ಕೊರೋನಾ ಹೊಡೆತಕ್ಕೆ ನೇಕಾರಿಕೆ ಗಡಗಡ..!

By Kannadaprabha NewsFirst Published May 3, 2021, 11:42 AM IST
Highlights

ಕೊರೋನಾ 2ನೇ ಅಲೆಗೆ ಶಿಗ್ಲಿಯಲ್ಲಿ ಒಂದು ಸಾವಿರ ಪವರ್‌ ಲೂಮ್‌ಗಳು ಸ್ತಬ್ಧ| ಬಟ್ಟೆ ಅಂಗಡಿಗಳು ಬಂದ್‌ ಆಗಿದ್ದರಿಂದ ಉದ್ಯಮಕ್ಕೆ ದೊಡ್ಡ ಪೆಟ್ಟು| ಕಚ್ಚಾ ನೂಲಿನ ಬೆಲೆ ಈಗ ಶೇ. 20ರಿಂದ 30ರಷ್ಟು ಹೆಚ್ಚಳ| ಉದ್ಯಮಕ್ಕೆ  ದೊಡ್ಡ ಹೊಡೆತವನ್ನೇ ನೀಡಿದ ಕೊರೋನಾ| 

ಅಶೋಕ ಸೊರಟೂರ

ಲಕ್ಷ್ಮೇಶ್ವರ(ಮೇ.03): ಕೊರೋನಾ ಮೊದಲ ಮತ್ತು ಎರಡನೆಯ ಅಲೆಯಲ್ಲಿ ನೇಕಾರಿಕೆಗೆ ಭಾರೀ ಹೊಡೆತ ನೀಡಿದೆ. ಬೇರೆಯವರಿಗೆ ಬಟ್ಟೆ ನೇಯ್ದು ಕೊಡುತ್ತಿರುವ ನೇಕಾರರ ಬದುಕು ಕೊರೋನಾದಿಂದ ಬೆತ್ತಲೆಯಾದಂತಾಗಿದೆ.

Latest Videos

ಕಳೆದ ವರ್ಷ ಮಾರ್ಚ್‌ ಮಧ್ಯ ಭಾಗದಲ್ಲಿ ಕೊರೋನಾದಿಂದ ಆರಂಭವಾದ ಲಾಕ್‌ಡೌನ್‌ ಎಲ್ಲ ಮದುವೆ ಮತ್ತು ಧಾರ್ಮಿಕ ಕಾರ್ಯಗಳನ್ನು ನುಂಗಿ ಹಾಕುವ ಮೂಲಕ ನೇಕಾರಿಕೆಗೆ ದೊಡ್ಡ ಪೆಟ್ಟನ್ನು ನೀಡಿತು. ಈ ವರ್ಷದಲ್ಲಿಯೂ ಇನ್ನೇನು ಮದುವೆ ಇನ್ನಿತರ ಸಾಂಪ್ರದಾಯಿಕ ಕಾರ್ಯಕ್ರಮಗಳು ಸೇರಿದಂತೆ ಜಾತ್ರೆ ಮೊದಲಾದ ಧಾರ್ಮಿಕ ಕಾರ್ಯಗಳು ಆರಂಭವಾಗಬೇಕು ಎನ್ನುವ ಹೊತ್ತಲ್ಲಿ ಎಲ್ಲ ಧಾರ್ಮಿಕ ಮತ್ತು ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ತಡೆಯೊಡ್ಡುವ ಮೂಲಕ ನೇಕಾರಿಕೆ ಉದ್ಯಮಕ್ಕೆ ದೊಡ್ಡ ಪೆಟ್ಟು ನೀಡಿದೆ.

