ಕಾಂಗ್ರೆಸ್ ಬಂದದ ಕರೆಂಟು ಫ್ರೀ ಆದ ನಿಮಗ್ ಗೊತ್ತಿಲ್ಲೇನ್?: ಮೀಟರ್‌ ರೀಡರ್‌ಗೆ ಕಲಬುರಗಿ ಜನ ತರಾಟೆ!

By Kannadaprabha News  |  First Published May 18, 2023, 7:33 AM IST

ಅರೆ, ಮತ್ಯಾಕ್ರಿ ನೀವು ಮೀಟರ್‌ ಓದಲಿಕ್ಕಿ ನಮ್ಮೋಣಿಗೆ ಬಂದೀರಿ? ನಾವು ಬಿಲ್‌ ಕೊಡೋದಿಲ್ಲ, ಕಾಂಗ್ರೆಸ್‌ ಸರ್ಕಾರ ಬಂದದ, ಕರೆಂಟು ಫ್ರೀ ಅಂದಾರಲ್ರಿ, ನಿಮಗ ಗೊತ್ತಿಲ್ಲೇನು? ಗೊತ್ತಿದ್ದೂ ಯಾಕೆ ಮೀಟರ್‌ ಓದಿ ಬಿಲ್‌ ಕೊಡಾಕತ್ತೀರಿ?ನಾವು ಬಿಲ್‌ ಕೊಡೋದಿಲ್ರಿ.


ಕಲಬುರಗಿ (ಮೇ.18) : ಅರೆ, ಮತ್ಯಾಕ್ರಿ ನೀವು ಮೀಟರ್‌ ಓದಲಿಕ್ಕಿ ನಮ್ಮೋಣಿಗೆ ಬಂದೀರಿ? ನಾವು ಬಿಲ್‌ ಕೊಡೋದಿಲ್ಲ, ಕಾಂಗ್ರೆಸ್‌ ಸರ್ಕಾರ ಬಂದದ, ಕರೆಂಟು ಫ್ರೀ ಅಂದಾರಲ್ರಿ, ನಿಮಗ ಗೊತ್ತಿಲ್ಲೇನು? ಗೊತ್ತಿದ್ದೂ ಯಾಕೆ ಮೀಟರ್‌ ಓದಿ ಬಿಲ್‌ ಕೊಡಾಕತ್ತೀರಿ?ನಾವು ಬಿಲ್‌ ಕೊಡೋದಿಲ್ರಿ.

ಇಂತಹದ್ದೊಂದ ಕೂಗು ಜೆಸ್ಕಾಂ ವ್ಯಾಪ್ತಿಯ ಕಲಬುರಗಿ ಮಹಾ ನಗರದ ಒಡಲಿಂದ ಬಲವಾಗಿ ಕೇಳಿ ಬಂದಿದೆ. ಇಲ್ಲಿನ ರೇಲ್ವೆ ನಿಲ್ದಾಣ ಪಕ್ಕದಲ್ಲಿರುವ ತಾರಫೈಲ್‌ ಬಡಾವಣಯಲ್ಲಿರುವ ಗೃಹಿಣಿಯರು, ಅನೇಕ ಪುರುಷರು ತಮ್ಮ ಗಲ್ಲಿಗೆ ಮೀಟರ್‌ ಬಿಲ್‌ ಕೊಡಲು ಬಂದ ಜೆಸ್ಕಾಂ ರೀಡರ್‌ಗೆ ಹಿದ್ದಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು ಕಂಗ್ರೆಸ್‌ ಬಂದ್ರು ಬಿಲ್‌ ಅಂತ ಬಂದಾರ ಇವರು, ನಾವಂತೂ ಒಂದು ನಯಾ ಪೈಸೆ ಬಿಲ್‌ ಕೊಡೋದಿಲ್ಲ ಹೋಗ್ರಿ ಎಂದು ಹೇಳಿರುವ ಘಟನೆ ನಡೆದಿದೆ.

Tap to resize

Latest Videos

undefined

ನಮ್ಮೋಣಿಗೆ ಯಾಕ್‌ ಬಂದ್ರಿ ? ನಾವು ಕರೆಂಟ್‌ ಬಿಲ್‌ ಕಟ್ಟಲ್ಲಂದ್ರೆ ಕಟ್ಟಲ್ಲ : ಜನ ಪಟ್ಟು!

ಈ ಘಟನೆ ಬಗ್ಗೆ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಮೀಟರ್‌ ರೀಡರ್‌ ತಮ್ಮ ಮನೆ ಮುಂದೆ ಬರುತ್ತಿದ್ದಂತೆಯೇ ಶಿಕ್ಷಕಿ ಎಂದು ಹೇಳಿಕೊಳ್ಳುವ ಗೃಹಿಣಿಯೊಬ್ಬಳು ಬಿಲ್‌ ಕೊಡೋದಿಲ್ರಿ, ನೀವ್ಯಾಕೆ ಬಂದು ಹೈರಾಣ ಆಗ್ತೀರಿ? ಎಂದು ನೇರವಾಗಿಯೇ ಜೆಸ್ಕಾಂ ಸಿಬ್ಬಂದಿಗೆ ಪ್ರಶ್ನಿಸಿ ಬೆವರಳಿಸಿದ್ದಾರೆ.

ಇದಲ್ಲದೆ ವಾಗ್ವಾದ ಹಾಗೇ ಮುಂದುವರಿದಾಗ ಬಡಾವಣೆಯ ಅಕ್ಕಪಕ್ಕದ ಪುರುಷರೂ ಸೇರಿಕೊಂಡು ಕಾಂಗ್ರೆಸ್‌ನವರು ಉಚಿತ ವಿದ್ಯುತ್‌ ಅಂತ ಹೇಳ್ಯಾರ, ಈಗ ಅದೇ ಸರ್ಕಾರ ಬಂದಿದೆ. ಮತ್ಯಾಕೆ ನೀವು ಓಮಿಗೆ ಬಂದು ಬಿಲ್‌ ಕೊಡೋದು ಎಂದು ಖಡಕ್ಕಾಗಿ ಪ್ರಶ್ನಿಸುತ್ತ ರೋಪ್‌ ಹಾಕುವ ಯತ್ನ ಮಾಡಿದ್ದಾರೆ.

ಇವರ ಪ್ರಶ್ನೆಗಲಿಗೆಲ್ಲದಕ್ಕೂ ರೀಡರ್‌ ಉತ್ತರಿಸಿದ್ದರೂ ಎಲ್ಲಾ ಉತ್ತರಗಳಿಗೂ ಪಾಟೀಸವಾಲು ಹಾಕಿರುವ ಬಡಾವಣೆಯ ಗ್ರಾಹಕರು ಸಿಎಂ ಆಗೋವರೆಗೂ ನಮ್ಮೋಣಿಕಡಿ ಸುಳಿಬ್ಯಾಡ್ರಿ ಎಂದು ಮೀಟರ್‌ ರೀಡರ್‌ಗೆ ತಾಕೀತು ಮಾಡಿ ಸಾಗಹಾಕಿದ್ದಾರೆ.

ಮ್ಯಾಗಿನವರು ಏನ್‌ ಹೇಳ್ತಾರೋ ಅದನ್ನ ನಾವು ಮಾಡ್ತೀವಿ, ನಮಗಿನ್ನು ಲಿಖಿತ ಯಾವುದೇ ಆದೇಶವಿಲ್ಲ. ಎಂದಿನಂತೆ ಬಿಲ್‌ ಕೊಟ್ಟು ಹೋಗಲು ಬಂದೀವಿ. ನಿಮ್ಮ ಕಳೆದ ತಿಂಗಳ ಬಿಲ್‌ ಇದು. ಇದನ್ನಾದರೂ ಭರಿಸಿರಿ ಎಂದು ಮೀಟರ್‌ ರೀಡರ್‌ ಸಮಜಾಯಿಷಿಯನ್ನೂ ನೀಡುವ ಯತ್ನ ಮಾಡಿದ್ದರೂ, ಹಿಂದಿನದು, ಮುಂದಿನದು ಯಾವುದಕ್ಕೂ ಬಿಲ್‌ ನಾವು ತಗೊಳ್ಳಲ್ಲ, ತುಂಬೋದಿಲ್ಲ, ಸಿಎಂ ಆಗಿ ಅವರು ಯಾನ್‌ ಹೇಳ್ತಾರೋ ನೋಡ್ವೀವಿ. ಆ ಮ್ಯಾಗ ಬಿಲ್‌ ತುಂಬೋದು ಬಿಡೋದು ವಿಚಾರ. ಅಲ್ಲಿತಂಕಾ ನೀವು ಬರಬ್ಯಾಡ್ರಿ ಎಂದು ರೀಡರ್‌ಗೆ ತಮ್ಮ ಗಲ್ಲಿಯಿಂದ ಸಾಗಹಾಕಿದ್ದಾರೆ.

ಕಾಂಗ್ರೆಸ್‌ ಉಚಿತ ವಿದ್ಯುತ್‌ ಭರವಸೆಯ ಹಿನ್ನೆಲೆ: ನಾವು ಕರೆಂಟ್‌ ಬಿಲ್‌ ಕಟ್ಟಲ್ಲ, ರಾಜ್ಯದ ಹಲವೆಡೆ ಜನ ಪಟ್ಟು!

ಗೃಹ ಬಳಕೆ ವಿದ್ಯುತ್‌ ಬಿಲ್‌ ಸಂಪೂರ್ಣ ವಸೂಲಿ: ಜೆಸ್ಕಾಂ

ಏತನ್ಮದ್ಯೆ ‘ಕನ್ನಡಪ್ರಭ’ದ ಜೊತೆ ಮಾತನಾಡಿರುವ ಜೆಸ್ಕಾಂ ಹಣಕಾಸು ವಿಭಾಗದ ಹಿರಿಯ ಅಧಿಕಾರಿಗಳು ಕರæಂಟ್‌ ಬಿಲ್‌ ಪಾವತಿಸೋದಿಲ್ಲವೆಂಬ ಕೂಗು ಅಷ್ಟಾಗಿ ತಮ್ಮ ಕಂಪನಿ ವ್ಯಾಪ್ತಿಯಲ್ಲಿ ಕೇಳಿ ಬಂದಿಲ್ಲವೆಂದಿದ್ದಾರೆ. ಕಲ್ಯಾಣ ನಾಡಿನ ಎಲ್ಲಾ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕಂಪನಿಯ ಕಳೆದ 2 ತಿಂಗಳಿಂದ ಬಿಲ್‌ ಪಾವತಿ ಸಂಪೂರ್ಣವಾಗಿದೆ. ಎಲ್‌ಟಿ- 2 ಸ್ಥಾವರಗಳು ಕಂಪನಿ ವ್ಯಾಪ್ತಿಯಲ್ಲಿ 18.15 ಲಕ್ಷ ಇವೆ. ಮಾಸಿಕ 116.10 ದಶಲಕ್ಷ ಯೂನಿಟ್‌ನಷ್ಟುಕರೆಂಟ್‌ ಬಳಕೆಯಾಗುತ್ತಿದೆ, ಇದಕ್ಕೆ ಪ್ರತಿಯಾಗಿ ಸರಾಸರಿ 115.59 ಕೋಟಿ ರು. ನಷ್ಟುಬಿಲ್‌ ಮೊತ್ತ ಕಂಪನಿಗೆ ಪಾವತಿಯಾಗುತ್ತಿದೆ. ಕಳೆದ ಹಣಕಾಸು ವರ್ಷ ಅಂದರೆ 2023ರ ಏಪ್ರಿಲ್‌ವರೆಗೂ ಬಿಲ್‌ ಮೊತ್ತ ಸಂಪೂರ್ಣ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

click me!