Honey mission: ತೋಟಕ್ಕೆ ನುಗ್ಗುವ ಕಾಡಾನೆ ತಡೆಯಲು ‘ಹನಿ ಮಿಷನ್‌’

By Kannadaprabha NewsFirst Published Jan 20, 2023, 6:56 AM IST
Highlights

ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನು ಇರಿಸಿ ತೋಟಕ್ಕೆ ಆನೆ ಬಾರದಂತೆ ತಡೆಯುವ ಹೊಸ ಪ್ರಯೋಗಕ್ಕೆ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡದ ತೋಟದಲ್ಲಿ ಚಾಲನೆ ನೀಡಲಾಗಿದೆ.

ಸುಳ್ಯ (ಜ.20) : ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನು ಇರಿಸಿ ತೋಟಕ್ಕೆ ಆನೆ ಬಾರದಂತೆ ತಡೆಯುವ ಹೊಸ ಪ್ರಯೋಗಕ್ಕೆ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡದ ತೋಟದಲ್ಲಿ ಚಾಲನೆ ನೀಡಲಾಗಿದೆ.

ಮಂಡೆಕೋಲು ಗ್ರಾಮ ಪಂಚಾಯಿತಿ ಸದಸ್ಯ ಬಾಲಚಂದ್ರ ದೇವರಗುಂಡ ಅವರ ತೋಟದಲ್ಲಿ ಈ ಪ್ರಯೋಗ ಮಾಡಲಾಗಿದ್ದು, ತೋಟಕ್ಕೆ ಆನೆ ಬರುತ್ತಿದ್ದ ಜಾಗದಲ್ಲಿ 10 ಜೇನು ಪಟ್ಟಿಗೆಳನ್ನು ಮೂರು ಫೀಟ್‌ ಅಂತರಕ್ಕೆ ಇರಿಸಲಾಗಿದೆ. ಈ ಹೊಸ ಪ್ರಯೋಗಕ್ಕೆ ಕೇಂದ್ರ ಸರ್ಕಾರದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ಮನೋಜ್‌ ಕುಮಾರ್‌ ಚಾಲನೆ ನೀಡಿದರು.

ಬಳಿಕ ಬಾಲಚಂದ್ರ ದೇವರಗುಂಡರ ಮನೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮನೋಜ್‌ ಕುಮಾರ್‌, ಹನಿಮಿಷನ್‌ ಯೋಜನೆ ಮೂಲಕ ದೇಶದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಕರ್ನಾಟಕದ ಈ ಭಾಗದಲ್ಲಿ ಆನೆ ಮತ್ತು ಮಾನವ ಸಂಘರ್ಷಗಳು ನಡೆಯುತ್ತಿರುವುದು ತಿಳಿದಿದೆ. ಇದರಿಂದ ಕೃಷಿಕರು ಬೆಳೆದ ಕೃಷಿ ನಷ್ಟವಾಗುತ್ತಿದ್ದು, ಅದನ್ನು ತಡೆಯಲು ಹೊಸ ಚಿಂತನೆಯೊಂದನ್ನು ಆರಂಭಿಸಲಾಗಿದೆ. ಆನೆಗಳು ಕೃಷಿ ತೋಟಕ್ಕೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗಳನ್ನು ಇರಿಸಲಾಗುವುದು. ಇದರಿಂದ ಆನೆಗಳು ತೋಟಕ್ಕೆ ಬರುವುದನ್ನು ತಡೆಯಲು ಪ್ರಯೋಜನವಾಗುವುದಲ್ಲದೆ ಕೃಷಿಯೂ ನಷ್ಟವಾಗುವುದಿಲ್ಲ. ಈ ನಿಟ್ಟಿನಲ್ಲಿ ಈ ಭಾಗದಲ್ಲಿ ಪ್ರಾಯೋಗಿಕವಾಗಿ ಯೋಜನೆ ಅಳವಡಿಸಲಾಗಿದೆ ಎಂದು ಹೇಳಿದರು.

Wild elephant attacks: ತೀರ್ಥಹಳ್ಳಿ: ಕುರು​ವ​ಳ್ಳಿ​ ಬಳಿ ಕಾಡಾನೆ ಹಾವಳಿ- ಆತಂಕ

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ದಕ್ಷಿಣ ವಲಯ ಸಿಇಒ ಆರ್‌.ಎಸ್‌. ಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೊನ್ನಂಪೇಟೆ ಫಾರೆಸ್ಟ್ರಿ ಕಾಲೇಜಿನ ಉಪನ್ಯಾಸಕ ಡಾ.ಕೆಂಚವೀರಪ್ಪ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ರಾಜ್ಯ ನಿರ್ದೇಶಕ ಡಾ.ಇ. ಮೋಹನ್‌ ರಾವ್‌, ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಾ ಕೋಲ್ಚಾರ್‌, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಸಹ ನಿರ್ದೇಶಕ ಸೆಂಥಿಲ್‌ ಕುಮಾರ್‌ ವೇದಿಕೆಯಲ್ಲಿದ್ದರು.