ಸೀರೆ ಶಿಗ್ಲಿ ಪ್ರಸಿದ್ಧ

ಸಮೀಪದ ಶಿಗ್ಲಿಯಲ್ಲಿ ಕೃಷಿ ಬಳಿಕ ಹೆಚ್ಚಿನ ಕಾರ್ಮಿಕರಿಗೆ ಉದ್ಯೋಗ ನೀಡುತ್ತಿರುವುದು ನೇಕಾರಿಕೆ. ಬಹುತೇಕ ಕುಟುಂಬಗಳು ನೇಕಾರಿಕೆ ನೆಚ್ಚಿಕೊಂಡಿವೆ. ಈ ಹಿಂದೆ ಕೈಮಗ್ಗದ ಜಾಗೆಗೆ ಈಗ ವಿದ್ಯುತ್‌ ಮಗ್ಗಗಳು ಕಾಲಿಟ್ಟಿದ್ದು ನೇಕಾರಿಕೆಯನ್ನು ಸರಳಗೊಳಿಸಿವೆ. ಶಿಗ್ಲಿಯಲ್ಲಿ ಸುಮಾರು 1000ಕ್ಕೂ ಹೆಚ್ಚು ಪವರ್‌ ಲೂಮ್‌ಗಳ ಚಟಪಟ ಸದ್ದು ಕಿವಿಗೆ ಕೇಳಿಸುತ್ತಿತ್ತು. ಈಗ ಅಲ್ಲಿ ಮೌನ ಆವರಿಸಿದೆ.

ಕೊರೋನಾ ಅಟ್ಟಹಾಸಕ್ಕೆ ತತ್ತರಿಸಿದ ನೇಕಾರರು: ನೇಯ್ದ ಸೀರೆ ಮಾರಾ​ಟ​ವಾ​ಗದೆ ಸಂಕ​ಷ್ಟ

ಕಳೆದ 2 ವರ್ಷಗಳಿಂದ ಮಗ್ಗಗಳ ಸದ್ದು ಅಡಗುವಂತೆ ಮಾಡಿ ಜವಳಿ ಉದ್ಯಮಕ್ಕೆ ಕೊರೋನಾ ದೊಡ್ಡ ಹೊಡೆತವನ್ನೇ ನೀಡಿದೆ. ಅದರ ನೇರ ಪರಿಣಾಮ ಮಗ್ಗಗಳ ಮಾಲೀಕರು ಮತ್ತು ಕಾರ್ಮಿಕರ ಮೇಲೆ ಆಗಿದೆ. ಈ ಮಗ್ಗಗಳನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದ ನೂರಾರು ಕುಟುಂಬಗಳು ಈಗ ಬೀದಿ ಪಾಲಾಗಿವೆ.

ಮದುವೆ, ಮುಂಜಿವೆ, ಹಬ್ಬ ಹರಿದಿನಗಳಲ್ಲಿ ಹೊಸ ಬಟ್ಟೆತೊಟ್ಟು ಸಂಭ್ರಮಿಸುವುದು ವಾಡಿಕೆ. ಹಾಗಾಗಿ ಪ್ರತಿ ವರ್ಷ ಕೋಟ್ಯಂತರ ಆದಾಯ ಗಳಿಸುತ್ತಿದ್ದ ನೇಕಾರಿಕೆ ಈಗ ದೊಡ್ಡ ಹೊಡೆತ ಬಿದ್ದಿದೆ. ಸರ್ಕಾರ ಬಟ್ಟೆ ಅಂಗಡಿಗಳನ್ನು ಬಂದ್‌ ಮಾಡಿಸುವ ಮೂಲಕ ನೇಕಾರರ ಬದುಕಿಗೆ ಕೊಳ್ಳಿ ಇಟ್ಟಿದೆ. ನೇಕಾರರು ತಾವು ನೇಯ್ದ ಬಟ್ಟೆಗಳನ್ನು ಈ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು. ಆದರೆ ಈಗ ಬಟ್ಟೆ ಅಂಗಡಿಗಳು ಬಂದ್‌ ಆಗಿರುವುದರಿಂದ ಹೊಸ ಉತ್ಪನ್ನಗಳನ್ನು ಕೊಳ್ಳಲು ಅಂಗಡಿಯವರು ಮುಂದೆ ಬರುತ್ತಿಲ್ಲ. ಹೀಗಾಗಿ ನೇಯ್ದ ಬಟ್ಟೆಗಳನ್ನು ಮನೆಯಲ್ಲಿಯೇ ಇಟ್ಟುಕೊಂಡು ಸಂಕಷ್ಟ ಅನುಭವಿಸಬೇಕಾದ ಸ್ಥಿತಿ ನೇಕಾರರದು.

