
ಬೆಂಗಳೂರು (ಬೆ.10): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ನಿರ್ಮಿಸಿರುವ ಹಲವಾರು ಬಡಾವಣೆಗಳಲ್ಲಿ ದಶಕಗಳು ಕಳೆದರೂ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗದೆ ಪರದಾಡುತ್ತಿರುವ ಈ ವೇಳೆಯಲ್ಲೇ, ಪ್ರಾಧಿಕಾರವು ತನ್ನ ಸ್ವಂತ ಪ್ರಧಾನ ಕಚೇರಿಯನ್ನೇ ನೆಲಸಮಗೊಳಿಸಿ ಹೊಸದಾಗಿ ಬೃಹತ್ ಅಂತಸ್ಥಿನ ಕಚೇರಿ ಸಂಕೀರ್ಣವನ್ನು ನಿರ್ಮಿಸಲು ಆಡಳಿತಾತ್ಮಕ ಯೋಜನೆ ರೂಪಿಸಿದೆ. ಆದರೆ, ಅತ್ಯುತ್ತಮ ಸ್ಥಿತಿಯಲ್ಲಿರುವ ಹಾಗೂ ಕೇವಲ 20 ವರ್ಷಗಳ ಹಿಂದೆ ನಿರ್ಮಿಸಲಾದ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸುವ ಅಗತ್ಯವೇನಿದೆ ಎಂಬ ಪ್ರಶ್ನೆಗಳು ಹಾಗೂ ತೀವ್ರ ಆಕ್ಷೇಪಗಳು ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿವೆ.
ಬೆಂಗಳೂರಿನ ಟಿ. ಚೌಡಯ್ಯ ರಸ್ತೆಯ ಕುಮಾರ ಪಾರ್ಕ್ ವೆಸ್ಟ್‌ನಲ್ಲಿರುವ ಬಿಡಿಎ ಪ್ರಧಾನ ಕಚೇರಿಯು 2 ಎಕರೆ 20 ಗುಂಟೆ ವಿಸ್ತಾರವಾದ ಅತ್ಯಂತ ಮೌಲ್ಯಯುತ (ಪ್ರೈಮ್) ಜಾಗದಲ್ಲಿದೆ. ಈ ಜಾಗದಲ್ಲಿರುವ ಹಾಲಿ ಕಚೇರಿ ಮರುಅಭಿವೃದ್ಧಿ (Redevelopment) ಯೋಜನೆಗೆ ಕಳೆದ ಡಿಸೆಂಬರ್‌ನಲ್ಲಿ ನಡೆದ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಈ ಆವರಣದಲ್ಲಿರುವ ಒಂದು ಪ್ರಮುಖ ಕಟ್ಟಡವನ್ನು 2004 ರಲ್ಲಿ ಅಂದರೆ ಕೇವಲ 20 ವರ್ಷಗಳ ಹಿಂದೆಯಷ್ಟೇ ನಿರ್ಮಿಸಲಾಗಿದ್ದರೆ, ಹಳೆಯ ಬ್ಲಾಕ್‌ಗಳನ್ನು 1978 ರ ಸುಮಾರಿಗೆ ನಿರ್ಮಿಸಲಾಗಿತ್ತು. ವರದಿಗಳ ಪ್ರಕಾರ ಈ ಎರಡೂ ಕಟ್ಟಡಗಳು ಇಂದಿಗೂ ಅತ್ಯುತ್ತಮ ಹಾಗೂ ಸುಸ್ಥಿತಿಯಲ್ಲಿದ್ದು, ಆವರಣದಲ್ಲಿ ದಟ್ಟವಾದ ಮರಗಳ ಹಸಿರು ಹೊದಿಕೆಯೂ ಇದೆ. ಆಡಳಿತ ಮಂಡಳಿಯ ಒಪ್ಪಿಗೆ ಸಿಗುತ್ತಿದ್ದಂತೆಯೇ, ಕಾಮಗಾರಿ ಅವಧಿಯಲ್ಲಿ ಬಿಡಿಎ ಸಿಬ್ಬಂದಿ ಹಾಗೂ ಕಚೇರಿ ಕಾರ್ಯನಿರ್ವಹಿಸಲು ಪರ್ಯಾಯ ಜಾಗ ಹುಡುಕುವ ಕಾರ್ಯಕ್ಕೆ ಅಧಿಕಾರಿಗಳು ಚಾಲನೆ ನೀಡಿದ್ದಾರೆ.
