'ಕರ್ನಾಟಕದ ಕಾಶ್ಮೀರ' ಮಡಿಕೇರಿ ರಸ್ತೆಗಳು ಗುಂಡಿಮಯ; ದುರಸ್ತಿ ಭಾಗ್ಯ ಎಂದು?

By Kannadaprabha NewsFirst Published Jan 20, 2023, 7:17 AM IST
Highlights

ಮಳೆ ಬಿಟ್ಟು ತಿಂಗಳುಗಳೇ ಕಳೆದರೂ ಮಡಿಕೇರಿ ರಸ್ತೆಗಳ ದುರಸ್ತಿಗೆ ಮಾತ್ರ ಇನ್ನೂ ಕಾಲ ಕೂಡಿಬಂದಿಲ್ಲ. ದಸರಾ ಸಂದರ್ಭದಲ್ಲೇ ದುರಸ್ತಿ ಕೈಗೊಳ್ಳಬೇಕಿದ್ದ ನಗರಸಭೆ ಮಳೆ ಇನ್ನಿತರ ಕಾರಣಗಳನ್ನು ಮುಂದಿಟ್ಟು ಕೇವಲ ಗುಂಡಿ ಮುಚ್ಚಿ ಸುಮ್ಮನಾಯಿತು. ಈಗ ಮಳೆ ಬಿಟ್ಟರೂ ನಗರಸಭೆಗೆ ಚಳಿ ಬಿಟ್ಟಿಲ್ಲ.

ಮೋಹನ್‌ ರಾಜ್‌

ಮಡಿಕೇರಿ (ಜ.20) : ಮಳೆ ಬಿಟ್ಟು ತಿಂಗಳುಗಳೇ ಕಳೆದರೂ ಮಡಿಕೇರಿ ರಸ್ತೆಗಳ ದುರಸ್ತಿಗೆ ಮಾತ್ರ ಇನ್ನೂ ಕಾಲ ಕೂಡಿಬಂದಿಲ್ಲ. ದಸರಾ ಸಂದರ್ಭದಲ್ಲೇ ದುರಸ್ತಿ ಕೈಗೊಳ್ಳಬೇಕಿದ್ದ ನಗರಸಭೆ ಮಳೆ ಇನ್ನಿತರ ಕಾರಣಗಳನ್ನು ಮುಂದಿಟ್ಟು ಕೇವಲ ಗುಂಡಿ ಮುಚ್ಚಿ ಸುಮ್ಮನಾಯಿತು. ಈಗ ಮಳೆ ಬಿಟ್ಟರೂ ನಗರಸಭೆಗೆ ಚಳಿ ಬಿಟ್ಟಿಲ್ಲ.

ಗುಂಡಿಮಯ ರಸ್ತೆಯಲ್ಲೇ ನಿತ್ಯ ಸಂಚಾರ: ನಗರದ ಕೆಲ ಪ್ರಮುಖ ರಸ್ತೆಗಳೇ ಗುಂಡಿ ಬಿದ್ದು ಹಾಳಾಗಿ ಹೋಗಿವೆ. ಇನ್ನು ಬಡಾವಣೆಯ ರಸ್ತೆಗಳ ಸ್ಥಿತಿಯಂತೂ ಹೇಳ ತೀರದ್ದಾಗಿದೆ. ಎಲ್ಲೆಂದರಲ್ಲಿ ತಗ್ಗು ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿ ವಾಹನ ಸವಾರರು ಸರ್ಕಸ್‌ ಮಾಡುತ್ತಾ ಸವಾರಿ ಮಾಡಬೇಕಾಗಿದೆ.

ಶಬರಿಮಲೆಗೆ ತೆರಳಿದ್ದ ಕೊಡಗು ಯುವಕ ಸಮುದ್ರ ಪಾಲು: ಕಣ್ಣೂರು ಬೀಚ್‌ನಲ್ಲಿ ಕಣ್ಮರೆ

ಮಡಿಕೇರಿ ನಗರ(madikeri city) ವ್ಯಾಪ್ತಿಗೆ ಒಳಪಡುವ ಅಬ್ಬಿಪಾಲ್ಸ್‌(abbe falls) ಗೆ ತೆರಳುವ ಮಾರ್ಗ, ಭಗವತಿ ನಗರ ರಸ್ತೆ, ಗೌಳಿಬಿದಿಯ ಕುಮಾರನ್‌ ವಿಲಾಸ್‌ ಜಂಕ್ಷನ್‌(Kumaran vilas junction) ಸೇರಿದಂತೆ ಕೆಲ ಪ್ರಮುಖ ರಸ್ತೆಗಳ ಸ್ಥಿತಿ ತೀರಾ ಹದಗೆಟ್ಟು, ಬೃಹತ್‌ ಹೊಂಡಗಳೇ ನಿರ್ಮಾಣವಾಗಿದೆ. ಇಲ್ಲಿನ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಬಿದ್ದು ಕೈಕಾಲು ಮುರಿದುಕೊಳ್ಳುವಂತಿದೆ. ದ್ವಿಚಕ್ರ ಸೇರಿದಂತೆ ಆಟೊ, ಕಾರು ಇನ್ನಿತರ ವಾಹನಗಳ ಸವಾರರಿಗೆ ನುಂಗಲಾರದ ತುತ್ತಾಗಿದೆ. ಮಳೆ ಬಂದರಂತೂ ವಾಹನ ಸವಾರರನ್ನು ದೇವರೇ ಕಾಪಾಡಬೇಕು.

