ಕೋಲಾರ (ಆ.26): ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಸುಮಾರು 300 ಹೆಕ್ಟೇರ್ ಪ್ರದೇಶದಲ್ಲಿ ಲಕ್ಷಾಂತರ ಮೌಲ್ಯದ ಬೆಳೆಗಳು ನಾಶವಾಗಿವೆ.
ಜಿಲ್ಲೆಯ 6 ತಾಲೂಕುಗಳಲ್ಲೂ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಮಂಗಳವಾರ ಬೆಳಿಗ್ಗೆಯಿಂದ ಬುಧವಾರ ಬೆಳಿಗ್ಗೆವರೆಗೆ 24 ತಾಸಿನಲ್ಲಿ ಸರಾಸರಿ 32 ಮಿಲಿ ಮೀಟರ್ ಮಳೆ ಸುರಿದಿದೆ. ಮಳೆಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ನೆಲಕಚ್ಚಿವೆ. ಜಮೀನುಗಳು ನೀರಿನಿಂದಾಗಿ ಕೆರೆಯಂತಾಗಿದ್ದವು.
undefined
ಮಳೆಯು ಮುಖ್ಯವಾಗಿ ತೋಟಗಾರಿಕೆ ಬೆಳೆಗಳಿಗೆ ದೊಡ್ಡ ಪೆಟ್ಟು ಕೊಟ್ಟಿದ್ದು, ಸೊಪ್ಪು, ತರಕಾರಿ ಮತ್ತು ಹೂವಿನ ಬೆಳೆಗಳಿಗೆ ಹೆಚ್ಚಿನ ಹಾನಿಯಾಗಿದೆ. ಇತ್ತೀಚೆಗೆ ಬಿತ್ತನೆಯಾಗಿದ್ದ ರಾಗಿ, ಜೋಳದ ಬೀಜಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿವೆ. ಟೊಮೆಟೊ, ಬೀನ್ಸ್, ಕೋಸು, ಚಿಕಡಿಕಾಯಿ, ಕೊತ್ತಂಬರಿ ಬೆಳೆಗಳು ಜಲಾವೃತವಾಗಿವೆ.
ನಂದಿ ಬೆಟ್ಟ ಮಾರ್ಗದಲ್ಲಿ ಭಾರಿ ಭೂ ಕುಸಿತ : ಸಂಚಾರ ಸಂಪೂರ್ಣ ಬಂದ್
ಕೋಲಾರ ತಾಲೂಕಿನ ಹೊಸಮಟ್ನಹಳ್ಳಿ, ಚಿಟ್ನಹಳ್ಳಿ, ತೊಟ್ಲಿ, ಅಂಕತಟ್ಟಿ, ಎಸ್.ಅಗ್ರಹಾರ, ಸುಗಟೂರು, ಕೊಂಡೇನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಮಳೆರಾಯ ರೈತರಿಗೆ ಕಣ್ಣೀರು ತರಿಸಿದ್ದಾನೆ. ಜಮೀನುಗಳಲ್ಲಿನ ಕೊಳವೆ ಬಾವಿಗಳು ನೀರಿನಲ್ಲಿ ಮುಳುಗಿವೆ. ಹಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ದಿಕ್ಕು ತೋಚುತ್ತಿಲ್ಲ: ಸಾಲ ಮಾಡಿ ಟೊಮೆಟೋ ಬೆಳೆದಿದ್ದೆ. ಉತ್ತಮ ಫಸಲು ಬಂದಿತ್ತು. ಮಳೆಯಿಂದ ಬೆಳೆ ನಾಶವಾಗಿದ್ದು, ದಿಕ್ಕು ತೋಚದಂತಾಗಿದೆ ಎಂದು ಹೊಸಮಟ್ನಹಳ್ಳಿಯ ರೈತ ವೆಂಕಟೇಶಪ್ಪ್ಪ ಅಳಲು ತೋಡಿಕೊಂಡರು.
ಕೆರೆಗಳಿಗೂ ನೀರು:
ನಿನ್ನೆ ರಾತ್ರಿ ಬಿದ್ದ ಮಳೆಯಿಂದ ಕೆರೆಗಳಿಗೂ ನೀರು ಬಂದಿದೆ, ಕೋಲಾರ ತಾಲೂಕಿನ ಅತಿ ದೊಡ್ಡ ಕೆರೆ ಎಂದೇ ಹೆಸರಾಗಿರುವ ಮುದುವಾಡಿ ಕೆರೆಗೆ ಯತೇಚ್ಚವಾಗಿ ನೀರು ಹರಿದು ಬರುತ್ತಿದ್ದು ಇನ್ನು ಎರಡು ಮೂರು ದಿವಸಗಳಲ್ಲಿ ಕೆರೆ ತುಂಬುವ ಸಾಧ್ಯತೆ ಇದೆ ಎಂದು ಮುದುವಾಡಿ ಗ್ರಾಮಸ್ಥರು ಹೇಳುತ್ತಾರೆ.
ಇದೇ ರೀತಿ ಕಳೆದ ಎರಡು ದಿವಸಗಳಿಂದ ಬೀಳುತ್ತಿರುವ ಮಳೆಯಿಂದ ಶ್ರೀನಿವಾಸಪುರ,ಮುಳಬಾಗಿಲು, ಕೆಜಿಎಫ್,ಬಂಗಾರಪೇಟೆ ಹಾಗು ಮಾಲೂರು ತಾಲೂಕುಗಳಲ್ಲಿಯೂ ಬೆಳೆಗಳಿಗೆ ಹಾನಿ ಉಂಟಾಗಿದೆ.
ನಷ್ಟದ ಸಮೀಕ್ಷೆ: ಕೊಯ್ಲಿಗೆ ಬಂದಿದ್ದ ಬೆಳೆ ಮಳೆಯಿಂದ ನಾಶವಾಗಿರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಬೆಳೆ ನಾಶವಾಗಿರುವ ಜಮೀನುಗಳಿಗೆ ಬುಧವಾರ ಭೇಟಿ ನೀಡಿ ಸಮೀಕ್ಷೆ ನಡೆಸಿದರು. ಇನ್ನೂ ಮೂರ್ನಾಲ್ಕು ದಿನ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.