ಕೇಂದ್ರ ಸರ್ಕಾರದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ವತಿಯಿಂದ ದ.ಕ. ಜೇನು ವ್ಯವಸಾಯಗಾರರ ಸಂಘದ ಸಹಕಾರದೊಂದಿಗೆ 35 ಮಂದಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ಜೇನು ತರಬೇತಿ ನೀಡಲಾಗಿದೆ. ಪ್ರತಿ ಫಲಾನುಭವಿಗಳಿಗೆ 10 ಜೇನು ಪೆಟ್ಟಿಗಳನ್ನು ನೀಡಲಾಗಿದೆ. ಇದನ್ನು ಆವರು ಕೃಷಿ ತೋಟಕ್ಕೆ ಆನೆ ಬರುವ ದಾರಿಯಲ್ಲಿ ಇಡಬೇಕು. ಮಂಡೆಕೋಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನುತಾ ಹರೀಶ್ಚಂದ್ರ ಪಾತಿಕಲ್ಲು, ಜೇನು ಸೊಸೈಟಿ ನಿರ್ದೇಶಕ ಶಂಕರ್‌ ಪೆರಾಜೆ ಮೊದಲಾದವರು ಉಪಸ್ಥಿತರಿದ್ದರು.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಸಹಾಯಕ ನಿರ್ದೇಶಕ ಪಿ.ಎಸ್‌. ಬಾಲಕೃಷ್ಣನ್‌ ಸ್ವಾಗತಿಸಿದರು. ರೈತ ಉತ್ಪಾದಕ ಕಂಪನಿ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್‌ ಕಾರ್ಯಕ್ರಮ ನಿರೂಪಿಸಿದರು.

ಕಾಡಾನೆ ದಾಳಿ: ನಾಲ್ಕು ಎಕರೆಯಲ್ಲಿನ ಅಡಿಕೆ,ಬಾಳೆ ಬೆಳೆ ಸಂಪೂರ್ಣ ನಾಶ

ಜೇನು ನೊಣಗಳ ಶಬ್ದಕ್ಕೆ ಆನೆ ಬರಲ್ಲ!

ಆನೆಗಳು ಹೆಚ್ಚಾಗಿ ರಾತ್ರಿ ವೇಳೆ ಕೃಷಿ ತೋಟಕ್ಕೆ ಬರುವುದರಿಂದ ಜೇನು ನೊಣಗಳ ಶಬ್ದಕ್ಕೆ ಅವುಗಳು ಬರುವುದಿಲ್ಲವೆಂಬ ಕಾರಣವನ್ನು ಅಧಿಕಾರಿಗಳು ನೀಡುತ್ತಾರೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಹನಿ ಮಿಷನ್‌ ಯೋಜನೆಯಲ್ಲಿ ನಾಗರಹೊಳೆಯ ಕೊಡಂಗೇರಿಯಲ್ಲಿ ಈ ಪ್ರಯೋಗವನ್ನು ಪೊನ್ನಂಪೇಟೆಯ ಫಾರೆಸ್ಟ್ರಿ ಕಾಲೇಜಿನವರ ಮೂಲಕ ಪ್ರಾಜೆಕ್ಟ್ ಮಾಡಿಸಲಾಗಿದೆ. ಕಾಫಿ ತೋಟಕ್ಕೆ ಕಾಡಾನೆಗಳು ಬರುತ್ತಿದ್ದು, ಆನೆಗಳು ಬರುವ ದಾರಿಯಲ್ಲಿ ಜೇನು ಪೆಟ್ಟಿಗೆ ಇರಿಸಲಾಯಿತು. ಅಲ್ಲಿ ಆನೆಗಳು ಬರುವುದು ಶೇ.70ರಷ್ಟುಕಡಿಮೆಯಾಗಿದೆ. ಆದರೆ ಕೆಲವು ಕಡೆಗಳಲ್ಲಿ ಆನೆಗಳು ಜೇನು ಪೆಟ್ಟಿಗೆ ಇರಿಸಲಾದ ಜಾಗಕ್ಕಿಂತಲೂ ಮತ್ತೊಂದು ಕಡೆಯಲ್ಲಿ ದಾರಿ ಮಾಡಿಕೊಂಡು ಬರುತ್ತವೆ. ಆ ದಾರಿಯಲ್ಲಿಯೂ ಪೆಟ್ಟಿಗೆ ಇಡಬೇಕು. ಈ ಪ್ರಯೋಗ ಯಶಸ್ವಿಯಾಗಿದೆ ಎನ್ನುತ್ತಾರೆ ಪೊನ್ನಂಪೇಟೆ ಫಾರೆಸ್ಟ್ರಿ ಕಾಲೇಜಿನ ಉಪನ್ಯಾಸಕ ಡಾ.ಕೆಂಚವೀರಪ್ಪ. ಅವರು ಪ್ರಯೋಗಿಕವಾಗಿ ನಡೆಸಿದ ಪ್ರಯೋಗದ ವಿಡಿಯೋ ಚಿತ್ರೀಕರಣವನ್ನು ಸ್ಥಳದಲ್ಲಿ ಪ್ರದರ್ಶಿಸಲಾಯಿತು.

click me!