ಕೊಲ್ಲೂರಿನ ಸಲಾಂ ಮಂಗಳಾರತಿಗೆ ಯಾವುದೇ ದಾಖಲೆಗಳಿಲ್ಲ ಎಂದು ಹಿಂದೂಗಳು ಹೇಳಿದ್ದರೆ, ನಂಬಿಕೆಗೆ ಘಾಸಿ ಮಾಡಬೇಡಿ ಎಂದು ಎಸ್‌ಡಿಪಿಐ ಹೇಳಿದೆ.
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ(ಮಾ.28): ಮುಸ್ಲಿಂ ಹೆಣ್ಣುಮಕ್ಕಳ ಹಿಜಾಬ್ (Hijab) ವಿವಾದ ಇದೀಗ ಕೊಲ್ಲೂರಿನ ತಾಯಿ ಮುಕಾಂಬಿಕಾ ಸನ್ನಿದಾನದವರೆಗೂ (Kollur Mookambika Temple) ತಲುಪಿದೆ. ಕ್ಷೇತ್ರದಲ್ಲಿ ಸಲಾಂ ಬೇಡ ಮಂಗಳಾರತಿ ಸಾಕು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿದ ಬೆನ್ನಲ್ಲೇ, ವಿವಾದ ಹೊಸ ತಿರುವು ಪಡೆದಿದೆ. ಸಲಾಂ ಮಂಗಳಾರತಿಗೆ (Salam Mangalarathi ) ಯಾವುದೇ ದಾಖಲೆಗಳಿಲ್ಲ ಎಂದು ಹಿಂದೂಗಳು ಹೇಳಿದ್ದರೆ, ನಂಬಿಕೆಗೆ ಘಾಸಿ ಮಾಡಬೇಡಿ ಎಂದು ಎಸ್‌ಡಿಪಿಐ ಹೇಳಿದೆ.
undefined
ಕರಾವಳಿಯ ದೇವಾಲಯಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ (Muslim traders) ಆರ್ಥಿಕ ಬಹಿಷ್ಕಾರ ಹಾಕಿದ ಬೆನ್ನಲ್ಲೇ, ಸೌಹಾರ್ದತೆಯ ಸಂಕೇತಗಳ ಜಾಡು ಹಿಡಿದು ಬಿಸಿಬಿಸಿ ಚರ್ಚೆ ಆರಂಭವಾಗಿದೆ. ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿ ಪೀಠಗಳಲ್ಲಿ ಒಂದಾದ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಾನದಲ್ಲಿ ಸಲಾಂ ಮಂಗಳಾರತಿ ನಡೆಸಬೇಕೋ ಬೇಡವೋ ಎಂದು ಆರಂಭವಾದ ವಿವಾದ, ಇದೀಗ ಆಶ್ಚರ್ಯಕರ ರೀತಿಯಲ್ಲಿ ಹೊಸ ತಿರುವು ಪಡೆದಿದೆ. ಪೂಜೆ ಮಾಡಬೇಕೋ ಬೇಡವೋ ಅನ್ನುವುದು ನಂತರದ ವಿಷಯ, ಇಷ್ಟಕ್ಕೂ ಕ್ಷೇತ್ರದಲ್ಲಿ ಸಲಾಂ ಮಂಗಳಾರತಿ ಹೆಸರಿನ ಪೂಜೆ ನಡೆಯುತ್ತಿದೆಯೇ ? ಎಂಬ ಹೊಸ ಪ್ರಶ್ನೆ ಉದ್ಭವಿಸಿದೆ.
ತಾಯಿ ಮೂಕಾಂಬಿಕೆಗೆ 'ಸಲಾಂ' ಬೇಡ ಆರತಿ ಸಾಕು, ಹೆಸರು ಬದಲಿಸಲು ವಿಹಿಂಪ ಮನವಿ
ದೇವಾಲಯದ ಅರ್ಚಕ ಮೂಲಗಳು ಹೇಳುವ ಪ್ರಕಾರ, ಸಲಾಂ ಮಂಗಳಾರತಿ ಹೆಸರಿನ ಯಾವುದೇ ಧಾರ್ಮಿಕ ವಿಧಿಯನ್ನು ದೇವಾಲಯದಲ್ಲಿ ನಡೆಸಲಾಗುತ್ತಿಲ್ಲ ವಂತೆ. ಇಷ್ಟಕ್ಕೂ ಆಡುಭಾಷೆಯಲ್ಲಿ ಬಂದ ಜನಪದದ ನಂಬಿಕೆಯಂತೆ, ಈ ಕ್ಷೇತ್ರಕ್ಕೆ ಟಿಪ್ಪು ಭೇಟಿ ನೀಡಿದ ನೆನಪಿನಲ್ಲಿ ನಡೆಸುವ ಪೂಜೆಯನ್ನು ಜನರೇ ಸಲಾಂ ಮಂಗಳಾರತಿ ಎಂದು ಕರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರವನ್ನು ಈಗಾಗಲೇ ಅರ್ಚಕರು ಸ್ಪಷ್ಟಪಡಿಸಿದ್ದಾರೆ. ಇದೀಗ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕಿರಾಡಿ ಚಂದ್ರಶೇಖರ ಶೆಟ್ಟಿ ಅವರು ಕೂಡ ಇದೇ ವಿಚಾರವನ್ನು ಖಚಿತಪಡಿಸಿದ್ದಾರೆ.
