
ಧಾರವಾಡ(ಸೆ.06): ಕೆಲವು ಮಠಾಧೀಶರ ಬಗ್ಗೆ ಮಹಿಳೆಯರಿಬ್ಬರು ಮಾತನಾಡಿರುವ ಸಂಭಾಷಣೆ ಆಡಿಯೋದಿಂದ ಬೇಸತ್ತು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನೇಗಿನಹಾಳದ ಮಡಿವಾಳೇಶ್ವರ ಮಠದ ಬಸವಸಿದ್ಧಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಯಾರು ಹೊಣೆ? ಎಂದು ತಾಲೂಕಿನ ಮನಗುಂಡಿ ಗುರುಬಸವ ಮಹಾಮನೆಯ ಬಸವಾನಂದ ಸ್ವಾಮೀಜಿ ಪ್ರಶ್ನಿಸಿದ್ದಾರೆ.
ಮುರುಘಾಶರಣರ ಲೈಂಗಿಕ ದೌರ್ಜನ್ಯ ಪ್ರಕರಣ ವಿಚಾರವಾಗಿ ಮನಗುಂಡಿಯ ಸತ್ಯಕ್ಕ ಹಾಗೂ ಗಂಗಾವತಿಯ ರುದ್ರಮ್ಮ ಮಾತನಾಡಿದ ಸಂಭಾಷಣೆ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಆಡಿಯೋದಲ್ಲಿ ನೇಗಿನಾಳ ಸ್ವಾಮೀಜಿ ಸೇರಿದಂತೆ ಏಳು ಜನ ಸ್ವಾಮೀಜಿಗಳ ಹೆಸರಿತ್ತು. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನೇಗಿನಹಾಳ ಸ್ವಾಮೀಜಿ ಕುರಿತು ಮಾಧ್ಯಮಗಳಿಗೆ ಮಾತನಾಡಿದ ಬಸವಾನಂದ ಸ್ವಾಮೀಜಿ, ವೈರಲ್ ಆಗಿರುವ ಆಡಿಯೋ ಕೇಳಿದ್ದೇನೆ. ಬೇಸರ ತರಿಸಿದೆ. ಸ್ವಾಮೀಜಿ ಬಗ್ಗೆ ಮಾತನಾಡಿರುವ ಸತ್ಯಕ್ಕಳು 6ನೇ ತರಗತಿ ಇದ್ದಾಗಿಂದಲೂ ನೋಡಿದ್ದೇನೆ. ಆದರೆ, ಕಳೆದ ಹತ್ತು ವರ್ಷಗಳಿಂದ ನಮ್ಮ ಸಂಪರ್ಕದಲ್ಲಿ ಇಲ್ಲ ಎಂದರು.
ಮಹಿಳೆಯರ ಸಂಭಾಷಣೆಯಲ್ಲಿ ಕೇಳಿಬಂದ ಆರೋಪ: ಬಸವಸಿದ್ಧಲಿಂಗ ಸ್ವಾಮೀಜಿ ಆತ್ಮಹತ್ಯೆ
2018ರಲ್ಲಿ ನನ್ನ ಹತ್ತಿರ ಬಂದಿದ್ದಳು. ಆಕೆ ತಮಿಳುನಾಡಿನ ವ್ಯಕ್ತಿಯನ್ನು ಮದುವೆಯಾಗಿದ್ದು ಬೀದರಗೆ ಕಳುಹಿಸಿದ್ದೆನು. ತಾನಿದ್ದ ಮಠದಲ್ಲಿ ಭದ್ರತೆ ಇಲ್ಲ. ನನಗೆ ನಿದ್ದೆ ಬರುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಬೇಕು ಎನಿಸುತ್ತದೆ ಎಂದು ಹೇಳಿದ್ದಳು. ಆಕೆ ಮಾನಸಿಕ ಅಸ್ವಸ್ಥಳೋ ಏನೋ ಗೊತ್ತಿಲ್ಲ. ಈಕೆಯೊಂದಿಗೆ ರುದ್ರಮ್ಮ ಎಂಬಾಕೆಯೂ ಸಂಭಾಷಣೆಯಲ್ಲಿ ಮಾತನಾಡಿದ್ದಾಳೆ. ಆ ರುದ್ರಮ್ಮ ಕೂಡಾ ಬೇಜವಾಬ್ದಾರಿ ಹೆಣ್ಣು ಮಗಳು. ಇಷ್ಟುಜನರ ಹೆಸರು ಹೇಳಿದಾಗ ಸತ್ಯವೇ ಎಂದು ನೋಡಬೇಕು. ಆದರೂ ಇಬ್ಬರೂ ಒಂದು ಜೀವ ಬಲಿ ಪಡೆದರು. ಇದಕ್ಕೆ ಯಾರು ಜವಾಬ್ದಾರಿ? ಇದಕ್ಕೆ ಸಮಾಜದಲ್ಲಿ ಶಿಕ್ಷೆ ಇಲ್ಲವೇ? ಎಂದು ಬಸವಾನಂದ ಸ್ವಾಮೀಜಿ ಪ್ರಶ್ನಿಸಿದರು.
