ಬಾಲಕಿಯ ‘ಗಾಂಧಾರಿ ಕಲೆ’ಗೆ ಬೆರಗಾದ ರೆಡ್ಡಿ; ಕಣ್ಣಿಗೆ ಬಟ್ಟೆ ಕಟ್ಟಿ ಪರೀಕ್ಷೆ ಬರೆಯುವ ಕರ್ನಾಟಕದ ಈ ಅಚ್ಚರಿಯ ಹುಡುಗಿ ಯಾರು?

Published : Oct 01, 2026, 08:05 AM IST
Gandhari Art Girl Himabindu Ballari

ಸಾರಾಂಶ

ಬಳ್ಳಾರಿಯ ಕೊರ್ಲಗುಂದಿ ಗ್ರಾಮದ 9ನೇ ತರಗತಿ ವಿದ್ಯಾರ್ಥಿನಿ ಹಿಮಬಿಂದು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಓದುವ ಮತ್ತು ಪರೀಕ್ಷೆ ಬರೆಯುವ 'ಗಾಂಧಾರಿ ಕಲೆ' ಕರಗತ ಮಾಡಿಕೊಂಡಿದ್ದಾಳೆ. ಈಕೆಯ ಅಸಾಧಾರಣ ಪ್ರತಿಭೆಯನ್ನು ಕಂಡು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬೆರಗಾಗಿದ್ದಾರೆ.

ಬಳ್ಳಾರಿ: ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡರೂ ಪುಸ್ತಕ ಓದಬಲ್ಲಳು, ಬಣ್ಣಗಳನ್ನು ಲೀಲಾಜಾಲವಾಗಿ ಗುರುತಿಸಬಲ್ಲಳು! ಅಷ್ಟೇ ಏಕೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಪರೀಕ್ಷೆಯನ್ನೂ ಬರೆದು ಮುಗಿಸಬಲ್ಲಳು! ಹೌದು.. ಪುರಾತನ ‘ಗಾಂಧಾರಿ ಕಲೆ’ಯನ್ನು ಮೈಗೂಡಿಸಿಕೊಂಡಿರುವ ಬಳ್ಳಾರಿಯ ಬಾಲಕಿಯ ಅಸಾಧಾರಣ ಪ್ರತಿಭೆಗೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬೆರಗಾಗಿದ್ದಾರೆ.

ಅಂದ್ಹಾಗೆ ಆ ಬಾಲಕಿಯ ಹೆಸರು ಹಿಮಬಿಂದು. ಈ ಹಿಮಬಿಂದು ತನ್ನ ಅದ್ಭುತ ಪ್ರತಿಭೆ ಮೂಲಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ಬರೆದಿದ್ದಾರೆ.

ಯಾರು ಈ ಬಾಲಕಿ?

ಹಿಮಬಿಂದು ಬಳ್ಳಾರಿ ತಾಲೂಕಿನ ಕೊರ್ಲಗುಂದಿ ಗ್ರಾಮದ ಕೆ.ಟಿ.ಎಂ (KTM) ಇಂಟರ್ನ್ಯಾಷನಲ್ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ. ಈಕೆ ರಾಮಾಂಜೀನಿ ರೆಡ್ಡಿ ಹಾಗೂ ಕವಿತಾ ದಂಪತಿಯ ಪುತ್ರಿ. ಪುರಾಣಗಳಲ್ಲಿ ಕೇಳಿಬರುವ ‘ಗಾಂಧಾರಿ ವಿದ್ಯೆ’ಯನ್ನು ಕರಗತ ಮಾಡಿಕೊಂಡಿರುವ ಈಕೆ..ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡಿದ್ದರೂ ಸ್ಪರ್ಶ, ವಾಸನೆ, ಶಬ್ದದ ಸಹಾಯದಿಂದ ಎದುರಿಗಿರುವ ವಸ್ತುಗಳು, ಪಠ್ಯಗಳು ಹಾಗೂ ವಿವಿಧ ಬಣ್ಣಗಳನ್ನು ನಿಖರವಾಗಿ ಗುರುತಿಸುತ್ತಾಳೆ. ಇತ್ತೀಚೆಗೆ ಶಾಲೆಯಲ್ಲಿ ನಡೆದ 9ನೇ ತರಗತಿಯ FA4 ಪರೀಕ್ಷೆಯನ್ನು ಈಕೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಬರೆದು ಎಲ್ಲರನ್ನೂ ದಂಗಾಗಿಸಿದ್ದಳು.

ಹಿಮಬಿಂದು ಕೇವಲ ಪರೀಕ್ಷೆ ಬರೆಯುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಈಕೆಯ ಏಕಾಗ್ರತೆ ಮತ್ತು ಗ್ರಹಣಾಶಕ್ತಿ ಅಸಾಧಾರಣ ಮಟ್ಟದ್ದು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಕೇವಲ 57 ಸೆಕೆಂಡ್‌ಗಳಲ್ಲಿ 17 ಸೂಜಿಗಳಿಗೆ ದಾರ ಪೋಣಿಸುವ ಮೂಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ - 2026ರಲ್ಲಿ ತನ್ನ ಹೆಸರು ದಾಖಲಿಸಿದ್ದಾಳೆ. ಈ ವಿಶಿಷ್ಟ ಸಾಧನೆಗೆ ಈಗಾಗಲೇ ಹಲವು ಪ್ರಶಸ್ತಿ-ಪುರಸ್ಕಾರಗಳು ಸಂದಿವೆ.

