Covid-19 Crisis: ಹೋಮ್‌ ಐಸೋಲೇಷನ್‌ ಪಾಲನೆಗೆ ವಿನೂತನ ಕ್ರಮ

Kannadaprabha News   | Asianet News
Published : Jan 22, 2022, 04:10 AM ISTUpdated : Jan 22, 2022, 04:15 AM IST
Covid-19 Crisis: ಹೋಮ್‌ ಐಸೋಲೇಷನ್‌ ಪಾಲನೆಗೆ ವಿನೂತನ ಕ್ರಮ

ಸಾರಾಂಶ

*  ಕರೆ ಮಾಡಿದ ಸೋಂಕಿತರ ಮನೆ ಬಾಗಿಲಿಗೆ ಔಷಧಿ ಕಿಟ್‌ ವಿತರಣೆ *  ಕಳೆದ ಮೂರ್ನಾಲ್ಕು ದಿನಗಳಿಂದ ಇದು ಉತ್ತಮ ರೀತಿಯಿಂದ ಅನುಷ್ಠಾನ *  ಮಕ್ಕಳಿಗೆ ವಿಶೇಷ ತಂಡ 

ಧಾರವಾಡ(ಜ.22):  ಕೋವಿಡ್‌-19(Covid-19) ಮೊದಲ ಅಲೆ ಬಂದಾಗ ಸೋಂಕಿತರು ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ದಾಖಲಾಗುತ್ತಿದ್ದರು. 2ನೇ ಅಲೆ ಬಂದಾಗ ಆಸ್ಪತ್ರೆಗಳಿಗೆ ಹೆಚ್ಚು ಸೋಂಕಿತರು ದಾಖಲಾದರು. ಈಗ 3ನೇ ಅಲೆ ಬಂದಿದ್ದು, ಸೋಂಕಿನ ತೀವ್ರತೆ ಕಡಿಮೆ ಇರುವುದರಿಂದ ಶೇ. 94ರಿಂದ 95 ಜನ ಸೋಂಕಿತರು ಹೋಮ್‌ ಐಸೋಲೇಷನ್‌ ಆಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೋಮ್‌ ಐಸೋಲೇಷನ್‌ದಲ್ಲಿ(Home Isolation) ಇರುವ ಸೋಂಕಿತರು ಮಾರ್ಗಸೂಚಿಗಳ ಪಾಲನೆಯೊಂದಿಗೆ ಸೋಂಕಿನಿಂದ ಗುಣಮುಖರಾಗಲು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯು ಕರೆ ಮಾಡಿದ ಸೋಂಕಿತರ ಮನೆ ಬಾಗಿಲಿಗೆ ಔಷಧಿ ಕಿಟ್‌(Drug Kit) ವಿತರಣೆ ಮಾಡುವ ನೂತನ ಕ್ರಮ ಅನುಷ್ಠಾನಗೊಳಿಸಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಇದು ಉತ್ತಮ ರೀತಿಯಿಂದ ಅನುಷ್ಠಾನವಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾಹಿತಿ ನೀಡಿದ್ದು, ಕೋವಿಡ್‌ ಸೋಂಕಿತ ವ್ಯಕ್ತಿ ಸಾರ್ವಜನಿಕವಾಗಿ ಸಂಚರಿಸುವುದರಿಂದ ರೋಗ ಇತರರಿಗೂ ಬೇಗ ಹರಡುತ್ತದೆ. ಕೆಮ್ಮು, ನೆಗಡಿ, ಜ್ವರ ಇವುಗಳಿಂದ ಪರಸ್ಪರರಿಗೆ ಬೇಗ ತಗಲುವ ಸಾಧ್ಯತೆ ಇರುತ್ತದೆ. ಸೋಂಕಿತ ವ್ಯಕ್ತಿಯು ಚಿಕಿತ್ಸೆ, ಔಷ​ಧಿ ಹಾಗೂ ಆಸ್ಪತ್ರೆಗಳಿಗೆ ಅಲೆಯದಂತೆ ಮಾಡಲು ಔಷ​ಧಿ ಕಿಟ್‌ಗಳನ್ನು ಸೋಂಕಿತರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. 

Covid-19 Crisis: ರಾಜ್ಯದಲ್ಲಿ ನಿನ್ನೆ 47774 ಮಂದಿಗೆ ಕೋವಿಡ್‌: 18% ಪಾಸಿಟಿವಿಟಿ

ಮಹಾನಗರ ಪಾಲಿಕೆಯಲ್ಲಿ ಕೋವಿಡ್‌ ಸೋಂಕಿತರಿಗೆ ಔಷ​ಧಿ ವಿತರಣೆಗಾಗಿ ಸಹಾಯವಾಣಿ(Helpline) ಆರಂಭಿಸಲಾಗಿದೆ. ದಿನದ 24 ಗಂಟೆಯೂ ಮೂರು ಶಿಫ್ಟ್‌ ಮೇಲೆ ಸಿಬ್ಬಂದಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಹಾನಗರದ ಯಾವುದೇ ಭಾಗದಿಂದ ಕೋವಿಡ್‌(Coronavirus) ಸೋಂಕಿತರು ಔಷ​ಧಿ ಕಿಟ್‌ ಕೇಳಿ ಕರೆ ಮಾಡಿದರೆ, ತಕ್ಷಣ ಸಂಬಂ​ಧಿಸಿ​ದ ವಲಯ ಕಚೇರಿ ಮೂಲಕ ಆಯಾ ವಾರ್ಡ್‌ನಲ್ಲಿರುವ ಸೋಂಕಿತರ ಮನೆ ಬಾಗಿಲಿಗೆ ಔಷ​ಧಿ ತಲುಪಿಸಲಾಗುತ್ತಿದೆ. ರಾತ್ರಿಯೂ ಈ ಸೇವೆ ಲಭ್ಯವಿದೆ.

ಗ್ರಾಮೀಣದಲ್ಲೂ ಸೇವೆ:

ಗ್ರಾಮೀಣ ಪ್ರದೇಶದಲ್ಲೂ(Rural Area) ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಿಂದ ಔಷ​ಧಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಔಷಧಿ​ ಕಿಟ್‌ ವಿತರಣೆಗಾಗಿ ಸುಮಾರು 30ಕ್ಕೂ ಹೆಚ್ಚು ವಾಹನಗಳನ್ನು ಸಿದ್ಧಗೊಳಿಸಲಾಗಿದೆ. ಪಾಲಿಕೆಯ ಪ್ರತಿ ವಲಯಕ್ಕೆ 2ರಿಂದ 3 ವಾಹನ ನೀಡಲಾಗಿದೆ. ಪ್ರತಿ ತಂಡದಲ್ಲಿ ಹೆಲ್ತ್‌ ಇನ್ಸ್‌ಪೆಕ್ಟರ್‌, ಬಿಲ್‌ ಕಲೆಕ್ಟರ್‌ ಮತ್ತು ಅಗತ್ಯವಿದ್ದಲ್ಲಿ ಆರೋಗ್ಯ ಸಿಬ್ಬಂದಿ ಇರುತ್ತಾರೆ. ಕರೆ ಮಾಡಿದ ಸೋಂಕಿತರ ಮನೆಗೆ ತಂಡವು ಭೇಟಿ ನೀಡಿ, ಚಿಕಿತ್ಸೆಗೆ ಅಗತ್ಯವಿರುವ ಔಷ​ಧಿಗಳ ಕಿಟ್‌ ನೀಡಿ, ಸೋಂಕಿತನ ಆರೋಗ್ಯ ವಿಚಾರಿಸುತ್ತದೆ. ಹೋಮ್‌ ಐಸೋಲೇಷನ್‌ ಮಾರ್ಗಸೂಚಿಗಳನ್ನು ವಿವರಿಸಿ, ಸೋಂಕಿತರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿ ಅವರಿಗೆ ತಿಳಿವಳಿಕೆ ನೀಡುತ್ತಾರೆ. ಆಪ್ತ ಸಮಾಲೋಚನೆ ಮೂಲಕ ಧೈರ್ಯ, ಆತ್ಮವಿಶ್ವಾಸ ಮೂಡಿಸಲಾಗುವುದು.

ಮಕ್ಕಳಿಗೆ ವಿಶೇಷ ತಂಡ..

