ಸಿದ್ಧರಾಮಯ್ಯಗೆ ಹಿಂದೂಗಳ ಕಂಡರೆ ಭಯ, ಜಿಹಾದಿಗಳ ಕಂಡರೆ ಪ್ರೀತಿ ಯಾಕೆ?: ಉಡುಪಿಯಲ್ಲಿ ಕುಯಿಲಾಡಿ ಪ್ರಶ್ನೆ

By Suvarna News  |  First Published Jan 24, 2023, 6:10 PM IST

ಅಧ:ಪತನದತ್ತ ಸಾಗುತ್ತಿರುವ ಕಾಂಗ್ರೆಸ್ ದುರಾಡಳಿತ, ಭ್ರಷ್ಟಾಚಾರ, ಹಿಂದೂ ವಿರೋಧಿ ನೀತಿ ಹಾಗೂ ಒಂದೇ ವರ್ಗದ ಓಲೈಕೆಯಿಂದಾಗಿ ದೇಶದಾದ್ಯಂತ ಜನತೆಯಿಂದ ತಿರಸ್ಕೃತಗೊಂಡು ಕೇವಲ ಮೂರು ರಾಜ್ಯಗಳ ಅಧಿಕಾರಕ್ಕೆ ಮಾತ್ರ ಸೀಮಿತಗೊಂಡಿದೆ.  ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್  ಹೇಳಿದ್ದಾರೆ.


ಉಡುಪಿ (ಜ.24): ಅಧ:ಪತನದತ್ತ ಸಾಗುತ್ತಿರುವ ಕಾಂಗ್ರೆಸ್ ದುರಾಡಳಿತ, ಭ್ರಷ್ಟಾಚಾರ, ಹಿಂದೂ ವಿರೋಧಿ ನೀತಿ ಹಾಗೂ ಒಂದೇ ವರ್ಗದ ಓಲೈಕೆಯಿಂದಾಗಿ ದೇಶದಾದ್ಯಂತ ಜನತೆಯಿಂದ ತಿರಸ್ಕೃತಗೊಂಡು ಕೇವಲ ಮೂರು ರಾಜ್ಯಗಳ ಅಧಿಕಾರಕ್ಕೆ ಮಾತ್ರ ಸೀಮಿತಗೊಂಡಿದೆ. ತಮ್ಮ ಆಡಳಿತವಿರುವ ಮೂರು ರಾಜ್ಯಗಳಲ್ಲಿ ಉಚಿತ ಭಾಗ್ಯಗಳನ್ನು ಜಾರಿಗೆ ತರಲು ಅಸಮರ್ಥವಾಗಿರುವ ಕಾಂಗ್ರೆಸ್ ಕರ್ನಾಟಕದಲ್ಲಿ ಸೋಲಿನ ಭೀತಿಯಿಂದ ಹತಾಶ ಮನೋಭಾವದಲ್ಲಿ ಸಾಧ್ಯವಾಗದಂತಹ ಬೇಕಾಬಿಟ್ಟಿ ಭಾಗ್ಯಗಳನ್ನು ಘೋಷಿಸಲು ಹೊರಟಿರುವುದು ಹಾಸ್ಯಾಸ್ಪದ. ಕೇಸರಿ ಕಂಡರೆ ಮಾರುದ್ದ ಓಡುವ ಮಾಜಿ  ಸಿ.ಎಂ. ಸಿದ್ದರಾಮಯ್ಯಗೆ ಹಿಂದೂಗಳ ಕಂಡರೆ ಭಯವೇಕೆ? ಜಿಹಾದಿಗಳ ಕಂಡರೆ ಪ್ರೀತಿ ಯಾಕೆ? ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಶ್ನಿಸಿದ್ದಾರೆ.

