ತುಂಗಭದ್ರಾ ಜಲಾಶಯಕ್ಕೆ ನೀರು ತಡವಾಗಿ ಹರಿದುಬರಲಾರಂಭಿಸಿದೆ. ಈ ವರ್ಷ ಕಾಲುವೆಗಳಿಗೆ ನೀರು ಹರಿಸುವುದು ವಿಳಂಬವಾಗಿರುವುದರಿಂದ ಕಾಲುವೆಗಳಿಗೆ ಮುಂಗಾರು ಬೆಳೆಗೆ ನವೆಂಬರ್ 30ರವರೆಗೂ ನೀರು ಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಕೊಪ್ಪಳ (ಆ.17): ತುಂಗಭದ್ರಾ ಜಲಾಶಯಕ್ಕೆ ನೀರು ತಡವಾಗಿ ಹರಿದುಬರಲಾರಂಭಿಸಿದೆ. ಈ ವರ್ಷ ಕಾಲುವೆಗಳಿಗೆ ನೀರು ಹರಿಸುವುದು ವಿಳಂಬವಾಗಿರುವುದರಿಂದ ಕಾಲುವೆಗಳಿಗೆ ಮುಂಗಾರು ಬೆಳೆಗೆ ನವೆಂಬರ್ 30ರವರೆಗೂ ನೀರು ಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಹೇಳಿದ್ದಾರೆ. ತುಂಗಭದ್ರಾ ಕಾಡ ಕಚೇರಿಯಲ್ಲಿ 119ನೇ ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮುಂಗಾರು ಬೆಳೆಗೆ ಬೇಕಾಗುವಷ್ಟುಅವಧಿಗೆ ನೀರಿನ ಸಮಸ್ಯೆ ಇಲ್ಲ. ರೈತರ ಕೋರಿಕೆ ಪರಿಗಣಿಸಿ, ನೀರು ಹರಿಸುವ ಅವಧಿಯನ್ನು ವಿಸ್ತರಣೆ ಮಾಡಿರುವುದಾಗಿ ಹೇಳಿದರು.
ಜಲಾಶಯದಲ್ಲಿ ಪ್ರಸ್ತುತ 88 ಟಿಎಂಸಿ ನೀರಿನ ಸಂಗ್ರಹ ಇದ್ದು, ಎಡದಂಡೆ ಮುಖ್ಯಕಾಲುವೆಗೆ 4100 ಕ್ಯೂಸೆಕ್ ನಂತೆ ನ.30ರವರೆಗೆ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು. ಜಲಾಶಯದಲ್ಲಿನ ನೀರಿನ ಸಂಗ್ರಹ ಲಭ್ಯತೆಯ ಮೇರೆಗೆ ನೀರಿನ ಬಳಕೆ ಮಾಡಲಾಗುತ್ತಿದೆ. ನ.30ರವರೆಗೆ ಬಲದಂಡೆ ಮೇಲ್ಮಟ್ಟದ ಕಾಲುವೆಗೆ 1300 ಕ್ಯೂಸೆಕ್, ಬಲದಂಡೆಯ ಕೆಳಮಟ್ಟದ ಕಾಲುವೆಗೆ 850 ಕ್ಯೂಸೆಕ್, ರಾಯ ಬಸವಣ್ಣ ಕಾಲುವೆಗೆ 270 ಕ್ಯೂಸೆಕ್ ಹಾಗೂ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ನ.30ರವರೆಗೆ 25 ಕ್ಯೂಸೆಕ್ ಅಥವಾ ಕಾಲುವೆಯಡಿ ನೀರಿನ ಲಭ್ಯತೆ ಆಧಾರದ ಮೇರೆಗೆ ನೀರು ಹರಿಸಲು ಸಲಹಾ ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ಇಮೇಜ್ ಡೌನ್ ಮಾಡಲು ಬಿಜೆಪಿಯವರಿಂದ ಸಾವಿರಾರು ಕೋಟಿ ಖರ್ಚು: ಸಚಿವ ಸಂತೋಷ್ ಲಾಡ್
ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ ಇರುವ 88 ಟಿಎಂಸಿ ನೀರಿನ ಪೈಕಿ ರಾಜ್ಯದ ಪಾಲಿಗೆ 65 ಟಿಎಂಸಿ ಇದೆ. ಈಗಾಗಲೇ 10 ಟಿಎಂಸಿ ಬಳಕೆ ಮಾಡಿದ್ದು, ಆಂಧ್ರಕ್ಕೆ 3 ಟಿಎಂಸಿ ನೀರು ಹರಿಸಲಾಗಿದೆ. ಒಳ ಹರಿವಿನ ಆಧಾರದ ಮೇರೆಗೆ ಪ್ರಸ್ತುತ ಕಾಲುವೆಗೆ ಈ ಮೇಲಿನ ಪ್ರಮಾಣದ ನೀರು ಹರಿಸಲು ನಿರ್ಧಾರಿಸಲಾಗಿದೆ. ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಎರಡು ಬೆಳೆಗೂ ನೀರು ಬಿಡಬೇಕು ಎಂಬುದು ನಮ್ಮ ಆಶಯ ಕೂಡ. ಎರಡನೇ ಬೆಳೆಗೆ ನೀರು ಬಿಡುವ ಬಗ್ಗೆ ಅಕ್ಟೋಬರ್‌ನಲ್ಲಿ ನಿರ್ಧಾರ ಮಾಡಲಾಗುವುದು ಎಂದರು. ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, ರೈತರು ಹಲವು ಬೇಡಿಕೆಗಳನ್ನು ಸಭೆಯಲ್ಲಿ ಮಂಡಿಸಿದ್ದಾರೆ. ನಾಲ್ಕು ಜಿಲ್ಲೆಯ ಸಚಿವರು ಸಭೆ ನಡೆಸುವ ಬಗ್ಗೆ ಶೀಘ್ರವೇ ದಿನಾಂಕ ನಿಗದಿಪಡಿಸಲಾಗುವುದು ಎಂದು ಶಿವರಾಜ್ ತಂಗಡಗಿ ಮಾಹಿತಿ ನೀಡಿದರು.
ಕೊಡಗು ಅಪರ ಜಿಲ್ಲಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ: 3.53 ಕೋಟಿ ಮೌಲ್ಯದ ನಗದು, ಆಸ್ತಿ ಪತ್ತೆ!
ಅನಧಿಕೃತ ನೀರು ಬಳಕೆ ತಡೆ ಸಂಬಂಧ ಜಿಲ್ಲಾಧಿಕಾರಿ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕ್ರಮ ಕೈಗೊಳ್ಳಲಿದ್ದಾರೆ ಎಂದರು. ಸಭೆಯಲ್ಲಿ ಸಚಿವರಾದ ಶರಣ್ ಪ್ರಕಾಶ್ ಪಾಟೀಲ, ಎನ್.ಎಸ್. ಬೋಸರಾಜ, ಬಿ.ನಾಗೇಂದ್ರ, ಸಂಸದರಾದ ಕರಡಿ ಸಂಗಣ್ಣ, ವೈ.ದೇವೇಂದ್ರಪ್ಪ, ಅಮರೇಶ ನಾಯಕ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಎಚ್.ಆರ್. ಗವಿಯಪ್ಪ, ಹಂಪನಗೌಡ ಬಾದರ್ಲಿ, ಜಿ.ಜನಾರ್ದನ ರೆಡ್ಡಿ, ಬಸವನಗೌಡ ತುರುವಿಹಾಳ, ಎಸ್. ಶಿವರಾಜ್ ಪಾಟೀಲ, ಬಿ.ಎಂ. ನಾಗರಾಜ, ಶರಣೇಗೌಡ ಬಯ್ಯಾಪುರ, ರೈತ ಮುಖಂಡ ಚಾಮರಾಸ ಪಾಟೀಲ, ಹಾಗೂ ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲಾಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.