ಅಪಘಾತಗಳಿಗೆ ಹೊಂಡಗಳೇ ಕಾರಣ: ನಗರದ ಪ್ರಮುಖ ರಸ್ತೆಗಳ ಮೇಲಿನ ಗುಂಡಿಗಳನ್ನು ತಪ್ಪಿಸಲು ಹೋಗಿ ಸಾಕಷ್ಟುವಾಹನ ಸವಾರರು ಅಪಘಾತಗಳಿಗೆ ತುತ್ತಾಗಿರುವ ಸಾಕಷ್ಟುಉದಾಹರಣೆಗಳಿವೆ. ಗುಂಡಿಗಳನ್ನು ಸರಿಪಡಿಸುವಂತೆ ಜನರು ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

14 ಕೋಟಿ ರು. ಅನುದಾನ ಮೀಸಲು: ನಗರದ ರಸ್ತೆಗಳ ಅಭಿವೃದ್ಧಿಗಾಗಿ ಎನ್‌ಡಿಆರ್‌ಎಫ್‌ನಿಂದ 30 ಲಕ್ಷ ರು. ಬಿಡುಗಡೆಯಾಗಿದೆ. ಇದಲ್ಲದೇ ನಗರೋತ್ಥಾನ ಅನುದಾನದಲ್ಲೂ 13.70 ಕೋಟಿ ರು. ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿಗೆ ಮೀಸಲಿಡಲಾಗಿದೆ. ನಗರದ ರಸ್ತೆಗಳ ದುರಸ್ತಿ ಮತ್ತು ಅಭಿವೃದ್ಧಿಗೆಂದೇ 14 ಕೋಟಿ ರು. ಮೀಸಲಿದ್ದರೂ ಕಾಮಗಾರಿ ಆರಂಭಕ್ಕೆ ಮಾತ್ರ ನಗರಸಭೆ ಮೀನ ಮೇಷ ಎಣಿಸುತ್ತಿದೆ.

ಮೇಲ್ದರ್ಜೆಗೇರಿಸಲು ಸೂಚನೆ:

ಕಳೆದ ನವೆಂಬರ್‌ ತಿಂಗಳಲ್ಲಿ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ರಸ್ತೆಗಳ ಅವ್ಯವಸ್ಥೆ ಬಗ್ಗೆ ಭಾರಿ ಚರ್ಚೆಯಾಗಿತ್ತು. ಅಂದಿನ ಸಭೆಯಲ್ಲಿ ಖುದ್ದು ಹಾಜರಿದ್ದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್‌ ನಗರದ ಎಲ್ಲ ರಸ್ತೆಗಳನ್ನು ಸರ್ವ ಋುತು ರಸ್ತೆಗಳನ್ನಾಗಿ ಮಾರ್ಪಡಿಸಬೇಕು. ಅದಕ್ಕಾಗಿ ನಗರೋತ್ಥಾನ 4ನೇ ಹಂತದ ಅನುದಾನ ಬಳಸಿಕೊಳ್ಳಬೇಕು ಎಂದು ಸೂಚನೆ ನೀಡಿದ್ದರು. ಈ ಸಂದರ್ಭ 13 ಕೋಟಿ ರು. ಅದಕ್ಕಾಗಿ ಮೀಸಲಿಡಲಾಗಿದೆ ಎಂದು ಅಧ್ಯಕ್ಷರೇ ಮಾಹಿತಿ ನೀಡಿದ್ದರು. ಇದಾಗಿ ಎರಡು ತಿಂಗಳಾದರೂ ಇನ್ನೂ ಕೆಲಸ ಮಾತ್ರ ಆರಂಭವಾಗಿಲ್ಲ.

ಕುಸಿದ ರಸ್ತೆ ಸರಿಪಡಿಸಿಲ್ಲ:

ನಗರದ ಮೈತ್ರಿ ಹಾಲ್‌ ಜಂಕ್ಷನ್‌ ಬಳಿ ರಸ್ತೆ ಬದಿ ಕಳೆದ ಮಳೆಗಾಲದ ಆರಂಭದಲ್ಲೇ ಕುಸಿದಿದ್ದು, ಈಗಲೂ ಅಪಾಯಕಾರಿಯಾಗಿದೆ. ಜಿ.ಪಂ., ನೂತನ ನ್ಯಾಯಾಲಯ, ಕೇಂದ್ರೀಯ ವಿದ್ಯಾಲಯ, ಫೀ.ಮಾ ಕಾರ್ಯಪ್ಪ ಕಾಲೇಜು, ಮಡಿಕೇರಿ ಗ್ರಾಮಾಂತರ, ಟ್ರಾಫಿಕ್‌, ಸೈಬರ್‌ ಪೊಲೀಸ್‌ ಠಾಣೆ, ಮೀನುಗಾರಿಕಾ ಇಲಾಖೆ, ಸರ್ಕಾರಿ ತಾಂತ್ರಿಕ ತರಬೇತಿ ಕೇಂದ್ರಗಳಿಗೆ ಇದೇ ರಸ್ತೆಯ ಮೂಲಕ ಹೋಗಬೇಕಾಗಿದ್ದು, ಪ್ರತಿ ನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಹೀಗಿದ್ದೂ ಅಂದಿನಿಂದಲೇ ಅಲ್ಲಿನ ಸಾರ್ವಜನಿಕರು ಸಾಕಷ್ಟುಬಾರಿ ಮನವಿ ಮಾಡಿದ್ದರೂ ರಸ್ತೆ ಸರಿಪಡಿಸುವ ಕಾರ್ಯಕ್ಕೆ ನಗರಸಭೆ ಮುಂದಾಗಿಲ್ಲ.

ಕನಿಷ್ಠ 15 ದಿನಕ್ಕೊಮ್ಮೆಯಾದರೂ ಯೋಗ ಮಾಡಿ: ಶಾಸಕ ಅಪ್ಪಚ್ಚು ರಂಜನ್ ಸಲಹೆ

ಮಡಿಕೇರಿಯ ಹಲವು ರಸ್ತೆಗಳು ಗುಂಡಿ ಬಿದ್ದಿದ್ದು, ಅನುದಾನವಿದ್ದರೂ ನಗರಸಭೆ ರಸ್ತೆಗಳ ಅಭಿವೃದ್ಧಿ ಕಡೆ ಗಮನ ಹರಿಸುತ್ತಿಲ್ಲ. ಮೊದಲು ಮಳೆಯ ನೆಪ ಹೇಳುತ್ತಿದ್ದ ನಗರಸಭೆ ಇದೀಗ ಮಳೆ ನಿಂತು ತಿಂಗಳುಗಳೇ ಕಳೆದರೂ ಕೆಲಸ ಆರಂಭಿಸಿಲ್ಲ. ಇನ್ನೂ ವಿಧಾನಸಭೆ ಚುನಾವಣೆ ಶೀಘ್ರದಲ್ಲೇ ಘೋಷಣೆಯಾಗಲಿದ್ದು, ಈ ಸಂದರ್ಭ ಯಾವುದೇ ಹೊಸ ಕಾಮಗಾರಿ ನಡೆಯಲು ಸಾಧ್ಯವಾಗಲ್ಲ. ಇವೆಲ್ಲವನ್ನೂ ಅರಿತು ಶೀಘ್ರದಲ್ಲೆ ರಸ್ತೆ ಕಾಮಗಾರಿ ಆರಂಭಿಸಲು ನಗರಸಭೆ ಮುಂದಾಗಬೇಕಾಗಿದೆ.

ರವಿ ಗೌಡ, ಅಧ್ಯಕ್ಷ ಮಡಿಕೇರಿ ಹಿತರಕ್ಷಣಾ ವೇದಿಕೆ

ನಗರದ ರಸ್ತೆಗಳ ಅಭಿವೃದ್ಧಿಗೆ ಎನ್‌ಡಿಆರ್‌ಎಫ್‌ನಿಂದ 30 ಕೋಟಿ ರು. ಬಿಡುಗಡೆಯಾಗಿದೆ. ನಗರೋತ್ಥಾನ 4ನೇ ಹಂತದ ಅನುದಾನದಲ್ಲೂ 13.70 ಕೋಟಿ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದೇವೆ. ಟೆಂಡರ್‌ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಮುಕ್ತಾಯಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ.

ಅನಿತಾ ಪೂವಯ್ಯ, ನಗರಸಭೆ ಅಧ್ಯಕ್ಷೆ

ನಗರದ ಗುಂಡಿಮಯ ರಸ್ತೆಗಳಲ್ಲಿ ಪ್ರತಿವರ್ಷ ಪ್ಯಾಚ್‌ವರ್ಕ್ ಮಾಡ್ತಾರೆ. ಆದರೆ ಕಳಪೆ ಗುಣಮಟ್ಟದಿಂದಾಗಿ ಆ ರಸ್ತೆಗಳೂ ಕೆಲವೇ ದಿನಗಳಲ್ಲಿ ಮತ್ತೆ ಹಾಳಾಗುತ್ತೆ. ಮತ್ತೆ ರಸ್ತೆ ದುರಸ್ತಿ ಹೆಸರು ಹೇಳಿ ಸಾರ್ವಜನಿಕ ಹಣವನ್ನು ಪೋಲು ಮಾಡುತ್ತಾರೆ. ಇದು ಮೇಲ್ನೋಟಕ್ಕೆ ಕಮಿಷನ್‌ ಗೋಸ್ಕರ ನಡೆಯುವ ದಂದೆಯಂತೆ ಕಾಣುತ್ತೆ.

ಮೇದಪ್ಪ, ಆಟೋ ಚಾಲಕರ ಸಂಘದ ಅಧ್ಯಕ್ಷ

click me!