ನೂರಾರು ವರ್ಷಗಳ ಇತಿಹಾಸವಿರುವ ಸಸ್ಯಕಾಶಿ ಲಾಲ್‌ಬಾಗ್‌ಗೂ ಬರದ ಬಿಸಿ ತಟ್ಟಿದೆ. 15 ದಿನದ ಒಳಗೆ ಮಳೆ ಬರದಿದ್ದರೆ ಸಾವಿರಾರು ಮರ-ಗಿಡಗಳಿಗೆ ನೀರುಣಿಸಲು ಪರದಾಡಬೇಕಾದ ಪರಿಸ್ಥಿತಿ ಎದುರಾಗಲಿದೆ.
ಬೆಂಗಳೂರು (ಮಾ.28): ನೂರಾರು ವರ್ಷಗಳ ಇತಿಹಾಸವಿರುವ ಸಸ್ಯಕಾಶಿ ಲಾಲ್‌ಬಾಗ್‌ಗೂ ಬರದ ಬಿಸಿ ತಟ್ಟಿದೆ. 15 ದಿನದ ಒಳಗೆ ಮಳೆ ಬರದಿದ್ದರೆ ಸಾವಿರಾರು ಮರ-ಗಿಡಗಳಿಗೆ ನೀರುಣಿಸಲು ಪರದಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. 240 ಎಕರೆ ವ್ಯಾಪ್ತಿಯಲ್ಲಿರುವ ಲಾಲ್‌ಬಾಗ್‌ನಲ್ಲಿ 175 ಎಕರೆ ವಿಸ್ತೀರ್ಣದ ಪ್ರದೇಶ ನಿತ್ಯ ಹಸಿರಿನಿಂದ ಕಂಗೊಳಿಸುತ್ತಿದೆ. ಲಾಲ್ ಬಾಗ್‌ನಲ್ಲಿ 673 ಪ್ರಭೇದ ಹಾಗೂ 140 ಕುಟುಂಬಕ್ಕೆ ಸೇರಿದ 2150 ವಿವಿಧ ಪ್ರಭೇದಗಳಿದ್ದು, ಪ್ರಕೃತಿಯ ಒಂದು ಅಪರೂಪದ ಬೃಹತ್ ಸಂಗ್ರಹಾಲಯವಾಗಿದೆ. 10ರಿಂದ 12 ಸಾವಿರ ಮರಗಳು, ವಿವಿಧ ಹೂಗಿಡ ಬಳ್ಳಿಗಳು ಇಲ್ಲಿನ ಸೊಬಗು ಹೆಚ್ಚಿಸಿವೆ. ಈ ಎಲ್ಲ ಸಸ್ಯವರ್ಗಕ್ಕೆ ಬಿರುಬೇಸಿಗೆಯಿಂದಾಗಿ ದಿನಕ್ಕೆ 1.5 ಎಂಎಲ್‌ಡಿಯಷ್ಟು (15 ಲಕ್ಷ ಲೀಟರ್) ನೀರುಣಿಸಲೇಬೇಕಾಗಿದೆ.
