ಕುಟುಂಬದ ವಿಷಯ ಬಂದಾಗ ನಾವೆಲ್ಲರೂ ಒಂದೇ, ಸಹೋದರನ ಪರ ನಿಂತ ಬಾಲಚಂದ್ರ ಜಾರಕಿಹೊಳಿ

Published : Sep 10, 2026, 09:06 PM IST
balachandra jarakiholi on satish jarakiholi

ಸಾರಾಂಶ

ರಾಜ್ಯ ರಾಜಕಾರಣದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮೇಲೆ ನಡೆದ ಇಡಿ ದಾಳಿ ವಿಚಾರ ಭಾರೀ ಚರ್ಚೆ ಆಗ್ತಿದೆ. ಈ ಬೆನ್ನಲ್ಲೇ ಸಹೋದರ ಬಾಲಚಂದ್ರ ಜಾರಕಿಹೊಳಿ, ಸತೀಶ್ ಪರ ಬ್ಯಾಟ್ ಬೀಸಿದ್ದಾರೆ. ಅವರು ಏನಂದ್ರು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿರುವ ಬೆನ್ನಲ್ಲೇ ಅವರ ಸಹೋದರ ಹಾಗೂ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ್‌ನಲ್ಲಿರುವ ಸತೀಶ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.

ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ.. ಇಡಿ ದಾಳಿ, ವಿದೇಶಿ ಹೂಡಿಕೆ ಹಾಗೂ ಹಣ ಜಪ್ತಿ ವಿಚಾರಗಳ ಕುರಿತು ಹಬ್ಬಿರುವ ಊಹಾಪೋಹಗಳಿಗೆ ಸ್ಪಷ್ಟನೆ ನೀಡುವ ಮೂಲಕ ಸಹೋದರ ಸತೀಶ್ ಜಾರಕಿಹೊಳಿ ಅವರ ಬೆಂಬಲಕ್ಕೆ ನಿಂತಿದ್ದಾರೆ.

ರಾಜಕಾರಣ ಬೇರೆ, ಕುಟುಂಬವೇ ಬೇರೆ

ನಾನು ಇಲ್ಲಿಗೆ ಬಿಜೆಪಿ ಶಾಸಕನಾಗಿ ಬಂದಿಲ್ಲ. ಒಬ್ಬ ಸಹೋದರನಾಗಿ ಕುಟುಂಬಕ್ಕೆ ಧೈರ್ಯ ತುಂಬಲು ಬಂದಿದ್ದೇನೆ. ರಾಜಕಾರಣವೇ ಬೇರೆ, ಕುಟುಂಬದ ವಿಷಯ ಬಂದಾಗ ನಾವೆಲ್ಲರೂ ಒಂದೇ. ಸಚಿವ ಸತೀಶ್ ಜಾರಕಿಹೊಳಿ ಯಾವುದೇ ತಪ್ಪು ಮಾಡಿಲ್ಲ. ಜನರು ಸುಳ್ಳು ಸುದ್ದಿಗಳನ್ನು ಹಬ್ಬಿಸಿ ನಮ್ಮ ಕುಟುಂಬದ ಹೆಸರನ್ನು ಕೆಡಿಸಬೇಡಿ ಎಂದು ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು.