ಲಭ್ಯವಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಇಲ್ಲಿ ಸುಮಾರು 30 ಮಹಡಿಗಳ ಎತ್ತರದ ಹೊಸ ಕಟ್ಟಡವನ್ನು ನಿರ್ಮಿಸಲು ಚರ್ಚೆಗಳು ನಡೆದಿವೆ. ಆದರೆ ಈ ಯೋಜನೆಯ ಸಂಪೂರ್ಣ ನಕ್ಷೆ ಹಾಗೂ ವಿವರಗಳನ್ನು ಬಿಡಿಎ ಇನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಹೊಸ ಸಂಕೀರ್ಣದ ಬೃಹತ್ ಭಾಗವನ್ನು ಖಾಸಗಿ ಸಂಸ್ಥೆಗಳಿಗೆ ಬಾಡಿಗೆ ಅಥವಾ ಗುತ್ತಿಗೆಗೆ (Lease) ನೀಡುವ ಮೂಲಕ ಯೋಜನೆಯ ಹೂಡಿಕೆ ವೆಚ್ಚವನ್ನು ಮರಳಿ ಗಳಿಸಲು ಬಿಡಿಎ ಉದ್ದೇಶಿಸಿದೆ ಎನ್ನಲಾಗಿದೆ. ಅಲ್ಲದೆ ಈ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂಬ ಊಹಾಪೋಹಗಳೂ ಹರಿದಾಡಿದ್ದವು.
ಆದರೆ ಈ ಯೋಜನೆಯಲ್ಲಿ ಯಾವುದೇ ಖಾಸಗಿ ಹೂಡಿಕೆಯನ್ನು ಕೋರುತ್ತಿಲ್ಲ ಎಂದು ಬಿಡಿಎ ಅಧ್ಯಕ್ಷ ಎನ್‌ಎ ಹ್ಯಾರಿಸ್ ಖಂಡಿತವಾಗಿ ನಿರಾಕರಿಸಿದ್ದಾರೆ. ಹೊರಗಿನ ಯಾವುದೇ ಸರ್ಕಾರಿ ಅನುದಾನವನ್ನು ನೆಚ್ಚಿಕೊಳ್ಳದೆ ಸ್ವಂತ ಬಲದಲ್ಲೇ ಹೊಸ ಕಚೇರಿ ನಿರ್ಮಿಸಲು ನಾವು ಯೋಜಿಸುತ್ತಿದ್ದೇವೆ ಎಂದು ಹೇಳಿರುವ ಅವರು, ಯೋಜನೆಯ ತಾಂತ್ರಿಕ ವಿವರಗಳನ್ನು ಇನ್ನು ರೂಪಿಸಲಾಗುತ್ತಿದೆ ಎಂದಿದ್ದಾರೆ. ಕೆಲವೊಂದು ವಿನ್ಯಾಸ ರೂಪಿಸುವುದನ್ನು ಹೊರತುಪಡಿಸಿ ಬೇರೆ ಯಾವುದೇ ಹಂತದಲ್ಲೂ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಇರುವುದಿಲ್ಲ ಎಂದು ಹ್ಯಾರಿಸ್ ಸ್ಪಷ್ಟಪಡಿಸಿದ್ದಾರೆ.
ಬಿಡಿಎ ಪ್ರಧಾನ ಕಚೇರಿ ಮರುಅಭಿವೃದ್ಧಿಯ ಈ ಪ್ರಸ್ತಾವನೆ ಹೊಸದೇನೂ ಅಲ್ಲ. ಈ ಹಿಂದೆ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಬಿಡಿಎ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಸುಮಾರು 110 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ 14 ಮಹಡಿಗಳ ಕಚೇರಿ ನಿರ್ಮಿಸಲು ಯೋಜಿಸಲಾಗಿತ್ತು 4.8 ಲಕ್ಷ ಚದರ ಅಡಿಯಷ್ಟು ವಿಸ್ತೀರ್ಣದ ಆ ಕಟ್ಟಡದಲ್ಲೂ ಹೆಚ್ಚಿನ ಭಾಗವನ್ನು ಖಾಸಗಿಯವರಿಗೆ ಬಾಡಿಗೆಗೆ ನೀಡುವ ಉದ್ದೇಶವಿತ್ತು. ಆದರೆ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಯೋಜನೆಯನ್ನು ರದ್ದುಗೊಳಿಸಲಾಗಿತ್ತು.
ಪ್ರಸ್ತುತ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಪೊಲೀಸ್ ಕಮಿಷನರೇಟ್ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳು ಆಡಳಿತವನ್ನು ಜನರಿಗೆ ಹತ್ತಿರ ಮಾಡುವ ಉದ್ದೇಶದಿಂದ 'ವಿಕೇಂದ್ರೀಕರಣ'ಕ್ಕೆ (Decentralisation) ಒತ್ತು ನೀಡುತ್ತಿವೆ.ಇಂತಹ ಸಮಯದಲ್ಲಿ, ಬಿಡಿಎಗೆ ಇಷ್ಟೊಂದು ದೊಡ್ಡದಾದ ಕೇಂದ್ರೀಕೃತ ಪ್ರಧಾನ ಕಚೇರಿಯ ಅಗತ್ಯವಿದೆಯೇ? ಅದರಲ್ಲೂ ಉತ್ತಮ ಸ್ಥಿತಿಯಲ್ಲಿರುವ ಕೇವಲ 20 ವರ್ಷ ಹಳೆಯ ಕಟ್ಟಡವನ್ನು ಕೆಡವಲು ಹೊರಟಿರುವುದು ಎಷ್ಟು ಸರಿ? ಎಂಬ ಪ್ರಶ್ನೆಗಳು ಎದ್ದಿವೆ. ಈ ಕುರಿತು ಕಠಿಣವಾಗಿ ಪ್ರತಿಕ್ರಿಯಿಸಿರುವ ಜಯಪ್ರಕಾಶ್ ನಾರಾಯಣ ವಿಚಾರ್ ವೇದಿಕೆಯ ಅಧ್ಯಕ್ಷ ಬಿ.ಎಂ. ಶಿವಕುಮಾರ್, "ಬಿಡಿಎ ತನ್ನದೇ ಆದ ಸುದೀರ್ಘ ಇತಿಹಾಸವನ್ನು ಅಳಿಸಿಹಾಕಲು ಹೊರಟಿದೆ. ಇದೊಂದು ಕೇವಲ ಹಣ ಮಾಡುವ ಯೋಜನೆಯಷ್ಟೇ ಎಂದಿದ್ದಾರೆ.
"ತನ್ನ 50 ವರ್ಷಗಳ ಇತಿಹಾಸದಲ್ಲಿ ಸುಮಾರು 10 ಲಕ್ಷ ನಿವೇಶನಗಳನ್ನು ನೀಡಿದ ದಾಖಲೆ ಹೊಂದಿರುವ ಸಂಸ್ಥೆಯು, ತನ್ನ ಪ್ರಧಾನ ಕಚೇರಿಯನ್ನೇ ರಿಯಲ್ ಎಸ್ಟೇಟ್ ಆಸ್ತಿಯಾಗಿ ನೋಡಬಾರದು. ಕೇವಲ 20 ವರ್ಷ ಹಳೆಯದಾದ ಅತ್ಯುತ್ತಮ ಕಟ್ಟಡವನ್ನು ನೆಲಸಮ ಮಾಡುವ ಔಚಿತ್ಯವಾದರೂ ಏನಿದೆ?" ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ.