ಬೆಂಗಳೂರಿಗೆ ಸಮೀಪವಿರುವ ಸ್ಮಾರ್ಚ್ ಸಿಟಿ ತುಮಕೂರು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಯಾಗಿದ್ದು, ಸ್ಮಾರ್ಚ್ ಸಿಟಿ ಗರಿಯ ಜೊತೆಗೆ ‘ಸ್ವಚ್ಛ ತುಮಕೂರು’ ಎಂಬ ಹೆಗ್ಗಳಿಕೆ ಪಡೆಯುವಂತಾಗಬೇಕು
ತುಮಕೂರು : ಬೆಂಗಳೂರಿಗೆ ಸಮೀಪವಿರುವ ಸ್ಮಾರ್ಚ್ ಸಿಟಿ ತುಮಕೂರು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಯಾಗಿದ್ದು, ಸ್ಮಾರ್ಚ್ ಸಿಟಿ ಗರಿಯ ಜೊತೆಗೆ ‘ಸ್ವಚ್ಛ ತುಮಕೂರು’ ಎಂಬ ಹೆಗ್ಗಳಿಕೆ ಪಡೆಯುವಂತಾಗಬೇಕು. ಜಿಲ್ಲೆಯ ನಗರ ಪ್ರದೇಶ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸಬೇಕು. ಕಣ್ಣೋಟಕ್ಕೆ ಸ್ವಚ್ಛತೆ ಎಲ್ಲೆಲ್ಲೂ ಕಾಣುವಂತಾಗಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಅಧ್ಯಕ್ಷ ಜಸ್ಟೀಸ್ ಸುಭಾಷ್ ಬಿ. ಆದಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಗಳ ಕಚೇರಿ ಸಭಾಂಗಣದಲ್ಲಿಂದು ಕರೆಯಲಾಗಿದ್ದ ಜಿಲ್ಲಾ ಮಟ್ಟದ ವಿಶೇಷ ಕಾರ್ಯಪಡೆ ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಉತ್ಪತ್ತಿಯಾಗುವ ಗಳನ್ನು ಶೇ. 100ರಷ್ಟುಕ್ರೋಢೀಕರಿಸಿ, ಹಸಿ ಹಾಗೂ ಒಣ ತ್ಯಾಜ್ಯವನ್ನು ಪ್ರತ್ಯೇಕಿಸಿ ಸಂಸ್ಕರಿಸಬೇಕು. ಒಣ ಹಾಗೂ ಹಸಿ ಕಸ ವಿಂಗಡಣೆ ಕುರಿತು ಜನಸಾಮಾನ್ಯರಿಗೆ ಐಇಸಿ ಚಟುವಟಿಕೆಗಳ ಮೂಲಕ ವ್ಯಾಪಕ ಅರಿವು ಮೂಡಿಸಬೇಕು ಎಂದರು.
ಗ್ರಾ.ಪಂ ಸದಸ್ಯರುಗಳಿಗೆ ತರಬೇತಿ ನೀಡಿ ವಾರ್ಡ್‌ವಾರು ಜವಾಬ್ದಾರಿಯನ್ನು ನೀಡಬೇಕು. ಸ್ವ-ಸಹಾಯ ಸಂಘಗಳು ಮತ್ತು ಸರ್ಕಾರೇತರ ಸ್ಥಳೀಯ ಸಂಘಗಳನ್ನು ಈ ನಿಟ್ಟಿನಲ್ಲಿ ಪ್ರೇರೇಪಿಸಿ ತ್ಯಾಜ್ಯ ನಿರ್ವಹಣೆ ಕುರಿತು ಅರಿವು ಮೂಡಿಸಬೇಕು. ಸಾಧ್ಯವಾದಲ್ಲಿ ಸ್ವಚ್ಛತೆ ಕಾಪಿಟ್ಟುಕೊಳ್ಳುವಂತಹ ಸ್ಥಳೀಯ ಸಂಸ್ಥೆಗಳನ್ನು ಗುರುತಿಸಿ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.
