
ಪಾವಗಡ: ಇಲ್ಲಿನ ಪ್ಲೋರೈಡ್‌ಯುಕ್ತ ನೀರಿನ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದ ಹಿನ್ನಲೆ ವೈಜ್ಞಾನಿಕ ವರದಿ ಆಧರಿಸಿ ಬೆಂಗಳೂರು ಹೈಕೋರ್ಚ್ ಮೆಟ್ಟಿಲೇರಿದ್ದು ದಾಖಲೆ ಪರಿಶೀಲಿಸಿದ ಘನ ನ್ಯಾಯಾಲಯ ಆಗಿನ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿ ಆದೇಶಿದ ಹಿನ್ನಲೆಯಲ್ಲಿ ಪಾವಗಡ ತಾಲೂಕಿಗೆ ಶುದ್ಧ ಕುಡಿವ ನೀರಿನ ಘಟಕ ಮಂಜೂರಾತಿ ಸಿಕ್ಕಿದ್ದು ಸತ್ಯ ಎಂದು ತಾಲೂಕು ಬಿಜೆಪಿ ಹಿರಿಯ ಮುಖಂಡ ಹಾಗೂ ವೈದ್ಯ ಡಾ.ಜಿ.ವೆಂಕಟರಾಮಯ್ಯ ಹೇಳಿದರು.
ಜೆಡಿಎಸ್ ಪ್ರತಿಭಟನೆ ಬೆನ್ನಲೆ ಅವರು ಗುರುವಾರ ಪಟ್ಟಣದ ಶ್ರೀ ವೆಂಕಟೇಶ್ವರ ನರ್ಸಿಂಗ್ ಹೋಂ ಹಾಲ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿದರು. ಮಳೆಯ ಅಭಾವದ ಪರಿಣಾಮ ಎಳೆಂಟು ನೂರು ಅಡಿ ಕೊರೆಸಿದರೂ ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿರಲಿಲ್ಲ. ಇದರ ಪರಿಣಾಮ ತಾಲೂಕಿನಲ್ಲಿ ಕುಡಿವ ನೀರಿನ ಅಭಾವ ಸೃಷ್ಟಿಯಾಗಿ ಕಳೆದ 25 ವರ್ಷಗಳಿಂದ ಪೋರೈಡ್‌ಯುಕ್ತ ನೀರು ಸೇವೆನೆಯ ಅನಿವಾರ್ಯತೆ ಎದುರಿಸುವಂತಾಗಿತ್ತು. ಈ ನೀರು ಸೇವನೆಯಿಂದ ಬೆನ್ನು ಮೂಳೆ ಸವೆತ, ಕೈಕಾಲು ನೋವು ಇತರೆ ಹಲವಾರು ರೀತಿಯ ರೋಗರುಜನೆಗಳಿಗೆ ಜನತೆ ತುತ್ತಾಗಿದ್ದರು.
ಇಂತಹ ಪರಿಸ್ಥಿತಿಯಲ್ಲಿ ಪ್ಲೋರೈಡ್ ಸಮಸ್ಯೆ ನಿವಾರಣೆಗೆ, ದಾವೆ ಹೂಡಿದ್ದು ದಾಖಲೆ ಪರಿಶೀಲಿಸಿದ ನ್ಯಾಯಾಲಯ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಕೂಡಲೇ ಸಮಸ್ಯೆ ನಿವಾರಿಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ಇದರ ಫಲವಾಗಿ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳು ತಲೆ ಎತ್ತಿದವು. ಆದರೆ ಈಗ ಅವು ನಿರ್ವಹಣೆ ವೈಫಲ್ಯದ ಪರಿಣಾಮ ಬಹುತೇಕ ಗ್ರಾಮಗಳಲ್ಲಿ ಘಟಕಗಳು ನಿಷ್ಕಿ್ರಯವಾಗಿವೆ. ಶುದ್ಧ ನೀರಿನ ಘಟಕ ದುರಸ್ತಿಯಲ್ಲಿ ಅಧಿಕಾರಿಗಳ ವಿಫಲ ವಿರೋಧಿಸಿ ಕಳೆದ ಎರಡು ದಿನಗಳ ಹಿಂದೆ ಇಲ್ಲಿನ ಜಿಪಂಗೆ ಮುತ್ತಿಗೆಹಾಕಿ ಜೆಡಿಎಸ್ ಪ್ರತಿಭಟನೆ ನಡೆಸಿದ್ದು ಈ ವೇಳೆ, ಮುಖಂಡರೊಬ್ಬರು ಜೆಡಿಎಸ್ ಅವಧಿಯಲ್ಲಿ ಆಗಿನ ಶಾಸಕರಾಗಿದ್ದ ಕೆ.ಎಂ.ತಿಮ್ಮರಾಯಪ್ಪ ಪರಿಶ್ರಮದ ಫಲವಾಗಿ ತಾಲೂಕಿಗೆ ಶುದ್ಧ ನೀರಿನ ಘಟಕ ಮಂಜೂರಾತಿ ಸಿಕ್ಕಿದೆ ಎಂದು ಹೇಳಿದ್ದು ಹಾಸ್ಯಸ್ಪದ. ಚುನಾವಣೆ ಸಮೀಪಿಸುತ್ತಿದ್ದು ಇಂತಹ ದಿಕ್ಕು ತಪ್ಪಿಸುವ ಹೇಳಿಕೆಗಳು ಸರಿಯಲ್ಲ. ಯಾರ ಪರಿಶ್ರಮದಿಂದ ತಾಲೂಕಿಗೆ ಶುದ್ಧ ನೀರಿನ ಘಟಕ ಮಂಜೂರಾತಿಗೆ ಆಗಿದೆ ಎಂದು ಜನತೆಗೆ ಗೊತ್ತಿದೆ ಎಂದು ಟೀಕಿಸಿದರು.