ಮಲೆನಾಡು ಭಾಗಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳು ಈಗ ಬಯಲು ಸೀಮೆಯತ್ತ ಮುಖ ಮಾಡಿದೆ. ಜನ ಸಾಲ ಮಾಡಿ ಕಷ್ಟಪಟ್ಟು ಬೆಳೆ ಬೆಳೆಸಿ, ಇನ್ನೇನು ಫಸಲು ಕೈಗೆ ಬರುತ್ತದೆ ಎನ್ನುವಷ್ಟರಲ್ಲಿ ಕಾಡಾನೆ ದಾಳಿ ಮಾಡಿ, ಎಲ್ಲವನ್ನೂ ಸ್ವಾಹಾ ಮಾಡುತ್ತಿದೆ. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಧರಣಿ ನಡೆಸೋದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಹಾಸನ(ಜು.27): ಬೇಲೂರು ತಾಲೂಕಿನ ಹಗರೆ ಗ್ರಾಮದ ಅಡವಿ ಬಂಟೇನಹಳ್ಳಿ ಸುತ್ತಮುತ್ತಲಿನ ಜಮೀನುಗಳ ಮೇಲೆ ಗುರುವಾರ ರಾತ್ರಿ ಒಂಟಿ ಸಲಗ ದಾಳಿ ಮಾಡಿ ಬೆಳೆಯನ್ನು ನಾಶ ಮಾಡಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ.
ಮಲೆನಾಡು ಭಾಗಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳು ಈಗ ಬಯಲು ಸೀಮೆಯತ್ತ ಮುಖ ಮಾಡಿದೆ. ಸಾಮಾನ್ಯವಾಗಿ ಕಾಫಿ ತೋಟ ಕಬ್ಬಿನ ಗದ್ದೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳು, ಈಗ ನೀರಿಲ್ಲದೆ ಬಣಗುಡುತ್ತಿರುವ ಬಯಲು ಸೀಮೆಯತ್ತ ದಾಂಗುಡಿ ಇಡುತ್ತಿವೆ. ಈಗಾಗಲೇ ಹಳೇಬೀಡು ಸುತ್ತಮುತ್ತ ಅಡಗೂರು ಭಾಗಗಳಲ್ಲಿ ಹಾಗೂ ಸೀಗೆಗುಡ್ಡ ಸುತ್ತಮುತ್ತ ಅಟ್ಟಹಾಸವನ್ನು ಮೆರೆಯುತ್ತಿರುವ ಒಂಟಿ ಸಲಗ ಈಗ ಹಗರೆ ಹೋಬಳಿ ಭಾಗಕ್ಕೂ ದಾಳಿ ಮಾಡಲು ಬಂದಿದೆ.
ಒಂಟಿ ಸಲಗದ ಪುಂಡಾಟ:
ಇತ್ತೀಚೆಗೆ ಅಡಗೂರು ಸಮೀಪದ ಆಲದಹಳ್ಳಿ ಗ್ರಾಮದ ಸುತ್ತಮುತ್ತ ದಾಳಿ ನಡೆಸಿ ಓರ್ವ ಮಹಿಳೆ ಹಾಗೂ ಅರಣ್ಯ ರಕ್ಷಕನನ್ನು ಬಲಿ ಪಡೆದುಕೊಂಡಿದ್ದಲ್ಲದೆ, ಬೆಳೆಗಳನ್ನು ಕೂಡ ನಾಶ ಮಾಡಿತ್ತು. ಒಂಟಿ ಸಲಗದ ದಾಳಿಗೆ ಬೆದರಿದ ಗ್ರಾಮಸ್ಥರು ಕತ್ತಲಾಗುವ ಮೊದಲೇ ಗೂಡು ಸೇರಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಕಾಡನ್ನು ಕಾಯುವ ಅರಣ್ಯ ರಕ್ಷಕನನ್ನು ಹೊಸಕಿ ಸಾಯಿಸಿದ ಆನೆ ನಮ್ಮನ್ನು ಬಿಟ್ಟಿತೇ ಎಂಬ ಭಯ ಗ್ರಾಮಸ್ಥರನ್ನು ಕಾಡುತ್ತಲೇ ಇದೆ.
