ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮಾ.28): ಕಾಫಿನಾಡ ಮಲೆನಾಡು ಹಾಗೂ ಬಯಲುಸೀಮೆಯಲ್ಲಿ ಕಾಡಾನೆಗಳ (Wild Elephant ) ಹಾವಳಿ ಹೆಚ್ಚಿದ್ದು, ಇತ್ತೀಚೆಗೆ ಮಿತಿ ಮೀರಿತ್ತು. ಆನೆ ಹಾವಳಿಗೆ ರೈತರು (Farmers) ಬೆಳೆದ ಬೆಳೆಯಲ್ಲಿ ಆನೆ ಕಾಲಡಿಯಲ್ಲಿ ಸಿಕ್ಕಿ ಮಣ್ಣಾಗಿದ್ದೇ ಹೆಚ್ಚು. ಸಾಲದಕ್ಕೆ ಐದಾರು ಜನ ರೈತರು-ಕಾರ್ಮಿಕರು ಬಲಿಯಾಗಿದ್ರು. ಬೆಳಗ್ಗೆ ಹೋಗಿದ್ದ ಆನೆ ಸಂಜೆ ಮತ್ತದೇ ಜಾಗದಲ್ಲಿ ಹಾಜರ್. ಎರಡು ದಿನಗಳ ಹಿಂದಷ್ಟೆ ಆನೆಗೆ ಮತ್ತೊಂದು ಬಲಿ. ಹಾಗಾಗಿ, ಅರಣ್ಯ ಇಲಾಖೆ ಮುಂಜಾಗೃತ ಕ್ರಮವಾಗಿ ಕಾಡಾನೆಯನ್ನ ಕಾಡಿಗಟ್ಟಲು ಸಾಕಾನೆಗಳ ಮೊರೆ ಹೋಗಿದ್ದಾರೆ. ಎರಡು ತಿಂಗಳಿಂದ ಆನೆ ಅಬ್ಬರಕ್ಕೆ ಹೈರಾಣಾಗಿದ್ದ ಜನ ಇದೀಗ ನಿಟ್ಟುಸಿರು ಬಿಡುವಂತಾಗಿದೆ.
ಕಾಡಾನೆ ಹಾವಳಿಗೆ ಡಿಜೆ ಸಿಸ್ಟಮ್ ಇಟ್ಟಿದ ರೈತರು: ಆನೆ ಹಾವಾಳಿ ಬ್ರೇಕ್ ಹಾಕೋದಕ್ಕೆ ಮುಂದಾಗಿದ್ದರು. ಆದರೆ, ಸಲಗದ ಕಾಟ ನಿಲ್ಲಲಿಲ್ಲ. ಕಾಫಿನಾಡು ಚಿಕ್ಕಮಗಳೂರಿನ ಕೆಲ ಬಯಲುಸೀಮೆ ಭಾಗ ಹಾಗೂ ಬಹುತೇಕ ಮಲೆನಾಡು ಭಾಗ ಕಳೆದೊಂದು ದಶಕಗಳಿಂದ ಆನೆ ಹಾವಳಿಗೆ ಹೈರಾಣಗಿದ್ದಾರೆ. ಅದರಲ್ಲೂ ಮೂಡಿಗೆರೆ ತಾಲೂಕಿನಲ್ಲೇ ಹೆಚ್ಚು. ಮೂಡಿಗೆರೆಯ ಸಾರಗೋಡು, ಕೆಳಗೂರು, ಆಲ್ದೂರು ಸೇರಿದಂತೆ ಹತ್ತಾರು ಹಳ್ಳಿಯ ಜನ ಆನೆ ಹಾವಳಿಯಿಂದ ಕಂಗಾಲಾಗಿದ್ದಾರೆ. ಆದ್ರೆ, ಕಳೆದ ಎರಡ್ಮೂರು ವರ್ಷಗಳಿಂದ ಚಿಕ್ಕಮಗಳೂರು ತಾಲೂಕಿನ ಸುತ್ತಮುತ್ತವೂ ಆನೆ ಹಾವಳಿ ಮಿತಿ ಮೀರಿದೆ. ನಗರಕ್ಕೂ ಭೇಟಿ ನೀಡಿದ್ದ ಕಾಡಾನೆಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಕಿಂಗ್ ಮಾಡಿದ್ದವು.