ಬಾಲಕಿಯ ಈ ಅಪರೂಪದ ವಿದ್ಯೆಯ ಬಗ್ಗೆ ತಿಳಿದ ಜನಾರ್ದನ ರೆಡ್ಡಿ.. ಹಿಮಬಿಂದು ಹಾಗೂ ಆಕೆಯ ಪೋಷಕರನ್ನು ಬಳ್ಳಾರಿಯ ನಿವಾಸಕ್ಕೆ ಆಹ್ವಾನಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬಾಲಕಿಯ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿ, ಹಲವು ಮಹನೀಯರ ಫೋಟೋಗಳನ್ನು ಎದುರಿಗಿಟ್ಟು ಗುರುತಿಸಲು ಹೇಳಲಾಯಿತು. ಹಿಮಬಿಂದು ಆ ಫೋಟೋಗಳನ್ನು ಕೇವಲ ಸ್ಪರ್ಶಿಸುವ ಮೂಲಕ ನಿಖರವಾಗಿ ಯಾರ ಫೋಟೋ ಎಂದು ಹೇಳಿದ್ದನ್ನು ಕಂಡು ರೆಡ್ಡಿ ಹಾಗೂ ಅವರ ಕುಟುಂಬಸ್ಥರು ಆಶ್ಚರ್ಯಚಕಿತರಾದರು.

ಬಾಲಕಿ ಬಗ್ಗೆ ವಿಶೇಷ ಪೋಸ್ಟ್

ನಮ್ಮ ಬಳ್ಳಾರಿಯ ಕೊರ್ಲಗುಂದಿ ಗ್ರಾಮದ ಕೆ ಟಿ ಎಂ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿ ಹಿಮಬಿಂದು ತನ್ನ ವಿಶಿಷ್ಟ ಪ್ರತಿಭೆಯಿಂದ ಎಲ್ಲರ ಗಮನ ಸೆಳೆದಿದ್ದಾಳೆ. ಈಕೆ ಪುರಾತನ ಗಾಂಧಾರಿ ಕಲೆಯನ್ನು ಕರಗತ ಮಾಡಿಕೊಂಡಿದ್ದು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪರೀಕ್ಷೆ ಬರೆಯುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾಳೆ.

ಹಿಮಬಿಂದು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡಿದ್ದರೂ ಸ್ಪರ್ಶ, ವಾಸನೆ ಮತ್ತು ಶಬ್ದದ ಸಹಾಯದಿಂದ ವಸ್ತುಗಳನ್ನು, ಪಠ್ಯಗಳನ್ನು ಹಾಗೂ ಬಣ್ಣಗಳನ್ನು ಲೀಲಾಜಾಲವಾಗಿ ಗುರುತಿಸುತ್ತಾಳೆ.

ತನ್ನ ಶಾಲೆಯ 9ನೇ ತರಗತಿಯ FA4 ಪರೀಕ್ಷೆಯನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಬರೆದಿದ್ದಾಳೆ. ಈಕೆಯ ವಿಶೇಷ ಪ್ರತಿಭೆಯನ್ನು ಪ್ರೋತ್ಸಾಹಿಸಲು ನನ್ನ ಬಳ್ಳಾರಿಯ ನಿವಾಸಕ್ಕೆ ಆಹ್ವಾನಿಸಿ, ಅನೇಕ ಮಹನೀಯರ ಫೋಟೋಗಳನ್ನು ತೋರಿಸಿದ ನಮಗೆ ಅವಳ ಪ್ರತಿಭೆಯನ್ನು ಕಂಡು ಅದ್ಭುತವೆನಿಸಿತು.

ರಾಮಾಂಜೀನಿ ರೆಡ್ಡಿ ಹಾಗೂ ಕವಿತಾ ಅವರ ಪುತ್ರಿಯಾದ ಹಿಮಬಿಂದು 57 ಸೆಕೆಂಡ್ ಗಳಲ್ಲಿ 17 ಸೂಜಿಗಳನ್ನು ಪೋಣಿಸುವ ಮೂಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ ಹಾಗೂ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ - 2026 ನಲ್ಲಿ ದಾಖಲೆ ನಿರ್ಮಿಸಿರುವುದು ಅಖಂಡ ಬಳ್ಳಾರಿ ಹಾಗೂ ನಾಡಿಗೆ ಹೆಮ್ಮೆಯ ಸಂಗತಿ.

ಹಾಗೂ ಹಿಮ ಬಿಂದುವಿಗೆ ಈ ವಿಶೇಷ ಪ್ರತಿಭೆಗಾಗಿ ಅನೇಕ ಪ್ರಶಸ್ತಿಗಳು ಲಭಿಸಿರುವುದನ್ನು ಶ್ಲಾಧಿಸುತ್ತಾ ಮುಂದಿನ ಆಕೆಯ ಭವಿಷ್ಯ ಮತ್ತಷ್ಟು ಯಶಸ್ಸಿನಿಂದ ಕೂಡಿರಲಿ ಎಂದು ಶುಭ ಹಾರೈಸುತ್ತೇವೆ.

ಜನಾರ್ದನ ರೆಡ್ಡಿ, ಶಾಸಕ

PREV
Read more Articles on
click me!

Recommended Stories

ಯಲಹಂಕ ಬಳಿಯಲ್ಲಿರೋ 3 ಎಕರೆ 12 ಗುಂಟೆ ಭೂಮಿ ಮಾಲೀಕತ್ವ ಯಾರದ್ದು? ಹೈಕೋರ್ಟ್ ತೀರ್ಪು
ಇತಿಹಾಸದಲ್ಲೇ ಮೊದಲು, ಈ ಕ್ಷೇತ್ರಕ್ಕೆ ಹೊಸ ನೀತಿ, ₹4,000 ಕೋಟಿ ಹಣಕಾಸು ಬೆಂಬಲ! 5 ಲಕ್ಷ ಉದ್ಯೋಗ ಸೃಷ್ಟಿಗೆ ಮೆಗಾ ಪ್ಲ್ಯಾನ್ ಏನು?