
ಬೆಂಗಳೂರು: ನಗರದ ಯಲಹಂಕ ವಾಯುಪಡೆ ನಿಲ್ದಾಣಕ್ಕೆ ಸೇರಿರುವ ಟ್ಯಾಕ್ಸಿ ಟ್ರ್ಯಾಕ್ ನಿರ್ಮಾಣಕ್ಕಾಗಿ 1943ರಲ್ಲಿ ಸ್ವಾಧೀನಪಡಿಸಿಕೊಳ್ಳಲಾದ ಭೂಮಿಯ ಮೇಲಿನ ಸಂಪೂರ್ಣ ಹಕ್ಕು ರಕ್ಷಣಾ ಇಲಾಖೆಗೆ ಸೇರಿದ್ದಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಯಲಹಂಕ ಸಮೀಪದ ಸೊನ್ನಪ್ಪನಹಳ್ಳಿ ಗ್ರಾಮದಲ್ಲಿರುವ 3 ಎಕರೆ 12 ಗುಂಟೆ ಮಾಲೀಕತ್ವದ ಕುರಿತು ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿರುವ ನ್ಯಾ.ಡಿ.ಕೆ.ಸಿಂಗ್ ಮತ್ತು ಎಚ್.ಶಾಂತಿ ಭೂಷಣ್ ಅವರ ಪೀಠ ಈ ಆದೇಶ ಮಾಡಿದೆ.
ವಾಯುಪಡೆಯ ರನ್ ವೇ ಭಾಗವಾಗಿರುವ ಜಮೀನನ್ನು ಕಬಳಿಸಲು ಉನ್ನತ ಮಟ್ಟದ ಸಂಚು ನಡೆಸಲಾಗಿದೆ ಎಂದು ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, 1943ರಲ್ಲೇ ಈ ಜಮೀನನ್ನು ಯಲಹಂಕ ಏರ್‌ಫೀಲ್ಡ್‌ನ ರಕ್ಷಣಾ ಉದ್ದೇಶಗಳಿಗೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಮೂಲ ಮಾಲೀಕರಾದ ಥೋಂತಾರ್ಯರಿಗೆ ಪರಿಹಾರ ಪಾವತಿಸಲಾಗಿತ್ತು.
1944ರ ಸರ್ವೇ ವರದಿ, ಗ್ರಾಮ ನಕ್ಷೆ, ಗಡಿ ವಿವರಗಳು, ಪರಿಹಾರ ದಾಖಲೆಗಳು ಹಾಗೂ ಮಿಲಿಟರಿ ಲ್ಯಾಂಡ್ ರಿಜಿಸ್ಟರ್‌ಗಳನ್ನು ಪರಿಶೀಲಿಸಲಾಗಿದೆ. ಆದ್ದರಿಂದ ವಿವಾದಿತ ಜಮೀನು ಭಾರತೀಯ ವಾಯುಪಡೆಯ ಟ್ಯಾಕ್ಸಿ ಟ್ರ್ಯಾಕ್‌ಗೆ ಬಳಸಲಾಗುತ್ತಿದೆ. ಹಾಗಾಗಿ, ಈ ವಿವಾದಿತ ಭೂಮಿಯನ್ನು ಭಾರತೀಯ ವಾಯುಪಡೆಯ ಆಸ್ತಿಯಾಗಿ ಮರುಸ್ಥಾಪಿಸಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಏನಿದು ಪ್ರಕರಣ?
ಏರ್‌ಫೋರ್ಸ್ ಸ್ಟೇಷನ್‌ನ ವಿಮಾನಗಳ ಟ್ಯಾಕ್ಸಿ ಟ್ರ್ಯಾಕ್‌ಗಾಗಿ 1943ರಲ್ಲಿ ಕೇಂದ್ರ ಸರ್ಕಾರ ಭೂ ಸ್ವಾಧೀನಪಡಿಸಿಕೊಂಡಿತ್ತು. ಮೂಲ ಮಾಲೀಕರಿಗೆ ಪರಿಹಾರ ಧನವನ್ನೂ ಪಾವತಿಸಲಾಗಿತ್ತು. 1943ರ ಸ್ವಾಧೀನ ಅಧಿಸೂಚನೆ, ಸರ್ವೇಯರ್ ವರದಿ, ಗ್ರಾಮ ನಕ್ಷೆ, ಪರಿಹಾರ ದಾಖಲೆಗಳು ಹಾಗೂ ಮಿಲಿಟರಿ ಲ್ಯಾಂಡ್ ರಿಜಿಸ್ಟರ್‌ಗಳಲ್ಲಿ ಈ ಭೂಮಿ ರಕ್ಷ ಣಾ ಇಲಾಖೆಗೆ ಸೇರಿದೆ ಎಂಬುದು ದಾಖಲಾಗಿತ್ತು. ಆದರೆ ಅಧಿಸೂಚನೆಯಲ್ಲಿ ಸರ್ವೇ ನಂಬರ್ 30 ಎಂದು ಮುದ್ರಣದಲ್ಲಿ ತಪ್ಪಾಗಿತ್ತು.
ಈ ಮಧ್ಯೆ ಖಾಸಗಿ ವ್ಯಕ್ತಿಯೊಬ್ಬರು 1995ರಲ್ಲಿ ಮೂಲ ಮಾಲೀಕರ ಕಾನೂನುಬದ್ಧ ವಾರಸುದಾರರೊಂದಿಗೆ ಮಾರಾಟ ಒಪ್ಪಂದ ಮಾಡಿಕೊಂಡಿದ್ದಾಗಿ ಹೇಳಿಕೊಂಡಿದ್ದರು. ನಂತರ ಮೊಕದ್ದಮೆ ಹೂಡಿ ಅನುಕೂಲಕರ ತೀರ್ಪು ಪಡೆದಿದ್ದರು. ಅದರ ಆಧಾರದ ಮೇಲೆ ಕಂದಾಯ ದಾಖಲೆಗಳಲ್ಲಿ ತಮ್ಮ ಹೆಸರನ್ನು ಮಾಲೀಕರಾಗಿ ದಾಖಲಿಸಿಕೊಂಡಿದ್ದರು. ಅದನ್ನು ಕೇಂದ್ರ ಸರ್ಕಾರ ಪ್ರಶ್ನಿಸಿತ್ತು.
ಇದನ್ನೂ ಓದಿ: Bengaluru: 100 ಕೋಟಿ ರೂ. ಮೌಲ್ಯದ 3 ಎಕರೆ 13 ಗುಂಟೆ ಸರ್ಕಾರಿ ಜಮೀನು ವಶಕ್ಕೆ ಪಡೆದ ಜಿಬಿಎ