ಪರೀಕ್ಷೆ ಬರೆಯಲು ಹೊರಟ ವಿಜಯಪುರ ವಿದ್ಯಾರ್ಥಿಗೆ ತಿಥಿ ಮಾಡಿ ಕಿಡಿಗೇಡಿಗಳ ಕಾಟ!
ಈ ಮಧ್ಯೆ ಕಳೆದ ಎರಡು ತಿಂಗಳಿಂದ ಚಿಕ್ಕಮಗಳೂರು (Chikkamagaluru) ತಾಲೂಕಿನ ಬೀಕನಹಳ್ಳಿಯಲ್ಲಿ ಒಂಟಿ ಸಲಗದ ಕಾಟ ಹೆಚ್ಚಿತ್ತು. ದಿನಬಿಟ್ಟು ದಿನ ನಡೆಸುತ್ತಿದ್ದ ದಾಂಧಲೆಗೆ ರೈತರು ಹೊಲಗದ್ದೆಗಳಿಗೆ ಹೋಗುವುದನ್ನೇ ಬಿಟ್ಟಿದ್ದರು. ಕೆಲ ತೋಟದ ಮಾಲೀಕರು ತೋಟದಲ್ಲಿ ಡಿಜೆ ಸಿಸ್ಟಮ್ ಇಟ್ಟು ಆನೆ ಹಾವಾಳಿ ಬ್ರೇಕ್ ಹಾಕೋದಕ್ಕೆ ಮುಂದಾಗಿದ್ದರು. ಆದರೆ, ಸಲಗದ ಕಾಟ ನಿಲ್ಲಲಿಲ್ಲ. ಹಾಗಾಗಿ, ಸಾವು-ನೋವು ಸಂಭವಿಸಬಾರದು ಎಂದು ಅರಣ್ಯ ಇಲಾಖೆ ಸಾಕಾನೆಗಳನ್ನ ತಂದು ಒಂಟಿ ಸಲಗದ ಕಾರ್ಯಚಾರಣೆಗೆ ಮುಂದಾಗಿದೆ.
ಮೈಸೂರಿನ ಅರ್ಜುನ ಹಾಗೂ ಭೀಮನ ಮೂಲಕ ಒಂಟಿ ಸಲಗದ ಅಬ್ಬರಕ್ಕೆ ಬ್ರೇಕ್ ಹಾಕುವ ಪ್ಲಾನ್: ಮಲೆನಾಡಿನಲ್ಲೂ ಸುತ್ತಲೂ ಅರಣ್ಯ ಪ್ರದೇಶ ಅಕ್ಕಪಕ್ಕವೇ ಅಡಿಕೆ, ಕಾಫಿ ತೋಟಗಳೆ ಹೆಚ್ಚು ಹೀಗಾಗಿ ಆನೆ ಹಾವಳಿಯನ್ನ ನಿಯಂತ್ರಿಸೋದು ಕಷ್ಟ ಸಾಧ್ಯ. ಎರಡು ದಿನಗಳ ಹಿಂದಷ್ಟೆ ಆಲ್ದೂರು ಗ್ರಾಮದ ಬಳಿ ಕಾಫಿ ತೋಟದಲ್ಲಿ ಮೆಣಸು ಕೊಯ್ಯುತ್ತಿದ್ದ ಮಹಿಳೆಯನ್ನ ಆನೆ ತುಳಿದು ಸಾಯಿಸಿ, ಮತ್ತೋರ್ವನಿಗೆ ಗಂಭೀರ ಗಾಯವಾಗಿಸಿದೆ.
ಈ ಬೀಕನಹಳ್ಳಿ ಕೂಡ ಕಾಡಂಚಿನ ಗ್ರಾಮವಾಗಿರೋದ್ರಿಂದ ನಾಳೆ ಮತ್ತೊಂದು ಅನಾಹುತ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಳ್ಳೋಣ ಎಂದು ಅರಣ್ಯ ಇಲಾಖೆ ಮೈಸೂರಿನ ಅಂಬಾರಿ ಹೊರುವ ಸಾಕಾನೆ ಅರ್ಜುನ ಹಾಗೂ ಭೀಮನನ್ನ ಕರೆಸಿ ಕಾಡಿನ ಒಂಟಿ ಸಲಗದ ಅಬ್ಬರಕ್ಕೆ ಬ್ರೇಕ್ ಹಾಕಿ ಕಾಡಿಗಟ್ಟಲು ಮುಂದಾಗಿದ್ದಾರೆ.
KCET 2022 Exam: ಜೂನ್ 16ರಿಂದ ಸಿಇಟಿ ಪರೀಕ್ಷೆ ಆರಂಭ
ಕಾರ್ಯಾಚರಣೆಯಲ್ಲಿ ಡಿ ಎಫ್ ಓ ಕ್ರಾಂತಿ ಮಾರ್ಗದರ್ಶನದಲ್ಲಿ ಸುಮಾರು 60 ಸಿಬ್ಬಂದಿಗಳು ಭಾಗಿಯಾಗಿದ್ದು, ಒಂದೆರಡು ದಿನದಲ್ಲಿ ಒಂಟಿ ಸಲಗವನ್ನ ಕಾಡಿಗಟ್ಟುವ ವಿಶ್ವಾಸ ಇಲಾಖೆಗೆ ಇದೆ. ಬೀಕನಹಳ್ಳಿ ಕಾಡಂಚಿನ ಗ್ರಾಮವಾಗಿದ್ದು ಆನೆ ಹಾವಳಿ ಹೆಚ್ಚಿತ್ತು. ಬಾಳೆ-ಅಡಿಕೆ-ತೆಂಗು, ಕಾಫಿ-ಮೆಣಸು, ಭತ್ತ ಬೆಳೆದಿದ್ದು ರೈತರು ಅರ್ಧ ಕಳೆದುಕೊಂಡಿದ್ದರು. ಇದೀಗ, ಒಂಟಿ ಸಲಗವನ್ನು ಸಾಕಾನೆ ಮೂಲಕ ಕಾಡಿಗಟ್ಟಲು ಮುಂದಾಗಿರೋ ಇಲಾಖೆಯ ಕ್ರಮಕ್ಕೆ ಹಳ್ಳಿಗರು ಸಂತಸ ವ್ಯಕ್ತಪಡಿಸಿದ್ದು ಪರಿಸರವಾದಿಗಳು ಕೂಡ ಇದಕ್ಕೆ ಸಾಥ್ ನೀಡಿದ್ದಾರೆ
ಒಟ್ಟಾರೆ, ಆನೆಗಳಿಂದಾಗ್ತಿರೋ ಬೆಳೆಹಾನಿ ಹಾಗೂ ಪ್ರಾಣಹಾನಿಯನ್ನ ತಪ್ಪಿಸಿಕೊಳ್ಳಲು ಜನ ಕಷ್ಟಪಡ್ತಿದ್ದಾರೆ. ಕಾಡಂಚಿನ ಗ್ರಾಮಗಳ ಹಳ್ಳಿಗರು ಪ್ರಾಣಕ್ಕೂ ಆಪತ್ತು ಉಂಟಾಗಿದೆ.ಬದುಕು ಕಟ್ಟಿಕೊಡುವ ಕಾಫಿ ತೋಟಗಳು ಕೂಡ ಕಾರ್ಮಿಕರ ಪಾಲಿಗೆ ಜೀವ ಸ್ಥಳವಾಗುತ್ತಿದೆ. ಎರಡು ದಿನದ ಹಿಂದಷ್ಟೆ ಮಹಿಳೆ ಕಾಫಿತೋಟದಲ್ಲಿ ಆನೆ ದಾಳಿಗೆ ತುತ್ತಾಗಿದ್ದಾಳೆ. ಎಲ್ಲವನ್ನು ಮನಗಂಡಿರೋ ಅರಣ್ಯ ಇಲಾಖೆ ಮುಂಜಾಗೃತ ಕ್ರಮವಾಗಿ ಒಂಟಿ ಸಲಗದ ಕಾರ್ಯಚರಣೆಗೆ ಮುಂದಾಗಿರುವುದು ಸ್ವಾರ್ಗರ್ಹವೇ ಸರಿ.