ಸ್ವಾಮೀಜಿ ಒಬ್ಬ ಜವಾಬ್ದಾರಿ ಸ್ಥಾನದಲ್ಲಿ ಇದ್ದವರು. ಯುವಕರಲ್ಲಿದ್ದ ದುಶ್ಚಟ ಬಿಡಿಸಿದ್ದರು ಸ್ವಾಮೀಜಿ. ಆಡಿಯೋದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡರು. ಸರ್ಕಾರ ಇದನ್ನು ಗಮನಿಸಬೇಕು. ನೆಟ್ಟಿಗರು ಜವಾಬ್ದಾರಿಯಿಂದ ವರ್ತನೆ ಮಾಡಬೇಕು. ಯಾರೋ ಮಾಡಿದ ಆಪಾದನೆಗೆ ವೈರಲ್ ಮಾಡುವುದು ಸರಿಯಲ್ಲ. ನೇಗಿನಾಳ ಸ್ವಾಮೀಜಿ ಕೆಲಸ ಮಾಡಿದ್ದನ್ನು ನೋಡಿರುತ್ತೀರಿ. ಇದು ಸಮಾಜದ ಬೇಜವಾಬ್ದಾರಿತನ ಆಗುತ್ತದೆ. ಆದ್ದರಿಂದ ಅವರಿಬ್ಬರು ಮಹಿಳೆಯರಿಗೆ ಶಿಕ್ಷೆಯಾಗಬೇಕು. ಅವರು ಹೇಳಿದ್ದೇ ಸರಿ ಇದ್ದರೆ ಸ್ವಾಮೀಜಿಗಳ ಮೇಲೆ ಕ್ರಮವಾಗಲಿ. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ವಿಚಾರಣೆ ನಡೆಯಬೇಕು. ಸತ್ಯ ಹೊರ ಬರಬೇಕು ಎಂದು ಪ್ರತಿಪಾಸಿದರು.
ಚಿತ್ರದುರ್ಗ ಸ್ವಾಮೀಜಿ ಪ್ರಕರಣ ಕಾನೂನು ದೃಷ್ಟಿಯಲ್ಲಿದೆ. ಅವರ ಮೇಲೆ ಆರೋಪ ಮಾಡಿದವರು ಅಪ್ರಾಪ್ತರು. ಮೈಸೂರಿನಲ್ಲಿ ದೂರು ದಾಖಲಾಗಿದ್ದು ಅದು ಕಾನೂನು ಪ್ರಕಾರ ಹೋಗಿದೆ ಎಂದ ಶ್ರೀಗಳು, ಆಡಿಯೋ ವೈರಲ್ ಮಾಡಿದ್ದು ಸರಿ ಅಲ್ಲ. ಸ್ವಾಮೀಜಿ ಭಯಪಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರೋಪ ಮಾಡಿದರೂ ಆತ್ಮಹತ್ಯೆ ಪರಿಹಾರವಲ್ಲ. ಬದಲು ಆರೋಪ ಎದುರಿಸಬೇಕಿತ್ತು ಎಂದರು.