ಮೈಸೂರು (ಸೆ.10): ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಶಕ್ತಿ ಏನು ಎಂಬುವವರಿಗೆ ಉತ್ತರ ಸಿಕ್ಕಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ತಿಳಿಸಿದರು.
ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಬುರ್ಗಿ ಮಹಾನಗರ ಪಾಲಿಕೆಯಲ್ಲಿ 7ರಲ್ಲಿ 4 ಸ್ಥಾನ ಗೆದ್ದಿದ್ದೇವೆ. ಎರಡು ಸ್ಥಾನ ಮಾರ್ಜಿನ್‌ನಲ್ಲಿ ಸೋತಿದ್ದೇವೆ. ಇದು ಎಚ್.ಡಿ. ಕುಮಾರಸ್ವಾಮಿ ಅವರ ಶ್ರಮದ ಫಲ ಎಂದರು.
ಕಲ್ಬುರ್ಗಿ ನಗರ ಪಾಲಿಕೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಮಾತನಾಡಿದ್ದೇನೆ. ಅವರ ಪಕ್ಷದ ನಾಯಕರ ಜತೆ ಚರ್ಚಿಸುವಂತೆ ತಿಳಿಸಿದ್ದೇನೆ ಎಂದು ಅವರು ಹೇಳಿದರು.
ಕಾವೇರಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳಲಿ. ಸರ್ಕಾರದ ನಿರ್ಧಾರಕ್ಕೆ ನಮ್ಮ ಪಕ್ಷ ಬೆಂಬಲವನ್ನು ನೀಡುತ್ತದೆ ಎಂದು ಎಚ್.ಡಿ. ದೇವೇಗೌಡರು ಸ್ಪಷ್ಟಪಡಿಸಿದರು.