ಮಹದಾಯಿ ವಿಚಾರದಲ್ಲಿ ಉತ್ತರ ಕರ್ನಾಟಕದ 5 ಜಿಲ್ಲೆಗಳ ಪ್ರಶ್ನೆ ಇದೆ. ಈ ಯೋಜನೆ ತ್ವರಿತಗತಿಯಲ್ಲಿ ಆಗಬೇಕು. ಮಲಪ್ರಭಾಗೆ 7.5 ಟಿಎಂಸಿಯಾದರೂ ನೀರು ಸಿಗುವಂತಾಗಬೇಕು. ಸಂಬಂಧಿಸಿದ ನಾಯಕರು, ಅಧಿಕಾರಿಗಳು ಅಧಿವೇಶನದಲ್ಲಿ ಚರ್ಚಿಸಿ ನಿರ್ಧರಿಸಬೇಕು ಎಂದು ಆಗ್ರಹಿಸಿದ ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಮಹಾಸ್ವಾಮಿಗಳು
ಯರಗಟ್ಟಿ(ಡಿ.08): ರೈತರ ಬಹುದಿನಗಳ ಬೇಡಿಕೆಯಾದ ಮಹದಾಯಿ ಯೋಜನೆಯಲ್ಲಿ 3.9 ಟಿಎಂಸಿ ನೀರು ಸಾಕಾಗುವುದಿಲ್ಲ. ನಮಗೆ 7.5 ಟಿಎಂಸಿ ನೀರು ಸಿಗಲೇಬೇಕು. ಈ ನಿಟ್ಟಿನಲ್ಲಿ ಯೋಜನೆ ಅನುಷ್ಠಾನಕ್ಕೆ ಪಾದಯಾತ್ರೆಗೆ ರೈತ ಸಂಘ ಮುಂದಾಗಿದೆ ಎಂದು ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಮಹಾಸ್ವಾಮಿಗಳು ನುಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ವಿವಿಧ ದಲಿತ ಸಂಘಟನೆಗಳಿಂದ ಬೆಳಗಾವಿ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ನ್ಯಾಯ ಕೇಳಲು ಬೆಳಗಾವಿ ಸುವರ್ಣ ವಿಧಾನಸೌಧದವರೆಗೆ ಪಾದಯಾತ್ರೆ ರೈತ ಸಂಘ ಹಾಗೂ ವಿವಿಧ ಸಂಘಟನೆಗಳು ಯರಗಟ್ಟಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರಾರಂಭಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಉತ್ತರ ಕರ್ನಾಟಕದ 5 ಜಿಲ್ಲೆಗಳ ಪ್ರಶ್ನೆ ಇದೆ. ಈ ಯೋಜನೆ ತ್ವರಿತಗತಿಯಲ್ಲಿ ಆಗಬೇಕು. ಮಲಪ್ರಭಾಗೆ 7.5 ಟಿಎಂಸಿಯಾದರೂ ನೀರು ಸಿಗುವಂತಾಗಬೇಕು. ಸಂಬಂಧಿಸಿದ ನಾಯಕರು, ಅಧಿಕಾರಿಗಳು ಅಧಿವೇಶನದಲ್ಲಿ ಚರ್ಚಿಸಿ ನಿರ್ಧರಿಸಬೇಕು ಎಂದು ಆಗ್ರಹಿಸಿದರು.
ಕಾವೇರಿ, ಕೃಷ್ಣ, ಮಹದಾಯಿ ನ್ಯಾಯಾಧೀಕರಣ ವಕೀಲರಿಗೆ 122.75 ಕೋಟಿ ಶುಲ್ಕ ಪಾವತಿ
ಬಿಜೆಪಿ ಮುಖಂಡರು ಸಂಜೀವಕುಮಾರ ನವಲಗುಂದ ಮಾತನಾಡಿ, ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಚರ್ಚಿಸಿ ಶೀಘ್ರ ಬಗೆಹರಿಸುವ ಕೆಲಸವನ್ನು ಸರ್ಕಾರ ಮಾಡಬೇಕು.ನಮ್ಮ ಸವದತ್ತಿ ಕ್ಷೇತ್ರದ ಯರಗಟ್ಟಿ ಭಾಗದಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನೀರಾವರಿ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಹೋರಾಟ ಮಾಡಿ ನಾವು ರೋಸಿ ಹೊಗಿದ್ದು ಸರ್ಕಾರದ ಭರವಸೆಗಳು ಬರೀ ನೆಪಗಳಾಗಿ ಯರಗಟ್ಟಿ ತಾಲೂಕು ಅಭಿವೃದ್ಧಿ ಕಾಣದೇ ಹಿಂದುಳಿದಿದೆ. ಅಧಿವೇಶನದಲ್ಲಿ ಸವದತ್ತಿ ಕ್ಷೇತ್ರದ ಅಭಿವೃದ್ಧಿ ಹಾಗೂ ನೀರಾವರಿ ವಿಚಾರಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಕೆಲಸ ನಾವು ಮಾಡಲಿದ್ದು, ಯೋಜನೆಗಳ ಅನುಷ್ಠಾನಕ್ಕೆ ಒತ್ತಡ ಹೇರಲಿದ್ದೇವೆ ಎಂದು ತಿಳಿಸಿದರು.
