‘ಗ್ಯಾರಂಟಿ’ ಜಾರಿಗೆ ತರುವವರೆಗೂ ನಾವು ವಿರಮಿಸಲ್ಲ

By Kannadaprabha News  |  First Published Jun 24, 2023, 6:01 AM IST

ಕಾಂಗ್ರೆಸ್‌ ಪಕ್ಷ ತಾನು ನೀಡಿದ ಭರವಸೆಗಳನ್ನು ಈಡೇರಿಸಲಾಗದೆ ದಿನಕ್ಕೊಂದು ಷರತ್ತುಗಳನ್ನು ವಿಧಿಸುತ್ತಿದ್ದು, ಜನರಿಗೆ ನೀಡಿದ ಗ್ಯಾರಂಟಿಗಳನ್ನು ಜಾರಿಗೆ ತರುವವರೆಗೂ ನಾವು ವಿರಮಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗುಡುಗಿದ್ದಾರೆ.


 ತುಮಕೂರು :  ಕಾಂಗ್ರೆಸ್‌ ಪಕ್ಷ ತಾನು ನೀಡಿದ ಭರವಸೆಗಳನ್ನು ಈಡೇರಿಸಲಾಗದೆ ದಿನಕ್ಕೊಂದು ಷರತ್ತುಗಳನ್ನು ವಿಧಿಸುತ್ತಿದ್ದು, ಜನರಿಗೆ ನೀಡಿದ ಗ್ಯಾರಂಟಿಗಳನ್ನು ಜಾರಿಗೆ ತರುವವರೆಗೂ ನಾವು ವಿರಮಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗುಡುಗಿದ್ದಾರೆ.

ನಗರದ ಗಾಜಿನಮನೆಯಲ್ಲಿ ತುಮಕೂರು ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ಪ್ರೇರಣಾ ಸಮಾವೇಶ ಉದ್ಘಾಟಿಸಿ ಮಾತನಾಡುತಿದ್ದ ಅವರು, ಸುಳ್ಳು ಗ್ಯಾರಂಟಿಗಳ ಮೂಲಕ ಬಡವರಿಗೆ ಮೋಸ ಮಾಡಿರುವ ಕಾಂಗ್ರೆಸ್‌ಗೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಹಕ್ಕಿಲ್ಲ. ಗ್ಯಾರಂಟಿಗಳಿಗೆ ಹಣ ಹೊಂಚಲಾಗದೆ ಇಡೀ ಸರಕಾರದ ಕೆಲಸ ಕಾರ್ಯಗಳನ್ನು ಸ್ಥಗೀತಗೊಳಿಸಿದರೆ, ಅಭಿವೃದ್ಧಿಗೆ ಒಂದು ಪೈಸೆ ಹಣ ನೀಡಿಲ್ಲ. ಕಾಂಗ್ರೆಸನ್ನು ಅಧಿಕಾರದಿಂದ ಕಿತ್ತೊಗೆಯಲು ನಿಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದರು.

Tap to resize

Latest Videos

ಅಧಿಕಾರ ಹೋಗಿದೆ ಎಂದು ಧೃತಿಗೇಡುವ ಅಗತ್ಯವಿಲ್ಲ. ವಿಧಾನಸಭೆಯಲ್ಲಿ ಬಿಜೆಪಿ ಪಕ್ಷದ ಇಬ್ಬರೇ ಶಾಸಕರಿದ್ದಾಗಲೂ ಆಡಳಿತ ಪಕ್ಷದ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿ ದ್ದೇವೆ. ಪಂಪಸೆಟ್‌ಗಳಿಗೆ ಉಚಿತ ವಿದ್ಯುತ್‌, ಹೈನುಗಾರರಿಗೆ ಪೋ›ತ್ಸಾಹ ಧನ, ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್‌ ನೀಡಿದ್ದು ಸಾಧನೆಗಳಲ್ಲವೇ? ಎಂದು ಅವರು ಪ್ರಶ್ನಿಸಿದರಲ್ಲದೆ,

ಪಕ್ಷವನ್ನು ಬಲಪಡಿಸುವತ್ತ ಗಮನಹರಿಸಿ, ತಾ.ಪಂ, ಜಿ.ಪಂ. ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಶಕ್ತಿ ಮೀರಿ ದುಡಿಯೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಕಾಂಗ್ರೆಸ್‌ ಪಕ್ಷ ಅಧಿಕಾರದ ಮದದಿಂದ ಜನ ಹಿತ ಮರೆತಿದೆ. ಜನರು ಕುಡಿಯಲು ನೀರಿಲ್ಲದ ಪರಿತಪಿಸುತಿದ್ದರೂ ಗಮನಹರಿಸುತ್ತಿಲ್ಲ, ಇಂತಹ ಜನದ್ರೋಹಿ ಸರಕಾರದ ವಿರುದ್ಧ ಜನಮತ ರೂಪಿಸುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರವಾಸ ಮಾಡುತ್ತೇನೆ. 2024ರ ಲೋಕಸಭಾ ಚುನಾವಣೆಯಲ್ಲಿ ಗಲುವು ಸಾಧಿಸಿ, ನರೇಂದ್ರಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದು ನಮ್ಮ ಗುರಿಯಾಗಿದೆ ಎಂದರು.

ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ನಮಗೆ ವಿಧಾನಸಭಾ ಸೋಲಿಗಿಂತ ಮುಂದಿನ ಲೋಕಸಭಾ ಮತ್ತು ತಾಪಂ, ಜಿಪಂ ಸಭೆಗಳಿಗೆ ಕಾರ್ಯ ಕರ್ತ ರನ್ನು ಸಜ್ಜುಗೊಳಿಸಬೇಕಿದೆ. ಹಾಗಾಗಿ ಇಂತಹ ಪ್ರೇರಣಾ ಸಮಾವೇಶಗಳು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ನಡೆಯಲಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಪಕ್ಷ ನೀಡಿದ ಬೇಕಾಬಿಟ್ಟಿಯೋಜನೆಗಳಿಂದ ರಾಜ್ಯದ ಆರ್ಥಿಕ ವ್ಯವಸ್ಥೆಗೆ ಬುಡಮೇಲಾಗಿದೆ. ಇಂದಿರಾ ಕ್ಯಾಂಟೀನ್‌ ಹೆಸರಿನಲ್ಲಿ ಜನರಿಗೆ ದ್ರೋಹ ಬಗೆಯಲಾಗುತ್ತಿದೆ ಎಂದು ಆರೋಪಿಸಿ ದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ ಸದಸ್ಯ ಹಾಗೂ ಜಿಲ್ಲಾ ಉಸ್ತುವಾರಿ ನವೀನ್‌ ಪ್ರಾಸ್ತವಿಕ ನುಡಿಗಳನ್ನಾಡಿದರು. ಮಾಜಿ ಸಚಿವ ಬಿ.ಸಿ.ನಾಗೇಶ್‌, ಶಾಸಕ ಬಿ.ಸುರೇಶಗೌಡ, ಮಾಜಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಕಾರ್ಯಕರ್ತರನ್ನು ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್‌ ವಹಿಸಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್‌ ಸದಸ್ಯರಾದ ಎನ್‌.ರವಿಕುಮಾರ್‌, ಚಿದಾನಂದ ಗೌಡ, ಮಾಜಿ ಶಾಸಕರಾದ ಮಸಾಲ ಜಯರಾಮ್‌, ಮಾಜಿ ಸಚಿವ ರೇಣುಕಾಚಾರ್ಯ, ಶಾಸಕ ಜಿ.ಬಿ.ಜೋತಿಗಣೇಶ್‌, ಸಂಸದ ಜಿ.ಎಸ್‌.ಬಸವರಾಜು, ಎಂ.ಎನ್‌.ನಂದೀಶ್‌, ಶಿವಪ್ರಸಾದ್‌, ದಿಲೀಪಕುಮಾರ್‌, ವಿನಯ ಬಿದರೆ, ವೈ.ಹೆಚ್‌.ಹುಚ್ಚಯ್ಯ, ಭೈರಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ಜುಲೈ 3ರಿಂದ ಸತ್ಯಾಗ್ರಹ

ಬಿಜೆಪಿಯ ಸೋಲು ನಿಜವಾದ ಸೋಲಲ್ಲ. ಕಾಂಗ್ರೆಸ್‌ ನೀಡಿದ ಸುಳ್ಳು ಭರವಸೆಗಳಿಗೆ ಮೋಸ ಹೋಗಿದ್ದರಿಂದ ಆದ ಸೋಲು. ಕಾಂಗ್ರೆಸ್‌ ಪಕ್ಷದ ನಿಜ ಬಣ್ಣ ಬಯಲಾಗಿದೆ. ಸುಳ್ಳು ಗ್ಯಾರಂಟಿಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಶಾಸಕರು ಸದನದ ಒಳಗೆ ಹೋರಾಟ ನಡೆಸಿದರೆ, ಬಿಜೆಪಿ ಕಾರ್ಯಕರ್ತ ರು, ಸೋತ ಪ್ರಮುಖರೊಂದಿಗೆ ಜುಲೈ 03ರಿಂದ ವಿಧಾನಸೌಧದ ಹೊರಗೆ ಅಧಿವೇಶನ ಮುಗಿಯುವವರೆಗೂ ಸತ್ಯಾಗ್ರಹ ನಡೆಸಲಿದ್ದೇವೆ ಎಂದರು.

click me!