ಈ ಹಿಂದೆ ಒಳಚರಂಡಿ ಸಂಸ್ಕರಣಾ ಘಟಕದಿಂದ(ಎಸ್‌ಟಿಪಿ) ಬರುತ್ತಿದ್ದ 1.5 ಎಂಎಲ್‌ಡಿ ನೀರಿನ ಪ್ರಮಾಣದಲ್ಲಿ ಈಗ ಕಡಿಮೆಯಾಗಿದ್ದು, ಕೇವಲ 10 ಲಕ್ಷ ಲೀಟರ್ ನೀರು ಮಾತ್ರ ಲಭ್ಯವಾಗುತ್ತಿದೆ. ಹೀಗಾಗಿ 5 ಲಕ್ಷ ಲೀಟರ್ ನೀರಿನ ಕೊರತೆಯುಂಟಾಗಿದ್ದು, ಉದ್ಯಾನದಲ್ಲಿರುವ ಕೆರೆ, ಕೊಳವೆಬಾವಿ, ತೆರೆದ ಬಾವಿಗಳಿಂದ ನೀರೊದಗಿಸಲಾಗುತ್ತಿದೆ. ಆದರೆ, ಕೊಳವೆ ಬಾವಿ, ಕೆರೆಯಲ್ಲೂ ನೀರಿನ ಮಟ್ಟ ಕುಸಿದಿದ್ದು, ಮುಂದಿನ 15 ದಿನಗಳೊಳಗೆ ಮಳೆ ಬಾರದಿದ್ದರೆ ನೀರಿನ ಬಿಕ್ಕಟ್ಟು ಇನ್ನಷ್ಟು ಹೆಚ್ಚಾಗಲಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ (ಲಾಲ್‌ಬಾಗ್) ಕುಸುಮಾ ಅವರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.
ದುರಂಕಾರದ ಮಾತು ಬಿಟ್ಟು, ಕೊಡುಗೆ ನೀಡಿ: ಸಿಎಂ ಸಿದ್ದರಾಮಯ್ಯಗೆ ಎಚ್‌ಡಿಕೆ ಸಲಹೆ
ಲಾಲ್‌ಬಾಗ್ ಕೆರೆಯು ಸುಮಾರು 20ಕ್ಕೂ ಹೆಚ್ಚು ಅಡಿ ಆಳದವರೆಗೂ ನೀರು ಸಂಗ್ರಹಿಸಿಟ್ಟುಕೊಳ್ಳುವಷ್ಟು ಸಾಮರ್ಥ್ಯ ಇದೆ. ಕಳೆದ ವರ್ಷ ಮುಂಗಾರು ವೈಫಲ್ಯ ಮತ್ತು ಬರದ ಪರಿಣಾಮ ಈಗ ನೀರಿನ ಪ್ರಮಾಣದಲ್ಲಿ 5ರಿಂದ 7 ಅಡಿಗಳಷ್ಟು ಕಡಿಮೆಯಾಗಿದೆ. ಉದ್ಯಾನದಲ್ಲಿರುವ ಏಳು ಕೊಳವೆ ಬಾವಿಗಳ ಪೈಕಿ ಎರಡರಲ್ಲಿ ಸಮರ್ಪಕವಾಗಿ ನೀರಿನ ಲಭ್ಯವಿಲ್ಲ. ಉಳಿದ 5 ಕೊಳವೆ ಬಾವಿಗಳಲ್ಲಿ ನೀರಿದ್ದರೂ ನೀರಿನ ಮಟ್ಟ ಶೇ.40ರಷ್ಟು ಇಳಿಕೆಯಾಗಿದೆ. ಎಸ್‌ಟಿಪಿಯಿಂದ ಬರುತ್ತಿದ್ದ ನೀರಿನಲ್ಲಿ ಕೊರತೆ ಆಗಿರುವ ನೀರನ್ನು ಈ ನೀರಿನ ಮೂಲಗಳಿಂದ ಭರಿಸಲಾಗುತ್ತಿದ್ದು, ಲಾಲ್‌ಬಾಗ್‌ನ ಮೂಲೆ ಮೂಲೆಗೂ ಟ್ಯಾಂಕರ್ ಮೂಲಕ ನೀರಾಯಿಸಲಾಗುತ್ತಿದೆ. ಪ್ರತಿದಿನ 8 ಟ್ಯಾಂಕರ್ ನೀರು ಗಿಡಗಳಿಗೆ ಬೇಕಾಗುತ್ತಿದೆ.
