
ಶಿವಮೊಗ್ಗ (ಫೆ.18) : ಬಿಜೆಪಿ ಸರ್ಕಾರದ ಈ ಅವಧಿಯ ಕೊನೆಯ ಬಜೆಟ್ ಮತ್ತು ಯಡಿಯೂರಪ್ಪ ಅವರು ಸದನದ ಸದಸ್ಯರಾಗಿರುವ ಕೊನೆಯ ಅವಧಿ ಬಜೆಟ್‌ನಲ್ಲಿ ಶಿವಮೊಗ್ಗ ಜಿಲ್ಲೆಗೆ ನಿರಾಶೆ ಕಾಣಿಸಿದೆ. ವಿಐಎಸ್‌ಎಲ್, ಎಂಪಿಎಂ ಕಾರ್ಖಾನೆಗಳ ಪುನರುಜ್ಚೀವನ, ಪ್ರವಾಸೋದ್ಯಮ, ಮುಳುಗಡೆ ಸಂತ್ರಸ್ಥರಿಗೆ ಶಾಶ್ವತ ಪರಿಹಾರ ಸೇರಿದಂತೆ ಹಲವು ನಿರೀಕ್ಷೆಗಳ ಗುಚ್ಚವೇ ಇತ್ತು. ಆದರೆ ಕೇವಲ ಎರಡೇ ಕೊಡುಗೆಗಳ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೊನೆಯ ಬಜೆಟ್‌ನಲ್ಲಿ ನಿರೀಕ್ಷಿತ ಕೊಡುಗೆ ಸಿಕ್ಕಿಲ್ಲ. ಆ ಎರಡು ಕೊಡುಗೆಗಳು ಕೂಡ ಹೊಸ ಬಾಟಲಿಯಲ್ಲಿ ತುಂಬಿದ ಹಳೆ ಮದ್ಯದಂತೆ ಆಗಿದೆ ಎಂಬುದು ಗಮನಾರ್ಹ!
ಬಿ.ಎಸ್. ಯಡಿಯೂರಪ್ಪ(BS Yadiyurappa) ಮುಖ್ಯಮಂತ್ರಿ ಆದಾಗೆಲ್ಲ ಭರಪೂರ ಕೊಡುಗೆಯಿಂದ ಜಿಲ್ಲೆ ಪುಳಕಗೊಳ್ಳುತ್ತಿತ್ತು. ಬಿಜೆಪಿಯಲ್ಲಿ ಬೇರೆಯವರು ಮುಖ್ಯಮಂತ್ರಿ ಆದಾಗಲೆಲ್ಲ ಯಾವುದೇ ಕೊಡುಗೆ ಸಿಗದೇ ಕಳೆಗುಂದುತ್ತಿತ್ತು. ಆದರೆ, ಘಟ್ಟನಗರಿ ಶಿವಮೊಗ್ಗ(Shivamogga)ಕ್ಕೆ ಈ ಬಾರಿಯೂ ಅದೇ ನಿರಾಶೆಯಾಗಿದೆ.
ಹುಣಸೋಡು ಸ್ಫೋಟ ಪ್ರಕರಣ: ಪರಿಹಾರ ವಿಳಂಬದ ವಿರುದ್ಧ ಪ್ರಧಾನಿಗೆ ಮನವಿ
ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ(Caner ho)ಯ ಪ್ರಸ್ತಾಪ ಮಾಡಿದ್ದರು. ಡಿಪಿಆರ್ ಕೂಡ ಸಿದ್ಧವಾಗುತ್ತಿತ್ತು. ಇದನ್ನೇ ಈ ಬಜೆಟ್‌ನಲ್ಲಿ ಪುನಃ ಘೋಷಿಸಲಾಗಿದೆ. ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಅಸ್ಪತ್ರೆ ಸಹಯೋಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ ಪ್ರಸ್ತಾಪಿಸಲಾಗಿದೆ. ಇದು ನಿಜಕ್ಕೂ ಕಾರ್ಯರೂಪಕ್ಕೆ ಬಂದರೆ ಮಾತ್ರ ಮಲೆನಾಡು ಭಾಗಕ್ಕೆ ದೊಡ್ಡ ಕೊಡುಗೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಮಲೆನಾಡಿನಲ್ಲಿ ಚುನಾವಣಾ ಅಖಾಡದಲ್ಲಿ ಧೂಳೆಬ್ಬಿಸುತ್ತದೆ ಎಂದು ನಿರೀಕ್ಷಿಲಾಗಿರುವ ಅಡಕೆ ಬೆಳೆಗಾರರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಂಡಿಲ್ಲ. ಹಲವು ದಶಕಗಳಿಂದ ತೀರ್ಥಹಳ್ಳಿಯಲ್ಲಿ ಇರುವ ಮತ್ತು ಇದುವರೆಗೆ ಅಡಕೆ ಬೆಳೆಗಾರರಿಗೆ ಯಾವುದೇ ಉಪಯೋಗ ನೀಡದ ಅಡಕೆ ಸಂಶೋಧನಾ ಕೇಂದ್ರಕ್ಕೆ .10 ಕೋಟಿ ರು. ನೀಡಲಾಗಿದೆ. ಇದುವರೆಗೆ ಈ ಸಂಶೋಧನಾ ಕೇಂದ್ರವು ಬೆಳೆಗಾರರ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸದ ಉದಾಹರಣೆ ಕಡಿಮೆ ಇರುವುದರಿಂದ ಅಡಕೆ ಬೆಳೆಗೆ ತಗುಲಿರುವ ಎಲೆಚುಕ್ಕಿ ರೋಗ ಸೇರಿದಂತೆ ಹಲವು ರೋಗಗಳಿಗೆ ಪರಿಹಾರ ಸಿಗುತ್ತದೆ ಎಂಬ ನಿರೀಕ್ಷೆ ರೈತರಲ್ಲಿ ಇಲ್ಲ.
ಈ ಹಿಂದಿನ ಬಜೆಟ್‌ನಲ್ಲಿ ಅಡಕೆ ಹಳದಿಎಲೆ ರೋಗ ಸಂಶೋಧನೆ, ಪರಾರಯಯ ಬೆಳೆಗೆ ಪ್ರೋತ್ಸಾಹಿಸಲು .25 ಕೋಟಿ ತೆಗೆದಿರಿಸಲಾಗಿದೆ. ಹಣ ಇದುವರೆಗೆ ಬಿಡುಗಡೆಯಾಗಿರಲಿಲ್ಲ. ಈ ಕುರಿತು ಬಜೆಟ್‌ನಲ್ಲಿ ಪ್ರಸಾಪ ಇಲ್ಲ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನೀಡಿದ ಆಶ್ವಾಸನೆಯಂತೆ ಶಿವಮೊಗ್ಗದಲ್ಲಿ .10 ಕೋಟಿ ವೆಚ್ಚದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ಪ್ರಾರಂಭಕ್ಕೆ ಕ್ರಮ ಕೈಗೊಳ್ಳುವ ಪ್ರಸ್ತಾಪ ನೀಡಲಾಗಿದೆ.
ವಿಐಎಸ್‌ಎಲ್, ಎಂಪಿಎ ಪುನರುಜ್ಜೀವನ ಕುರಿತು ಪ್ರಸ್ತಾಪವಿಲ್ಲ:
ತೀವ್ರ ವಿವಾದದಲ್ಲಿ ಸಿಲುಕಿರುವ ಭದ್ರಾವತಿಯ ವಿಐಎಸ್‌ಎಲ್(VISL)ನ ಪುನರುಜ್ಜೀವನ ಕುರಿತು ಸ್ವತಃ ಯಡಿಯೂರಪ್ಪ ಅವರೇ ಸದನದಲ್ಲಿ ಪ್ರಸ್ತಾಪಿಸಿದ ವೇಳೆಯಲ್ಲಿ ಮುಖ್ಯಮಂತ್ರಿ ಅವರು ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ್ದರು. ಆದರೆ, ಬಜೆಟ್‌ನಲ್ಲಿ ಮಾತ್ರ ಈ ಸಂಬಂಧ ಯಾವುದೇ ಪ್ರಸ್ತಾಪ ಮಾಡಿಲ್ಲ. ಎಂಪಿಎಂ ಕುರಿತು ಕೂಡ ಪ್ರಸ್ತಾಪ ಇಲ್ಲ. ತುಂಗಾ ಮತ್ತು ಭದ್ರಾ ನದಿಗಳ ಸಂಗಮ ಕ್ಷೇತ್ರವಾದ ಕೂಡ್ಲಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. ಈಗಾಗಲೇ ಗ್ರಾಮಾಂತರ ಶಾಸಕರು .52 ಕೋಟಿ ಯೋಜನೆಯ ಪ್ರಸ್ತಾವನೆಯೊಂದನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಈ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ.
ಶಿವಮೊಗ್ಗ: ವಿಐಎಸ್‌ಎಲ್‌ಗೆ ಶಾಶ್ವತ ಬೀಗ: ಉಕ್ಕಿನ ನಗರಿಗೆ ಕಾರ್ಮೋಡ
ಯಾವ್ಯಾವ್ದುಕ್ಕೆ ಎಳ್ಳುನೀರು:
ಮಲೆನಾಡಿನಲ್ಲಿ ಗಂಭೀರವಾಗಿರುವ ಅಡಕೆ ಬೆಳೆಗಾರರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ, ಭದ್ರಾವತಿಯ ವಿಐಎಸ್‌ಎಲ್, ಎಂಪಿಎಂ ಕಾಖಾನೆಗಳ ಪುನರುಜ್ಜೀವನದ ಯಾವುದೇ ನಿರ್ಧಾರವಿಲ್ಲ, ಕೂಡ್ಲಿ ಕ್ಷೇತ್ರ ಅಭಿವೃದ್ಧಿಗೆ .52 ಕೋಟಿ ಯೋಜನೆ ಪ್ರಸ್ತಾವನೆ ಸಲ್ಲಿಸಿದ್ದರೂ ಯಾವುದೇ ಪ್ರಸ್ತಾಪವಿಲ್ಲ, ಸರಕು ಸಾಗಣೆ ವಾಹನಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಸರಹದ್ದಿನಲ್ಲಿ ಒಂದು ಟ್ರಕ್ ಟರ್ಮಿನಲ್ ಸುಸಜ್ಜಿತವಾಗಿ ನಿರ್ಮಾಣ ಮಾಡಲು .100 ಕೋಟಿ ಮೀಸಲಿಟ್ಟಿಲ್ಲ, ಜಿಲ್ಲೆಯಲ್ಲಿ ಬಹುಹಂತದ ಕೌಶಲ್ಯಾಭಿವೃದ್ಧಿ ಕೇಂದ್ರ ಹಾಗೂ ಸಮಗ್ರ ಅಭಿವೃದ್ಧಿಗೆ ಕೌಶಲ್ಯ ವಿಶ್ವವಿದ್ಯಾಲಯ ಸ್ಥಾಪಿಸುವ ಪ್ರಸ್ತಾಪವಿಲ್ಲ, ಪ್ರವಾಸೋದ್ಯಮದ ಅಭಿವೃದ್ಧಿಗೆ ಈಗಾಗಲೇ ಹಲವಾರು ಯೋಜನೆ ರೂಪಿಸಲಾಗುತ್ತಿದ್ದು ಇದನ್ನು ಇನ್ನಷ್ಟುಎತ್ತರಕ್ಕೆ ಕೊಂಡೊಯ್ಯಲು ಶಿವಮೊಗ್ಗದಲ್ಲಿ ‘ಮಲ್ನಾಡ್ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ’ ಸ್ಥಾಪಿಸಬೇಕು ಎಂಬುದಕ್ಕೆ ಸ್ಪಂದನೆಯಿಲ್ಲ, ಶಿವಮೊಗ್ಗ ನಗರ ತೀವ್ರಗತಿಯಲ್ಲಿ ಬೆಳೆಯುತ್ತಿದ್ದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ನಗರದ ನಾಲ್ಕು ದಿಕ್ಕುಗಳಲ್ಲಿ ಸ್ಯಾಟ್‌ಲೈಟ್ ಬಸ್‌ಸ್ಟ್ಯಾಂಡ್ ನಿರ್ಮಾಣದ ಯೋಜನೆಗೆ ಹಣ ಮೀಸಲಿಡಬೇಕು ಎಂಬುದಕ್ಕೆ ಉತ್ತರವಿಲ್ಲ, ಪಶು ವೈದ್ಯಕೀಯ ವಿವಿ ಸ್ಥಾಪನೆ, ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ವ್ಯಾಪ್ತಿಯ ಶಿಮುಲ್ ಅನ್ನು ಪ್ರತ್ಯೇಕಿಸಿ ಶಿವಮೊಗ್ಗಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಬೇಕು ಹಾಗೂ ಇದರಲ್ಲಿ ಹಾಲು ಪುಡಿ ತಯಾರಿಕಾ ಘಟಕ ಸ್ಥಾಪನೆಗೆ ಬೇಕಾದಷ್ಟುಹಣ ಮೀಸಲಿಡಬೇಕು ಎಂಬ ಬೇಡಿಕೆಗೂ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಆಗಿಲ್ಲದಿರುವುದು ಜಿಲ್ಲೆ ಜನತೆಯಲ್ಲಿ ನಿರಾಶೆಗೆ ಕಾರಣವಾಗಿದೆ.