Bengaluru Accidents: ವೈಟ್‌ಟಾಪಿಂಗ್‌ ರಸ್ತೆ ಇದೀಗ ಆ್ಯಕ್ಸಿಡೆಂಟ್‌ ಹಾಟ್‌ಸ್ಪಾಟ್‌

By Kannadaprabha News  |  First Published Jan 22, 2022, 5:15 AM IST

*   ಕಾಂಕ್ರೀಟ್‌ ರಸ್ತೆಗಳಲ್ಲೇ ಮಾರಣಾಂತಿಕ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಳ
*   ಸಿಮೆಂಟ್‌ ರಸ್ತೆಗಳಲ್ಲಿ ಸುರಕ್ಷತಾ ಕ್ರಮಗಳು ಕಡಿಮೆಯಿಂದ ಅಪಘಾತ
*  ಸುರಕ್ಷತಾ ಕ್ರಮಗಳಿಗೆ ಸೂಚನೆ


ಮೋಹನ ಹಂಡ್ರಂಗಿ

ಬೆಂಗಳೂರು(ಜ.22):  ರಾಜಧಾನಿಯಲ್ಲಿ ಅಪಘಾತಗಳು(Accidents) ಸಂಭವಿಸುವುದು ಸಾಮಾನ್ಯವಾಗಿದೆ. ಆದರೆ, ನುಣುಪಾದ ಸಿಮೆಂಟ್‌ ರಸ್ತೆಗಳೇ(Cement Road) ಮಾರಣಾಂತಿಕ ಅಪಘಾತಗಳ ಹಾಟ್‌ಸ್ಪಾಟ್‌ಗಳಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Tap to resize

Latest Videos

ನಗರ ಸಂಚಾರ ಪೊಲೀಸರು(Bengaluru Traffic Police) ಇತ್ತೀಚೆಗೆ ಬಿಡುಗಡೆ ಮಾಡಿದ ಕಳೆದ ಮೂರು ವರ್ಷಗಳ ರಸ್ತೆ ಅಪಘಾತಗಳ ಅಂಕಿ-ಸಂಖ್ಯೆಗಳನ್ನು ನೋಡಿದರೆ, ಸಿಮೆಂಟ್‌ ರಸ್ತೆಗಳಲ್ಲಿ ಸಂಭವಿಸಿರುವ ಅಪಘಾತ ಪ್ರಕರಣಗಳ ಸಂಖ್ಯೆ ಏರಿಕೆಯಾಗಿರುವುದು ಕಂಡು ಬಂದಿದೆ. ನಗರದಲ್ಲಿ ವಿವಿಧ ಮಾದರಿಯ ರಸ್ತೆಗಳಿದ್ದು, ಡಾಂಬರು ರಸ್ತೆಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಡಾಂಬರು ರಸ್ತೆಗಳ ಉದ್ದ ಹಾಗೂ ಸಿಮೆಂಟ್‌ ರಸ್ತೆಗಳ ಉದ್ದ ಹೋಲಿಕೆಯೊಂದಿಗೆ ಎರಡೂ ರಸ್ತೆಗಳಲ್ಲಿ ಸಂಭವಿಸಿರುವ ಮಾರಣಾಂತಿಕ ಅಪಘಾತಗಳ ಸಂಖ್ಯೆಗಳನ್ನು ನೋಡಿದರೆ, ಶೇಕಡಾವಾರು ಸಿಮೆಂಟ್‌ ರಸ್ತೆಗಳಲ್ಲೇ ಮಾರಣಾಂತಿಕ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಿದೆ!

Bengaluru Road Accidents: ಬೆಂಗ್ಳೂರಲ್ಲಿ ಅಪಘಾತ ಇಳಿಕೆ: ಸಾವು ಏರಿಕೆ

ಕಳೆದ ಮೂರು ವರ್ಷಗಳಲ್ಲಿ ನಗರದ ಸಿಮೆಂಟ್‌ ರಸ್ತೆಗಳಲ್ಲಿ 124 (2019ರಲ್ಲಿ 34, 2020ರಲ್ಲಿ 25 ಹಾಗೂ 2021ರಲ್ಲಿ 65) ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಉತ್ತಮ ರಸ್ತೆಗಳು ಇದ್ದಾಗ ಅಪಘಾತಗಳು ಕಡಿಮೆಯಾಗಬೇಕು. ಆದರೆ, ಇಲ್ಲಿ ತದ್ವಿರುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಗುಣಮಟ್ಟದ ರಸ್ತೆಗಳನ್ನು ಮಾಡುವುದರ ಜತೆಗೆ ಅವುಗಳ ಸಮಪರ್ಕ ನಿರ್ವಹಣೆಯೂ ಮುಖ್ಯವಾಗಲಿದೆ ಎಂದು ಸಾರಿಗೆ ತಜ್ಞರು(Transportation Experts) ಹೇಳುತ್ತಾರೆ.