undefined
ಸಕಲೇಶಪುರದಲ್ಲಿ ಕಾಡಾನೆಗಳ ಪುಂಡಾಟದಿಂದ ವ್ಯಾಪಕ ಬೆಳೆ ನಾಶ
ಹೋಬಳಿಯ ಅಡವಿ ಬಂಟೇನಹಳ್ಳಿ ಸುತ್ತಮುತ್ತ ಜಮೀನುಗಳ ಮೇಲೆ ಗುರುವಾರ ರಾತ್ರಿ ಒಂಟಿಸಲಗ ದಾಳಿ ಮಾಡಿ ಬೆಳೆಗಳನ್ನು ಹೊಸಕಿ ಹಾಕಿದೆ. ಸಾಲ ಸೋಲ ಮಾಡಿ ಮನೆಯ ಚಿನ್ನವನ್ನು ಅಡವಿಟ್ಟು ಬಿತ್ತನೆ ಮಾಡಿ ಬೆಳೆದಿದ್ದ ಆಲೂ, ಜೋಳ, ಹುರುಳಿ ಗಿಡಗಳನ್ನು ತುಳಿದು ಹಾಕಿದೆ. ಅಲ್ಲದೆ ಜಮೀನಿನ ಇಕ್ಕೆಲಗಳಲ್ಲಿ ಬೆಳೆದಿದ್ದ ಹಲಸು ತೆಂಗು ಅಡಿಕೆ ಮರಗಳನ್ನು ಮುರಿದು ಹಾಕಿದೆ.
ರೈತರು ಕಷ್ಟಪಟ್ಟು ಬೆಳೆದ ಪೈರನ್ನು ಒಂದೆಡೆ ಕಾಡು ಹಂದಿಗಳು ನಾಶ ಮಾಡುತ್ತಿದ್ದರೆ, ಈಗ ಗಾಯದ ಮೇಲೆ ಬರೆ ಎಂಬಂತೆ ಈಗ ಒಂಟಿ ಸಲಗ ಕೂಡ ದಾಳಿ ಮಾಡುತ್ತಿರುವುದು ರೈತರನ್ನು ಚಿಂತೆಗೆ ದೂಡಿದೆ.
ಸಾಲ ಮಾಡಿ ಬೆಳೆದ ಬೆಳೆ ನಾಶ, ರೈತರಿಗೆ ನಷ್ಟ:
ಈಗಾಗಲೇ ಭೀಕರ ಬರಗಾಲದಿಂದ ನಲುಗುತ್ತಿರುವ ಬಯಲುಸೀಮೆಯ ಜನತೆಗೆ ಆನೆ ದಾಳಿಯ ಸಹಿಸಲಾರದ ಸಂಕಷ್ಟವನ್ನು ಉಂಟು ಮಾಡಿದೆ. ಸಾಲ ಸೋಲ ಮಾಡಿ ಬೆಳೆದಿದ್ದ ಬೆಳೆಯು ಕಣ್ಣು ಮುಂದೆಯೇ ಹಾಳಾಗುತ್ತಿರುವುದನ್ನು ಕಂಡು ಸಹಿಸಲು ಅಸಾಧ್ಯವಾಗಿದೆ. ರೈತರು ಬೆಳೆದ ಬೆಳೆಗಳೆಲ್ಲ ಆನೆ ದಾಳಿಯಿಂದ ನಾಶವಾಗುತ್ತಿದ್ದು ಸಾವಿರಾರು ರೂ. ನಷ್ಟಅನುಭವಿಸುವಂತಾಗಿದೆ.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಧರಣಿ ಎಚ್ಚರಿಕೆ:
ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಈ ಪುಂಡಾನೆಯನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರ ಮಾಡದಿದ್ದರೆ ಅಡಗೂರು ಹಾಗೂ ಅಡವಿ ಬಂಟೇನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.