ರೈತ ಸಂಘದ ಅಧ್ಯಕ್ಷ ಸೋಮು ರೈನಾಪೂರ ಮಾತನಾಡಿ, ಬೆಳಗಾವಿ ಜಿಲ್ಲೆಯ ಬಹುದಿನಗಳ ರೈತರ ಬೇಡಿಕೆಯಾದ ಕಳಸಾ-ಭಂಡೂರಿ ಯೋಜನೆ, ಸತ್ತಿಗೇರಿ ಏತ ನೀರಾವರಿ, ಯರಗಟ್ಟಿ 2ನೇ ಹಂತದ ಏತ ನೀರಾವರಿ, ಲಕ್ಷ್ಮೀದೇವಿ-ಕಡಣ ಏತ ನೀರಾವರಿ, ಬಳ್ಳಾರಿ ನಾಲಾ ಯೋಜನೆಗಳ ಅತೀ ಶಿಘ್ರದಲ್ಲಿ ಅನುಷ್ಠಾನ ಹಾಗೂ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಅನುಮತಿ ಪಡೆಯದೆ ತರಾತುರಿಯಲ್ಲಿ 957 ಕೋಟಿ ಮಹದಾಯಿ ಟೆಂಡರ್, ಅಧಿಕಾರಿಗಳ ಅಮಾನತಿಗೆ ಆಗ್ರಹ
ನೂತನ ತಾಲೂಕು ಯರಗಟ್ಟಿಗೆ ಎಲ್ಲ ಸರ್ಕಾರಿ ಕಚೇರಿಗಳಾದ, ಪೊಲೀಸ್ ಠಾಣೆ, ಸಬ್ ರಿಜಿಸ್ಟ್ರಾರ್ ಆಫೀಸ್, ತಾಲೂಕು ಪಂಚಾಯತಿ, ಟ್ರೇಜುರಿ ಕಚೇರಿಗಳನ್ನು ಮತ್ತು ಯರಗಟ್ಟಿ ಸಮುದಾಯ ಆರೋಗ್ಯ ಕೇಂದ್ರವನ್ನು ಸಾರ್ವಜನಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು, ಸತ್ತಿಗೇರಿಯಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಪ್ರಾರಂಭಿಸಬೇಕು. ಯರಗಟ್ಟಿ ಕೆಇಬಿ ಮತ್ತು ಪಿಡಬ್ಲ್ಯೂಡಿ ಉಪವಿಭಾಗವನ್ನಾಗಿ ತ್ವರಿತವಾಗಿ ಸ್ಥಾಪನೆ, ಯರಗಟ್ಟಿ ಕೆ.ಎಸ್.ಆರ್.ಟಿ.ಸಿ ಡಿಪೋ, ಯರಗಟ್ಟಿ ಪಟ್ಟಣಕ್ಕೆ 24X7 ನೀರಿನ ವ್ಯವಸ್ಥೆ ಕಲ್ಪಿಸುವುದು, ರೈತ ಸಂಪರ್ಕ ಕೇಂದ್ರವನ್ನು ಎಪಿಎಂಸಿ ಗೆ ಸ್ಥಳಾಂತರಿಸಲು ಹಾಗೂ ಕೃಷಿ ಯಂತ್ರಧಾರೆಯನ್ನು ಮರು ಪ್ರಾರಂಭಿಸಲು, ಅಗ್ನಿಶಾಮಕ ಘಟಕ ಪ್ರಾರಂಭಿಸಲು ಹಾಗೂ ಯರಗಟ್ಟಿಯಲ್ಲಿ ಜಿ.ಪಂ ಉಪವಿಭಾಗ, ಕುಡಿಯುವ ನೀರು ಮತ್ತು ನೈರ್ಮಲ್ಕುಕರಣ ವಿಭಾಗ ಸ್ಥಾಪಿಸುವುದು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ತಾಲೂಕು ಕ್ರೀಡಾಂಗಣವನ್ನು ನಿರ್ಮಾಣ ಮಾಡಲು ಭೂಮಾಪನ ಕಚೇರಿ (ಸರ್ವೆ ಆಫೀಸ್) ಪ್ರಾರಂಭಿಸಲು ಹಾಗೂ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ಕೋಡಲೆ ರೈತರು ಬೆಳೆದಂತ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲು ಕೋರಿ ಇನ್ನು ಹಲವು ಬೇಡಿಕೆಗಳೊಂದಿಗೆ ಈ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗಣಪತಿ ಮಹಾರಾಜರು, ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ರೇವರೇಂಟ್ ಚನ್ನಪ್ಪ, ಕರವೇ ಅಧ್ಯಕ್ಷ ರಫೀಕ್ ಡಿ.ಕೆ, ಪ್ರಕಾಶ ವಾಲಿ, ಬಾಸ್ಕರ ಹಿರೇಮೆತ್ರಿ, ಚಿದಂಬರ ಕಟ್ಟಿಮನಿ, ಇಮ್ತಿಯಾಜ್ ಖಾದ್ರಿ, ಹನುಮಂತ ಕಡಕೋಳ, ಗೋಪಾಲ ದಳವಾಯಿ, ಶಿವಾನಂದ ಕರಿಗೋಣ್ಣವರ, ರೈತರಾದ ರಂಗಪ್ಪ ಗಂಗರಡ್ಡಿ, ರಾಮಕೃಷ್ಣ ಎಳ್ಳಮ್ಮಿ, ಶೇಖರ ಕಿಲಾರಿ, ಯಕ್ಕೇರೆಪ್ಪ ತಳವಾರ, ಮುತ್ತು ವೀರಾಪುರ ಸೇರಿದಂತೆ ಅನೇಕ ಇದ್ದರು.