ಇನ್ನು, ಕೋವಿಡ್‌ 3ನೇ ಅಲೆಯು(Covid 3rd Wave) ಮಕ್ಕಳನ್ನು(Children) ಬಾ​ಧಿಸುತ್ತಿದ್ದು, ಜಿಲ್ಲೆಯ ಹಲವಾರು ಮಕ್ಕಳಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದೆ. ಮತ್ತು ಸೋಂಕಿತ ಮಕ್ಕಳಿಗೆ ಅಗತ್ಯ ಚಿಕಿತ್ಸೆ, ಔಷ​ಧಿ ನೀಡಿ ಅವರನ್ನು ಗುಣಮುಖರನ್ನಾಗಿ ಮಾಡಲಾಗುತ್ತಿದೆ. ಕೋವಿಡ್‌ ಸೋಂಕು ದೃಢಪಟ್ಟಮಕ್ಕಳಿಗೆ ವಿಶೇಷ ಕಾಳಜಿ ವಹಿಸಲು ಈಗ ಮಕ್ಕಳ ವೈದ್ಯರಿರುವ ಏಳು ವಿಶೇಷ ತಂಡಗಳನ್ನು ರಚಿಸಿದ್ದು ವಿಶೇಷ. ಅವರು ಮಕ್ಕಳಿಗೆ ಆಪ್ತ ಸಮಾಲೋಚನೆ ಮಾಡಿ, ನಿಯಮಿತ ಆಹಾರ, ಔಷ​ಧಿ ಪ್ರಮಾಣ, ವ್ಯಾಯಾಮ ಕುರಿತು ತಿಳುವಳಿಕೆ ನೀಡುತ್ತಾರೆ. ಇಂತಹ ಮಕ್ಕಳ ಬಗ್ಗೆ ಜಾಗೃತಿ ವಹಿಸುವ ಮತ್ತು ಕಾಲಕಾಲಕ್ಕೆ ಮುಂಜಾಗ್ರತೆ ವಹಿಸುವ ವಿಷಯಗಳ ಕುರಿತು ಪಾಲಕರಿಗೂ ತಿಳುವಳಿಕೆ ನೀಡುತ್ತಿದ್ದಾರೆ.

Covid-19 Crisis: ಸೋಂಕಿನ ಲಕ್ಷಣ ಇದ್ದರೆ ರ‍್ಯಾಪಿಡ್ ಟೆಸ್ಟ್‌ ಕಡ್ಡಾಯ

ಇದು ಸಹಾಯವಾಣಿ..

ಮಹಾನಗರ ಪಾಲಿಕೆಯಲ್ಲಿ ತೆರೆಯಲಾದ ಸಹಾಯವಾಣಿ 0836-2213803 ಹಾಗೂ 08362213806 ಮತ್ತು ಮೊಬೈಲ್‌ ಸಂಖ್ಯೆ: 9141051611 ಗೆ ಕರೆ ಮಾಡಿ ಔಷ​ಧಿ ಕಿಟ್‌ ಅಗತ್ಯವಿರುವ ಕುರಿತು ತಿಳಿಸಬಹುದು. ದಿನದ 24 ಗಂಟೆ ಇದು ಕಾರ್ಯನಿರ್ವಹಿಸುತ್ತದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

ಔಷಧಿ ದಾಸ್ತಾನಿದೆ..

ಬರುವ ದಿನಗಳಲ್ಲಿ ಕೋವಿಡ್‌ 3ನೇ ಅಲೆ ಸೋಂಕು ಹೆಚ್ಚಳವಾಗುವ ಕುರಿತು ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ. ಹೋಮ್‌ ಐಸೋಲೇಷನ್‌ ಆಗುವವರ ಸಂಖ್ಯೆ ಹೆಚ್ಚಾಗಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಅತ್ಯಂತ ವಿರಳವಾಗಿದೆ. ಜಿಲ್ಲಾಡಳಿತ ಹೋಮ್‌ ಐಸೋಲೇಷನ್‌ ಆಗುವವರಿಗೆ ಔಷ​ಧಿ ಕಿಟ್‌ ತಲುಪಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಅಗತ್ಯವಾಗಬಹುದಾದ ಔಷ​ಧಿಗಳ ದಾಸ್ತಾನು ಸಹ ಹೊಂದಿದ್ದು, ಎಲ್ಲಾ ಪಿಎಚ್‌ಸಿ ತಾಲೂಕು ಅಸ್ಪತ್ರೆಗಳಿಗೆ ಮತ್ತು ಜಿಲ್ಲಾ ಆಸ್ಪತ್ರೆಗೆ ಈಗಾಗಲೇ ಔಷ​ಧಿಗಳನ್ನು ವಿತರಿಸಿ ಸಂಗ್ರಹ ಮಾಡಿಕೊಳ್ಳಲಾಗಿದೆ ಅಂತ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.  
 

PREV
Read more Articles on
click me!

Recommended Stories

ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!
ರಾಮನಗರದ ರೇವಣಸಿದ್ದೇಶ್ವರ ಬೆಟ್ಟದಲ್ಲಿ ದುರಂತ: ದೇವರ ದರ್ಶನಕ್ಕೂ ಮುನ್ನವೇ ಕಂದಕ ಸೇರಿದ ಭಕ್ತ!