ತಮ್ಮ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಒಳಿತಿಗಾಗಿ ತಾವು ಜೈಲಿಗೆ ಹೋಗಲೂ ಸಿದ್ಧ ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ಹೇಳಿದರು.
ತುರುವೇಕೆರೆ : ತಮ್ಮ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಒಳಿತಿಗಾಗಿ ತಾವು ಜೈಲಿಗೆ ಹೋಗಲೂ ಸಿದ್ಧ ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ಹೇಳಿದರು.
ತಮ್ಮ ಫಾರಂ ಹೌಸ್‌ನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಮ್ಮ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕೊಬರಿಗೆ ಚುನಾವಣಾ ಸಮಯದಲಿ ಬೇಡಿಕೆಯಿಲ್ಲದೆ ಬೆಲೆ ಕುಸಿಯಿತು. ಇದಕ್ಕೆ ಸೂಕ್ತ ಬೆಂಬಲ ಬೆಲೆ ನೀಡಲು ನಮ್ಮ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಇದು ರೈತಾಪಿಗಳ ಆಕ್ರೋಶಕ್ಕೆ ಕಾರಣವಾಯಿತು. ಪಡಿತರ ಆಹಾರ ವಿತರಣೆ ಸಂದರ್ಭದಲ್ಲಿ ಪ್ರತಿಯೊಬ್ಬರಿಗೆ 4 ಕೆಜಿಯಂತೆ ಅಕ್ಕಿ ವಿತರಣೆ ಮಾಡಿದ್ದು, ಸಹ ತಮ್ಮ ಸೋಲಿಗೆ ಕಾರಣವಾಗಿದೆ ಎಂದು ಮಸಾಲಾ ಜಯರಾಂ ಹೇಳಿದರು.
ಈ ಎಲ್ಲ ಲೋಪದೋಷಗಳನ್ನು ಸರಿಪಡಿಸಿಕೊಂಡು ಮತ್ತೊಮ್ಮೆ ಕ್ಷೇತ್ರ ಪ್ರವಾಸ ಮಾಡಿ ಜನರ ಮನಸ್ಸನ್ನು ಗೆಲ್ಲುವೆ. ಗ್ರಾಮ ಪಂಚಾಯಿಂದ ಗೆದ್ದು ಶಾಸಕನಾದವನು. ಇನ್ನೂ 20 ಚುನಾವಣೆ ಮಾಡುವ ಶಕ್ತಿಯನ್ನು ದೇವರು ಕೊಟ್ಟಿದ್ದಾನೆ. ನಾನು ಮಾನಸಿಕವಾಗಿ ಸೋತಿಲ್ಲ. ಧೈರ್ಯಗೆಡುವುದೂ ಇಲ್ಲ. ನನ್ನ ಕಾರ‍್ಯಕರ್ತರಿಗೆ ನೋವಾದರೆ ನನ್ನ ಇನ್ನೊಂದು ಮುಖವನ್ನು ತೋರಿಸಬೇಕಾಗುತ್ತದೆ ಎಂದು ಮಸಾಲಾ ಜಯರಾಮ್ ಎಚ್ಚರಿಕೆ ನೀಡಿದರು.
ನನ್ನ ಅವಧಿಯಲ್ಲಿ ಮಂಜೂರಾಗಿದ್ದ ಸುಮಾರು 800 ಕೋಟಿ ರೂ.ಗಳ ಕಾಮಗಾರಿಗಳು ಚುನಾವಣಾ ನೀತಿ ಸಂಹಿತೆಯಿಂದ ಸ್ಥಗಿತಗೊಂಡಿದ್ದವು. ಅವುಗಳು ನನ್ನ ಶ್ರಮದಿಂದ ಕ್ಷೇತ್ರಕ್ಕೆ ತರಲಾಗಿದೆ. ಅವುಗಳ ಬಗ್ಗೆ ಕರಪತ್ರ ಹೊರಡಿಸಿ ಪ್ರತಿ ಮನೆಮನೆಗೆ ತಲುಪಿಸುವೆ. ಜೆಡಿಎಸ್ ರಾಜ್ಯದಲ್ಲಿ ನೆಲೆ ಕಳೆದುಕೊಂಡಿದೆ. ಈ ಕಡೆ ಕಾಂಗ್ರೆಸ್ ಕೈಯಲ್ಲಿ ರಾಜ್ಯದ ಅಧಿಕಾರ ಇದೆ. ಇಂತಹ ದುಃಸ್ಥಿತಿಯಲ್ಲಿ ಹಾಲಿ ಶಾಸಕರು ಕೇವಲ 20 ಕೋಟಿ ಅನುದಾನವನ್ನು ಕ್ಷೇತ್ರಕ್ಕೆ ತರಲಿ ನೋಡೋಣ ಎಂದು ಸವಾಲೆಸೆದರು.
ಬಿಜೆಪಿ ಅಧಿಕಾರ ಅವಧಿಯಲ್ಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿಯವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದರೆ ತುಮಕೂರು ಜಿಲ್ಲೆಗೆ ಗೌರವ ಬರುತ್ತದೆಂದು ಮಾಜಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿಯವರಲ್ಲಿ ಮನವಿ ಮಾಡಿರುವೆ. ನಾನು ಸೋತೆನೆಂದು ಎಲ್ಲೂ ಹೋಗುವುದಿಲ್ಲ, ನಿಮ್ಮ ಸೇವೆಗೆ ನಾನು ಕ್ಷೇತ್ರದಲ್ಲಿ ಯಾವಾಗಲೂ ಸಿದ್ದನಿದ್ದೇನೆ ಎಂದರು.
ಮುಖಂಡರಾದ ತಾಲೂಕು ಬಿಜೆಪಿ ಅಧ್ಯಕ್ಷ ಕಲ್ಕೆರೆ ಮೃತ್ಯುಂಜಯ, ಕೊಂಡಜ್ಜಿ ವಿಶ್ವನಾಥ್, ಪಟ್ಟಣ ಪಂಚಾಯ್ತಿ ಸದಸ್ಯಅಂಜನ್ ಕುಮಾರ್, ಪ್ರಭಾಕರ್, ಚಿದಾನಂದ್, ಶೀಲಾ ಶಿವಪ್ಪ ನಾಯಕ್, ವಿ.ಟಿ.ವೆಂಕಟರಾಮಯ್ಯ, ಚೌದ್ರಿ ಗಿರೀಶ್, ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಮಹಲಿಂಗಯ್ಯ, ನಂಜೇಗೌಡ, ಅರಳೀಕೆರೆ ಶಿವಯ್ಯ, ಮಾಚೇನಹಳ್ಳಿ ರಾಮಣ್ಣ, ದೊಂಬರನಹಳ್ಳಿ ಬಸವರಾಜು, ಯಾದವ ಮುಖಂಡರಾದ ಸಾದರಹಳ್ಳಿ ಉಗ್ರಯ್ಯ, ನರಸಿಂಹರಾಜು ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
ಅಧಿಕಾರಕ್ಕಾಗಿ ವಾಮಾಚಾರ: ಮಸಾಲಾ
ಚುನಾವಣೆಗೆ ಇನ್ನು ಐದಾರು ದಿನಗಳು ಬಾಕಿ ಇರುವ ಸಂಧರ್ಭದಲ್ಲಿ ಯಾರೋ ದುರಾತ್ಮರು ತಮ್ಮ ತೋಟದ ಸುತ್ತಾ ಹಂದಿ ಸೇರಿದಂತೆ ಇತರೆ ಪ್ರಾಣಿಗಳನ್ನು ಬಲಿ ನೀಡಿ ವಾಮಾಚಾರ ಮಾಡಿದ್ದರು. ಇದರಿಂದ ತಾವು ಕೆಲಕಾಲ ವಿಚಲಿತರಾಗಿದ್ದೂ ಸಹ ಸತ್ಯ. ಕೇವಲ ರಾಜಕೀಯ ಅಧಿಕಾರಕ್ಕಾಗಿ ಇಂತಹ ನೀಚ ಕೃತ್ಯಕ್ಕೆ ಇಳಿದಿರುವುದು ಸರಿಯಲ್ಲ. ಇದು ಅವರ ಕುಟುಂಬಕ್ಕೆ ಒಳ್ಳೆಯದಾಗುವುದಿಲ್ಲ ಎಂದು ಮಸಾಲ ಜಯರಾಮ್ ಕಿಡಿಕಾರಿದರು.
ಬಾಕ್ಸ್ 2
1,500 ಕೋಟಿ ರು.ವೆಚ್ಚದಲ್ಲಿ ಅಭಿವೃದ್ಧಿ
ತಾವು ಶಾಸಕರಾಗಿ 5 ವರ್ಷಗಳನ್ನು ಪೂರೈಸಿದ್ದರೂ ಸಹ ತಮಗೆ ನಿಜವಾಗಿ ಆಡಳಿತ ಮಾಡಲು ಸಿಕ್ಕಿದ್ದು ಕೇವಲ 15 ರಿಂದ 20 ತಿಂಗಳು ಮಾತ್ರ. ಈ ಅವಧಿಯಲ್ಲಿ ಸುಮಾರು 1500 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ತಾವು 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಬೇಕಿತ್ತು. ಆದರೆ ಜನರು ಕಾಂಗ್ರೆಸ್ ಪಕ್ಷ ನೀಡಿದ ಪುಕ್ಕಟೆ ಭಾಗ್ಯ, ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ದೇವೇಗೌಡರ ಮೇಲಿನ ಮಮಕಾರ ತಮ್ಮನ್ನು ಸೋಲುವಂತೆ ಮಾಡಿತು ಎಂದು ಮಸಾಲಾ ಜಯರಾಮ್ ಹೇಳಿದರು.
ನಾನು ರಾಜಕೀಯ ಚದುರಂಗದಾಟದಲ್ಲಿ ಸೋತಿರಬಹುದು. ಆದರೆ ಕಾರ್ಯಕರ್ತರ ಹೃದಯವನ್ನು ಗೆದ್ದಿದ್ದೇನೆ. ನನ್ನ ವಿರುದ್ಧ ವಿರೋಧಿ ಅಲೆ ಇದ್ದಿದ್ದರೆ ಕೇವಲ ಹತ್ತು ಸಾವಿರ ಮತಗಳನ್ನು ಗಳಿಸಲಷ್ಟೇ ಸಾಧ್ಯವಾಗುತ್ತಿತ್ತು. ರಾಜ್ಯದಲ್ಲಿ ಎಲ್ಲಾ ಪಕ್ಷಗಳ ಮುಖಂಡರು ಇಪ್ಪತ್ತು, ಮೂವತ್ತು, ನಲವತ್ತು ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ.
ಮಸಾಲಾ ಜಯರಾಂ, ಮಾಜಿ ಶಾಸಕ