ಬೆಳಗಾವಿ ಉಪಕದನದಲ್ಲಿ ಲಕ್ಷಕ್ಕೂ ಹೆಚ್ಚು ಮತ ಪಡೆದ MES: ಬಿಜೆಪಿಗೆ ಎಚ್ಚರಿಕೆ ಗಂಟೆ..!

By Suvarna NewsFirst Published May 3, 2021, 11:06 AM IST
Highlights

ಈ ಬಾರಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಭಗವಾ ಧ್ವಜ ಹಾರಿಸೋದು ಶತಸಿದ್ಧ| ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಭಗವಾ ಧ್ವಜ ಹಾರಿಸೋದು ನಮ್ಮ ಉದ್ದೇಶ| ನಾವು ಯಾರ ಅನುಕೂಲಕ್ಕಾಗಿ ಈ ಚುನಾವಣೆ ಸ್ಪರ್ಧಿಸಿರಲಿಲ್ಲ| ನಮ್ಮ ಅಸ್ತಿತ್ವ ತೋರಿಸೋದಿತ್ತು ತೋರಿಸಿದ್ದೇವೆ| ರಾಷ್ಟ್ರೀಯ ಪಕ್ಷಗಳನ್ನು ಮರಾಠಿ ಭಾಷಿಕರು ತಿರಸ್ಕರಿಸಿದ್ದಾರೆ: ಶುಭಂ ಶೆಳ್ಕೆ| 

ಬೆಳಗಾವಿ(ಮೇ.03): ಬೆಳಗಾವಿ ಲೋಕಸಭಾ ಉಪಸಮರದಲ್ಲಿ ಬಿಜೆಪಿ ಅಭರ್ಥಿ ಮಂಗಲ ಅಂಗಡಿ ಪ್ರಯಾಸದ ಗೆಲುವು ದಾಖಲಿಸಿದ್ದಾರೆ. ಆದರೆ, ಈ ಉಪಚುನಾವಣೆಯಲ್ಲಿ ಎಂಇಎಸ್‌ ಪಕ್ಷ ಬೆಳಗಾವಿಯಲ್ಲಿ ಮತ್ತೆ ರಾಜಕೀಯ ಅಸ್ತಿತ್ವ, ವರ್ಚಸ್ಸು ವೃದ್ಧಿಸಿಕೊಳ್ಳಲು ಯಶಸ್ವಿಯಾಗಿದೆ. ಹೌದು, ಉಪಕದನದಲ್ಲಿ ಎಂಇಎಸ್‌ ಅಭ್ಯರ್ಥಿ ಶುಭಂ ಶೆಳ್ಕೆ 1,17,174 ಮತಗಳನ್ನು ಪಡೆಯುವ ಮೂಲಕ ಬೆಳಗಾವಿ ಜಿಲ್ಲಾ ಬಿಜೆಪಿಗೆ ಎಚ್ಚರಿಕೆ ಗಂಟೆಯನ್ನ ರವಾನಿಸಿದೆ.

ಉಪಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತಯೇ ಎಂಇಎಸ್‌ ಪುಂಡರು ಮತ್ತೆ ಮತ್ತೆ ಕ್ಯಾತೆಯನ್ನ ಆರಂಭಿಸಿದ್ದಾರೆ. ಮರಾಠಿ ಭಾಷಿಕರು ಹೆಚ್ಚಾಗಿರುವ ಬಡಾವಣೆಗಳಲ್ಲಿ ಯುವಕ ಸಂಘಗಳ ನೋಟಿಸ್ ಬೋರ್ಡ್‌ನಲ್ಲಿ 'ಸಿಂಹ ಘರ್ಜನೆ ದೆಹಲಿಯವರೆಗೂ ತಲುಪಿತು' ಎಂದು ಮರಾಠಿ ಭಾಷೆಯಲ್ಲಿ ಬರೆದಿದ್ದಾರೆ. ಈ ಮೂಲಕ ಮುಂಬರುವ ಮಹಾನಗರ ಪಾಲಿಕೆ ಚುನಾವಣೆ ಮೇಲೆ ಎಂಇಎಸ್ ಕಣ್ಣಿಟ್ಟಿದೆ.

