ಶಾಸಕ ಸಿ.ಟಿ.ರವಿ ಕ್ಷೇತ್ರಕ್ಕೆ ಯಾವುದೇ ಶಾಶ್ವತ ಯೋಜನೆ ತಂದಿಲ್ಲ. ಆದರೆ ಜನತೆಗೆ ತಪ್ಪು ಮಾಹಿತಿಗಳನ್ನು ಕೊಡುವ ಮೂಲಕ ನಾಟಕವಾಡುತ್ತಿದ್ದಾರೆ ಎಂದು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ. ಅವರಿಗೆ ಬೆಳೆಗಾರರು ಮತ್ತು ಕಾರ್ಮಿಕರ ಬಗ್ಗೆ ಕಾಳಜಿ ಇದ್ದರೆ ಅವರ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲಿ. ಅದನ್ನು ಬಿಟ್ಟು ಸುಳ್ಳು ಆಶ್ವಾಸನೆ ಕೊಡುವುದನ್ನು ಬಿಡಲಿ ಎಂದಿದ್ದಾರೆ.
ಚಿಕ್ಕಮಗಳೂರು(ಜು.27): ಸತತ 17 ವರ್ಷಗಳ ಕಾಲ ಶಾಸಕರಾಗಿರುವ ಸಿ.ಟಿ.ರವಿ ಕ್ಷೇತ್ರಕ್ಕೆ ಯಾವುದೇ ಶಾಶ್ವತ ಯೋಜನೆ ತರದಿದ್ದರೂ ಜನತೆಗೆ ತಪ್ಪು ಮಾಹಿತಿಗಳನ್ನು ಕೊಡುವ ಮೂಲಕ ನಾಟಕವಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಸಿ. ಶಿವಾನಂದಸ್ವಾಮಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 17 ವರ್ಷಗಳಿಂದ ಶಾಸಕರಾಗಿರುವ ಸಿ.ಟಿ.ರವಿ ಒಮ್ಮೆ ಸಚಿವರೂ ಆಗಿದ್ದರು. ಆದರೆ ಅವರು ಜಿಲ್ಲೆಗೆ, ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಏನೂ ಇಲ್ಲ. ಕರಗಡ ಕುಡಿಯುವ ನೀರಿನ ಯೋಜನೆ ಈವರೆಗೂ ಪೂರ್ಣಗೊಂಡಿಲ್ಲ. ಇಷ್ಟಾದರೂ ಈಗಲೂ ಪುನಃ ಕುಡಿಯುವ ನೀರಿನ ಯೋಜನೆ ಕುರಿತು ಜನತೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಶಿವಮೊಗ್ಗ: ಬಿಎಸ್‌ವೈ ತವರೂರಲ್ಲಿ ಸಂಭ್ರಮವೋ.. ಸಂಭ್ರಮ..!
ಆಶ್ವಾಸನೆ ಮಾತ್ರ, ಕೆಲಸವಿಲ್ಲ:
undefined
ಶಾಸಕ ಸಿ.ಟಿ.ರವಿ ಜಿಲ್ಲೆಗೆ ಇ.ಎಸ್.ಐ. ಆಸ್ಪತ್ರೆ ಮಂಜೂರು ಮಾಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂಬ ಹೇಳಿಕೆ ನೀಡಿದ್ದಾರೆ. ಜಿಲ್ಲೆಯು ಕೃಷಿ ಕೈಗಾರಿಕಾ ಜಿಲ್ಲೆ ಎಂಬ ಹೆಸರನ್ನು ಪಡೆದುಕೊಂಡಿದೆ. ಆದರೆ ಜಿಲ್ಲೆಯಲ್ಲಿ ಕೇವಲ 15-20 ಸಾವಿರ ಕಾರ್ಮಿಕರು ಮಾತ್ರ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿದ್ದಾರೆ. ಪ್ಲಾಂಟೇಶನ್ ಕಾರ್ಮಿಕ ಕಾಯಿದೆ 1951ರಲ್ಲಿ ಜಾರಿಗೆ ಬಂದಿದೆ. 1956ರಲ್ಲಿ ಈ ಕಾಯಿದೆಗೆ ರಾಜ್ಯ ಸರ್ಕಾರವು ನಿಯಮಗಳನ್ನು ರೂಪಿಸಿದೆ. ಅದರಂತೆ 12- 50 ಎಕರೆ ತೋಟವನ್ನು ಯಾರಾದರೂ ಹೊಂದಿದ್ದರೆ ಅಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಕನಿಷ್ಠ ಕೂಲಿ, ಭವಿಷ್ಯ ನಿಧಿ, ವಸತಿ ಸೇರಿದಂತೆ ಆರೋಗ್ಯವನ್ನು ಆಯಾ ತೋಟಗಳ ಮಾಲೀಕರೇ ಒದಗಿಸಬೇಕಾಗುತ್ತದೆ ಎಂದು ಹೇಳಿದರು.
ಕಾರ್ಮಿಕರು, ರೈತರಿಗಾಗಿ ಕೇಂದ್ರದ ಮೇಲೆ ಒತ್ತಡ ಹೇರಲಿ:
ಈಗಾಗಲೇ ಕಾರ್ಮಿಕರಿಗೆ ಆರೋಗ್ಯವನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಆದರೆ ಇಎಸ್‌ಐ ಆಸ್ಪತ್ರೆ ಮಂಜೂರಾದಲ್ಲಿ ಸದರಿ ಯೋಜನೆಯಡಿ ಚಿಕಿತ್ಸೆ ಪಡೆದುಕೊಳ್ಳಲು ಕಾರ್ಮಿಕರು ಮತ್ತು ಪ್ಲಾಂಟೇಶನ್ ಮಾಲೀಕರು ಪ್ರತಿ ತಿಂಗಳು ಕಂತನ್ನು ಕಟ್ಟಬೇಕಾಗುತ್ತದೆ. ಇದರಿಂದ ಕಾರ್ಮಿಕರು ಮತ್ತು ತೋಟದ ಮಾಲೀಕರಿಗೆ ಹೆಚ್ಚಿನ ಹೊರೆಯಾಗುತ್ತದೆ. ಶಾಸಕ ಸಿ.ಟಿ.ರವಿ ಅವರಿಗೆ ಬೆಳೆಗಾರರು ಮತ್ತು ಕಾರ್ಮಿಕರಿಗೆ ಒಳ್ಳೆಯದನ್ನು ಮಾಡಬೇಕೆಂಬ ಕಾಳಜಿ ಇದ್ದರೆ ಅವರ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲಿ. ಅದನ್ನು ಬಿಟ್ಟು ಸುಳ್ಳು ಆಶ್ವಾಸನೆ ಕೊಡುವುದನ್ನು ಬಿಡಲಿ ಎಂದು ಸಲಹೆ ನೀಡಿದರು.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ರಾಮಚಂದ್ರ, ಸುರೇಶ್, ರಸೂಲ್ ಖಾನ್, ಸೋಮಶೇಖರ್, ರೂಬಿನ್ ಮೋಸಸ್ ಉಪಸ್ಥಿತರಿದ್ದರು.