ಅವರು ಕಾಂಗ್ರೆಸ್ ವತಿಯಿಂದ ಉಡುಪಿಯಲ್ಲಿ ನಡೆದ ಪ್ರಜಾ ಧ್ವನಿ ಸಮಾವೇಶವನ್ನು ವಿಶ್ಲೇಷಿಸಿ, ಉಡುಪಿಯಲ್ಲಿ ನಡೆದಿರುವುದು ಕಾಂಗ್ರೆಸ್ ನ ಪ್ರಜಾ ವಿರೋಧಿ ಸಮಾವೇಶ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಅಧಿಕಾರದ ಲಾಲಸೆಯಿಂದ ದೇಶದಾದ್ಯಂತ ತುರ್ತು ಪರಿಸ್ಥಿತಿಯನ್ನು ಹೇರಿ ಪ್ರಜಾಪ್ರಭುತ್ವದ ಅಸ್ತಿತ್ವವನ್ನೇ ಬುಡಮೇಲು ಮಾಡಿರುವುದು ಕಾಂಗ್ರೆಸ್ ನ ಕರಾಳ ಇತಿಹಾಸ. ಇದೀಗ ಸೋಲಿನ ಭಯದಿಂದ ಕಂಗೆಟ್ಟಿರುವ ಕಾಂಗ್ರೆಸ್ ಮೋಸ ಜಾಲದ  ಮೂಲಕ ಸುಳ್ಳು ಭರವಸೆಗಳನ್ನು ನೀಡುತ್ತಿರುವ ಅರ್ಥಹೀನ, ಸತ್ವಹೀನ ಪ್ರಜಾ ವಿರೋಧಿ ಯಾತ್ರೆಯಿಂದ ಜನರನ್ನು ಮರುಳು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

Tap to resize

Latest Videos

undefined

ಮಾಜಿ ಸಿ.ಎಂ. ಸಿದ್ಧರಾಮಯ್ಯ ಆಡಳಿತಾವಧಿಯಲ್ಲಿ 25ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಹತ್ಯೆಯಾದ ಹಿಂದೂಗಳ ಬಗ್ಗೆ ಕಾಂಗ್ರೆಸ್ ಮುಖಂಡರು ಯಾಕೆ ಮಾತನಾಡುತ್ತಿಲ್ಲ? ಹಿಂದೂ ವಿರೋಧಿ ಕಾಂಗ್ರೆಸ್ ಗೆ ಕೊಲೆಗಡುಕರ ಮೇಲೆ ಮಾತ್ರ ವಾತ್ಸಲ್ಯವೇ?

ಸ್ವಾತಂತ್ರ್ಯಾನಂತರ ಸುದೀರ್ಘ ಅವಧಿಗೆ ದುರಾಡಳಿತವನ್ನು ನಡೆಸಿ ನೂರಾರು ಹಗರಣಗಳ ಮೂಲಕ ದೇಶವನ್ನು ಲೂಟಿಗೈದ ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ದೆವ್ವದ ಬಾಯಲ್ಲಿ ಭಗವದ್ಗೀತೆ ಎಂಬಂತಿದೆ. ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಹಾಗೂ ಸ್ವತಃ: ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿದ್ದು ಕಾಂಗ್ರೆಸ್ ನ ಸಾಚಾತನ ಏನು ಎಂಬುದು ಜಗಜ್ಜಾಹೀರಾಗಿದೆ. ಇದರೊಂದಿಗೆ ಕಾಂಗ್ರೆಸ್ ಸ್ವಯಂ ಸೃಷ್ಟಿಸಿದ ಪರ್ಸಂಟೇಜ್ ಪ್ರಹಸನವೂ ನಕಲಿ ಎಂಬುದು ಕೂಡಾ ಬಟ್ಟಾಬಯಲಾಗಿದೆ. 

ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿಯಂತಿದ್ದು, ಸದಾ ಸುಳ್ಳಿನ ಸರಮಾಲೆಯೊಂದಿಗೆ ಬೊಗಳೆ ಬಿಡುವ, ಕೇಸರಿ ಕಂಡರೆ ಬೆಚ್ಚಿ ಬೀಳುವ ಹಿಂದೂ ವಿರೋಧಿ ಸಿದ್ಧರಾಮಯ್ಯನವರಿಗೆ ಹಿಂದೂ ಕಾರ್ಯಕರ್ತರ ನರಮೇಧಗೈದ ಆರೋಪದಲ್ಲಿ ಬಂಧಿತರಾಗಿದ್ದ ಪಿಎಫ್ಐ, ಸಿಎಫ್ಐ, ಎಸ್ಡಿಪಿಐ ಮುಂತಾದ ಮತಾಂಧ ಜಿಹಾದಿ ಸಂಘಟನೆಗಳ ಕಾರ್ಯಕರ್ತರ ಪ್ರಕರಣಗಳನ್ನು ತರಾತುರಿಯಲ್ಲಿ ಹಿಂಪಡೆದು ಅವರನ್ನು ಜೈಲಿನಿಂದ ಬಿಡುಗಡೆಗೊಳಿಸುವಾಗ ಹಾಗೂ ಯಾರಿಗೂ ಬೇಡವಾಗಿದ್ದ ಮತಾಂಧ ಟಿಪ್ಪು ಜಯಂತಿ ಆಚರಿಸುವಾಗ ಕರಾವಳಿ ಹಿಂದುತ್ವದ ಭದ್ರ ಕೋಟೆ ಎಂಬುದು ನೆನಪಿಗೆ ಬರಲಿಲ್ಲವೇ? ಕರಾವಳಿ ಜಿಲ್ಲೆಗಳ ಜನತೆ ಪ್ರಬುದ್ಧರು, ಪ್ರಜ್ಞಾವಂತರು ಹಾಗೂ ಸ್ವಾಭಿಮಾನಿಗಳಾಗಿದ್ದು, ರಾಜ್ಯವನ್ನು ದಿವಾಳಿಯ ಅಂಚಿಗೆ ಕೊಂಡೊಯ್ಯುವ ಕಾಂಗ್ರೆಸ್ ನ ತಲೆ ಬುಡವಿಲ್ಲದ ಗೊಡ್ಡು ಭಾಗ್ಯಗಳಿಗೆ ಮರುಳಾಗಲಾರರು ಎಂದಿದ್ದಾರೆ.

ಮಾತೆತ್ತಿದರೆ ಅನ್ನಭಾಗ್ಯ ಎನ್ನುವ ಮಾಜಿ ಸಿ.ಎಂ. ಸಿದ್ಧರಾಮಯ್ಯನವರಿಗೆ ಅನ್ನಭಾಗ್ಯ ಎಂಬುದು ಕೇಂದ್ರ ಸರಕಾರದ ಯೋಜನೆ ಎಂದು ತಿಳಿದಿಲ್ಲವೆ? ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿ ಪ್ರತೀ ಕೆ.ಜಿ. ಅಕ್ಕಿಗೆ ರೂ.29 ರಂತೆ ಕೇಂದ್ರ ಸರಕಾರ ನೀಡುತ್ತಿದ್ದು, ಉಳಿದ ರೂ.3 ನ್ನು ಮಾತ್ರ ರಾಜ್ಯ ಸರಕಾರ ಬರಿಸುತ್ತಿದೆ. ಕೇಂದ್ರದ ಅನ್ನಭಾಗ್ಯ ಯೋಜನೆಗೆ ತನ್ನ ಫೊಟೋ ಅಂಟಿಸಿ ಬಿಟ್ಟಿ ಪ್ರಚಾರ ಪಡೆದಿದ್ದ ಸಿದ್ಧರಾಮಯ್ಯ ಜನರನ್ನು ದಾರಿ ತಪ್ಪಿಸಲು ಹೊರಟು ಸುಳ್ಳುರಾಮಯ್ಯ ಎನಿಸಿಕೊಂಡಿರುವುದು ವಾಸ್ತವ. ಜಾತ್ಯಾತೀತತೆಯ ಬಗ್ಗೆ ಫುಂಖಾನುಪುಂಖವಾಗಿ ಮಾತನಾಡುವ ಸಿದ್ದರಾಮಯ್ಯಗೆ ಒಂದೇ ವರ್ಗಕ್ಕೆ ಶಾಧಿ ಭಾಗ್ಯ ಎಂದು ಘೋಷಿಸುವಾಗ ಜಾತ್ಯಾತೀತ ಮನೋಭಾವ ಕಾಡಲಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಅವಿಭಜಿತ ದ.ಕ. ಜಿಲ್ಲೆ ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಆದರೂ ಜನತೆಯನ್ನು ಅವಮಾನಿಸುವ ಉದ್ದೇಶದಿಂದ 'ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡುತ್ತೀರೋ ಅಥವಾ ಭಯೋತ್ಪಾದಕರನ್ನಾಗಿ ಮಾಡುತ್ತೀರಾ' ಎಂದು ಪ್ರಶ್ನಿಸಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮಾತನ್ನು ಅವರು ಖಂಡಿಸಿದರು.

ಭಯೋತ್ಪಾದಕರ ಬಗ್ಗೆ ಕಾಂಗ್ರೆಸ್ ಮೃದು ಧೋರಣೆ ತಳೆದಿರುವುದು ಹಲವಾರು ಸನ್ನಿವೇಶಗಳಲ್ಲಿ ರುಜುವಾತಾಗಿದೆ. ಬುದ್ಧಿವಾದ ಹೇಳುವವರು ಸ್ವಲ್ಪ ತಮ್ಮ ಹಿನ್ನೆಲೆಯನ್ನೂ ಅರಿತು ವರ್ತಿಸುವುದು ಉತ್ತಮ. ಈ ಹಿನ್ನೆಲೆಯಲ್ಲಿ ಬಿ.ಕೆ. ಹರಿಪ್ರಸಾದ್ ರವರ ವಿಭಿನ್ನ ಮನಸ್ಥಿತಿಯ ಬಿಟ್ಟಿ ಉಪದೇಶ ಜಿಲ್ಲೆಯ ಜನತೆಗೆ ಅನಗತ್ಯ ಎಂದು ಕುಯಿಲಾಡಿ ತಿಳಿಸಿದ್ದಾರೆ.

ಕರಾವಳಿ ಜಿಲ್ಲೆಗಳು ಬಿಜೆಪಿಯ ಭದ್ರ ಕೋಟೆ. ಇಲ್ಲಿ ಕಾಂಗ್ರೆಸ್ ಅಥವಾ ಇನ್ನಿತರ ಯಾವುದೇ ಪಕ್ಷಗಳಿಗೆ ಜನತೆ ಮಣೆ ಹಾಕಲಾರರು. ಈಗಾಗಲೇ ಸ್ವಯಂಕೃತ ಅಪರಾಧದಿಂದ ದೇಶದಲ್ಲಿ ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷವೆನಿಸಲೂ ಅನರ್ಹ ಎಂಬ ದುಸ್ಥಿತಿ ನಿರ್ಮಾಣವಾಗಿದ್ದು, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿಯವರು ಕಾಂಗ್ರೆಸ್ಸಿನ ಗತ ವೈಭವವನ್ನಷ್ಟೇ ಮೆಲುಕು ಹಾಕಿ ಸಂಭ್ರಮಿಸುವುದು ಸೂಕ್ತ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿ ಎಂದರೆ ಅಭಿವೃದ್ಧಿ. ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿಯವರ 'ಸಬ್ ಕಾ ಸಬ್ ಕಾ ವಿಕಾಸ್' ಮೂಲ ಮಂತ್ರದ ಜನಪರ ಯೋಜನೆಗಳು ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಹಿತ ಬಿಜೆಪಿ ನೇತೃತ್ವದಲ್ಲಿ ವಿವಿಧ ರಾಜ್ಯಗಳ ಅಭಿವೃದ್ಧಿ ಪರ ಆಡಳಿತದಿಂದ ಜನತೆ ಪ್ರಭಾವಿತರಾಗಿ ದೇಶದೆಲ್ಲೆಡೆ ಬಿಜೆಪಿ ಪರ ಜನಾದೇಶ ನೀಡಿರುವುದನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅರಿತುಕೊಳ್ಳುವುದು ಉತ್ತಮ ಎಂದಿದ್ದಾರೆ.

ಕೋಲಾರ ಕ್ಷೇತ್ರದಲ್ಲಿ ನಟ ಪ್ರಥಮ್‌ ರೌಂಡ್ಸ್: ಹೇಗಿದೆ ಜಿದ್ದಾಜಿದ್ದಿನ ಅಖಾಡದ ಚಿತ್ರಣ?

ಈ ಹಿಂದೆ ಕಾಂಗ್ರೆಸ್ಸಿನ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರು ಯುವಕರಿಗೆ ರೂ.6,000 ಮಾಸಾಶನ ನೀಡುವ ವಾಗ್ದಾನ ನೀಡಿದ್ದು, ಅದು ಫಲಕಾರಿಯಾಗಲಿಲ್ಲ. ಇದೇ ಮಾದರಿಯಲ್ಲಿ, ಇತಿಹಾಸದಲ್ಲೇ ರಾಜ್ಯವನ್ನು ಅತಿ ಹೆಚ್ಚು ಸಾಲಕ್ಕೆ ದೂಡಿದ ಕುಖ್ಯಾತಿ ಹೊಂದಿರುವ, ವಿದ್ಯುತ್ ಬರದಿಂದ ಟಾರ್ಚ್ ಬೆಳಕಿನಲ್ಲೇ ಬಜೆಟ್ ಮಂಡಿಸಿದ್ದ ಮಾಜಿ ಸಿ.ಎಂ. ಸಿದ್ಧರಾಮಯ್ಯ ಹಾಗೂ ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ಸಿನ ಉಚಿತ ಭಾಗ್ಯಗಳ ಭರವಸೆ ಎಂದಿಗೂ ಈಡೇರದು. ಕಾಂಗ್ರೆಸ್ ಇನ್ನೊಮ್ಮೆ ಎಂದಿಗೂ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣ ಸ್ಪರ್ಧೆ: ಪ್ರೀತಂ ಗೌಡಗೆ ಟಕ್ಕರ್?

ನಾಯಕತ್ವದ ಕೊರತೆಯಿಂದ ಸೊರಗಿ, ಅವನತಿಯ ಅಂಚಿನಲ್ಲಿರುವ ಕಾಂಗ್ರೆಸ್ಸಿನ ದುರಾಡಳಿತ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಹಿಂದೂ ವಿರೋಧಿ ನೀತಿಯಿಂದ ರಾಜ್ಯದ ಜನತೆ ರೋಸಿಹೋಗಿದ್ದು ಎಂದಿಗೂ ಮರೆಯಲಾರದ ಪಾಠವನ್ನು ಕಲಿತಿರುವುದು ವಾಸ್ತವ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರದ ಅಭಿವೃದ್ಧಿ ಪರ ಆಡಳಿತ, ಜನಪರ ಯೋಜನೆಗಳು, ದಾಖಲೆಯ ಸಾಧನೆಗಳು ಜನಮಾನಸದಲ್ಲಿ ಹೊಸ ಭರವಸೆ ಮೂಡಿಸಿವೆ. ಮಗದೊಮ್ಮೆ ಉಡುಪಿ ಜಿಲ್ಲೆಯ ಎಲ್ಲ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಅತಿ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸುವ ಜೊತೆಗೆ ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮಗದೊಮ್ಮೆ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!