ಅಪಘಾತ ಹೆಚ್ಚಳ ಏಕೆ?:

ವಾಹನ ಸಂಚಾರಕ್ಕೆ ಗುಣಮಟ್ಟದ ರಸ್ತೆ ಒದಗಿಸುವುದು ಹಾಗೂ ದೀರ್ಘಕಾಲ ಬಾಳಿಕೆ ದೃಷ್ಟಿಯಿಂದ ನಗರದ ವಿವಿಧೆಡೆ ಸಿಮೆಂಟ್‌ ರಸ್ತೆಗಳನ್ನು ನಿರ್ಮಿಸಲಾಗಿದೆ. ಟೆಂಡರ್‌ ಶ್ಯೂರ್‌ ಹಾಗೂ ವೈಟ್‌ಟಾಪಿಂಗ್‌(Whitetopping) ಇತ್ಯಾದಿ ಯೋಜನೆಗಳ ಹೆಸರಿನಲ್ಲಿ ಬಿಬಿಎಂಪಿ(BBMP) ನಗರದ ಆಯ್ದ ಭಾಗಗಳಲ್ಲಿ ಸಿಮೆಂಟ್‌ ರಸ್ತೆಗಳ ನಿರ್ಮಾಣಕ್ಕೆ ಮುಂದಾಗಿದೆ. ಈ ರಸ್ತೆಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಳವಾಗಲು ಪ್ರಮುಖವಾಗಿ ರಸ್ತೆಗಳು ನುಣುಪಾಗಿರುವುದು, ವಾಹನಗಳ ವೇಗ ನಿಯಂತ್ರಣಕ್ಕೆ ರಸ್ತೆಗಳಲ್ಲಿ ಸಮರ್ಪಕ ಹಂಪ್‌, ಸ್ಪೀಡ್‌ ಬ್ರೇಕರ್‌ ಸೇರಿದಂತೆ ಇತರೆ ವ್ಯವಸ್ಥೆ ಕಲ್ಪಿಸದಿರುವುದು ಹಾಗೂ ವಾಹನ ಸವಾರರಿಗೆ ಈ ರಸ್ತೆಗಳಲ್ಲಿ ಹಾಕಿರುವ ಸಂಚಾರದ ಮಾರ್ಕಿಂಗ್‌ಗಳು ಸರಿಯಾಗಿ ಗೋಚರಿಸದಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಂಚಾರ ವಿಭಾಗದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

Shivamogga Accident: ಗಾಯಗೊಂಡ ಬಾಲಕಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಸಚಿವ ಜ್ಞಾನೇಂದ್ರ

ಸುರಕ್ಷತಾ ಕ್ರಮಗಳಿಗೆ ಸೂಚನೆ:

ಸಿಮೆಂಟ್‌ ರಸ್ತೆಗಳಲ್ಲಿ ಮಾರಣಾಂತಿಕ ಅಪಘಾತ ಪ್ರಕರಣಗಳನ್ನು ತಪ್ಪಿಸುವ ದೃಷ್ಟಿಯಿಂದ ಕೈಗೊಳ್ಳಬೇಕಿರುವ ರಸ್ತೆ ಸುರಕ್ಷತಾ ಕ್ರಮಗಳ(Safety Measures) ಬಗ್ಗೆ ಪಾಲಿಕೆ ಹಿರಿಯ ಅಧಿಕಾಗಳೊಂದಿಗೆ ಚರ್ಚಿಸಿ ಕೆಲ ಸೂಚನೆ ನೀಡಲಾಗಿದೆ. ಸಾಮಾನ್ಯವಾಗಿ ಉತ್ತಮ ರಸ್ತೆಗಳು ಸಿಕ್ಕಾಗ ವಾಹನ ಸವಾರರು ಅತಿವೇಗವಾಗಿ ವಾಹನ ಚಲಾಯಿಸುತ್ತಾರೆ. ಹೀಗಾಗಿ ಈ ರಸ್ತೆಗಳಿಗೆ ಮೊದಲಿಗೆ ವೇಗದ ಚಾಲನೆಗೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ಹಂಫ್ಸ್‌ ನಿರ್ಮಾಣ, ಸ್ಪೀಡ್‌ ಬ್ರೇಕರ್‌ ಅಳವಡಿಕೆ, ರಾತ್ರಿ ವೇಳೆ ವಾಹನ ಸವಾರರಿಗೆ ಸಷ್ಟವಾಗಿ ಗೋಚರಿಸುವ ಹಾಗೆ ಸಂಚಾರ ಮಾರ್ಕಿಂಗ್‌ ಹಾಕುವುದು, ರಿಂಬ್ಲ​ರ್‍ಸ್ ಅಳವಡಿಸುವಂತೆ ಸೂಚಿಸಲಾಗಿದೆ. ಈ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡಲ್ಲಿ ಮಾರಣಾಂತಿಕ ಅಪಘಾತ ಪ್ರಕರಣಗಳನ್ನು ನಿಯಂತ್ರಿಸಬಹುದಾಗಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಡಾ.ಬಿ.ಆರ್‌.ರವಿಕಾಂತೇಗೌಡ ತಿಳಿಸಿದರು.

ನಗರದ ಸಿಮೆಂಟ್‌ ರಸ್ತೆಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಳವಾಗಿರುವುದು ಕಂಡು ಬಂದಿದೆ. ಹೀಗಾಗಿ ಈ ರಸ್ತೆಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಬಿಬಿಎಂಪಿಗೆ ಸೂಚಿಸಲಾಗಿದೆ ಅಂತ ಜಂಟಿ ಪೊಲೀಸ್‌ ಆಯುಕ್ತ (ಸಂಚಾರ) ಆರ್‌.ರವಿಕಾಂತೇಗೌಡ ತಿಳಿಸಿದ್ದಾರೆ.  
 

click me!