'ದೇಶ ಹಾಗೂ ರಾಜ್ಯದಲ್ಲಿ ಜನ ಬದಲಾವಣೆ ಬಯಸಿರುವುದಕ್ಕೆ ಚುನಾವಣೆ ಫಲಿತಾಂಶಗಳೇ ಸಾಕ್ಷಿ'

ರಾಷ್ಟ್ರೀಯ ಪಕ್ಷಗಳನ್ನ ತಿರಸ್ಕರಿಸಿದ ಮರಾಠರು

ಶಿವಸೇನೆ, ಎಂಇಎಸ್, ಎನ್‌ಸಿಪಿ ಒಗ್ಗೂಡಿ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಸ್ಪರ್ಧೆಗೆ ನಿರ್ಧರಿಸಿವೆ ಎಂದು ತಿಳಿದು ಬಂದಿದೆ. ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ಬೆಳಗಾವಿಯಲ್ಲಿ ಬಿಜೆಪಿ ಮತ ಸೆಳೆಯುವಲ್ಲಿ ಎಂಇಎಸ್ ಯಶಸ್ವಿಯಾಗಿದೆ. ಈ ಉಪಸಮರದಲ್ಲಿ ಎಂಇಎಸ್ ಲಕ್ಷಕ್ಕೂ ಹೆಚ್ಚು ಮತ ಪಡೆದಿದೆ. ಎಂಇಎಸ್ ಅಭ್ಯರ್ಥಿ ಶುಭಂ ಶೆಳ್ಕೆಗೆ‌ 1,17,174 ಮತಗಳನ್ನ ಪಡೆದಿದ್ದಾರೆ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ 44,950, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 45536, ಬೆಳಗಾವಿ ಉತ್ತರ ಕ್ಷೇತ್ರದಲ್ಲಿ 24594 ಮತಗಳನ್ನ ಎಂಇಎಸ್ ಪಡೆದಿದೆ. ಪಕ್ಕಾ ಬಿಜೆಪಿ ಮತ ಬ್ಯಾಂಕ್ ಆಗಿದ್ದ ಮರಾಠಿ ಭಾಷಿಕರ ಸೆಳೆಯುವಲ್ಲಿ ಎಂಇಎಸ್ ಯಶಸ್ವಿಯಾಗಿದೆ.

ಪಾಲಿಕೆ ಮೇಲೆ ಭಗವಾ ಧ್ವಜ ಹಾರಿಸೋದು ನಮ್ಮ ಉದ್ದೇಶ

ಈ ಬಗ್ಗೆ ಮಾತನಾಡಿದ ಪರಾಜಿತ ಅಭ್ಯರ್ಥಿ ಶುಭಂ ಶೆಳ್ಕೆ, ಈ ಬಾರಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಭಗವಾ ಧ್ವಜ ಹಾರಿಸೋದು ಶತಸಿದ್ಧ. ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಭಗವಾ ಧ್ವಜ ಹಾರಿಸೋದು ನಮ್ಮ ಉದ್ದೇಶವಾಗಿದೆ. ನಾವು ಯಾರ ಅನುಕೂಲಕ್ಕಾಗಿ ಈ ಚುನಾವಣೆ ಸ್ಪರ್ಧಿಸಿರಲಿಲ್ಲ. ನಮ್ಮ ಅಸ್ತಿತ್ವ ತೋರಿಸೋದಿತ್ತು ತೋರಿಸಿದ್ದೇವೆ. ರಾಷ್ಟ್ರೀಯ ಪಕ್ಷಗಳನ್ನು ಮರಾಠಿ ಭಾಷಿಕರು ತಿರಸ್ಕರಿಸಿದ್ದಾರೆ. ಬೆಳಗಾವಿ ಗ್ರಾಮೀಣ, ದಕ್ಷಿಣದಲ್ಲಿ ಅತಿ ಹೆಚ್ಚು ಮತಗಳನ್ನು ಎಂಇಎಸ್ ಪಡೆದಿದೆ. ಮರಾಠಿಗರ ಅಸ್ತಿತ್ವ, ಸ್ವಾಭಿಮಾನ ತೋರಿಸಲು ಈ ಚುನಾವಣೆ ಸಹಕಾರಿಯಾಗಿದೆ. ಯಾವುದೇ ಆಮಿಷಕ್ಕೆ ಒಳಗಾಗದೇ ತಮ್ಮ ಅಸ್ತಿತ್ವಕ್ಕೆ ಮರಾಠಿಗರು ಮತ ಹಾಕಿದ್ದಾರೆ. ರಾಷ್ಟ್ರೀಯ ಪಕ್ಷಗಳ ಅಹಂಕಾರ ನೆಲಕಚ್ಚಿದೆ. ಚುನಾವಣೆ ಮುಗಿದರೂ ನಮ್ಮ ಹೋರಾಟ ನಿಂತಿಲ್ಲ. ಮಹಾನಗರ ಪಾಲಿಕೆ ಎದುರು ಭಗವಾ ಧ್ವಜ ಹಾರಿಸುತ್ತೇವೆ ಎಂದ ಎಂಇಎಸ್ ಅಭ್ಯರ್ಥಿ ಶುಭಂ ಶೆಳ್ಕೆ ಹೇಳಿದ್ದಾರೆ.
 

click me!