ಮಹಾರಾಷ್ಟ್ರದಲ್ಲಿ ಭಾರಿ ಮಳೆ| ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು| ಆಲಮಟ್ಟಿ ಜಲಾಶಯ ಬಹುತೇಕ ಭರ್ತಿ| ಇದರ ಸಮಾನಾಂತರ ಜಲಾಶಯವಾದ ಬಸವ ಸಾಗರಕ್ಕೆ ಅಲ್ಲಿಂದ ಯಾವ ಕ್ಷಣದಲ್ಲಿಯೂ ನೀರು ಬಿಡುವ ಸಂಭವವಿದೆ|
ಯಾದಗಿರಿ/ಹುಣಸಗಿ(ಜು.19): ಆಲಮಟ್ಟಿ ಜಲಾಶಯದಿಂದ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವ ಸಾಗರ ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದಾಗಿ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿಗೆ ಕಾರಣವಾಗಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಅಧಿಕಾರಿಗಳು ಜನರಿಗೆ ಸೂಚನೆ ನೀಡಿದ್ದಾರೆ.
ಆಲಮಟ್ಟಿಯಿಂದ ಒಳಹರಿವು ಹೆಚ್ಚಿದ ಹಿನ್ನೆಲೆಯಲ್ಲಿ, ಕಳೆದೊಂದು ವಾರದಿಂದ ಬಸವಸಾಗರ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದೆ. ಹೀಗಾಗಿ ಪ್ರತಿದಿನ ಕೃಷ್ಣಾ ನದಿಗೆ 40000 ಕ್ಯುಸೆಕ್ ಪ್ರಮಾಣಕ್ಕಿಂತಲೂ ಹೆಚ್ಚಾಗಿ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ.
undefined
ಆಲಮಟ್ಟಿ ಡ್ಯಾಂ: 45000 ಕ್ಯುಸೆಕ್ ಹೊರಹರಿವು, ನದಿ ತೀರಕ್ಕೆ ಹೋಗದಂತೆ ಎಚ್ಚರಿಕೆ
ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 33.31 ಟಿಎಂಸಿ ಇದ್ದರೆ, ಶನಿವಾರ ಬಸವಸಾಗರ ಜಲಾಶಯದಲ್ಲಿ 30.39 ಟಿ.ಎಂ.ಸಿ ನೀರು ಸಂಗ್ರಹವಾಗಿತ್ತು. ಇಲ್ಲಿನ 7 ಕ್ರಸ್ವ್‌ಗೇಟ್ ಮೂಲಕ 45,970 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಯಿತು. ಆಲಮಟ್ಟಿಯಿಂದ ಬಸವಸಾಗರ ಜಲಾಶಯಕ್ಕೆ 40 ಸಾವಿರ ಕ್ಯೂಸೆಕ್ ಒಳಹರಿವು ಇತ್ತು. ಆಣೆಕಟ್ಟು ಕೆಳಭಾಗದ ಕೃಷ್ಣ ನದಿ ಪಾತ್ರದಲ್ಲಿರುವ ಗ್ರಾಮಗಳ ಜನ- ಜಾನುವಾರುಗಳಿಗೆ ಮುಂಜಾಗ್ರತೆಯ ಕ್ರಮವಾಗಿ ಪ್ರವಾಹದ ಮುನ್ಸೂಚನೆ ಇದ್ದ ಕಾರಣ ನದಿ ತೀರದ ಜನರು ಎಚ್ಚರಿಕೆಯಿಂದಿರಲು ಬಸವಸಾಗರ ಆಣೆಕಟ್ಟು ವಿಭಾಗದ ಅಧಿಕಾರಿಗಳು ಎಚ್ಚರಿಸಿದ್ದಾರೆ.
ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದೆ, ಇದರ ಸಮಾನಾಂತರ ಜಲಾಶಯವಾದ ಬಸವ ಸಾಗರಕ್ಕೆ ಅಲ್ಲಿಂದ ಯಾವ ಕ್ಷಣದಲ್ಲಿಯೂ ನೀರು ಬಿಡುವ ಸಂಭವವಿದೆ.