ಕೆಂಪು ವಲಯ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ಯುವತಿಯೋರ್ವಳನ್ನು ವಿವಾಹವಾದ ಹಸಿರು ವಲಯ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಯುವಕ| ಹಸಿರು ವಲಯದ ಜನರಲ್ಲಿ ಮನೆ ಮಾಡಿದ ಆತಂಕ| ನವ ದಂಪತಿಗಳನ್ನು, ಅವರ ಪಾಲಕರನ್ನು ಹಾಗೂ ಮದುವೆಯಲ್ಲಿ ಭಾಗವಹಿಸಿದವರನ್ನು ಕ್ವಾರಂಟೈನ್‌ನಲ್ಲಿ ಇಡಬೇಕೆಂದು ಆಗ್ರಹ|
ಮುನಿರಾಬಾದ್(ಏ.27): ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಸಮೀಪದ ಮಟ್ಟಿಮುದ್ಲಾಪುರ ಗ್ರಾಮದ ಯುವಕ ಕೆಂಪು ವಲಯ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ಯುವತಿಯೋರ್ವಳನ್ನು ಭಾನುವಾರ ಬೆಳಗಿನ ಜಾವ 5ಗಂಟೆಗೆ ವಧುವಿನ ಊರಿನಲ್ಲಿ ವಿವಾಹವಾಗಿದ್ದಾನೆ.
ಈ ವಿವಾಹಕ್ಕೆ ಹಾಟ್‌ಸ್ಪಾಟ್ ಹೊಸಪೇಟೆಯಿಂದ 20 ಜನರು ಹಾಗೂ ಹಗರಿಬೊಮ್ಮನಹಳ್ಳಿಯ 25 ಜನರು ಆಗಮಿಸಿ ವಧು-ವರರನ್ನು ಹರಿಸಿದ್ದಾರೆ. ವಿಪರ್ಯಾಸವೆಂದರೆ ಕೊಪ್ಪಳ ಜಿಲ್ಲೆಯು ಹಸಿರು ವಲಯವಾಗಿದ್ದು, ಒಂದೂ ಕೊರೋನಾ ಕೇಸು ಇದುವರೆಗೂ ಪತ್ತೆಯಾಗಿಲ್ಲ. ಆದರೆ, ಬಳ್ಳಾರಿ ಜಿಲ್ಲೆಯಲ್ಲಿ 13 ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಅದನ್ನು ಕೆಂಪು ವಲಯ ಎಂದು ಸರ್ಕಾರ ಘೋಷಣೆ ಮಾಡಿದೆ. ಇದಲ್ಲದೆ ಹೊಸಪೇಟೆ ನಗರವನ್ನು ಹಾಟ್‌ಸ್ಪಾಟ್ ವಲಯ ಎಂದು ಘೋಷಿಸಲಾಗಿದ್ದು, ಈ ಭಾಗದ ಜನರು ಹೊಸಪೇಟೆ ಬಿಟ್ಟು ಬೇರೆ ತಾಲೂಕಿಗೆ ಹೋಗುವಂತಿಲ್ಲ. ಇಂತಹದರಲ್ಲಿ ಹೊಸಪೇಟೆಯಿಂದ 20 ಜನರು ಹಗರಿಬೊಮ್ಮನಹಳ್ಳಿಗೆ ಬಂದು ಮದುವೆಯಲ್ಲಿ ಭಾಗವಹಿಸಲು ತೆರಳಿದ್ದಾದರೂ ಹೇಗೆ? ಇವರಿಗೆ ಅಲ್ಲಿಗೆ ಹೋಗಲು ಪರವಾನಗಿ ನೀಡಿದವರಾರು ಎನ್ನುವ ಪ್ರಶ್ನೆ ಎದುರಾಗಿದೆ.
undefined
ಮನೆಯಿಂದ ಆಚೆ ಬಂದವರಿಗೆ ಸ್ಪೆಷಲ್ ಪಿಪಿಇ ಕಿಟ್ ಹಾಕಿದ ಕೊಪ್ಪಳ ಪೊಲೀಸರು..!
ಪರವಾನಗಿ ಇಲ್ಲದೆ ವಿವಾಹ:
ಈ ಸಂದರ್ಭದಲ್ಲಿ ವಿವಾಹವಾಗಬೇಕಾದರೆ ಜಿಲ್ಲಾಧಿಕಾರಿಗಳ ಪರವಾನಗಿ ಕಡ್ಡಾಯವಾಗಿರುತ್ತದೆ. ವರನ ಕಡೆಯವರು ಕೊಪ್ಪಳ ಜಿಲ್ಲಾಧಿಕಾರಿಯಿಂದ ಹಾಗೂ ವಧುವಿನ ಕಡೆಯವರು ಬಳ್ಳಾರಿ ಜಿಲ್ಲಾಧಿಕಾರಿಯಿಂದ ವಿವಾಹದ ಪರವಾನಗಿಯನ್ನು ಕಡ್ಡಾಯವಾಗಿ ಪಡೆಯಬೇಕು. ಆದರೆ, ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಪರವಾನಗಿ ಇಲ್ಲದೇ ಈ ವಿವಾಹ ನಡೆದಿದೆ. ಮಟ್ಟಿಮುದ್ಲಾಪುರ ಗ್ರಾಮಸ್ಥರು ನವ ದಂಪತಿಗಳನ್ನು, ಅವರ ಪಾಲಕರನ್ನು ಹಾಗೂ ಮದುವೆಯಲ್ಲಿ ಭಾಗವಹಿಸಿದವರನ್ನು ಕ್ವಾರಂಟೈನ್‌ನಲ್ಲಿ ಇಡಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ಕೊರೋನಾ ಟಾಸ್ಕ್ ಪೋರ್ಸ್‌ಗೆ ಮಾಹಿತಿ ನೀಡಲಾಗಿದ್ದು, ಅವರು ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತಾರೆ ಎಂದು ಹಗರಿಬೊಮ್ಮನಹಳ್ಳಿ ಠಾಣಾ ಪಿ.ಎಸ್.ಐ ಲಕ್ಷ್ಮಣ ಅವರು ಹೇಳಿದ್ದಾರೆ.