ನಡೆಸಲಾಗುವುದು.

- ಪ್ರೊ.ಕೆ.ಆರ್.ಜಲಜಾ, ಕುಲಪತಿ(ಪ್ರಭಾರ), ಬೆಂ.ನಗರ ವಿವಿ

ಗಾಮೆಂಟ್ಸ್‌ ಉದ್ಯೋಗಿ ಪುತ್ರಿಗೆ 5 ಚಿನ್ನ ಸೆಕ್ಯುರಿಟಿ ಗಾರ್ಡ್‌ ಮಗಳಿಗೆ 3 ಚಿನ್ನ

ಬೆಂ. ನಗರ ವಿವಿಯ ಎಂಎಸ್ಸಿ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಎಸ್.ಅನುಷಾ ಅತಿ ಹೆಚ್ಚು 5 ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಅನುಷಾ ತಾಯಿ ಗಾರ್ಮೆಂಟ್ಸ್‌ ಉದ್ಯೋಗಿದ್ದು, ತಂದೆ ಕೃಷಿಕರಾಗಿದ್ದಾರೆ. ನಾನು ಪದವಿಯಲ್ಲೂ ಹೆಚ್ಚಿನ ಅಂಕಗಳಿಸಿದ್ದೆ. ಪಿಜಿಯಲ್ಲೂ ಹೆಚ್ಚಿನ ಅಂಕಗಳಿಸುವ ಉದ್ದೇಶದಿಂದ ಪ್ರಯತ್ನ ಮಾಡುತ್ತಿದ್ದೆ. ಇಂದು ಫಲಸಿಕ್ಕಿದೆ. ಮುಂದೆ ಪಿಎಚ್‌ಡಿ ಮಾಡಬೇಕು. ನಂತರ ಪ್ರಾಧ್ಯಾಪಕಿಯಾಗಿ ಕರ್ತವ್ಯನಿರ್ವಹಿಸುವ ಗುರಿ ಇದೆ. ನನ್ನ ಸಾಧನೆಗೆ ಪಾಲಕರ ಪ್ರೀತಿ ಮತ್ತು ಉಪನ್ಯಾಸಕರ ಪ್ರೋತ್ಸಾಹ ಎರಡು ಸಹ ಕಾರಣ ಎಂದು ಅನುಷಾ ಹೇಳಿದರು.

ಅದೇ ರೀತಿ ಖಾಸಗಿ ಬ್ಯಾಂಕ್‌ವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ರಮೇಶ್ ಎಂಬುವವರ ಪುತ್ರಿ ಆರ್‌.ಎಸ್‌.ಸಂಜನಾ ಬಿ.ಕಾಂನಲ್ಲಿ ಮೂರು ಚಿನ್ನದ ಪದಕ ಪಡೆದಿದ್ದಾರೆ. ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿಯಾದ ಸಂಜನಾ, ನನ್ನನ್ನು ಓದಿಸಲು ಅಣ್ಣ ಕೂಡ ಚಿಕ್ಕಂದಿನಿಂದಲೇ ಕೆಲಸ ಮಾಡುತ್ತಿದ್ದಾರೆ. ತಾಯಿ ಗೃಹಣಿ. ಎಲ್ಲರಿಗೂ ತುಂಬಾನೇ ಖುಷಿಯಾಗಿದೆ. ಮುಂದೆ ಸಿಎ ಮಾಡಬೇಕೆಂದುಕೊಂಡಿದ್ದೇನೆ ಎಂದು ಹೇಳಿದರು.

ಇನ್ನು, ಶೇಷಾದ್ರಿಪುರಂ ಕಾಲೇಜಿನ ಬಿಬಿಎ ವಿದ್ಯಾರ್ಥಿ ಮನನ್ ಜೈನ್‌ ಮತ್ತು ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಕಾಲೇಜಿನ ಆರ್.ಎಸ್.ಸಂಜನ ತಲಾ ಮೂರು ಚಿನ್ನದ ಪದಕವನ್ನು ಪಡೆಯಲು ಅರ್ಹರಾಗಿದ್ದಾರೆ.

56ನೇ ವಯಸ್ಸಲ್ಲಿ ಎಂಎ, ಚಿನ್ನದ ಪದಕ:

56ನೇ ವಯಸ್ಸಿನಲ್ಲಿ ಎಂಎ ಫ್ರೆಂಚ್ ವ್ಯಾಸಂಗ ಮಾಡಿ ಎರಡು ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಪ್ರಿಯಾ ಬಾಲಚಂದ್ರ ಹುಬ್ಬೇರುವಂತೆ ಮಾಡಿದ್ದಾರೆ. ಖಾಸಗಿ ಕಾಲೇಜಿನಲ್ಲಿ ಫ್ರೆಂಚ್ ಭಾಷಾ ಬೋಧಕಿಯಾಗಿರುವ ಇವರು ಸ್ನಾತಕೋತ್ತರ ಪದವಿ ಪಡೆಯಬೇಕೆಂಬ ಹಂಬಲದಿಂದ ವ್ಯಾಸಂಗ ಮಾಡಿದೆ, ಚಿನ್ನದ ಪದಕ ಪಡೆದಿರುವುದು ತುಂಬಾನೆ ಖುಷಿ ನೀಡಿದ ಎಂದು ಹೇಳಿದರು.

PREV
Read more Articles on
click me!

Recommended Stories

ಬೆಂಗಳೂರು: ನಗರದಲ್ಲಿ 1000ಕ್ಕೂ ಅಧಿಕ ಅಪಾಯಕಾರಿ ಮರ ಪತ್ತೆ!
ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