ನೇಕಾರರಿಗೂ ತಟ್ಟಿದ ಕೊರೋನಾ ವೈರಸ್ ಎಫೆಕ್ಟ್

ಕಚ್ಚಾ ವಸ್ತು ಬೆಲೆ ಹೆಚ್ಚಳ

ಮೊದಲು ಸಿಗುತ್ತಿದ್ದ ಕಚ್ಚಾ ನೂಲಿನ ಬೆಲೆ ಈಗ ಶೇ. 20ರಿಂದ 30ರಷ್ಟು ಹೆಚ್ಚಳವಾಗುವ ಮೂಲಕ ನೇಕಾರಿಕೆಗೆ ಬರೆ ಎಳೆದಿದೆ. ಯಾಕೆಂದರೆ ಬಟ್ಟೆ ಅಂಗಡಿಯ ಮಾಲೀಕರು ಈ ಹಿಂದೆ ಕೊಟ್ಟಿದ್ದ ಬೆಲೆಗೆ ಈಗ ನೇಯ್ಗೆ ಮಾಡಿರುವ ಸೀರೆ ಹಾಗೂ ಮತ್ತಿತರ ವಸ್ತುಗಳನ್ನು ಕೇಳುತ್ತಿದ್ದಾರೆ. ಈ ಅಂತರ ಸರಿದೂಗಿಸುವಲ್ಲಿ ನೇಕಾರಿಕೆ ಅತಂತ್ರವಾಗಿದೆ. ಮೊದಲೇ ತಯಾರಿಸಿದ ಸೀರೆ, ಪಂಜೆ, ಬೆಡ್‌ಶೀಟ್‌ಗಳು ಖರ್ಚಾಗದೆ ಉಳಿದಿದ್ದ ನೋವು ಒಂದೆಡೆಯಾದರೆ, ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಬಿಸಿ ಒಡಲನ್ನು ಸುಡುತ್ತಿದೆ. ಅತ್ತ ದರಿ -ಇತ್ತ ಪುಲಿ ಎನ್ನುವಂತಾಗಿದೆ ನೇಕಾರಿಕೆಯ ಬದುಕು. ಇದರ ಜೊತೆಯಲ್ಲಿ ಕೂಲಿ ಕಾರ್ಮಿಕರಿಗೆ ನಿತ್ಯ ಸಂಬಳ ಹಾಗೂ ಮತ್ತಿತರ ಸೌಲಭ್ಯ ನೀಡುವುದು ಅನಿವಾರ್ಯವಾಗಿದೆ.

ರಾಜ್ಯದಲ್ಲಿನ ಬಟ್ಟೆ ಅಂಗಡಿಗಳನ್ನು ಸರ್ಕಾರ ಬಂದ್‌ ಮಾಡಿಸಿದ್ದರಿಂದ ನೇಕಾರರು ನೇಯ್ಗೆ ಮಾಡಿದ ಸೀರೆಗಳು ಮಾರಾಟವಾಗದೇ ಹಾಗೆ ಉಳಿದಿವೆ. ಕಚ್ಚಾ ನೂಲಿನ ಬೆಲೆ ಹೆಚ್ಚಾಗಿದೆ. ತಯಾರಿಸಿದ ವಸ್ತಗಳನ್ನು ಬೇರೆ ಕಡೆಗೆ ಸಾಗಿಸಿ ಮಾರಾಟ ಮಾಡಬೇಕೆಂದರೆ ಬಟ್ಟೆ ಅಂಗಡಿ ಬಂದ್‌ ಆಗಿವೆ, ಹೀಗಾಗಿ ನಮ್ಮ ಬದುಕು ಬಾಣಲೆಯಿಂದ ಬೆಂಕಿಗೆ ಎನ್ನುವಂತಾಗಿದೆ ಎಂದು ವೀರಣ್ಣ ಪವಾಡದ, ಡಿ.ವೈ. ಹುನಗುಂದ ಶಿಗ್ಲಿಯ ನೇಕಾರಿಕೆ ಉದ್ಯಮಿಗಳು ತಿಳಿಸಿದ್ದಾರೆ.
 

click me!