ತುಮಕೂರು ಪಾಲಿಕೆ ಆಯುಕ್ತರು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪರಿಸರ ಅಭಿಯಂತರರು ಎಲ್ಲರೂ ಮೊದಲಿಗೆ ಪರಿಸರ ನಿಯಮಗಳನ್ನು ಓದಿ ತಿಳಿದುಕೊಳ್ಳಬೇಕು. ತ್ಯಾಜ್ಯ ವಿಲೇವಾರಿಗೆ ಕೋಟ್ಯಾಂತರ ರು.ಗಳನ್ನು ವ್ಯಯಿಸಲಾಗುತ್ತಿದೆ. ಆದುದರಿಂದ ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಾರ್ವಜನಿಕರು ಎಲ್ಲೆಂದರಲ್ಲಿ ಅಳವಡಿಸುವ ಬ್ಯಾನರ್, ಪೋಸ್ಟರ್, ಹೋರ್ಡಿಂಗ್ಸ್‌ಗಳಿಗೆ ಕಡಿವಾಣ ಹಾಕಬೇಕು. ಪಾಲಿಕೆ ವತಿಯಿಂದ ಆಯ್ದ ಜಾಗಗಳಲ್ಲಿ ಎಲೆಕ್ಟ್ರಾನಿಕ್ ಡಿಸ್‌ಪ್ಲೇ ಜಾಹೀರಾತು ಫಲಕಗಳನ್ನು ಅಳವಡಿಸಿ, ಇದರ ಮೂಲಕ ವಾಣಿಜ್ಯ ಬಳಕೆದಾರರು ಮತ್ತು ಸಾರ್ವಜನಿಕರು ತಮ್ಮ ಜಾಹೀರಾತುಗಳನ್ನು ಪ್ರದರ್ಶಿಸುವ ವ್ಯವಸ್ಥೆಯಾಗಬೇಕು. ಇದರಿಂದ ಸಾರ್ವಜನಿಕ ಸ್ಥಳಗಳ ಅಂದಗೆಡುವುದಿಲ್ಲ. ಅಂತೆಯೇ ಅಕ್ರಮವಾಗಿ ನಿರ್ಮಿಸುವ ಕಟೌಟ್ ಹಾಗೂ ಪ್ರತಿಮೆಗಳಿಗೂ ಸಹ ಕಡಿವಾಣ ಹಾಕಬೇಕು. ಪ್ಲಾಸ್ಟಿಕ್ ಸರಬರಾಜು ಮಾಡುವವರು ಮತ್ತು ಪ್ಲಾಸ್ಟಿಕ್ ಮಾರುವವರಿಗೂ ಸಹ ದುಪ್ಪಟ್ಟು ದಂಡ ವಿಧಿಸಬೇಕು ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಮಾತನಾಡಿ, ಜಿಲ್ಲೆಯ ಅಧಿಕಾರಿಗಳಿಗೆ ಪರಿಸರ ಹಾಗೂ ತ್ಯಾಜ್ಯ ವಿಲೇವಾರಿ ಕಾಯ್ದೆ ಹಾಗೂ ನಿಯಮಗಳ ಕುರಿತು ಕಾರ್ಯಾಗಾರ ಅಗತ್ಯವಿದ್ದು, ಶೀಘ್ರದಲ್ಲಿಯೇ ಕಾರ್ಯಾಗಾರ ಏರ್ಪಡಿಸುತ್ತೇವೆ. ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಚೇರಿಗಳು, ಇತರೆ ಸರ್ಕಾರಿ ಸಂಸ್ಥೆಗಳ ಆವರಣದಲ್ಲಿ ಇನ್ನು 15 ದಿನಗಳೊಳಗಾಗಿ ಕಡ್ಡಾಯವಾಗಿ ತ್ಯಾಜ್ಯ ಸಂಸ್ಕರಣೆಗೆ ಕಂಪೋಸ್ಟ್ ಪಿಟ್ ತೆರೆಯುವಂತೆ ಕಡ್ಡಾಯ ಮಾಡಲಾಗುವುದು ಎಂದು ತಿಳಿಸಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ಜಿಲ್ಲೆಯ 304 ಗ್ರಾಮಪಂಚಾಯತಿಗಳಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ, ಸಂಸ್ಕರಣೆ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕ್ಲಸ್ಟರ್ ಮಟ್ಟದಲ್ಲಿ ತ್ಯಾಜ್ಯ ಕ್ರೋಢೀಕರಣ ಹಾಗೂ ಸಂಸ್ಕರಣೆ ಮಾಡಲಾಗುವುದು ತಿಳಿಸಿದರು.
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ, ಹಿರಿಯ ಪರಿಸರ ಅಧಿಕಾರಿ ರಮೇಶ್ ಡಿ.ನಾಯಕ್ ಸೇರಿದಂತೆ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳು ಮುಖ್ಯಾಧಿಕಾರಿಗಳು, ಆಯುಕ್ತರುಗಳು, ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ತುಮಕೂರು ಜಿಲ್ಲೆ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದಬೇಕಾದರೆ ಮೊದಲಿಗೆ ಸ್ವಚ್ಛ ಭಾರತ ಅಭಿಯಾನವನ್ನು ಅಳವಡಿಸಿಕೊಂಡು ಕ್ಲೀನ್ ಸಿಟಿ ಎಂಬ ಹೆಸರು ಪಡೆಯಬೇಕು. ಈ ನಿಟ್ಟಿನಲ್ಲಿ ಮೊದಲಿಗೆ ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕು.
- ಜಸ್ಟೀಸ್ ಸುಭಾಷ್ ಬಿ. ಆದಿ, ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಅಧ್ಯಕ್ಷ