ಬದುಕಿಗೆ ಕೊಳ್ಳಿಯಿಟ್ಟ ಕೆಮಿಕಲ್‌ ಫ್ಯಾಕ್ಟರಿ: ಬೆಳಕಿನ ಹಬ್ಬದ ದೀಪಾವಳಿ ವೇಳೆ ಆವರಿಸಿದ ಕತ್ತಲು

Kannadaprabha News   | Asianet News
Published : Nov 12, 2020, 07:25 AM IST
ಬದುಕಿಗೆ ಕೊಳ್ಳಿಯಿಟ್ಟ ಕೆಮಿಕಲ್‌ ಫ್ಯಾಕ್ಟರಿ: ಬೆಳಕಿನ ಹಬ್ಬದ ದೀಪಾವಳಿ ವೇಳೆ ಆವರಿಸಿದ ಕತ್ತಲು

ಸಾರಾಂಶ

ಅಗ್ನಿ ಅನಾಹುತ ನಡೆದು 48 ತಾಸದಾದರೂ ಹೊಸಗುಡ್ಡದಹಳ್ಳಿಯಲ್ಲಿ ಆರದ ಬೆಂಕಿ| ಫ್ಯಾಕ್ಟರಿ ಪಕ್ಕದಲ್ಲಿದ್ದ ಮನೆಗಳು ಬೆಂಕಿಗಾಹುತಿ| ಉಡಲು ಬಟ್ಟೆಯೂ ಇಲ್ಲದಂತೆ ಮನೆಯಲ್ಲಿದ್ದ ವಸ್ತುಗಳೆಲ್ಲಾ ಸುಟ್ಟು ಕರಕಲು| ಅಗ್ನಿ ಜ್ವಾಲೆಗೆ ಸಿಲುಕಿ ಜೀವ ಕಳೆದುಕೊಳ್ಳುವ ಭೀತಿಯಲ್ಲಿದ್ದ ನೂರಾರು ಪಾರಿವಾಳನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ

ಬೆಂಗಳೂರು(ನ.12): ಹೊಸಗುಡ್ಡದಹಳ್ಳಿಯ ರೇಖಾ ರಾಸಾಯನಿಕ ಫ್ಯಾಕ್ಟರಿ ಗೋದಾಮಿನ ಅಗ್ನಿ ದುರಂತದಲ್ಲಿ ನೂರಾರು ಜನರ ‘ಕನಸುಗಳು’ ಬೆಂದು ಹೋಗಿವೆ. ಅಗ್ನಿ ಕುಂಡಕ್ಕೆ ಬಿದ್ದ ಒಬ್ಬೊಬ್ಬರದು ಒಂದೊಂದು ಮನ ಮಿಡಿಯುವ ಕತೆಯಾಗಿದೆ. ಜೀವನವಿಡೀ ದುಡಿದು ಕಟ್ಟಿದ ಮನೆ, ಕೂಡಿಟ್ಟಿದ್ದ ಹಣ, ಖರೀದಿಸಿದ್ದ ಚಿನ್ನ, ಆಸೆಪಟ್ಟು ಖರೀದಿಸಿದ ಪೀಠೋಪಕರಣಗಳು, ಉಡಲು ಬಟ್ಟೆಯೂ ಇಲ್ಲದಂತೆ ಎಲ್ಲಾ ವಸ್ತುಗಳು ಅಗ್ನಿಗೆ ಆಹುತಿಯಾಗಿವೆ. ಅಗ್ನಿ ಅನಾಹುತ ಸಂಭವಿಸಿ 48 ಗಂಟೆ ಕಳೆದರೂ ಬೆಂಕಿಯ ಜ್ವಾಲೆ ಇನ್ನೂ ಆರಿರಲಿಲ್ಲ. ಗೋದಾಮಿನ ಅಕ್ಕಪಕ್ಕದ ಮನೆಗಳ ಜನರ ಬದುಕು ಬೆಳಕಿನ ಹಬ್ಬದ ದೀಪಾವಳಿ ಹೊತ್ತಿನಲ್ಲೇ ಕತ್ತಲಾಗಿದೆ.

