ಮಡಿಕೇರಿ (ಸೆ.10): ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ದರ ಶೇ.2ಕ್ಕಿಂತ ಕಡಿಮೆಯಾದ ಹಿನ್ನೆಲೆ ರಾಜ್ಯದ ಜಿಲ್ಲೆಗಳಲ್ಲಿ ಕೋವಿಡ್-19 ಸೋಂಕು ನಿಯಂತ್ರಣ ಸಂಬಂಧ ಸರ್ಕಾರದ ಹೊರಡಿಸಿರುವ ಆದೇಶಗಳನ್ನು ಆಧರಿಸಿ, ಕೊಡಗು ಜಿಲ್ಲೆಯ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಈ ಹಿಂದೆ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದ್ದ ವೀಕೆಂಡ್ ಕರ್ಫ್ಯೂವನ್ನು ಸೆ.9ರಿಂದ ಅನ್ವಯವಾಗುವಂತೆ ಮುಂದಿನ ಆದೇಶವರೆಗೆ ಜಾರಿಯಲ್ಲಿರುವಂತೆ ಕರ್ಫ್ಯೂ ತೆರವುಗೊಳಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಹೊರಡಿಸಿದ್ದಾರೆ.
ಹಳೇ ಮಾರ್ಗಸೂಚಿಯನ್ನು ಮಾರ್ಪಡಿಸಿ ಪ್ರತಿದಿನ ಬೆಳಗ್ಗೆ 5 ರಿಂದ ರಾತ್ರಿ 9 ರವರೆಗೆ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಸೋಂಕು ಹೆಚ್ಚಿರುವ ಕೇರಳ ರಾಜ್ಯ ಪ್ರಯಾಣವನ್ನು ಸಾರ್ವಜನಿಕರು ಮುಂದೂಡುವಂತೆ ಮನವಿ ಮಾಡಿರುವ ಜಿಲ್ಲಾಡಳಿತ, ಕೋವಿಡ್ ವಿರುದ್ಧ ಜಾಗೃತಿ ವಹಿಸುವಂತೆ ಸೂಚಿಸಿದೆ.
ರಾಜ್ಯದಲ್ಲಿ ಕೋವಿಡ್‌ಗೆ ನಾಲ್ಕು ಸಾವು: 172 ದಿನಗಳ ಕನಿಷ್ಠ
ಈ ಸಂದರ್ಭ ಕಂಟೈನ್ಮೆಂಟ್ ವಲಯಗಳಲ್ಲಿ ಯಾವುದೇ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ. ವಾರದ ಎಲ್ಲ ದಿನಗಳಲ್ಲಿ ರಾತ್ರಿ 9 ಗಂಟೆಯಿಂದ ಮರುದಿನ ಬೆಳಗ್ಗೆ 5 ಗಂಟೆ ವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಎಲ್ಲ ತರಹದ ಅಂಗಡಿ ಮುಂಗಟ್ಟುಗಳು ಬೆಳಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಕೋವಿಡ್ ಸಮುಚಿತ ವರ್ತನೆಗಳೊಂದಿಗೆ ಕಾರ್ಯಾಚರಿಸಲು ಅನುಮತಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯ ಗಡಿಭಾಗಗಳಲ್ಲಿ ಮತ್ತು ಚೆಕೆಎಪೋಸ್ಟ್‌ಗಳಲ್ಲಿ ನಡೆಸುತ್ತಿರುವ ಸರ್ವೇಕ್ಷಣಾ ಕ್ರಮಗಳು/ನಿರ್ಬಂಧಗಳು ಯಥಾವತ್ತಾಗಿ ಮುಂದುವರೆಯುತ್ತದೆ. ಸಾರ್ವಜನಿಕರು ಕೋವಿಡ್ ಸಮುಚಿತ ವರ್ತನೆಗಳಾದ ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಕ್ರಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಎಲ್ಲ ಶಿಕ್ಷಣ ಸಂಸ್ಥೆಗಳು / ನರ್ಸಿಂಗ್ / ಪ್ಯಾರಾ ಮೆಡಿಕಲ್ ಸಂಸ್ಥೆಗಳ ಆಡಳಿತಾಧಿಕಾರಿಗಳು / ಪ್ರಾಂಶುಪಾಲರು ಕರ್ನಾಟಕಕ್ಕೆ ಇದುವರೆಗೂ ಹಿಂದಿರುಗದ ತಮ್ಮ ವಿದ್ಯಾರ್ಥಿ ಹಾಗೂ ಸಿಬ್ಬಂದಿಗಳಿಗೆ ಪ್ರಯಾಣವನ್ನು ಅಕ್ಟೋಬರ್ ಅಂತ್ಯದವರೆಗೆ ಮುಂದೂಡುವಂತೆ ಸೂಚಿಸಬೇಕು. ತಮ್ಮ ವಿದ್ಯಾರ್ಥಿ ಹಾಗೂ ಸಿಬ್ಬಂದಿಗೆ ಅಕ್ಟೋಬರ್ ಅಂತ್ಯದವರೆಗೆ ಕೇರಳಕ್ಕೆ ಪ್ರಯಾಣವನ್ನು ಮಾಡದಿರುವಂತೆ ಸೂಚಿಸಬೇಕು. ಎಲ್ಲ ಆಸ್ಪತ್ರೆಗಳು / ನರ್ಸಿಂಗ್ ಹೋಂಗಳು / ಕಚೇರಿಗಳು / ಹೋಟೆಲ್‌ಗಳು, ಕಾರ್ಖಾನೆಗಳು ಹಾಗೂ ಇತರ ಉದ್ಯಮಗಳ ಆಡಳಿತಾಧಿಕಾರಿಗಳು / ಮಾಲೀಕರು ಕರ್ನಾಟಕಕ್ಕೆ ಇದುವರೆಗೂ ಹಿಂದಿರುಗದ ತಮ್ಮ ಉದ್ಯೋಗಿಗಳ ಪ್ರಯಾಣವನ್ನು ಅಕ್ಟೋಬರ್ ಅಂತ್ಯದವರೆಗೆ ಮುಂದೂಡುವಂತೆ ಸೂಚಿಸಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.