₹770 ಕೋಟಿ ಹೂಡಿಕೆ ಸತ್ಯಕ್ಕೆ ದೂರ

ವಿದೇಶದಲ್ಲಿ ₹770 ಕೋಟಿ ಹೂಡಿಕೆ ಮಾಡಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು, ವಿದೇಶದಲ್ಲಿ ಸತೀಶ್ ಜಾರಕಿಹೊಳಿ ಅವರ ಯಾವುದೇ ಹೂಡಿಕೆ ಇಲ್ಲ. ಅವರ ಮಕ್ಕಳಾದ ರಾಹುಲ್ ಜಾರಕಿಹೊಳಿ ₹25 ಸಾವಿರ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ₹25 ಸಾವಿರ ಹಾಗೂ ಸಹೋದರಿ ಮಹಾದೇವಿ ₹25 ಸಾವಿರ ರೂಪಾಯಿಯ ಸಣ್ಣ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ ಅಷ್ಟೇ. ಇಷ್ಟು ಸಣ್ಣ ಮೊತ್ತದ ಹೂಡಿಕೆಗೆ ಇಡಿ ಅಧಿಕಾರಿಗಳು ರೇಡ್ ಮಾಡಿರುವುದು ನಮಗೂ ಆಶ್ಚರ್ಯ ತಂದಿದೆ ಎಂದರು.

ಅದಕ್ಕೆ ಪಕ್ಕಾ ಲೆಕ್ಕವಿದೆ!

ಇಡಿ ದಾಳಿಯಲ್ಲಿ ಸಿಕ್ಕ ನಗದಿನ ಬಗ್ಗೆ ವಿವರಣೆ ನೀಡಿದ ಬಾಲಚಂದ್ರ ಜಾರಕಿಹೊಳಿ, ಗೋಕಾಕ್ ನಿವಾಸದಲ್ಲಿ ಅಧಿಕಾರಿಗಳು ಒಟ್ಟು ₹1 ಕೋಟಿ 73 ಲಕ್ಷ ಹಣವನ್ನು ಸೀಜ್ ಮಾಡಿದ್ದಾರೆ. ಅಧಿಕಾರಿಗಳು ಬರುವಾಗ ಎರಡು ಟ್ರಂಕ್‌ಗಳನ್ನು ತಂದಿದ್ದರು, ಆದರೆ ಹಣವನ್ನು ಕೇವಲ ಒಂದೇ ಟ್ರಂಕ್‌ನಲ್ಲಿ ತುಂಬಿ ತೆಗೆದುಕೊಂಡು ಹೋಗಿದ್ದಾರೆ. ಇನ್ನುಳಿದ ಕಡೆಗಳಲ್ಲಿ ಹಣ ಸೀಜ್ ಆಗಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಸೀಜ್ ಮಾಡಲಾದ ಈ ₹1.73 ಕೋಟಿ ಹಣಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಸಂಪೂರ್ಣ ಲೆಕ್ಕವಿದೆ. ಆದಾಯ ತೆರಿಗೆ ಇಲಾಖೆಗೆ ಸೂಕ್ತ ಲೆಕ್ಕ ಕೊಟ್ಟು ಹಣವನ್ನು ಬಿಡುಗಡೆ ಮಾಡಿಸಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ದಾಳಿಯ ಹಿಂದೆ ಸಿದ್ದರಾಮಯ್ಯ ಅವರ ಕೈವಾಡವಿದೆ ಎಂಬ ವದಂತಿಗಳಿಗೆ ಬಾಲಚಂದ್ರ ಜಾರಕಿಹೊಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೊಳಿ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಈ ದಾಳಿಯ ಹಿಂದೆ ಸಿದ್ದರಾಮಯ್ಯನವರ ಕೈವಾಡವಿದೆ ಎಂದು ತಪ್ಪು ಸಂದೇಶ ಹರಡಲಾಗುತ್ತಿದೆ. ಕಳೆದ 30 ವರ್ಷಗಳ ಅವರ ಗೆಳೆತನದಲ್ಲಿ ಹತ್ತು ಬಾರಿ ಜಗಳವಾಡಿಕೊಂಡಿರಬಹುದು ಮತ್ತೆ ಒಂದಾಗಿದ್ದಾರೆ. ಅವರಿಬ್ಬರ ಸಂಬಂಧ ಕೆಡಿಸುವ ಕೆಲಸ ಯಾರೂ ಮಾಡಬೇಡಿ. ಸಿದ್ದರಾಮಯ್ಯ ಮತ್ತು ಸತೀಶ್ ಅಹಿಂದ ಸಂಘಟನೆಯ ಎರಡು ಕಣ್ಣುಗಳಿದ್ದಂತೆ. ಆ ಎರಡು ಕಣ್ಣುಗಳಿಗೆ ಪೆಟ್ಟು ಬಿದ್ದರೆ ಅಹಿಂದ ಚಳವಳಿಗೆ ಪೆಟ್ಟು ಬೀಳುತ್ತದೆ. ಅವರಿಬ್ಬರ ಬಾಂಧವ್ಯ ಇನ್ನೂ ಗಟ್ಟಿಯಾಗಿರಲಿ ಎಂದು ಆಶಿಸಿದರು.

