ಬರ ನಿರ್ವಹಣೆಗೆ ಬರ: ಬೆಳೆ ನಷ್ಟ ಪರಿಹಾರ ಮರೀಚಿಕೆ, ನೀರು ಮೇವಿಗೂ ಅಭಾವ..!

By Kannadaprabha NewsFirst Published Dec 8, 2023, 12:10 PM IST
Highlights

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ಇಲ್ಲವೇ ಇಲ್ಲ ಎಂಬಂತೆ ಸ್ಥಗಿತಗೊಂಡಿವೆ. ಸರ್ಕಾರಗಳಿಗೆ ಬರ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡಲು ಸಾಧ್ಯವಾಗುತಿಲ್ಲ. ಅನುದಾನ ಇಲ್ಲದ ಮೇಲೆ ಬರ ಘೋಷಣೆ ಮಾಡಿದ್ದು ಯಾವ ಉದ್ದೇಶಕ್ಕಾಗಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. 

ರವಿ ಕಾಂಬಳೆ

ಹುಕ್ಕೇರಿ(ಡಿ.08):  ಮಳೆ ಕೊರತೆಯಿಂದ ಬೆಳೆ ನಷ್ಟ ಅನುಭವಿಸಿದ ಹುಕ್ಕೇರಿ ತಾಲೂಕಿನ ಅನ್ನದಾತರಿಗೆ ಬರ ಪರಿಹಾರ ಮರೀಚಿಕೆಯಾಗಿದೆ. ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಮೂರು ತಿಂಗಳು ಕಳೆದರೂ ಬರ ನಿರ್ವಹಣೆಗೆ ಬರ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ಇಲ್ಲವೇ ಇಲ್ಲ ಎಂಬಂತೆ ಸ್ಥಗಿತಗೊಂಡಿವೆ. ಸರ್ಕಾರಗಳಿಗೆ ಬರ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡಲು ಸಾಧ್ಯವಾಗುತಿಲ್ಲ. ಅನುದಾನ ಇಲ್ಲದ ಮೇಲೆ ಬರ ಘೋಷಣೆ ಮಾಡಿದ್ದು ಯಾವ ಉದ್ದೇಶಕ್ಕಾಗಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಬರಗಾಲದಿಂದ ಬಸವಳಿದ ಜನರ ಕಿವಿಗೆ ಸರ್ಕಾರ ದನಿಯಾಗಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.

ರಾಜ್ಯಕ್ಕೆ ಬರಬೇಕಾದ ಕೇಂದ್ರದ ಹಣದಲ್ಲಿ 40000 ಕೋಟಿ ಇಳಿಕೆ

ಕೋಟ್ಯಂತರ ರುಪಾಯಿ ಬೆಳೆ ನಷ್ಟವಾದರೂ ಪರಿಹಾರ ಶೂನ್ಯ ಸಾಧನೆಯಾಗಿದೆ. ತಾಲೂಕಾಡಳಿತ ಇನ್ನೂ ಬರ ನಿರ್ವಹಣೆಯ ಕಾಮಗಾರಿಯ ಕ್ರಿಯಾ ಯೋಜನೆ ರೂಪಿಸುವ ಹಂತದಲ್ಲಿದೆ. ಜತೆಗೆ ರಾಜ್ಯದಲ್ಲಿ ಸರ್ಕಾರ ಬದಲಾಗಿ ಆರು ತಿಂಗಳಾದರೂ ತಾಲೂಕಲ್ಲಿ ಹೊಸ ಸರ್ಕಾರದ ಅಭಿವೃದ್ಧಿ ಕೆಲಸಗಳು ಇದುವರೆಗೂ ಆರಂಭವಾಗಿಲ್ಲ.

ಬರ ಘೋಷಣೆಯಾದ ನಂತರ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಕೂಲಿ ಕಾರ್ಮಿಕರಿಗೆ ಕೆಲಸ ಇತ್ಯಾದಿ ಕೆಲಸಗಳ ಕುರಿತಂತೆ ಬರನಿರ್ವಹಣೆ ಸಭೆಯಲ್ಲಿ ಸಿದ್ಧರಾಗಿ, ಸನ್ನದ್ಧರಾಗಿ ಎಂದಷ್ಟೇ ಅಧಿಕಾರಿ, ಜನಪ್ರತಿನಿಧಿಗಳು ಹೇಳುತ್ತಿದ್ದಾರೆ. ಆದರೆ, ಅನುದಾನ ಇಲ್ಲದೇ ಇಂಥದ್ದೇ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಎಂಬ ಸೂಚನೆ ನೀಡಲು ಸಾಧ್ಯವಾಗುತ್ತಿಲ್ಲ.

ಇನ್ನು ಹುಕ್ಕೇರಿ ಮತ್ತು ಸಂಕೇಶ್ವರ ಪಟ್ಟಣಗಳ ಪುರಸಭೆಯಲ್ಲಿ ಆಡಳಿತ ಮಂಡಳಿ ರಚನೆಯಾಗದೇ ಇರುವುದರಿಂದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಮೂಲಭೂತ ಸೌಲಭ್ಯಕ್ಕೆ ಈ ಪಟ್ಟಣ ವ್ಯಾಪ್ತಿಯ ಜನ ಪರಿತಪಿಸುತ್ತಿದ್ದಾರೆ. ಮಹತ್ವಾಕಾಂಕ್ಷಿ ಹಿಡಕಲ್ ಡ್ಯಾಮ್‌ನಲ್ಲಿ ಮೈಸೂರು ಬೃಂದಾವನ ಮಾದರಿಯ ಉದ್ಯಾನಕಾಶಿ ನಿರ್ಮಾಣ ಯೋಜನೆ ನಿಧಾನಗತಿಯಲ್ಲಿದೆ. ಬಹುನಿರೀಕ್ಷಿತ ನೀರಾವರಿ ಯೋಜನೆಗಳಾದ ಅಡವಿಸಿದ್ದೇಶ್ವರ ಮತ್ತು ಶಂಕರಲಿಂಗ ಏತ ನೀರಾವರಿಗಳು ನನೆಗುದಿಗೆ ಬಿದ್ದಿವೆ.

ಬೆಳೆ ಹಾನಿ:

ತಾಲೂಕಿನಾದ್ಯಂತ 35091 ಹೆಕ್ಟೇರ್ ಪ್ರದೇಶದ ವಿವಿಧ ಬೆಳೆಗಳು ಮಳೆ ಕೊರತೆಯಿಂದ ನಷ್ಟವಾಗಿದೆಯೆಂದು ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಸಹಯೋಗದಲ್ಲಿ ನಡೆದ ಜಂಟಿ ಸಮೀಕ್ಷೆಯಲ್ಲಿ ಅಂದಾಜು ಮಾಡಲಾಗಿದೆ. ಈ ನಷ್ಟ ಪರಿಹಾರಕ್ಕಾಗಿ 37 ಕೋಟಿ 25 ಲಕ್ಷ 36 ಸಾವಿರದ 980 ರೂಗಳ ಅಗತ್ಯವಿದೆ ಎಂದು ಲೆಕ್ಕಾಚಾರ ಹಾಕಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಇದುವರೆಗೂ ರೈತಾಪಿ ವರ್ಗಕ್ಕೆ ನಯಾಪೈಸೆ ಬಿಡುಗಡೆಯಾಗಿಲ್ಲ. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ನಷ್ಟಕ್ಕೆ ಪರಿಹಾರ ಕಾರ್ಯಗಳೇನು ಎಂಬುದರ ಬಗ್ಗೆ ಖಚಿತ ಮಾಹಿತಿ ಸಿಗುತ್ತಿಲ್ಲ.

ನೀರು-ಮೇವು ಅಭಾವ:

ಕೊಳವೆಬಾವಿಯಿಂದ ಪೂರೈಕೆಯಾಗುವ ತಾಲೂಕಿನ 63 ಹಳ್ಳಿಗಳ ಕುಡಿಯುವ ನೀರಿಗೆ ಬರ ನೇರ ಪರಿಣಾಮ ಬೀರಲಿದೆ. ಈಗಾಗಲೇ ಕೆಲ ಹಳ್ಳಿಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ. ಕಣಗಲಾ ಮತ್ತು ಮಣಗುತ್ತಿ ಬಹುಗ್ರಾಮ ಯೋಜನೆಗಳಿಗೆ ನೀರಿನ ಕೊರತೆ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇನ್ನು ಜಾನುವಾರುಗಳ ಮೇವು ಪೂರೈಕೆಗೆ ಯಾವುದೇ ರೀತಿಯ ತೊಂದರೆಯಾಗದು ಎಂದು ಪಶುಸಂಗೋಪನೆ ಇಲಾಖೆ ಹೇಳುತ್ತಿದೆಯಾದರೂ ಹಸಿ ಮೇವಿನ ಕೊರತೆಯನ್ನು ಅಲ್ಲಗಳೆಯುವಂತಿಲ್ಲ.

ಪ್ರತಿಪಕ್ಷ ನಾಯಕನ ವಿರುದ್ಧ ಬಿಜೆಪಿ ಶಾಸಕರೇ ಗರಂ! ಅಶೋಕ್‌ ಕಂಡು ಎಸ್ ಆರ್ ವಿಶ್ವನಾಥ ‘ಅಡ್ಜಸ್ಟ್‌ಮೆಂಟ್‌ ಗಿರಾಕಿ’ ಅಂದಿದ್ದೇಕೆ?

ಹೆಚ್ಚಳವಾಗದ ಕೂಲಿ:

ಬರಪೀಡಿತ ಪ್ರದೇಶಗಳಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯಡಿ ಕೂಲಿಕಾರ್ಮಿಕರ ಕೆಲಸವನ್ನು 100 ದಿನದಿಂದ 150 ದಿನಗಳವರೆಗೆ ವಿಸ್ತರಿಸಬೇಕು. ಕೇಳಿದವರಿಗೆಲ್ಲರಿಗೂ ಕೂಲಿ ಉದ್ಯೋಗ ಕೊಡಬೇಕು ಆದರೆ, ಈ ಯೋಜನೆ ಅನುಷ್ಠಾನದ ತಾಲೂಕಿನ 52 ಗ್ರಾಪಂಗಳ ಪೈಕಿ ಕೆಲವೆಡೆ ಅಕ್ರಮ ನಡೆದಿರುವ ಆರೋಪಗಳಿವೆ

ಬರ ಪರಿಸ್ಥಿತಿಯನ್ನು ನಿಭಾಯಿಸಲು ತಾಲೂಕು ಆಡಳಿತ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಬರ ನಿರ್ವಹಣೆಗೆ ಯಾವುದೇ ರೀತಿಯ ಅನುದಾನದ ಕೊರತೆಯಿಲ್ಲ. ಶೀಘ್ರವೇ ಬೆಳೆ ನಷ್ಟ ಪರಿಹಾರ ರೈತರಿಗೆ ತಲುಪಲಿದ್ದು ಕುಡಿಯುವ ನೀರು ಮತ್ತು ಮೇವು ಪೂರೈಕೆಗೆ ಯೋಜನೆ ರೂಪಿಸಲಾಗಿದೆ ಎಂದು ತಹಸೀಲ್ದಾರ್‌ ಮಂಜುಳಾ ನಾಯಕ ತಿಳಿಸಿದ್ದಾರೆ. 

click me!