ದೊರೆಯದ ಕಚ್ಚಾ ವಸ್ತು| ನೂರಾರು ಕೈ ಮಗ್ಗಗಳು ಬಂದ್ ಆಗುವ ಆತಂಕ| ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ದೋಟಿಹಾಳ, ಕೇಸೂರ ಗ್ರಾಮಗಳಲ್ಲಿ ಬಹುತೇಕ ಜನರು ನೇಕಾರಿಕೆ ನಂಬಿ ಜೀವನ ಸಾಗಿಸುತ್ತಿದ್ದಾರೆ| ಕೊರೋನಾ ಏಟಿಗೆ ನೇಯ್ಗೆ ಉದ್ಯಮ ತತ್ತರಿಸಿದೆ| ಲಾಕ್ಡೌನ್ನಿಂದ ಮದುವೆ, ಮುಂಜಿಯಂತ ಕಾರ್ಯಕ್ರಮಗಳು ನಡೆಯದಿರುವುದರಿಂದ ಸೀರೆಗಳ ವ್ಯಾಪಾರ ಬಂದ್|
ದೋಟಿಹಾಳ(ಏ.27): ಇಡೀ ನಾಡಿನಾದ್ಯಂತ ಕಾಡುತ್ತಿರುವ ಕೊರೋನಾ ವೈರಸ್ ರೋಗದ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಲಾಕ್‌ಡೌನ್ ಆದೇಶದ ಪ್ರಯುಕ್ತ ನೇಕಾರರಿಗೆ ಕಚ್ಚಾವಸ್ತು ಪೂರೈಕೆಯಾಗದ ಕಾರಣ ಅವಳಿ ಗ್ರಾಮದಲ್ಲಿನ ನೂರಾರು ಕೈ ಮಗ್ಗಗಳು ಬಂದ್ ಆಗುವ ಆತಂಕ ಎದುರಿಸುತ್ತಿವೆ. ಅವರ ನೇಕಾರಿಕೆ ಉದ್ಯೋಗ ನೆಲ ಕಚ್ಚುವ ಸಂಭವ ಇದೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ದೋಟಿಹಾಳ, ಕೇಸೂರ ಗ್ರಾಮಗಳಲ್ಲಿ ಬಹುತೇಕ ಜನರು ನೇಕಾರಿಕೆ ನಂಬಿ ಜೀವನ ಸಾಗಿಸುತ್ತಿದ್ದಾರೆ. ಆದರೆ, ಕೊರೋನಾ ಏಟಿಗೆ ನೇಯ್ಗೆ ಉದ್ಯಮ ತತ್ತರಿಸಿದೆ. ನೇಯ್ದ ಸೀರೆಗಳಿಗೆ ಬೆಲೆ ಇಲ್ಲದಾಗಿದೆ. ಲಾಕ್ಡೌನ್ನಿಂದ ಮದುವೆ, ಮುಂಜಿಯಂತ ಕಾರ್ಯಕ್ರಮಗಳು ನಡೆಯದಿರುವುದರಿಂದ ಸೀರೆಗಳ ವ್ಯಾಪಾರ ಬಂದ್ ಆಗಿದೆ. ಮಾರುಕಟ್ಟೆಬಂದ್ ಆಗಿದ್ದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ, ಸರ್ಕಾರ ನೇಕಾರ ನೆರವಿಗೆ ಬರಬೇಕಿದೆ.
undefined
ಹಸಿರು ವಲಯದ ಯುವಕನಿಂದ ರೆಡ್ ಝೋನ್ ಯುವತಿಯೊಂದಿಗೆ ಮದುವೆ: ಹೆಚ್ಚಿದ ಆತಂಕ
ರಾಜ್ಯ ಸರಕಾರ ಮತ್ತು ಜವಳಿ ಇಲಾಖೆ ನೇಕಾರರನ್ನು ಕಾರ್ಮಿಕರನ್ನಾಗಿ ಘೋಷಣೆ ಮಾಡಿ ಕಾರ್ಮಿಕರಿಗೆ ಸಿಗುವ ಎಲ್ಲ ಸೌಲಭ್ಯಗಳು ದೊರೆಯುವಂತೆ ಮಾಡಬೇಕು ಎಂದು ಅರಳಿಕಟ್ಟಿ ಗ್ರಾಮದ ನೇಕಾರ ವಿಜಯಕುಮಾರ ಅವರು ಹೇಳಿದ್ದಾರೆ.
ಗ್ರಾಮಗಳಲ್ಲಿನ ನೇಕಾರಿಕೆ ಉದ್ಯೋಗಕ್ಕೆ ಮೂಲ ಕಚ್ಚಾ ವಸ್ತು ಅತ್ಯವಶ್ಯ. ಅದಿಲ್ಲದೆ ತೊಂದರೆಯಾಗಿದೆ. ಬೇರೆ ಜಿಲ್ಲೆಗೆ ಹೋಗಿ ತರಬೇಕಾಗುತ್ತದೆ. ನಿಷೇಧವಿರುವುದರಿಂದ ಸಾರಿಗೆ ವ್ಯವಸ್ಥೆ ಇಲ್ಲ. ವೈಯಕ್ತಿಕ ವಾಹನ ಸೌಕರ್ಯ ಮಾಡಿಕಂಡು ಹೋದರೂ ಚೆಕ್ಪೋಸ್ಟ್ನಲ್ಲಿ ಬಿಡುತ್ತಿಲ್ಲ. ಬೇರೆ ಕಡೆಯಿಂದ ಕಚ್ಚಾವಸ್ತು ಬರುತ್ತಿಲ್ಲ ಎಂದು ದೊಟಿಹಾಳದ ಕೈ.ನೇ.ಉ.ಮಾ.ಸ.ಸಂ ಕಾರ್ಯದರ್ಶಿ ರುದ್ರಮುನಿ ಬಿಜ್ಜಲ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ನೇಕಾರರ ಕುರಿತು ಮಾಹಿತಿ ನೀಡಲು ಆದೇಶ ಮಾಡಿದೆ. ಮೂರ್ನಾಲ್ಕು ದಿನಗಳಲ್ಲಿ ನೇಕಾರರ ಕುರಿತು ಮಾಹಿತಿ ನೀಡುತ್ತೇವೆ ಎಂದು ಜವಳಿ ಇಲಾಖೆಯ ಸಿಬ್ಬಂದಿ ವಸಂತ ಅವರು ತಿಳಿಸಿದ್ದಾರೆ.