ಬೇಂದ್ರೆ ಹುಟ್ಟುಹಬ್ಬ ಹಿನ್ನೆಲೆ, ಇಬ್ಬರು ದಿಗ್ಗಜರಿಗೆ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

By Suvarna News  |  First Published Jan 24, 2023, 5:22 PM IST

ಧಾರವಾಡದ ಡಾ. ದ. ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಜ.31 ರಂದು ವರಕವಿ ಡಾ.ದ.ರಾ.ಬೇಂದ್ರೆ ಅವರ 127 ನೇ ಹುಟ್ಟು ಹಬ್ಬದ ನಿಮಿತ್ಯ ಪ್ರತಿವರ್ಷದಂತೆ ಕನ್ನಡ ಸಾಹಿತ್ಯ ಕ್ಷೇತ್ರದ ಇಬ್ಬರು ದಿಗ್ಗಜರಿಗೆ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ


ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್

ಧಾರವಾಡ (ಜ.24): ಧಾರವಾಡದ ಡಾ. ದ. ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಜ.31 ರಂದು ವರಕವಿ ಡಾ.ದ.ರಾ.ಬೇಂದ್ರೆ ಅವರ 127 ನೇ ಹುಟ್ಟು ಹಬ್ಬದ ನಿಮಿತ್ಯ ಪ್ರತಿವರ್ಷದಂತೆ ಕನ್ನಡ ಸಾಹಿತ್ಯ ಕ್ಷೇತ್ರದ ಇಬ್ಬರು ದಿಗ್ಗಜರಿಗೆ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ ಎಂದು ಡಾ.ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ತಿಳಿಸಿದರು. ಅವರು ಇಂದು ಬೆಳಿಗ್ಗೆ ಬೇಂದ್ರೆ ಭವನದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು 2023ನೇ ಸಾಲಿನ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಯನ್ನು ನಿವೃತ್ತ ನ್ಯಾಯಾಧೀಶರಾದ ಬೆಳಗಾವಿಯ ಕವಿ ಡಾ. ಜೀನದತ್ತ ದೇಸಾಯಿ ಹಾಗೂ ಕನ್ನಡದ ಹಿರಿಯ ವಿಮರ್ಶಕ ಶಿವಮೊಗ್ಗದ ಡಾ. ರಾಜೇಂದ್ರ ಚೆನ್ನಿ ಅವರಿಗೆ ನೀಡಲಾಗುತ್ತಿದೆ. ರೂ.1 ಲಕ್ಷ ಮೊತ್ತದ ಪ್ರಶಸ್ತಿಯನ್ನು ಇಬ್ಬರು ಮಹನೀಯರಿಗೆ ಹಂಚಿಕೆ ಮಾಡಲಾಗಿದೆ. ವರಕವಿ ಡಾ: ದ.ರಾ. ಬೇಂದ್ರೆ ಅವರ ಜನ್ಮದಿನವಾದ ಜ.31 ರಂದು ಸಂಜೆ 4-30 ಗಂಟೆಗೆ ಬೇಂದ್ರೆ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ತಲಾ ರೂ.50 ಸಾವಿರ ನಗದು, ಪ್ರಶಸ್ತಿ ಫಲಕ, ಫಲಪುಷ್ಪದೊಂದಿಗೆ ನೀಡಿ ಗೌರವಿಸಲಾಗುವುದೆಂದು ಟ್ರಸ್ಟ್ ಅಧ್ಯಕ್ಷ ಡಾ: ಡಿ.ಎಂ. ಹಿರೇಮಠ ಹೇಳಿದರು. 

Latest Videos

undefined

ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ: ಡಿ.ಎಂ. ಹಿರೇಮಠ ವಹಿಸಲಿದ್ದು, ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾದ ಹೆಚ್. ವಿಶ್ವನಾಥ ಅವರು ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಶಾಸಕ ಅರವಿಂದ ಬೆಲ್ಲದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿನಿರ್ದೇಶಕ ಬಸವರಾಜ ಹೂಗಾರ ಮುಖ್ಯ ಅತಿಥಿಗಳಾಗಿದ್ದಾರೆ. ಪ್ರಶಸ್ತಿ ಪುರಸ್ಕೃತರಾದ ನಿವೃತ್ತ ನ್ಯಾಯಾಧೀಶರಾದ ಬೆಳಗಾವಿಯ ಕವಿ ಡಾ. ಜೀನದತ್ತ ದೇಸಾಯಿ ಅವರ ಕುರಿತು ಧಾರವಾಡದ ಹಿರಿಯ ಸಾಹಿತಿ ಡಾ.ಶಾಂತಾ ಇಮ್ರಾಪೂರ ಹಾಗೂ ಡಾ: ರಾಜೇಂದ್ರ ಚೆನ್ನಿ ಅವರ ಕುರಿತು ಕುಮಟಾದ ಸಾಹಿತಿ ಡಾ: ಎಂ.ಜಿ. ಹೆಗಡೆ ಅವರು ಅಭಿನಂದನಾಪರ ನುಡಿಗಳನ್ನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಶಿರಸಿಯ ಪ್ರೊ:ಎಚ್.ಆರ್. ಅಮರನಾಥ ಅವರು ಸಂಪಾದಿಸಿರುವ ಪ್ರೊ. ಬೇಂದ್ರ ಮಾಸ್ತರರ ಅಮರವಾಣಿ ಕೈಪಿಡಿಯು ಬಿಡುಗಡೆಗೊಳ್ಳಲಿದೆ ಎಂದು ಡಾ.ಡಿ.ಎಂ. ಹಿರೇಮಠ ತಿಳಿಸಿದರು.

ಅಳೆಯುವವರ ಕಥೆ ಬೆಳಕಿಗೆ ತರುತ್ತಿರುವೆ : ಗಜಾನನ ಶರ್ಮಾ

ಟ್ರಸ್ಟ್ ಸದಸ್ಯರಾದ ಹಾಗೂ ಕವಿವಿ ಡಾ.ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷರಾದ ಡಾ.ಎನ್.ವೈ. ಮಟ್ಟಿಹಾಳ ಅವರು ಮಾತನಾಡಿ, ಪ್ರತಿ ವರ್ಷದಂತೆ ವರಕವಿ ಬೇಂದ್ರೆ ಅವರ ಜನ್ಮದಿನದ ನಿಮಿತ್ಯ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪ್ರಸಕ್ತ ಸಾಲಿನ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಆಯ್ಕೆ ಸಮಿತಿಯನ್ನು ಹಿರಿಯ ಸಾಹಿತಿಗಳಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಡಾ. ಶಾಂತಿನಾಥ ದಿಬ್ಬದ ಮತ್ತು ಕೃಷ್ಣಮೂರ್ತಿ ಬಿಳಿಗೆರೆ ಅವರ ಸದಸ್ಯತ್ವದ ಸಮಿತಿ ರಚಿಸಲಾಗಿತ್ತು. ಆಯ್ಕೆ ಸಮಿತಿಯು ಅಂತಿಮವಾಗಿ ಇಬ್ಬರು ಹಿರಿಯ ಸಾಹಿತಿಗಳನ್ನು ಆಯ್ಕೆ ಮಾಡಿ ಟ್ರಸ್ಟ್‌ ಗೆ  ಶಿಫಾರಸ್ಸು ಮಾಡಿತ್ತು. ಧಾರವಾಡ ಜಿಲ್ಲೆಯವರಾದ ಡಾ. ಜೀನದತ್ತ ದೇಸಾಯಿ ಅವರು ನ್ಯಾಯಾಂಗ ಸೇವೆಯಲ್ಲಿದ್ದರೂ ಕನ್ನಡದ ಬಗ್ಗೆ ಅತೀವ ಪ್ರೀತಿ, ಪ್ರೇಮದಿಂದ ಅನೇಕ ಕವಿತೆಗಳನ್ನು ಬರೆದಿದ್ದಾರೆ. ಮತ್ತು ಚುಟುಕುಗಳನ್ನು ರಚಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಪಮಾನ ಆರೋಪ, ರಾಜ್ಯಾಧ್ಯಕ್ಷ ಜೋಷಿ ರಾಜೀನಾಮೆಗೆ ಒತ್ತಾಯ

ಈಗಾಗಲೇ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ  ಅಧ್ಯಕ್ಷರಾಗಿ ಗೌರವ ಸ್ವೀಕರಿಸಿರುವ ಡಾ.ಜೀನದತ್ತ ದೇಸಾಯಿ ಅವರಿಗೆ ಪ್ರಸಕ್ತ ಸಾಲಿನ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಹೇಳಿದರು. ಇನ್ನೊರ್ವ ಹಿರಿಯ ಸಾಹಿತಿ, ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಅವರು ಕನ್ನಡ ಸಾಹಿತ್ಯ ವಿಮರ್ಶಕರಲ್ಲಿ ಮುಂಚೂಣಿಯಲ್ಲಿರುವ ವಿಮರ್ಶಕರಾಗಿದ್ದಾರೆ. ಅವರ ಸಾಹಿತ್ಯ ಕೃಷಿಯನ್ನು ಪರಿಗಣಿಸಿ ಡಾ.ದ.ರಾ. ಬೇಂದ್ರೆ ಟ್ರಸ್ಟ್‍ದಿಂದ ಪ್ರಸಕ್ತ ಸಾಲಿನ ಪ್ರಶಸ್ತಿಯನ್ನು ಕೊಡಮಾಡಲಾಗುತ್ತಿದೆ ಎಂದು ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಡಾ.ದ.ರಾ. ಬೇಂದ್ರೆ ಟ್ರಸ್ಟ್ ಸದಸ್ಯ ಕಾರ್ಯದರ್ಶಿಯಾಗಿರುವ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ಬಾಳಿಕಾಯಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

click me!