ಮಳೆಗಾಲದಲ್ಲಿ ಒಮ್ಮೆ ಮಳೆ ಸುರಿದರೆ ಮೂರ್‍ನಾಲ್ಕು ದಿನಗಳಿಗೆ ನೀರಿನ ಅವಶ್ಯಕತೆ ಇಲ್ಲ. ಆದರೆ, ಈ ಬಾರಿ ಬಿಸಿಲು ಹೆಚ್ಚಾಗಿರುವ ಕಾರಣ ಪ್ರತಿ ದಿನವೂ ಗಿಡಗಳಿಗೆ ನೀರು ಹಾಯಿಸಬೇಕಿದೆ. ಕೊಳವೆಬಾವಿಗಳಲ್ಲಿ ನೀರಿನ ಲಭ್ಯತೆ ಆಧಾರದಲ್ಲಿ ಎಲ್ಲಾ ಗಿಡಗಳಿಗೆ ಸ್ಪ್ರಿಂಕ್ಲರ್ ಮೂಲಕ ನೀರು ಒದಗಿಸುತ್ತಿದ್ದು, ಉಳಿದೆಡೆಗೆ ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದೇವೆ. ಸಾಧ್ಯವಾದಷ್ಟು ನೀರಿನ ದುಂದುವೆಚ್ಚವಾಗದಂತೆ ಎಚ್ಚರವಹಿಸಿದ್ದು, ಮರ-ಗಿಡಗಳಿಗೆ ಅಗತ್ಯವಿರುವಷ್ಟು ನೀರನ್ನು ಮಾತ್ರ ಒದಗಿಸಲು ಆದ್ಯತೆ ನೀಡಲಾಗಿದೆ ಎಂದು ಕುಸುಮಾ ತಿಳಿಸಿದರು.
ಕೋಟಿ ಕೋಟಿ ಹಣ ಸಾಗಿಸಿದರೂ ಚುನಾವಣಾ ಆಯೋಗ ಏನು ಮಾಡುತ್ತಿದೆ: ಸಚಿವ ದಿನೇಶ್ ಗುಂಡೂರಾವ್
ಮಾರ್ಚ್‌ನಿಂದ ಏಪ್ರಿಲ್ ಅಂತ್ಯದವರೆಗೂ ಬೇಸಿಗೆ ಹೆಚ್ಚಾಗಿರುವುದರಿಂದ ನೀರು ನಿರ್ವಹಣೆಗೆ ಹೆಚ್ಚಿನ ಆದ್ಯತೆ ಅಗತ್ಯವಿದೆ. ಸದ್ಯ ಎಸ್‌ಟಿಪಿಯಿಂದ ಸಮರ್ಪಕವಾಗಿ ನೀರು ಲಭ್ಯವಾಗುತ್ತಿದೆ. ಇನ್ನು ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿದೆ. ಹೀಗಾಗಿ 1600 ಸ್ಪ್ರಿಂಕ್ಲರ್ ಮೂಲಕ ನರ್ಸರಿ ಪ್ಲಾಂಟ್‌ಗಳಿಗೆ ಈ ಹಿಂದೆ 4 ಗಂಟೆಗಳ ಕಾಲ ನೀರು ಒದಗಿಸುವುದನ್ನು ಹೆಚ್ಚುವರಿಯಾಗಿ 8 ಗಂಟೆವರೆಗೆ ಹಾಯಿಸುತ್ತಿದ್ದೇವೆ. ಆದರೆ, ಈಗ ಮಳೆಗಾಲದಲ್ಲಿ ಇದ್ದಂತೆ ಗಾರ್ಡನ್ ಹಸಿರಿನಿಂದ ಕಂಗೊಳಿಸುವುದಿಲ್ಲ. ಬೇಸಿಗೆ ಪ್ರಭಾವ ಲಾಲ್‌ಬಾಗ್ ಮೇಲೂ ಬೀರಿದೆ.
-ಡಾ। ಎಂ.ಜಗದೀಶ್, ಜಂಟಿ ನಿರ್ದೇಶಕ, ತೋಟಗಾರಿಕೆ ಇಲಾಖೆ(ಪಾರ್ಕ್ಸ್ ಆ್ಯಂಡ್ ಗಾರ್ಡನ್ಸ್)