ಕೊಲೆಯಾದ ಬಿಜೆಪಿಗ ಯೋಗೇಶ್ ಪತ್ನಿ ಕೈ ಸೇರ್ಪಡೆ : ಮೂಲ ಕಾರಣ ಏನು..?

By Kannadaprabha NewsFirst Published Nov 12, 2020, 7:54 AM IST
Highlights

ಯೋಗೀಶ್‌ ಗೌಡ ಅವರ ಪತ್ನಿ ಮಲ್ಲಮ್ಮ ಅವರನ್ನು ಕಾಂಗ್ರೆಸ್‌ಗೆ ಕರೆತಂದಿದ್ದು ಇದರ ಹಿಂದಿನ ಕಾರಣ ಏನು ಎನ್ನುವ ಬಗ್ಗೆಯೂ ತನಿಖೆ ಚುರುಕಾಗಿದೆ. 

ಧಾರವಾಡ (ನ.12):  ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ್‌ಗೌಡ ಗೌಡರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮೂರು ದಿನಗಳಿಂದ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಗಿಯನ್ನು ನಿತ್ಯವೂ ಕರೆಯಿಸಿ ಡ್ರಿಲ್‌ ಮಾಡುತ್ತಿರುವ ಸಿಬಿಐ ಅಧಿಕಾರಿಗಳು ಯೋಗೀಶ್‌ ಗೌಡ ಅವರ ಪತ್ನಿ ಮಲ್ಲಮ್ಮ ಅವರನ್ನು ಕಾಂಗ್ರೆಸ್‌ಗೆ ಕರೆತರಲು ಸಂದಾಯವಾಗಿದೆ ಎನ್ನಲಾಗಿರುವ ಹಣದ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.

ಸಿಬಿಐ ಅಧಿಕಾರಿಗಳು ಬುಧವಾರದಂದು ಬಸವರಾಜ ಸಂದೀಪ ಸವದತ್ತಿ, ಕೀರ್ತಿ ಕುಮಾರ, ವಿನಾಯಕ ಕಟಗಿ, ವಿಕ್ರಮ್‌ ಬಳ್ಳಾರಿ, ಮಹಾಬಳೇಶ್ವರ ಹೊಂಗಲ ಹಾಗೂ ಸಂತೋಷ ಸವದತ್ತಿ, ವಿನಯ ಕುಲಕರ್ಣಿ ಅವರ ಖಾಸಗಿ ಆಪ್ತಸಹಾಯಕನಾಗಿರುವ ಪ್ರಶಾಂತ ಕೇಕರೆ ಅವರನ್ನು ವಿಚಾರಣೆ ನಡೆಸಿದರು.

ಜೈಲಲ್ಲಿ ವಿನಯ್‌ ಕುಲಕರ್ಣಿಗೆ ಸಾಮಾನ್ಯ ಕೈದಿಯ ಸೌಲಭ್ಯ ...

ಈ ಮಧ್ಯೆ ಮಂಗಳವಾರ ರಾತ್ರಿಯ ವರೆಗೂ ಕಾಂಗ್ರೆಸ್‌ ಮುಖಂಡ ನಾಗರಾಜ ಗೌರಿಯನ್ನು ವಿಚಾರಣೆಗೆ ಒಳಪಡಿಸಿದ ವಿಚಾರವೂ ಗಮನ ಸೆಳೆದಿದೆ. ಮುತ್ತಗಿ ಹಾಗೂ ನಾಗರಾಜ ಗೌರಿ ಹುಬ್ಬಳ್ಳಿಯ ಹೋಟೆಲ್‌ನಲ್ಲಿ ಭೇಟಿಯಾಗಿದ್ದರ ಬಗ್ಗೆ ಸಿಬಿಐ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ. ಹಾಗೆಯೇ ಮಲ್ಲಮ್ಮ ಬಿಜೆಪಿಯಿಂದ ಕಾಂಗ್ರೆಸ್‌ ಬಂದಿದ್ದರ ಬಗ್ಗೆ ಇವರಿಬ್ಬರ ಬಳಿ ಮಾಹಿತಿ ಇರುವ ಕುರಿತು ಸಾಕ್ಷ್ಯವನ್ನು ಸಂಗ್ರಹಿಸಲಾಗಿದೆ.

ಇತ್ತ ವಿನಯ ಕುಲಕರ್ಣಿ ಪರ ವಕೀಲರು ಧಾರವಾಡದ ಮೂರನೇ ಹೆಚ್ಚುವರಿ ಸೆಷನ್‌ ನ್ಯಾಯಾಲಯದಲ್ಲಿ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದು ಗುರುವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಇದೇವೇಳೆ ಯೋಗೀಶ್‌ ಹತ್ಯೆಯಾದಾಗ ತನಿಖಾಧಿಕಾರಿಯಾಗಿದ್ದ ಉಪನಗರ ಠಾಣೆಯ ಇನಸ್ಪೆಕ್ಟರ್‌ ಚೆನ್ನಕೇಶವ ಟಿಂಗರೀಕರ್‌ ಧಾರವಾಡದ ಹೈಕೋರ್ಟ್‌ಗೆ ಸೋಮವಾರ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು ಇನ್ನೂ ವಿಚಾರಣೆಗೆ ಬಂದಿಲ್ಲ.

click me!