ರೇಡ್ ಹಿಂದಿನ ಹಿನ್ನೆಲೆ ಏನು?

ಮೇ ತಿಂಗಳಲ್ಲಿ ಇಡಿಗೆ ಯಾರೋ ದೂರು (ಅಲಿಗೇಷನ್) ನೀಡಿದ್ದರು. ಅದರ ಆಧಾರದ ಮೇಲೆ ಜೂನ್ ತಿಂಗಳಲ್ಲಿ ಸತೀಶ್ ಅವರ ಬಾಮೈದ ಮಂಜುನಾಥ್ ಮನೆ ಮೇಲೆ ರೇಡ್ ಆಗಿತ್ತು. ಅದರ ಮುಂದುವರಿದ ಭಾಗವಾಗಿ ಈಗ ಸತೀಶ್ ಜಾರಕಿಹೊಳಿ ಮನೆ ಮೇಲೂ ದಾಳಿ ನಡೆದಿದೆ. ಇದೊಂದು ರೊಟೀನ್ ತನಿಖೆ ಅಷ್ಟೇ. ಇದಕ್ಕೆ ಯಾವುದೇ ರಾಜಕೀಯ ಬಣ್ಣ ಕೊಡುವುದು ಬೇಡ. ಇದನ್ನು ರಾಜಕೀಯ ಪ್ರೇರಿತ ಎನ್ನಲಾಗದು. ಇಡಿ ಅಧಿಕಾರಿಗಳು ರಾಹುಲ್ ಜಾರಕಿಹೊಳಿ ಅವರ ಹೇಳಿಕೆ ಪಡೆದು ಹೋಗಿದ್ದಾರೆಯೇ ಹೊರತು ವಿಚಾರಣೆಗೆ ಹಾಜರಾಗಲು ಯಾವುದೇ ನೋಟಿಸ್ ನೀಡಿಲ್ಲ. ಇಡಿ ದಾಳಿ ವಿಚಾರವಾಗಿ ಸತೀಶ್ ಅವರು ಕಾನೂನಾತ್ಮಕವಾಗಿ ಕೋರ್ಟ್‌ನಲ್ಲಿ ಹೋರಾಟ ನಡೆಸಲಿದ್ದಾರೆ ಎಂದು ಬಾಲಚಂದ್ರ ಜಾರಕಿಹೊಳಿ ವಿವರಿಸಿದರು.

PREV
Read more Articles on
click me!

Recommended Stories

Vande Mataram: ಸರ್ಕಾರಿ ಕಾರ್ಯಕ್ರಮಗಳಿಗೆ ಹೊಸ ಶಿಷ್ಟಾಚಾರ; ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳ ಗಾಯನಕ್ಕೆ ಗ್ರೀನ್ ಸಿಗ್ನಲ್!
ಬೆಂಗಳೂರಿಗರಿಗೆ ಗುಡ್ ನ್ಯೂಸ್: ನಮ್ಮ ಮೆಟ್ರೋ, BMTC ಬಸ್‌ಗಳಲ್ಲಿ ಇನ್ಮುಂದೆ ಒಂದೇ ಕಾರ್ಡ್, ಒಂದೇ ಆಪ್‌ನಲ್ಲಿ ಪಯಣ!