ಕೆರಾಡಿ ಚಂದ್ರಶೇಖರ ಶೆಟ್ಟಿ ಹೇಳಿದ್ದೇನು: ಕೊಲ್ಲೂರು ದೇವಸ್ಥಾನದಲ್ಲಿ ಸಲಾಂ ಮಂಗಳಾರತಿ ನೆರವೇರಿಸುತ್ತಿದ್ದಾರೆ ಎಂಬ ವಿಚಾರ ಗೊಂದಲಕ್ಕೆ ಕಾರಣವಾಗಿದೆ. ಹಾಗಾಗಿ ನಮ್ಮ ಕ್ಷೇತ್ರದ ಎಲ್ಲಾ ಭಕ್ತರಿಗೆ ಒಂದು ವಿಷಯವನ್ನು ನಾನು ಸ್ಪಷ್ಟಪಡಿಸಲು ಇಚ್ಚಿಸುತ್ತೇನೆ. ನಮ್ಮ ದೇವಸ್ಥಾನದಲ್ಲಿ ಸಲಾಂ ಹೆಸರಿನಲ್ಲಿ ಮಂಗಳಾರತಿ ನಡೆಯುತ್ತಿಲ್ಲ. ಸಲಾಂ ಹೆಸರಿಗೆ ಮತ್ತು ಟಿಪ್ಪು ಇಲ್ಲಿ ಬಂದದ್ದಕ್ಕೆ ಯಾವುದೇ ದಾಖಲೆಗಳು ಇಲ್ಲ. ಈ ಬಗ್ಗೆ ನಮ್ಮಲ್ಲಿ ಯಾವುದೇ ಲಿಖಿತ ದಾಖಲೆಗಳು ಸಿಗುವುದಿಲ್ಲ. ಪ್ರದೋಷಕಾಲದಲ್ಲಿ ಮಂಗಳಾರತಿಯನ್ನು ದೇವಿಗೆ ಬೆಳಗುತ್ತೇವೆ. ಸಂಜೆಯ ಮಂಗಳಾರತಿಗೆ ಸಲಾಂ ಎಂದು ಕರೆಯುತ್ತಾರೆ. ಸಲಾಂ ಹೆಸರು ವಾಡಿಕೆಯಲ್ಲಿದೆ ಹೊರತು ಲಿಖಿತವಾಗಿ ಇಲ್ಲ ಎಂದು ಹೇಳಿದ್ದಾರೆ.
ರಸ್ತೆ ಬದಿಯಲ್ಲಿ ನಿಂತವರು ಮಾತನಾಡಿದ್ರೆ ಆಗಲ್ಲ: ಕೊಲ್ಲೂರು ವಿವಾದಕ್ಕೆ ಖಾದರ್ ಗರಂ!
ನಂಬಿಕೆಗೆ ಘಾಸಿ ಮಾಡಬೇಡಿ: ಇನ್ನು ಸಲಾಂ ಮಂಗಳಾರತಿ ವಿಚಾರವಾಗಿ ಎಸ್‌ಡಿಪಿಐ (SDPI) ತನ್ನ ನಿಲುವನ್ನು ಪ್ರಕಟಿಸಿದೆ. ಸಲಾಂ ಮಂಗಳಾರತಿ ಟಿಪ್ಪು ಸುಲ್ತಾನ್ ಕುರಿತಾದ ಒಂದು ಬಲವಾದ ನಂಬಿಕೆ. ಇದನ್ನು ನಿಲ್ಲಿಸಬೇಕೆಂಬ ಬೇಡಿಕೆಯಲ್ಲಿ ಕೋಮುವಾದ ಕಾಣುತ್ತಿದೆ. ಟಿಪ್ಪು ತನ್ನ ರಾಜ್ಯಭಾರದಲ್ಲಿ 150ಕ್ಕೂ ಅಧಿಕ ದೇವಸ್ಥಾನಗಳಿಗೆ ಅನುದಾನ ನೀಡಿದ್ದ, ಇದನ್ನು ನಾವು ಮರೆಯಬಾರದು ಮತ್ತು ಟಿಪ್ಪು ಸುಲ್ತಾನ್ (Tipu sultan) ಓರ್ವ ಪರಧರ್ಮ ಸಹಿಷ್ಣು ಅನ್ನುವುದು ಇದರಿಂದ ಗೊತ್ತಾಗುತ್ತೆ. ಪೇಶ್ವೆಗಳ ದಾಳಿಯಿಂದ ಶಾರದಾಂಬ ದೇವಸ್ಥಾನ ರಕ್ಷಿಸಿದ್ದ ಟಿಪ್ಪು, ಸರ್ವ ಧರ್ಮಗಳನ್ನು ಗೌರವಿಸಿದ್ದಾನೆ. ಮುಸ್ಲಿಂ ದೊರೆ ಎಂಬ ಏಕೈಕ ಕಾರಣಕ್ಕೆ ರಾಜ್ಯ ಸರಕಾರ ಈ ರೀತಿ ನಡೆಸುವುದು ಸರಿಯಲ್ಲ ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದ್ದಾರೆ.