ಕೊಪ್ಪಳ: ಇಲ್ಲಿ ಇಲಿಗೂ ಸಲ್ಲುತ್ತೆ ಪೂಜೆ..!

Kannadaprabha News   | Asianet News
Published : Sep 12, 2021, 09:35 AM IST
ಕೊಪ್ಪಳ: ಇಲ್ಲಿ ಇಲಿಗೂ ಸಲ್ಲುತ್ತೆ ಪೂಜೆ..!

ಸಾರಾಂಶ

*  ನೇಕಾರರು ಸೇರಿದಂತೆ ಅನೇಕರಿಂದ ಇಲಿ ಮೂರ್ತಿಗೆ ಪೂಜೆ *  ಜೀವಂತ ಇಲಿಗೂ ಪೂಜೆ ಮಾಡುವ ಯತ್ನ *  ನೇಕಾರಿಕೆ ಮಾಡುವ ಮುಸ್ಲಿಂ ಕುಟುಂಬದವರಿಂದಲೂ ಇಲಿಗೆ ಪೂಜೆ  

ಕೊಪ್ಪಳ(ಸೆ.12): ಗಣೇಶ ಚತುರ್ಥಿಯ ಮರುದಿನ ಕೊಪ್ಪಳ ಸಮೀಪದ ಭಾಗ್ಯನಗರದ ನೇಕಾರ ಕುಟುಂಬಗಳಲ್ಲಿ ಇಲಿಯ ಮೂರ್ತಿಯನ್ನು ಮಾಡಿ, ಇಲಿಯಮ್ಮನ ಹಬ್ಬ ಆಚರಣೆ ಮಾಡುತ್ತಾರೆ. ಗಣೇಶ ಮೂರ್ತಿಯನ್ನು ಮಾಡಿದಂತೆ ಇಲಿಯ ಮೂರ್ತಿಯನ್ನು ಮಾಡಿ, ಸಂಪ್ರದಾಯದಂತೆ ಪೂಜೆ ಸಲ್ಲಿಸುತ್ತಾರೆ.

ಭಾಗ್ಯನಗರ ಸೇರಿದಂತೆ ಜಿಲ್ಲಾದ್ಯಂತ ಇರುವ ನೇಕಾರ ಕುಟುಂಬಗಳಲ್ಲಿ ಈ ಸಂಪ್ರದಾಯ ಸಾಮಾನ್ಯವಾಗಿದೆ. ಪ್ರತಿ ವರ್ಷವೂ ಗಣೇಶ ಚತುರ್ಥಿಯ ಮರುದಿನ ಇಲಿ ಹಬ್ಬಕ್ಕಾಗಿ ವಿವಿಧ ರೀತಿಯಲ್ಲಿ ತಯಾರು ಮಾಡಿಕೊಂಡಿರುತ್ತಾರೆ. ಮನೆಯಲ್ಲಿ ಇಲಿಯ ಮೂರ್ತಿ ಪ್ರತಿಷ್ಠಾಪನೆ ಮಾಡಿ, ಅದಕ್ಕೆ ಗಣೇಶ ಮೂರ್ತಿಗೆ ಮಾಡುವಂತೆಯೇ ಪೂಜೆ ಮಾಡಿ, ನೈವೇಧ್ಯ ಮಾಡುತ್ತಾರೆ.

ಜೀವಂತ ಇಲಿಗೂ ಪೂಜೆ:

ಕೇವಲ ಮೂರ್ತಿಯನ್ನಷ್ಟೇ ಮಾಡಿ ಪೂಜಿಸುವುದಿಲ್ಲ. ಕೆಲವೊಂದು ಮನೆಯಲ್ಲಿ ಜೀವಂತ ಇಲಿಗೂ ಪೂಜೆ ಮಾಡುವ ಸಂಪ್ರದಾಯ ಇದೆ. ಆದರೆ, ಇದಕ್ಕಾಗಿ ನೇಕಾರರ ಕೆಲ ಕುಟುಂಬದವರು ತಟ್ಟೆಯಲ್ಲಿ ಹಾಲಿಟ್ಟುಕೊಂಡು ಕಾಯುತ್ತಾ ಕುಳಿತುಕೊಳ್ಳುತ್ತಾರೆ. ಇಲಿ ಬಂದು ತಟ್ಟೆಯಲ್ಲಿದ್ದ ಹಾಲು ಕುಡಿಯುತ್ತಿದ್ದಂತೆ ಪೂಜೆ ಸಲ್ಲಿಸುತ್ತಾರಂತೆ.

ಗುಂಡಿನ ಮತ್ತೇ ಗಮ್ಮತ್ತು... ಲಾಕ್ ಡೌನ್‌ನಲ್ಲಿ ನಶೆ ಏರಿಸಿಕೊಂಡ ಮೂಷಿಕ ಪಡೆ!

ಕೆಲ ವರ್ಷಗಳ ಹಿಂದೆ ಇಲಿಯ ಮೂರ್ತಿಗೆ ಮಾಡಿದಂತೆ ಜೀವಂತ ಇಲಿಗೂ ಸಂಪ್ರದಾಯಬದ್ಧವಾಗಿ ಪೂಜೆ ಮಾಡುತ್ತಿದ್ದರಂತೆ. ಅವುಗಳಿಗೆ ಆಹಾರ ನೀಡಿ ಸಾಕಿದ ಇಲಿಯಂತೆ ಇಟ್ಟುಕೊಳ್ಳುವ ರೂಢಿ ಮಾಡಿಕೊಂಡಿದ್ದರು. ಆಹಾರ ನೀಡಿದಂತೆ ಅವು ಹೊರ ಬರುತ್ತಿದ್ದವು. ಆಗ ಅದನ್ನು ಹಿಡಿದು ಪೂಜೆ ಮಾಡುತ್ತಿದ್ದರಂತೆ. ಆದರೆ ಈಗ ಇಲಿಯನ್ನು ಮನೆಯಲ್ಲಿ ಇರಲು ಯಾರೂ ಬಿಡುವುದಿಲ್ಲ. ಹೀಗಾಗಿ ಮೂರ್ತಿ ಮಾಡಿ ಪೂಜೆ ಮಾಡುವ ಪದ್ಧತಿ ಇದೆ.

ಮುಸ್ಲಿಂರಿದಂಲೂ ಪೂಜೆ:

ನೇಕಾರಿಕೆಯನ್ನು ಮಾಡುವ ಕೆಲವೊಂದು ಮುಸ್ಲಿಂ ಕುಟುಂಬಗಗಳೂ ಸಹ ಅವರ ಮನೆಯಲ್ಲಿ ಇಲಿ ಮೂರ್ತಿಯನ್ನು ಸ್ಥಾಪನೆ ಮಾಡಿ ಪೂಜೆ ಮಾಡುತ್ತಾರೆ. ಕೊಪ್ಪಳ ಸಮೀಪದ ಭಾಗ್ಯನಗರದಲ್ಲಿ ಹೊನ್ನೂರುಸಾಬ ಅವರ ಮನೆಯಲ್ಲಿ ಇಲಿ ಪೂಜೆ ಮಾಡುವ ಸಂಪ್ರದಾಯವಿದೆ. ಈ ವರ್ಷವೂ ಇವರ ಮನೆಯಲ್ಲಿ ಇಲಿ ಪೂಜೆ ಮಾಡಲಾಯಿತು.

ಯಾಕೇ ಮಾಡಲಾಗುತ್ತದೆ?:

ಇದಕ್ಕೆ ನಿಖರವಾದ ಉತ್ತರ ಯಾರ ಬಳಿಯೂ ಇಲ್ಲ. ಹಿರಿಯರು ಮಾಡಿಕೊಂಡು ಬರುತ್ತಿದ್ದ ಸಂಪ್ರದಾಯವಿದೆ. ಹೀಗಾಗಿ, ನಾವು ಮುಂದುವರೆಸಿಕೊಂಡು ಹೋಗುತ್ತೇವೆ ಎನ್ನುತ್ತಾರೆ. ಆದರೆ, ಕೆಲವರು ಹೇಳುವ ಪ್ರಕಾರ, ನೇಕಾರಿಕೆ ಮಾಡುತ್ತಿರುವುದರಿಂದ ಬಟ್ಟೆಗಳು ಮನೆಯಲ್ಲಿ ಇರುತ್ತವೆ. ಅವುಗಳನ್ನು ಕಡಿಯಬಾರದು ಎನ್ನುವ ಕಾರಣಕ್ಕಾಗಿ ಈ ರೀತಿಯ ಪೂಜೆಯನ್ನು ಮಾಡುವ ಸಂಪ್ರದಾಯವಿದೆ. ಇಲಿಯನ್ನು ಪೂಜೆ ಮಾಡುವವರ ಮನೆಯಲ್ಲಿ ಇದುವರೆಗೂ ಇಲಿ ಬಟ್ಟೆಕಡಿದ ಉದಾಹರಣೆ ಇಲ್ಲ ಎನ್ನುತ್ತಾರೆ.

ಸುಮಾರು ವರ್ಷಗಳಿಂದ ಮನೆಯಲ್ಲಿ ಮಾಡಿಕೊಂಡು ಬಂದ ಸಂಪ್ರದಾಯ ಇದು, ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಇಲಿ ಪೂಜೆಯನ್ನು ಮಾಡುವುದರಿಂದ ನಮಗೆ ಒಳ್ಳೆಯದೇ ಆಗಿದೆ ಎಂದು ಭಾಗ್ಯನಗರ ನಿವಾಸಿ ಹೊನ್ನೂರಸಾಬ ತಿಳಿಸಿದ್ದಾರೆ.  

ಹಿರಿಯರು ಮಾಡಿಕೊಂಡು ಬರುತ್ತಿದ್ದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಬಟ್ಟೆಗಳನ್ನು ಕಡಿಯಬಾರದು ಎನ್ನುವ ಕಾರಣಕ್ಕಾಗಿಯೇ ಇಲಿಗಳಿಗೆ ವಿಶೇಷ ಪೂಜೆ ಮಾಡಿ, ಇಲಿ ಹಬ್ಬವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತದೆ ಎಂದು ಬಸವರಾಜ ನೇಕಾರ ಹೇಳಿದ್ದಾರೆ. 
 

PREV
click me!

Recommended Stories

ಎಚ್‌ಡಿಕೆ ಮನುವಾದಿ ಆಗಿದ್ದಾರೆ ಎಂದ ಸಿದ್ದು: ಸಿದ್ದರಾಮಯ್ಯ ಮಜಾವಾದಿ ಎಂದ ಎಚ್‌ಡಿಕೆ
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