ನಮ್ಮ ಬದುಕು ನಾಶವಾಯಿತು:

‘ಪ್ರತಿ ದಿನದಂತೆ ಕೆಲಸಕ್ಕೆ ಹೋಗಿದ್ದೆ. ನೆರೆಹೊರೆಯವರು ಮಧ್ಯಾಹ್ನ 12 ಗಂಟೆಗೆ ಕರೆ ಮಾಡಿ ಮನೆಗೆ ಬೆಂಕಿ ಬಿದ್ದಿದೆ ಎಂದರು. ಕೂಡಲೇ ಓಡೋಡಿ ಬಂದೆ. ಅಷ್ಟರಲ್ಲಿ ದಟ್ಟ ಹೊಗೆ ಆವರಿಸಿತು. ಕಣ್ಮುಂದೆಯೇ ಪ್ರೀತಿಯಿಂದ ಕಟ್ಟಿದ ಮನೆಗೆ ಬೆಂಕಿಯಲ್ಲಿ ಬೆಂದು ಹೋಗುತ್ತಿತ್ತು. ಪೂರ್ತಿ ಕಟ್ಟಡ ನಾಶವಾಗಿದೆ. ದಾಖಲೆಗಳು ಸುಟ್ಟು ಹೋಗಿವೆ. ಮನೆಯಲ್ಲಿಟ್ಟಿದ್ದ .16 ಸಾವಿರ, ಒಡವೆಗಳು ಕರಗಿ ಹೋಗಿವೆ. ದೀಪಾವಳಿ ಆಚರಿಸುವ ಮುನ್ನವೇ ನಮ್ಮ ಬಾಳ ಬೆಳಕು ಆರಿದೆ. ನಮಗೆ ಯಾರಾದರೂ ಸಹಾಯ ಮಾಡಿದರೆ ಜೀವನ ಕಟ್ಟಿಕೊಳ್ಳುತ್ತೇವೆ‡. ನಮ್ಮಿಂದ ಈ ನಷ್ಟಭರಿಸಲು ಸಾಧ್ಯವಿಲ್ಲ’ ಎಂದು ಸ್ಥಳೀಯ ನಿವಾಸಿ ಸುನೀತಾ ಕಣ್ಣೀರಾದರು.

ಇದೇ ಪ್ರದೇಶದಲ್ಲಿ ಆಡಿ ಬೆಳೆದಿದ್ದೇನೆ. ಯಾವತ್ತೂ ಕಹಿ ಘಟನೆ ಸಂಭವಿಸಿಲ್ಲ. ಮಂಗಳವಾರ ದಿನವಿಡೀ ಮನೆ ಬಳಿಗೆ ಬರಲು ಸಾಧ್ಯವಾಗಲಿಲ್ಲ. ನಮ್ಮ ಸಂಬಂಧಿಕರ ಮನೆಯಲ್ಲಿ ರಾತ್ರಿ ಕಳೆದವು. ಬೆಳಗ್ಗೆ ಮನೆಗೆ ಬಂದಾಗ ಪರಿಸ್ಥಿತಿ ನೋಡಿ ಮಾತೇ ಬರಲಿಲ್ಲ. ನಮಗೆ ಆ ಕೆಮಿಕಲ್‌ ಫ್ಯಾಕ್ಟರಿ. ಇಲ್ಲ ಸರ್ಕಾರ, ಬಿಬಿಎಂಪಿ ನಷ್ಟಭರಿಸಬೇಕು. ನಮಗೆ ಹಾಕಿಕೊಳ್ಳಲು ಬಟ್ಟೆಕೂಡಾ ಇಲ್ಲದಂತಾಗಿದೆ. ಇಡೀ ಮನೆ ಸುಟ್ಟು ಹೋಗಿದೆ. ಹೊಸ ಟಿವಿ ಖರೀದಿಸಿದ್ದೇವು. ಅದೂ ಹಾಳಾಗಿ ಹೋಗಿದೆ ಎಂದು ಅವರು ದುಃಖಿಸಿದರು.

ಧಗ ಧಗ ಉರಿದ ಸ್ಯಾನಿಟೈಸರ್‌ ಫ್ಯಾಕ್ಟರಿ: ಕೋಟ್ಯಂತರ ರೂ. ನಷ್ಟ

ಬಾಂಬ್‌ನಂತೆ ಭಾಸವಾಯಿತು:

ನಾನು ಉಪಾಹಾರ ಸೇವಿಸಿ ಮನೆ ಹೊಸ್ತಿನಲ್ಲಿ ಹೊರ ಹೋಗಲು ನಿಂತಿದ್ದೆ. ಆ ವೇಳೆ ಬಾಂಬ್‌ ಬಿದ್ದಂತೆ ಭೀಕರ ಶಬ್ದ ಮೊಳಗಿತು. ನಮ್ಮ ಮನೆ ಪಕ್ಕದ ಕೆಮಿಕಲ್‌ ಫ್ಯಾಕ್ಟರಿ ಗೋದಾಮಿಗೆ ಬೆಂಕಿ ಬಿದ್ದಿದೆ ಎಂದು ಜನರು ಕೂಗಿಕೊಳ್ಳುತ್ತಿದ್ದರು. ಹೊರ ಬಂದು ನೋಡಿದರೆ ಬ್ಯಾರಲ್‌ಗಳು 600 ಅಡಿ ಮೇಲಕ್ಕೆ ಸಿಡಿಯುತ್ತಿದ್ದವು. ಭೀಕರವಾದ ಘಟನೆ. ಕೂಡಲೇ ಮನೆಯಿಂದ ಎಲ್ಲ ಓಡಿ ಹೋಗಿ ಪ್ರಾಣ ಉಳಿಸಿಕೊಂಡೆವು. ನಮ್ಮ ಮನೆಗೆ ಅಗ್ನಿ ಜ್ವಾಲೆಗಳು ಕ್ಷಣಾರ್ಧದಲ್ಲಿ ಆವರಿಸಿದವು ಎಂದು ಸ್ಥಳೀಯ ನಿವಾಸಿ ರಾಜು ನೊಂದು ಹೇಳುತ್ತಾರೆ.

ನಮ್ಮ ರಕ್ಷಣೆಗೆ ಯಾವೊಬ್ಬ ಅಧಿಕಾರಿಯೂ ಬರಲಿಲ್ಲ. ಈ ಕೆಮಿಕಲ್‌ ಫ್ಯಾಕ್ಟರಿ ವಿರುದ್ಧ ಹಲವು ಬಾರಿ ದೂರು ಕೊಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿ ದಿನ ಆ ಫ್ಯಾಕ್ಟರಿಗೆ ಬ್ಯಾರಲ್‌ ಗಟ್ಟಲೇ ಕೆಮಿಕಲ್‌ ಬರುತ್ತದೆ. ಅದರ ಕಮಟು ವಾಸನೆ ಸಹಿಸಲಾಗುವುದಿಲ್ಲ. ನಮಗೆ ಅನಾರೋಗ್ಯಕ್ಕೂ ಕಾರಣವಾಗಿದೆ. ಆದರೆ ಬಿಬಿಎಂಪಿ ಅಧಿಕಾರಿಗಳಿಗೆ ಮಾತ್ರ ಕಾಣುವುದಿಲ್ಲ ಎಂದು ರಾಜು ಆಕ್ರೋಶ ವ್ಯಕ್ತಪಡಿಸಿದರು.

ಪಾರಿವಾಳಗಳ ರಕ್ಷಣೆ

ರೇಖಾ ಫ್ಯಾಕ್ಟರಿ ಗೋದಾಮಿಗೆ ಬೆಂಕಿ ನಂದಿಸುವಲ್ಲಿ ತೊಡಗಿದ್ದ ಅಗ್ನಿಶಾಮಕ ದಳ ಸಿಬ್ಬಂದಿ, ಅಗ್ನಿ ಜ್ವಾಲೆಗೆ ಸಿಲುಕಿ ಜೀವ ಕಳೆದುಕೊಳ್ಳುವ ಭೀತಿಯಲ್ಲಿದ್ದ ನೂರಾರು ಪಾರಿವಾಳನ್ನು ರಕ್ಷಿಸಿದ ಮಾನವೀಯ ಘಟನೆ ನಡೆಯಿತು. ಆ ಗೋದಾಮಿನ ಅಕ್ಕಪಕ್ಕದ ಕಟ್ಟಡಗಳಲ್ಲಿ ಗೂಡು ಕಟ್ಟಿಕೊಂಡು ಅಸಂಖ್ಯಾತ ಪಾರಿವಾಳ ವಾಸುತ್ತಿದ್ದವು. ಬೆಂಕಿ ಬಿದ್ದ ಪರಿಣಾಮ ಹಕ್ಕಿಗಳಿಗೆ ಸಂಕಟ ಎದುರಾಗಿತ್ತು. ಆದರೆ ಅಂತಃಕರಣ ಮುಡಿದ ಅಗ್ನಿಶಾಮಕ ದಳದ ಸಿಬ್ಬಂದಿ, ಪಾರಿವಾಳಗಳನ್ನು ಕಾಪಾಡಿದರು.
 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC